ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರೀಯ ಪಠ್ಯಕ್ರಮ ರದ್ದತಿಗೆ ಆಗ್ರಹ

Last Updated 24 ಜುಲೈ 2012, 4:50 IST
ಅಕ್ಷರ ಗಾತ್ರ

ಬಳ್ಳಾರಿ: ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕೇಂದ್ರೀಯ (ಸಿಬಿಎಸ್‌ಇ) ಪಠ್ಯಕ್ರಮ ಅಳವಡಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಡೆಮಾಕ್ರೆಟಿಕ್ ಟೀಚರ್ಸ್ ಆರ್ಗನೈಜೇಷನ್ ತೀವ್ರವಾಗಿ ಖಂಡಿಸಿದೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ಜಿಲ್ಲಾ ಸಂಚಾಲಕ ಆರ್.ಸೋಮಶೇಖರ ಗೌಡ, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಿಬಿಎಸ್‌ಇ ಪಠ್ಯಕ್ರಮವನ್ನು ಪ್ರಥಮ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಸರ್ಕಾರ ಈ ವಿಚಾರದಲ್ಲಿ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ವರ್ಷದಿಂದ ಕಲಾ ಮತ್ತು ವಾಣಿಜ್ಯ ವಿಭಾಗಕ್ಕೂ ಕೇಂದ್ರೀಯ ಪಠ್ಯಕ್ರಮ ಹೇರಲು ಸಿದ್ಧತೆ ನಡೆಯುತ್ತಿವೆ ಎಂದರು.

ಸರ್ಕಾರದ ಅವೈಜ್ಞಾನಿಕ ಹಾಗೂ ಅವಾಸ್ತವಿಕ ನಿರ್ಧಾರದ ವಿರುದ್ಧ ರಾಜ್ಯದಾದ್ಯಂತ ಶಿಕ್ಷಣ ತಜ್ಞರು, ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿಗಳ ಪ್ರತಿರೋಧ ಪ್ರಾರಂಭವಾಗಿದೆ. ಜನಾಭಿಪ್ರಾಯ ಆಲಿಸದ ಸರ್ಕಾರ ಕೇಂದ್ರೀಯ ಪಠ್ಯಕ್ರಮವನ್ನೇ ಮುಂದುವರಿಸಲು ಸಜ್ಜಾಗಿದೆ. ಕಾಲಾಂತರದಲ್ಲಿ ಅಗತ್ಯಕ್ಕೆ ತಕ್ಕಂತೆ ಶಿಕ್ಷಣದಲ್ಲಿ ಬದಲಾವಣೆ ತರಬೇಕಾಗುವುದು ಅಗತ್ಯ. ಆದರೆ, ಈ ಬದಲಾವಣೆ ಶಿಕ್ಷಣದ ಆರೋಗ್ಯಕರ ಅಭಿವೃದ್ಧಿಗೆ ಪೂರಕವಾಗಿರಬೇಕು. ಇಲ್ಲದಿದ್ದರೆ ಶಿಕ್ಷಣ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

10ನೇ ತರಗತಿವರೆಗೆ ರಾಜ್ಯ ಪಠ್ಯಕ್ರಮದಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳು ಕಬ್ಬಿಣದ ಕಡಲೆಯಂತಿರುವ ಪಠ್ಯಕ್ರಮವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಕೇಂದ್ರೀಯ ಪಠ್ಯಕ್ರಮ ಬೋಧಿಸಲು ಸೂಕ್ತ ತರಬೇತಿ ನೀಡಲಾಗಿಲ್ಲ. ಕೆಲವು ಉಪನ್ಯಾಸಕರು ನೂತನ ಪಠ್ಯಕ್ರಮದ ಕುರಿತು ಗಂಭೀರ ಪ್ರಶ್ನೆ ಎತ್ತಿದಾಗ, `ಶೇ 40ರಷ್ಟು ಪಠ್ಯಕ್ರಮ ಪೂರ್ಣಗೊಂಡರೆ ಸಾಕು.
 
ಪಿಯುಸಿ ಪ್ರಥಮ ವರ್ಷ ಸ್ಥಳೀಯವಾಗಿಯೇ ಮೌಲ್ಯಮಾಪನ ನಡೆಯುವುದರಿಂದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ ಎಂಬ ಸಲಹೆಯನ್ನು ಇಲಾಖೆ ಅಧಿಕಾರಿಗಳು ನಿಡಿದ್ದಾಗಿ ತಿಳಿದುಬಂದಿದೆ. ಇದರಿಂದ ಇಲಾಖೆ ಮತ್ತು ಸರ್ಕಾರದ ಧೋರಣೆ ಏಂಥದ್ದು ಎಂಬುದು ಸ್ಪಷ್ಟವಾಗಿದೆ ಎಂದು ಅವರು ಟೀಕಿಸಿದರು. ಡಾ. ಅರವಿಂದ ಪಾಟೀಲ್, ಜಿ.ಎಂ. ವೀರಭದ್ರಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT