ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಕ್‌ಗೂ ಡಿಸೈನರ್ ಸ್ಪರ್ಶ

Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಇದು ಡಿಸೈನರ್ ಯುಗ. ಏನೇ ಉತ್ಪನ್ನ ತಯಾರಿಸುವಾಗಲೂ ವಿನ್ಯಾಸಕ್ಕೆ ಗಮನ ನೀಡಲಾಗುತ್ತದೆ. ಬಟ್ಟೆ, ಚಪ್ಪಲಿ, ಬ್ಯಾಗುಗಳಿಂದ ಹಿಡಿದು ಎಲ್ಲ ಐಷಾರಾಮಿ ವಸ್ತುಗಳೂ ಇವತ್ತು ವಿನ್ಯಾಸಕಾರರನ್ನೇ ಅವಲಂಬಿಸಿವೆ. ಹಾಗೆಯೇ ತಿಂಡಿಗಳ ವಿಷಯದಲ್ಲೂ ಅವು ಹೇಗೆ ಕಾಣಬೇಕು ಎಂಬುದು ಮುಖ್ಯವಾಗುತ್ತದೆ. ತಯಾರಿಸಿದ ಅಡುಗೆಯನ್ನು  ಗ್ರಾಹಕರ ಮುಂದೆ ಹೇಗೆ ಇಡುತ್ತಾರೆ ಎಂಬುದರ ಮೇಲೆ ಅದರ ಖ್ಯಾತಿಯನ್ನು ಅಳೆಯುವ ಕಾಲ ಇದು. ಈಗಾಗಲೇ ವಿನ್ಯಾಸದ ವಿಚಾರದಲ್ಲಿ ಕೇಕ್ ತಯಾರಕರು ಉಳಿದವರಿಗಿಂತ ತುಂಬ ಮುಂದಿದ್ದಾರೆ.

ಜಯನಗರದ ಸುಪ್ರಿಯಾ ತಲ್ಲಂ ಗುಪ್ತಾ ಕಪ್ ಕೇಕ್ ಡಿಸೈನರ್. ವಿವಿಧ ವಿನ್ಯಾಸದ ಕಪ್ ಕೇಕ್‌ಗಳಿಗೆಂದೇ ಜಯನಗರದ ನ್ಯಾಷನಲ್ ಕಾಲೇಜು ಬಳಿ `ಕಪ್ ಎ ಕೇಕ್' ಎಂಬ ಕೇಕ್ ಸ್ಟುಡಿಯೋ ಆರಂಭಿಸಿದ್ದಾರೆ.

ಕೇಕ್ ಪ್ರಿಯೆ ಸುಪ್ರಿಯಾ ಲಂಡನ್‌ನಲ್ಲಿ ಉದ್ಯೋಗ ಮಾಡಿಕೊಂಡಿದ್ದವರು. ಅಲ್ಲಿ ಕಪ್ ಕೇಕ್ ತಯಾರಿಸುವ ಬಗ್ಗೆ ವಿಶೇಷ ತರಬೇತಿ ಪಡೆದು, ವೃತ್ತಿ ಬಿಟ್ಟು ತವರಿಗೆ ಬಂದು ಕೇಕ್ ತಯಾರಿಸುವುದನ್ನೇ ಸ್ವಉದ್ಯೋಗ ಮಾಡಿಕೊಂಡು ಯಶಸ್ವಿಯಾದವರು. 2011ರಲ್ಲಿ ಮನೆಯಿಂದಲೇ ಕೇಕ್ ತಯಾರಿಸಿ ಮಾರಾಟ ಆರಂಭಿಸಿದ ಇವರು, ಅಲ್ಲಿ ತಮ್ಮದೇ ಕಲ್ಪನೆಯ ಕೇಕ್‌ಗಳನ್ನು ತಯಾರಿಸಿ ಗ್ರಾಹಕರಿಗೆ ರುಚಿ ಹತ್ತಿಸಿದವರು. ಹುಟ್ಟುಹಬ್ಬದ ವಿಶೇಷ ಕೇಕ್, ಕ್ರಿಸ್‌ಮಸ್‌ಗೆಂದು ವಿನ್ಯಾಸಗೊಳ್ಳುವ ವಿವಿಧ ಗಾತ್ರದ ಕಪ್‌ಕೇಕುಗಳು ಸುಪ್ರಿಯಾ ವಿನ್ಯಾಸದಲ್ಲಿ ಮನಸೆಳೆಯುತ್ತಿವೆ. ಕಪ್ ಕೇಕ್‌ಗಾಗಿ ಪಾರ್ಟಿ, ಹುಟ್ಟುಹಬ್ಬ, ಧಾರ್ಮಿಕ ಹಬ್ಬ, ಮದುವೆ ವಾರ್ಷಿಕೋತ್ಸವ ಹೀಗೆ ವಿವಿಧ ಸಂದರ್ಭಗಳಲ್ಲಿ ಆರ್ಡರ್ ಬರುತ್ತದೆ. ಎರಡು ವರ್ಷದ ಪೂರ್ವ ತಯಾರಿಯ ನಂತರ ಈಗ ಕಪ್‌ಕೇಕ್ ಸ್ಟುಡಿಯೋ ಆರಂಭಿಸಿದ್ದಾರೆ.

ಸ್ಟುಡಿಯೋದ ವಾತಾವರಣವೂ ಕೇಕ್‌ಗಳಷ್ಟೇ ಆಕರ್ಷಕವಾಗಿದೆ. ಅದರ ವಿನ್ಯಾಸ, ಗೋಡೆಗಳ ಅಲಂಕಾರ ಸುಂದರವಾಗಿವೆ. ಸ್ಟುಡಿಯೋ ಪ್ರವೇಶಿಸುತ್ತಲೇ ಅವರ ಅಭಿರುಚಿ ಗೊತ್ತಾಗಿಬಿಡುತ್ತದೆ.

`2011ರಿಂದ ಇಲ್ಲಿವರೆಗೆ ನನ್ನ ಅಡುಗೆಮನೆಯಲ್ಲಿ  ಕಪ್‌ಕೇಕ್ ತಯಾರಿಕೆಯಲ್ಲಿ ಪ್ರಯೋಗಗಳನ್ನು ನಡೆಸುತ್ತಲೇ ಬಂದ್ದ್ದಿದೇನೆ. ಮೊದಲು ನನ್ನ ಗೆಳತಿಯರು ಮತ್ತು ಸಂಬಂಧಿಕರಿಂದ ಆರ್ಡರ್ ಪಡೆದು ವಿಭಿನ್ನ ರೀತಿಯ ರುಚಿ ಮತ್ತು ವಿನ್ಯಾಸಗಳಲ್ಲಿ ಕಪ್‌ಕೇಕ್ ತಯಾರಿಸಿದೆ. ಅಲ್ಲಿ ಸಿಕ್ಕಿದ ಅಭೂತಪೂರ್ವ ಪ್ರೋತ್ಸಾಹ ಕಪ್‌ಕೇಕ್ ಸ್ಟುಡಿಯೋ ಸ್ಥಾಪಿಸಲು ಧೈರ್ಯ ನೀಡಿದೆ' ಎನ್ನುತ್ತಾರೆ ಪ್ರಯೋಗಶೀಲೆ ಸುಪ್ರಿಯಾ.

`ಕಪ್ ಎ ಕೇಕ್'ನಲ್ಲಿ ಪ್ರತಿದಿನ ವಿವಿಧ ವಿನ್ಯಾಸ, ಸುವಾಸನೆ, ಬಣ್ಣ, ಗಾತ್ರ ಮತ್ತು ರುಚಿಗಳ ಕೇಕ್‌ಗಳು ಲಭ್ಯ. ಕೆಂಪು ವೆಲ್ವೆಟ್ ಕೇಕ್‌ಗಳ ನಡುವೆ ಕಡುಬಣ್ಣದ ಚಾಕೊಲೇಟ್ ಚಿಪ್‌ಗಳನ್ನು ತುಂಬಿರುವುದು ಇವರ ವಿಶೇಷ ಬ್ರ್ಯಾಂಡ್. ಸಣ್ಣ ಕಪ್ ಕೇಕ್‌ನಿಂದ ಶುರುವಾಗಿ ಬೃಹತ್ ಗಾತ್ರದ ಕಪ್‌ಕೇಕ್‌ಗಳು ಆಕರ್ಷಕ ಪ್ಯಾಕ್‌ಗಳಲ್ಲಿ ಲಭ್ಯ.

`ಕೇಕ್‌ಗಳನ್ನು ತಯಾರಿಸುವುದು ಕಷ್ಟವೇನಲ್ಲ. ಅದಕ್ಕೆ ಚೆಂದದ ರೂಪ ಕೊಡುವುದು ಅವರವರ ಅಭಿರುಚಿಗೆ ಬಿಟ್ಟ ವಿಚಾರ. ಒಂದು ಸ್ವಲ್ಪ ಸೃಜನಶೀಲತೆ ರೂಢಿಸಿಕೊಂಡರೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಗಮನಸೆಳೆಯಲು ಸಾಧ್ಯ. ಕಲಾತ್ಮಕ ದೃಷ್ಠಿಯಿಂದ ವಸ್ತುವನ್ನು ನೋಡಿದಾಗ ನಮ್ಮ ಕಲ್ಪನೆಗೆ ರೂಪು ನೀಡುವುದು ಕಷ್ಟವೇನಲ್ಲ' ಎಂಬುದು ಸುಪ್ರಿಯಾ ನುಡಿ.ಮಾಹಿತಿಗೆ: 99017 91788.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT