ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೇಡಿಗಳು'

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಹಳ್ಳಿಯಲ್ಲಿ ಗಾಂಜಾ, ಅಫೀಮಿನಂಥ ಮಾದಕ ದ್ರವ್ಯಗಳ ಚಟಗಳಿಗೆ ಬೀಳುವ ಅಪ್ರಬುದ್ಧ ಯುವಕರು ಪ್ರಬುದ್ಧರಾಗುವ ಕತೆ `ಕೇಡಿಗಳು' ಚಿತ್ರದ್ದು. ಪ್ರೇಮಕತೆಯೂ ಚಿತ್ರಕಥೆಯೊಳಗೆ ಅಡಗಿದೆಯಂತೆ. ಕತೆಯಲ್ಲಿ ಕಲ್ಪನೆ ಹೆಚ್ಚು ಇದ್ದರೂ ನಾಲ್ವರು ನಿಜವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಕತೆಯ ತಿರುಳನ್ನು ಹೇಳಿದರು ನಿರ್ದೇಶಕ ಪರಮಶಿವ. ತೆಲುಗು-ಕನ್ನಡದಲ್ಲಿ ಮಾತನಾಡಿದ ಅವರು `ನನ್ನ ಮಾತೃಭಾಷೆ ತೆಲುಗು. ಆದರೆ ಕನ್ನಡದ ಬಗ್ಗೆ ಇರುವ ಅತೀವ ಕಾಳಜಿ ನನ್ನನ್ನು ಕನ್ನಡ ಸಿನಿಮಾ ಮಾಡುವಂತೆ ಪ್ರೇರೇಪಿಸಿದೆ' ಎಂದರು.

`ಬಾಲ್ಯದ ಗೆಳೆಯ ಭರತ್‌ಕುಮಾರ್ ಈ ಚಿತ್ರದ ನಿರ್ಮಾಪಕ. ಚಿತ್ರವನ್ನು ಆರಂಭಿಸಿ ಒಂದೂವರೆ ವರ್ಷ ಆಗುತ್ತಾ ಬಂದಿದೆ. ಚಿತ್ರದ ಗುಣಮಟ್ಟದ ಉದ್ದೇಶದಿಂದ ನಿಧಾನವಾಗಿ ಚಿತ್ರೀಕರಣ ನಡೆಸಲಾಯಿತು. ಕಲಾವಿದರಿಂದ ಸಹಜಾಭಿನಯ ಹೊರತೆಗೆಯಲಾಗಿದೆ. ಇನ್ನೂ ಶೇ 10ರಷ್ಟು ಚಿತ್ರೀಕರಣ ಬಾಕಿ ಉಳಿದಿದೆ' ಎಂದು ಪರಮಶಿವ ಹೇಳಿದರು.

ನಾಯಕ ನಟ ಕೃಷ್ಣ ಮೈಕೋ ಕಂಪೆನಿಯಲ್ಲಿ ಉದ್ಯೋಗಿ. ರಜೆ ದಿನಗಳಲ್ಲಿ ಸಿನಿಮಾದಲ್ಲಿ ನಟಿಸಿದರಂತೆ. ತಮ್ಮದು ಮುಗ್ಧನ ಪಾತ್ರ ಎಂದು ಹೇಳಿಕೊಂಡ ಅವರು ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ಎಂಜಾಯ್ ಮಾಡಿದರಂತೆ.

ನಾಯಕಿ ಶ್ವೇತಾ ಸಂಜೀವ್ ಅವರದು ಹಳ್ಳಿ ಹುಡುಗಿ ಪಾತ್ರ. ಪೊಲೀಸ್ ಅಧಿಕಾರಿ ಆಗಬೇಕು ಎನ್ನುವ ಆಸೆಯನ್ನು ಬದಿಗೊತ್ತಿ ತಮ್ಮ ಬಡಕುಟುಂಬಕ್ಕೆ ನೆರವಾಗಲು ಚಿಂತಿಸುವ ಪ್ರಬುದ್ಧ ಹುಡುಗಿಯ ಪಾತ್ರ ಅವರದಂತೆ. `ನಾನು ಆಧುನಿಕ ಮನಸ್ಥಿತಿಯಲ್ಲಿ ಬೆಳೆದಿದ್ದರೂ ಹಳ್ಳಿ ಹುಡುಗಿ ಪಾತ್ರ ಸಲೀಸಾಗಿತ್ತು. ಆದರೆ ಹಳ್ಳಿ ಶೈಲಿಯಲ್ಲಿ ಮಾತನಾಡುವುದು ಕಷ್ಟವಾಯಿತು' ಎಂದ ಅವರು ಚಿತ್ರದಲ್ಲೊಂದು ಸುಂದರ ಸಂದೇಶ ಇರುವುದಾಗಿ ಹೇಳಿದರು.

ನಿರ್ಮಾಪಕ ಭರತ್‌ಕುಮಾರ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ತಂದೆಗೆ ಇದ್ದ ಸಿನಿಮಾ ನಿರ್ಮಾಪಕರಾಗಬೇಕೆಂಬ ಆಸೆಯನ್ನು ತಾವು ಈಡೇರಿಸುತ್ತಿರುವುದಾಗಿ ಹೇಳಿದ ಅವರು ಚಿತ್ರದ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ.
ಸಂಗೀತ ನಿರ್ದೇಶಕ ಅರುಣ್ ವಿಶ್ರೀನಿವಾಸ್ ಮ್ಯೂಸಿಕ್ ಆಲ್ಬಂಗಳ ಮೂಲಕ ಹೆಸರಾದವರು. ಅವರೀಗ `ಕೇಡಿಗಳು' ಮೂಲಕ ಮೊದಲ ಬಾರಿಗೆ ಸಿನಿಮಾ ಸಂಗೀತ ನಿರ್ದೇಶಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT