ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮಂತ್ರಿ ತಲೆದಂಡ

ಪತಿ, ಪತ್ನಿ `ಹೊಡೆದಾಟ'
Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ತಿರುವನಂತಪುರ (ಐಎಎನ್‌ಎಸ್/ಪಿಟಿಐ): ಕೌಟುಂಬಿಕ ಕಲಹ ಕೇರಳದ ಸಚಿವರೊಬ್ಬರ ತಲೆದಂಡಕ್ಕೆ ಕಾರಣವಾಗಿದೆ. ಪತ್ನಿಗೆ ದೈಹಿಕ- ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪ ಹೊತ್ತ ಕೇರಳದ ಅರಣ್ಯ ಸಚಿವ ಹಾಗೂ ನಟ ಕೆ.ಗಣೇಶ್ ಕುಮಾರ್ ಅವರು ಸೋಮವಾರ ತಡ ರಾತ್ರಿ ರಾಜೀನಾಮೆ ನೀಡಿದ್ದಾರೆ.

ಇದಕ್ಕೂ ಮುನ್ನ ಗಣೇಶ್ ಕುಮಾರ್ ವಿರುದ್ಧ ಅವರ ವೈದ್ಯ ಪತ್ನಿ ಡಾ. ಯಾಮಿನಿ ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ನಂತರ ಗಣೇಶ್ ಕುಮಾರ್ ಪ್ರತಿ ದೂರು ಸಲ್ಲಿಸಿ, `ಪತ್ನಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾಳೆ, ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ' ಎಂದು ಆರೋಪಿಸಿದ್ದು ಅದನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪತಿ- ಪತ್ನಿ ಪರಸ್ಪರರ ವಿರುದ್ಧ ಸಲ್ಲಿಸಿದ್ದ ಕೊಲೆ ಪ್ರಯತ್ನದ ದೂರನ್ನು ಮಾತ್ರ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ. ಇಬ್ಬರೂ ನೀಡಿದ ದೂರುಗಳ ತನಿಖೆ ಹೊಣೆಯನ್ನು ಅಪರಾಧ ವಿಭಾಗದ ಹಿರಿಯ ಐಪಿಎಸ್ ಅಧಿಕಾರಿ ಉಮಾ ಬೆಹ್ರಾ ಅವರಿಗೆ ಒಪ್ಪಿಸಲಾಗಿದೆ. ಪತ್ನಿಯಿಂದ ವಿಚ್ಛೇದನ ಕೋರಿ ಗಣೇಶ್ ಕುಮಾರ್ ಸೋಮವಾರ ಬೆಳಿಗ್ಗೆಯೇ ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಸರ್ಕಾರಕ್ಕೂ ಸಂಕಟ: ಪತಿ- ಪತ್ನಿ ನಡುವಿನ ಕಿತ್ತಾಟ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದ ಯುಡಿಎಫ್ ಸರ್ಕಾರಕ್ಕೆ ಸಂಕಟ ತಂದೊಡ್ಡಿದೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ ಯುಡಿಎಫ್ ಶಾಸಕರ ಸಂಖ್ಯೆ 73. ಹೀಗಾಗಿ ಕೇವಲ ಮೂವರು ಸದಸ್ಯರ ಬಹುಮತ ಹೊಂದಿರುವ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಪರಿಸ್ಥಿತಿ ನಿಭಾಯಿಸಬೇಕಾಗಿದೆ. ಗಣೇಶ್ ಕುಮಾರ್ ಅವರು ಸದನದಲ್ಲಿ ಕೇರಳ ಕಾಂಗ್ರೆಸ್ (ಪಿ) ಬಣದ ಏಕೈಕ ಶಾಸಕ. ಆದರೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೇ ಇರುವುದರಿಂದ ಸರ್ಕಾರ ಸದ್ಯಕ್ಕೆ ಅಪಾಯದ ತೂಗುಕತ್ತಿಯಿಂದ ಪಾರಾಗಿದೆ.

ರಾಜೀನಾಮೆ ನೀಡಬೇಕು ಎಂಬ ಆಗ್ರಹಕ್ಕೆ ಗಣೇಶ್ ಕುಮಾರ್ ಮೊದಲು ಮಣಿದಿರಲಿಲ್ಲ. ಮುಖ್ಯಮಂತ್ರಿ ಸೂಚನೆ ನೀಡಿದ ನಂತರ ಒಲ್ಲದ ಮನಸ್ಸಿನಿಂದಲೇ ರಾಜೀನಾಮೆ ಕೊಟ್ಟರಾದರೂ `ವೈಯಕ್ತಿಕ ಕಾರಣ'  ಮುಂದೊಡ್ಡಿದ್ದರು. ಆದರೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಚಿವರಾಗಿ ತಾವು ಕೈಗೊಂಡ ಬಿಗಿ ಕ್ರಮ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟಕ್ಕೆ `ರಾಜೀನಾಮೆ ರೂಪದಲ್ಲಿ ಬೆಲೆ ತೆರಬೇಕಾಯಿತು' ಎಂದು ಭಾವುಕರಾಗಿ ಹೇಳಿದರು.

ಅತ್ತ ಯಾಮಿನಿ ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿ `ಪತಿ ನೀಡುತ್ತಿದ್ದ ಕಿರುಕುಳವನ್ನು ಮುಖ್ಯಮಂತ್ರಿ ಚಾಂಡಿ ಅವರ ಗಮನಕ್ಕೆ ತಂದಿದ್ದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು ಮಾತಿನಿಂದ ಹಿಂದೆ ಸರಿದು ನನಗೆ ಮೋಸ ಮಾಡಿದರು' ಎಂದು ಹೇಳುತ್ತ ಬಿಕ್ಕಳಿಸಿದರು. ಪತಿ ಹೊಡೆದಿದ್ದರಿಂದ ಮೈಮೇಲಾದ ಗಾಯಗಳನ್ನು ಪ್ರದರ್ಶಿಸಿದರು.

`ಹದಿನಾರು ವರ್ಷಗಳಿಂದ ನಾನು ಗಂಡನಿಂದ ಹಿಂಸೆ ಅನುಭವಿಸುತ್ತಿದ್ದೇನೆ. ಅವರ ಕುಟುಂಬದ ಪ್ರತಿಯೊಬ್ಬರಿಂದಲೂ ಹಿಂಸೆಗೆ ಒಳಗಾಗಿದ್ದೇನೆ. ಮುಖ್ಯಮಂತ್ರಿಯವರಿಗೆ ದೂರು ನೀಡಿದಾಗ, ಪತಿ ವಿರುದ್ಧ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿತ್ತು. ಆದರೆ ಅವರೂ ನನಗೆ ದ್ರೋಹ ಮಾಡಿಬಿಟ್ಟರು' ಎಂದು ವೃತ್ತಿಯಲ್ಲಿ ವೈದ್ಯೆಯಾಗಿರುವ ಯಾಮಿನಿ ದೂರಿದರು.

ಹಿನ್ನೆಲೆ: ಸುಮಾರು 16 ವರ್ಷದಷ್ಟು ಹಳೆಯ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಬಿಡುತ್ತಿರುವುದು ಇದು ಎರಡನೇ ಸಲ. ಕೆಲ ವರ್ಷಗಳ ಹಿಂದೆ ದಂಪತಿ ಬೇರೆಯಾಗಿದ್ದರು. ಬಳಿಕ ಮಕ್ಕಳ ಭವಿಷ್ಯಕ್ಕಾಗಿ ಒಂದಾಗಿದ್ದರು.

ಆದರೆ ಇತ್ತೀಚೆಗೆ ಮತ್ತೆ ಪತಿಯ ಅನೈತಿಕ ಸಂಬಂಧ ಬೆಳಕಿಗೆ ಬಂದಂದಿನಿಂದ ಯಾಮಿನಿ ಮುಜುಗರಕ್ಕೆ ಒಳಗಾಗಿದ್ದರು. ತನ್ನ ಪತಿ ವಿವಾಹಿತ ಮಹಿಳೆಯೊಬ್ಬಳೊಡನೆ ಇಟ್ಟುಕೊಂಡ ಅನೈತಿಕ ಸಂಬಂದ ಮತ್ತು ಅವರಿಬ್ಬರ ನಡುವಿನ ನಡುವಿನ ಎಸ್‌ಎಂಎಸ್ ಸಂದೇಶ ವಿನಿಮಯವನ್ನು ಅನೇಕ ಸಲ ವಿರೋಧಿಸಿದ್ದರು. ಅಲ್ಲದೆ ಪತಿಗೆ ಬಂದ ಎಸ್‌ಎಂಎಸ್ ಸಂದೇಶಗಳನ್ನು ಪ್ರೇಯಸಿಯ ಪತಿಗೂ ರವಾನಿಸಿದ್ದರು. ವಿಷಯ ತಿಳಿದ ಪ್ರೇಯಸಿಯ ಪತಿ ಗಣೇಶ್ ಕುಮಾರ್‌ಗೆ ಥಳಿಸಿದ್ದರು ಎನ್ನಲಾಗಿದೆ.

ಸದನದಲ್ಲಿ ಕೋಲಾಹಲ: ಗಣೇಶ್ ಅವರ ಕೌಟುಂಬಿಕ ಕಲಹ ಹಾಗೂ ರಾಜೀನಾಮೆ ಪ್ರಕರಣ ಮಂಗಳವಾರ ವಿಧಾನಸಭೆಯ ಅಧಿವೇಶನದಲ್ಲಿ ಕೋಲಾಹಲವೆಬ್ಬಿಸಿತು. ಸಿಪಿಐ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸದಸ್ಯರು ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ರಾಜೀನಾಮೆಗೆ ಒತ್ತಾಯಿಸಿದರು. ನೊಂದ ಮಹಿಳೆಯೊಬ್ಬರ ಸಹಾಯಕ್ಕೆ ಬರದೆ `ವಂಚಿಸಿದರು' ಎಂದು ಮುಖ್ಯಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT