ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳದವರಿಗೂ ಶಬ್ದವ ಕಲಿಸಿ...

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗಷ್ಟೇ ಹುಟ್ಟಿದ, ಏನೊಂದೂ ಅರಿಯದ ಮಗುವನ್ನು ಮುದ್ದು ಮುದ್ದಾಗಿ ಮಾತನಾಡಿಸುತ್ತಾ ಮಗುವಿನ ಪ್ರತಿಕ್ರಿಯೆಗೂ ಕಾಯದೆ ಮಾತಿನ, ಹಾಡಿನ ಮಾಲೆ ಹೆಣೆಯುತ್ತಾಳೆ ಅಮ್ಮ. ಖುಷಿಯಲ್ಲಿ ತನ್ನ ಮಗುವಿಗೆ ದೈಹಿಕ ನ್ಯೂನತೆ ಇದೆ ಎಂಬುದನ್ನು ಗುರುತಿಸುವ ಗೋಜಿಗೇ ಹೋಗುವುದಿಲ್ಲ. ಅಂಗವಿಕಲತೆ ಇರುವುದನ್ನು ಮಗುವಿನ ಹೆತ್ತವರು ಕಲ್ಪಿಸಿಕೊಳ್ಳಲು ಸಿದ್ಧರಿರುವುದಿಲ್ಲ.

ಮಗುವಿಗೆ ಮೂರು ತಿಂಗಳಾಗುತ್ತಿದ್ದಂತೆ  ಶಬ್ದಗ್ರಹಿಕೆಗೆ ಸ್ಪಂದಿಸುತ್ತದೆ. ಚಲನೆ, ಬಣ್ಣ, ಬೆಳಕಿಗೆ ದೃಷ್ಟಿ ನೆಡುತ್ತದೆ. ಮಗು ಆರೋಗ್ಯ ಎಂಬುದರ ಸಂಕೇತವದು. ಮುಖ್ಯವಾಗಿ ಹೆತ್ತವರು ಮಗುವಿನ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕ ಬೆಳವಣಿಗೆಯನ್ನೂ ಗಮನಿಸಬೇಕು. ಆದರೆ, ತಮ್ಮ ಮಗುವಿನ ಬೆಳವಣಿಗೆಯಲ್ಲಿರುವ ವ್ಯತ್ಯಾಸವನ್ನು ಅನೇಕರು ಗುರುತಿಸುವುದೇ ಇಲ್ಲ.

ಒಂದು ವೇಳೆ  ತಮ್ಮ ಮಗು ದೈಹಿಕವಾಗಿ ಅಸಮರ್ಥವಾಗಿದೆ ಎಂದು ತಿಳಿದ ತಕ್ಷಣ ಆ ಮಗುವನ್ನು ನೋಡುವ ರೀತಿಯೇ ಬದಲಾಗುತ್ತದೆ. ಮಗುವಿಗೆ ಕಿವುಡುತನವಿದೆ ಎಂದು ತಿಳಿದಾಗ ನಾವು ಸನ್ನೆಯ ಮೂಲಕ ಮಾತನಾಡುತ್ತೇವೆ. ಇದರಿಂದಾಗಿ ಮಗು ಮಾತನ್ನೂ ಕಳೆದುಕೊಳ್ಳುತ್ತದೆ. ಆ ಮೂಲಕ ಕಿವುಡ ಮಗುವನ್ನು ಮೂಗನನ್ನಾಗಿಸುತ್ತದೆ ಸಮಾಜ.

ವಾಗ್ದೇವಿ ಟ್ರಸ್ಟ್‌
ಗಿರಿನಗರದಲ್ಲಿ ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್ ಸ್ಥಾಪಿಸಿ ಕಿವುಡ ಮಕ್ಕಳಿಗಾಗಿ ಶ್ರಮಿಸುತ್ತಿರುವ ಡಾ. ಶಾಂತಾ ರಾಧಾಕೃಷ್ಣ, ಕಿವುಡ ಮಕ್ಕಳಿಗೆ ಸಂಕೇತಗಳ ಮೂಲಕ ಮಾತು ಕಲಿಸುತ್ತಿದ್ದಾರೆ. ಶಾಂತಾ ರಾಧಾಕೃಷ್ಣ ಮೈಸೂರಿನಲ್ಲಿ ಸ್ಪೀಚ್‌ ಅಂಡ್‌ ಹಿಯರಿಂಗ್‌ನಲ್ಲಿ ತರಬೇತಿ ಪಡೆದು ಅಮೇರಿಕದಲ್ಲಿ ದುಡಿದವರು.

1996ರಲ್ಲಿ ಬೆಂಗಳೂರಿಗೆ ಬಂದು ವಾಗ್ದೇವಿ ಟ್ರಸ್ಟ್‌ ಸ್ಥಾಪಿಸುವ ಮೂಲಕ ಮೊದಲು ಕಿವುಡ ಮಕ್ಕಳ ಶಾಲೆ ತೆರೆದವರು. ಆಗ ಆರು ಮಕ್ಕಳಿಂದ ಶುರುವಾದ ಶಾಲೆಯಲ್ಲಿ ಈಗ 73 ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲರೂ ಬೆಂಗಳೂರಿನ ಮಕ್ಕಳು. ನರ್ಸರಿಯಿಂದ ಎಸ್‌ಎಸ್‌ಎಲ್‌ಸಿ ವರೆಗೂ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ಪೋಷಕರಿಗೆ ತರಬೇತಿ
ಅಂಗವಿಕಲ ಮಗುವೊಂದು ಸ್ವಾವಲಂಬಿಯಾಗಬೇಕಾದರೆ ಹೊರಗಿನ ತರಬೇತಿಗಿಂತ ಸದಾ ಜೊತೆಗಿರುವ ಹೆತ್ತವರ ಶ್ರಮವೂ ಬೇಕಾಗುತ್ತದೆ.ಈ ಹಿನ್ನೆಲೆಯಲ್ಲಿ ಡಾ. ಶಾಂತಾ ಮಕ್ಕಳಿಗೆ ಮಾತು ಕಲಿಸುವ ಮೊದಲು  ಪೋಷಕರಿಗೆ ತರಬೇತಿ ನೀಡುತ್ತಾರೆ. ಮಗುವಿನ ಜೊತೆ ಹೆತ್ತವರು ಮನೆಯಲ್ಲಿ ಯಾವ ರೀತಿ ವರ್ತಿಸಬೇಕು, ಮನೆಯಲ್ಲಿ ಪ್ರತಿ ವಸ್ತುವಿನ ಪರಿಚಯ ಮಾಡಿಕೊಡುವ ಪರಿ ಹೇಗೆ ಎಂಬುದನ್ನು ಹೇಳಿಕೊಡುತ್ತಾರೆ.

ಶಿಕ್ಷಕರಿಗೂ ತರಬೇತಿ
ಸರ್ಕಾರ ಜಾರಿಗೆ ತಂದ ಸರ್ವಶಿಕ್ಷಾ ಅಭಿಯಾನದಂತೆ ಸರ್ವರಿಗೂ ಸಮಾನ ಶಿಕ್ಷಣದ ಅವಕಾಶ ನೀಡಬೇಕು. ದೈಹಿಕ ಅಸಮರ್ಥರು, ಬಡವರು ಎಲ್ಲರೂ ಒಂದೇ ಸೂರಿನಡಿ ಬೆರೆತು ಶಿಕ್ಷಣ ಪಡೆಯಬೇಕು ಎಂಬುದು ಇದರ ಉದ್ದೇಶ. ಆದರೆ ಅಂಗಾಂಗಗಳ ಸಮಸ್ಯೆ ಇರುವ ಮಕ್ಕಳಿಗೆ ಸಾಮಾನ್ಯ ಮಕ್ಕಳ ಜೊತೆ ಪಾಠಮಾಡುವುದು ಶಿಕ್ಷಕರಿಗೆ ಸವಾಲು. ಅದಕ್ಕಾಗಿ ಶಿಕ್ಷಕರಿಗೆ ತರಬೇತಿಯ ಅಗತ್ಯವಿದೆ.

ಡಾ.ಶಾಂತಾ ಕಿವುಡ ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಎಂದು ಶಿಕ್ಷಕರಿಗೆ ತರಬೇತಿ ನೀಡುತ್ತಾರೆ. ಇಲ್ಲಿ ಕಲಿತ ಮಕ್ಕಳು ಸಾಮಾನ್ಯ ಶಾಲೆಗೆ ಹೋಗಿ ಕಲಿಯುವಾಗ ತೊಂದರೆಯಾಗದಂತೆ ಮಾಡುವುದು ಇದರ ಉದ್ದೇಶ. ಮಕ್ಕಳಿಗೆ ಅರ್ಥವಾಗುವಂತೆ ಹೇಳಿಕೊಡುವ ಸಂಕೇತ ಭಾಷೆಯನ್ನು ಮೊದಲು ಶಿಕ್ಷಕರಿಗೆ ಹೇಳಿಕೊಡುತ್ತಾರೆ. ಸಂಕೇತ ಭಾಷೆ ಎಂದ ತಕ್ಷಣ ಮಾತಿಲ್ಲವೆಂದಲ್ಲ. ಸಂಕೇತವಾದರೂ ಅಲ್ಲಿಯೂ ತುಟಿಗಳ ಚಲನೆಗೆ ಅಷ್ಟೇ ಪ್ರಾಮುಖ್ಯ ಇರುತ್ತದೆ. ಒಂದು ಶಬ್ದವನ್ನು ಉಚ್ಚರಿಸುವಾಗ ತುಟಿಗಳ ಚಲನೆಯ ಮೂಲಕ ಮಕ್ಕಳು ಅದನ್ನು ಗ್ರಹಿಸುವಂತೆ ಮಾಡಲಾಗುತ್ತದೆ.

ಸ್ವರಗಳು, ಆವೃತ್ತ ಸ್ವರಗಳು, ಸವೃತ್ತ ಸ್ವರಗಳು, ಕಂಪಿತ, ಅರೆವ್ಯಂಜನ, ಯೋಗವಾಹಕ, ವರ್ಗೀಯ ವ್ಯಂಜನ, ಕಂಠ್ಯ, ತಾಲವ್ಯ, ಪರವೇಷ್ಠಿಕ, ವರ್ತ್ಸ್ಯ, ಉಭಯೋಷ್ಠ್ಯ, ಘರ್ಷಗಳು, ಓಷಿತ್‌ ಸ್ಪರ್ಶ, ಗಲೀಯ, ಪರಿವೇಷ್ಠಿತ (ಅ ದಿಂದ ಕ್ಷವರೆಗಿನ ಸ್ವರಗಳು) ಮುಂತಾದವುಗಳನ್ನು ಉಚ್ಚರಿಸುವ ಕ್ರಮವನ್ನು ಹೇಳಿಕೊಡಲಾಗುತ್ತದೆ. ಮಾಹಿತಿಗೆ: 26727141, 98863 49253

ಕಿವುಡು ನೋಡಲು ಕಾಣುವ ಅಂಗವಿಕಲತೆಯಲ್ಲ

ಕಿವುಡು ನೋಡಲು ಕಾಣುವ ಅಂಗವಿಕಲತೆಯಲ್ಲ. ಕಿವುಡರೆಲ್ಲ ಮೂಗರಲ್ಲ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ. ಮಕ್ಕಳು ಕಿವುಡರು ಎಂದು ಗೊತ್ತಾದ ತಕ್ಷಣ ಹೆತ್ತವರು ಮಾಡುವ ತಪ್ಪೆಂದರೆ ಸಂಕೇತ ಭಾಷೆ ಬಳಸುವುದು. ಇದರಿಂದ ಮಕ್ಕಳು ಶಬ್ದವನ್ನೇ ಗ್ರಹಿಸದಂತಾಗುತ್ತದೆ. ಇಂತಹ ಮಕ್ಕಳಿಗೆ ಮಾತು ಮತ್ತು ಉಚ್ಚಾರಣೆ ಕೂಡ ಅಷ್ಟೇ ಮುಖ್ಯ. ಉದಾಹರಣೆಗೆ ಮಗುವಿಗೆ ಕರಾವಳಿ ಎಂಬುದನ್ನು ಭಾಷೆಯ ಮೂಲಕವೇ ಮನನ ಮಾಡಿಕೊಡಬೇಕಾಗುತ್ತದೆ. ಹಾಗಾಗಿ ಮಕ್ಕಳಿಗೆ ಮಾತೃಭಾಷೆಯ ಮೂಲಕವೇ ಹೇಳಿಕೊಡುತ್ತೇವೆ.

ಇಲ್ಲಿಯೇ ಒಂದು ಮನೆಯ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿ ಪೋಷಕರು ತರಬೇತಿ ಪಡೆಯುವ ವ್ಯವಸ್ಥೆ ಇದೆ. ಇಡೀ ಕಟ್ಟಡವನ್ನು ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೊಡುಗೆಯಾಗಿ ನೀಡಿದ್ದಾರೆ. ಉಳಿದಂತೆ ದಾನಿಗಳ ಸಹಾಯ ಇದ್ದೇ ಇದೆ. ಬಡಮಕ್ಕಳಿಗೆ ಮಾತ್ರ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ. ಇಲ್ಲಿ ಕಲಿತ ಮಕ್ಕಳು ಮಾತು ಕಡಿಮೆ ಬಳಕೆಯಾಗುವ ಸ್ಥಳಗಳಲ್ಲಿ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತೇವೆ. ಕೆಲವರು ಬ್ಯೂಟಿ ಪಾರ್ಲರ್‌, ಫ್ಯಾಷನ್‌ ಡಿಸೈನಿಂಗ್‌ ಕ್ಷೇತ್ರದಲ್ಲಿ ಅವಕಾಶ ಪಡೆದಿದ್ದಾರೆ.     
 -ಡಾ.ಶಾಂತಾ ರಾಧಾಕೃಷ್ಣ.

‘ಸಾಕಷ್ಟು ಬದಲಾವಣೆಯಾಗಿದೆ’

ನಮ್ಮ ಮಗಳು 9 ವರ್ಷದ ವನಿತಾ ವಾಗ್ದೇವಿಯಲ್ಲಿ 1ನೇ ತರಗತಿ ಕಲಿಯುತ್ತಿದ್ದಾಳೆ. ಮೊದಲು ಸಾಮಾನ್ಯ ಶಾಲೆಗೆ ಮಗಳನ್ನು ಸೇರಿಸಲಾಗಿತ್ತು. ಆಯುರ್ವೇದ ಔಷಧಿಯನ್ನೂ ಮಾಡಿದ್ದೇವೆ. ಆದರೆ ಮಗುವಿನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಈಗ ಒಂದೂವರೆ ವರ್ಷದಿಂದ ಇಲ್ಲಿ ಕಲಿಯುತ್ತಿದ್ದಾಳೆ. ಸ್ವಲ್ಪ ತಡವಾದ್ದರಿಂದ ಕಲಿಕೆಯಲ್ಲಿ ಸ್ವಲ್ಪ ಹಿಂದಿದ್ದಾಳೆ. ಉಳಿದಂತೆ ಅವಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.
-ವಂದನಾ, ಜ್ಞಾನಭಾರತಿ.

‘ತಿಂಗಳಲ್ಲಿ ಮಾತನಾಡಲು ಕಲಿತ’

ಐದೂವರೆ ವರ್ಷದ ಮಗ ವಾಗ್ದೇವಿ ಸಂಸ್ಥೆಯಲ್ಲಿ ಎಲ್‌ಕೆಜಿ ಓದುತ್ತಿದ್ದಾನೆ. ಮೂರು ವರ್ಷ ತುಂಬಿದರೂ ಮಗು ಮಾತನಾಡುತ್ತಿರಲಿಲ್ಲ. ಇಲ್ಲಿಗೆ ಸೇರಿಸಿದ ಒಂದು ತಿಂಗಳಲ್ಲೇ ಬರೆಯುವುದು, ಮಾತನಾಡುವುದು ಎರಡನ್ನೂ ಕಲಿತಿದ್ದಾನೆ. ಇಲ್ಲಿ ನಡೆಸಿಕೊಡುವ ‘ಮದರ್‌ ಚೈಲ್ಡ್‌ ಪ್ರೋಗ್ರಾಂ’ ಮೂಲಕ ನಮಗೂ ಮಗುವಿಗೆ ಅರ್ಥವಾಗುವಂತೆ ಮಾತನಾಡುವುದನ್ನು ಕಲಿಸಿಕೊಟ್ಟಿದ್ದಾರೆ.

ದಿನನಿತ್ಯದ ಬಳಕೆಯ ವಸ್ತುಗಳನ್ನು  ಪಕ್ಕದಲ್ಲಿಯೇ ಕುಳಿತು ಸನ್ನೆಯ ಮೂಲಕ ಹೇಳಿಕೊಡುತ್ತಾ ಜೋರಾಗಿ ವಸ್ತುವಿನ ಹೆಸರನ್ನು ಹೇಳಿಕೊಡುತ್ತೇವೆ. ಹೀಗೆ ನೂರಕ್ಕೂ ಹೆಚ್ಚು ಪದಗಳನ್ನು ಈಗ ಕಲಿತಿದ್ದಾನೆ.
-ಆಶಾ, ಬನಶಂಕರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT