ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಲು ಇಂಪು, ಜಾರಿ ಕಷ್ಟ

Last Updated 27 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಭಾರತೀಯ ರಾಜಕೀಯದಲ್ಲಿ ಅತ್ಯಂತ ಹಳೆಯ  ಪಕ್ಷವಾಗಿರುವ ಕಾಂಗ್ರೆಸ್‌ ಲೋಕಸಭಾ ಚುನಾವಣೆಗೆ  ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ‘ನಿಮ್ಮ ಧ್ವನಿ- ನಮ್ಮ ಪ್ರತಿಜ್ಞೆ’ ಎಂಬ ಆಕರ್ಷಕ ಹಣೆಪಟ್ಟಿಯೊಂದಿಗೆ ಬಿಡುಗಡೆ ಮಾಡಲಾಗಿರುವ ಈ 48 ಪುಟಗಳ ಪ್ರಣಾಳಿಕೆ ಓದುವು­ದಕ್ಕೇನೋ ಸೊಗಸಾಗಿದೆ. ಅಧಿಕಾರಕ್ಕೆ ಬಂದರೆ ನೂರು ದಿನಗಳ ಒಳಗೆ 10 ಕೋಟಿ ಉದ್ಯೋಗ ಸೃಷ್ಟಿ, ಕಪ್ಪು ಹಣ ಜಪ್ತಿಗೆ ಕಠಿಣ ಕ್ರಮ, ಕಾರ್ಮಿಕ ಕಾನೂನು­ಗಳ ಸುಧಾರಣೆ, ವಿದೇಶಿ ನೇರ ಹೂಡಿಕೆಗೆ ಉತ್ತೇಜನ ಮುಂತಾಗಿ ಹಲವು ಭರವಸೆಗಳನ್ನು ಈ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಪಕ್ಷದ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಅವರು ದೇಶದಾದ್ಯಂತ ತಿರುಗಾಡಿ ಸುಮಾರು 30 ಸಾರ್ವಜನಿಕ ಸಲಹಾ ಸಭೆಗಳನ್ನು ನಡೆಸಿ ಗ್ರಹಿಸಿದ ಹಲವು ಅಂಶಗಳನ್ನು ಈ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ಪ್ರಕಟಿಸಲಾಗಿದೆ. ಪಕ್ಷವೊಂದರ ಪ್ರಣಾಳಿಕೆಯನ್ನು ಜನಸಾಮಾನ್ಯರ ಜತೆ ಚರ್ಚಿಸಿ ರೂಪಿಸು­ವುದು ಒಳ್ಳೆಯ ಕ್ರಮವೇ. ಆದರೆ ಈ ಪ್ರಣಾಳಿಕೆಯಲ್ಲಿ ಸೂಚಿಸಿರುವ ಕ್ರಮಗಳನ್ನು ಎಷ್ಟರ ಮಟ್ಟಿಗೆ, ಹೇಗೆ ಜಾರಿಗೊಳಿಸುತ್ತಾರೆ ಎನ್ನುವ ಬಗ್ಗೆ ಅನುಮಾನಗಳಿವೆ.

ಭರವಸೆಗಳ ಅನುಷ್ಠಾನ ಕಾರ್ಯಸಾಧ್ಯವಾಗುವ ಆರ್ಥಿಕ ವಿಧಾನಗಳ ಬಗ್ಗೆ ಪ್ರಣಾಳಿಕೆಯಲ್ಲಿ ಯಾವುದೇ ಸ್ಪಷ್ಟ ಸೂಚನೆಗಳಿಲ್ಲ. ಹಾಗಾಗಿ ಇದನ್ನು ಚುನಾವಣೆಗೆ ಮುನ್ನ ಮತದಾರರ ಮನ ಒಲಿಸುವ ಸರ್ಕಸ್‌ ಎಂದಷ್ಟೇ ಪರಿಗಣಿಸಬಹುದು. ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ ಮತ್ತು ಕಪ್ಪುಹಣದ ಹಾವಳಿಯನ್ನು ತಡೆಯಲಾಗದ ಯುಪಿಎ-–2 ಸರಕಾರವನ್ನು ಈಗಾಗಲೇ ನೋಡಿರುವ ಮತದಾರರು ಈ ಹೊಸ ಭರವಸೆಗಳಿಂದ ರೋಮಾಂಚಿತರಾಗುವ ಸಾಧ್ಯತೆ ಕಡಿಮೆ.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ, ಸರಕು ಹಾಗೂ ಸೇವಾ ತೆರಿಗೆಗಳ ಜಾರಿ ಕುರಿತಂತಹ ಭರವಸೆಯನ್ನು ಕಾಂಗ್ರೆಸ್ ಹಿಂದಿನ ಸಲದ ಪ್ರಣಾಳಿಕೆಯಲ್ಲೂ ನೀಡಿತ್ತು. ಖಾಸಗಿ ರಂಗದ ನೇಮಕಗಳಲ್ಲಿ ಪರಿಶಿಷ್ಟ ಜಾತಿ-, ಪಂಗಡದವರ ಪರವಾಗಿ ಸಕಾರಾತ್ಮಕ ಕ್ರಮಗಳಿಗೆ ಬದ್ಧ­ವಾ­ಗಿರುವುದಾಗಿ ಕಳೆದ ಬಾರಿಯೂ ಕಾಂಗ್ರೆಸ್ ಹೇಳಿತ್ತು. ಈ ಬಾರಿಯೂ ಈ ಬಗ್ಗೆ ರಾಷ್ಟ್ರೀಯ ಒಮ್ಮತ ಮೂಡಿಸಲು ಪ್ರಯತ್ನಿಸುವುದಾಗಿ  ಹೇಳಲಾಗಿದೆ.

ಹೀಗಾಗಿ ಹಲವು ಭರವಸೆಗಳ ಪುನರುಕ್ತಿ ಆಗಿದೆ. ಕೈಗಾರಿಕೆಗೆ ಪ್ರೋತ್ಸಾಹ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಮತೋಲನ ಸಾಧಿಸ­ಬೇಕೆಂಬ ಕಾಂಗ್ರೆಸ್‌ನ ನಿಲುವು ಸ್ವಲ್ಪ ಮಟ್ಟಿಗೆ ಕಾರ್ಯಸಾಧ್ಯವಾದದ್ದು ಅನ್ನಿಸುತ್ತಿದೆ. ಹಾಗೆಯೇ ಶಿಕ್ಷಣದಂತೆ ಆರೋಗ್ಯವನ್ನೂ ಹಕ್ಕು ಎಂದು ಪರಿಗಣಿಸುವ ನೀತಿಯೂ ಸ್ವಾಗತಾರ್ಹವಾದದ್ದು. ಆದರೆ ಆರ್ಥಿಕ ವೃದ್ಧಿ ದರವನ್ನು ಮುಂದಿನ ಮೂರು ವರ್ಷಗಳ ಒಳಗೆ ಶೇ 8ಕ್ಕೆ ಏರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನಂಬಲರ್ಹವಾಗಿಲ್ಲ. ಈಗಾಗಲೇ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ವೃದ್ಧಿ ದರವು ಶೇ 5ಕ್ಕಿಂತ ಕೆಳಕ್ಕೆ ಇಳಿದಿದೆ.

12ನೇ ಪಂಚವಾರ್ಷಿಕ ಯೋಜನೆಗೆ ನಿಗದಿಪಡಿಸಿದ ಅಭಿವೃದ್ಧಿ ಗುರಿಗಳನ್ನು ಸ್ವತಃ ಯೋಜನಾ ಆಯೋಗವೇ ಕಡಿಮೆ ಮಾಡಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ವೃದ್ಧಿ ದರವನ್ನು ಶೇ 8ಕ್ಕೆ ಏರಿಸಲು ಕೈಗೊಳ್ಳುವ ಕಠಿಣ ಆರ್ಥಿಕ ಕ್ರಮಗಳೇನು ಎನ್ನುವ ಬಗ್ಗೆ ಈ ಪ್ರಣಾಳಿಕೆಯಲ್ಲಿ ಯಾವುದೇ ಸೂಚನೆಗಳಿಲ್ಲ. ಭರವಸೆಗಳು ಕಿವಿಗೆ ಇಂಪಾಗಿದ್ದರೆ ಸಾಲದು; ಕಾರ್ಯಸಾಧುವೂ ಆಗಿರಬೇಕು. ಇಲ್ಲವಾದಲ್ಲಿ ಜನರು ಅದನ್ನೊಂದು ನಾಟಕ ಎಂದೇ ಭಾವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT