ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳಿರಯ್ಯ ನನ್ನ ಕಥೆಯ...

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

`ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಬಸ್ತಿ ಹೊಸಕೋಟೆಯ `ಗೊಮ್ಮಟ' ಎನ್ನುತ್ತಾರೆ ಎಲ್ಲ ನನ್ನ. 12ನೇ ಶತಮಾನದಿಂದಲೂ ಇಲ್ಲಿಯೇ ಇದ್ದೇನೆ. ಬೂಕನಕೆರೆ ಹೋಬಳಿಗೆ ಸೇರಿದ ಬಸ್ತಿ ಹೊಸಕೋಟೆಯ ಬಳಿ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸಂಗಮವಾಗುವ ಸುಂದರ ಸ್ಥಳವಿದೆ.

ಈ ಮಧ್ಯೆ ಇರುವ ಒಂದು ದಿಬ್ಬದಲ್ಲಿರುವ ಮರಗಳ ತೋಪಿನಲ್ಲಿ 18 ಅಡಿ ಎತ್ತರದಲ್ಲಿ ನಾನಿದ್ದೇನೆ. ನನ್ನ ಸುತ್ತಲೂ ಕಮಾನಿನ ಆಕಾರದ ರಕ್ಷಣಾ ಗೋಪುರವೂ ಇದೆ. ಆದರೆ ಸೂಕ್ತ ರಕ್ಷಣೆ ಇಲ್ಲದೇ ಈಗ ಎಲ್ಲವೂ ಅನಾಥ. ಮೃದುವಾದ ಬಳಪದ ಕಲ್ಲಿನಿಂದ ಕೆತ್ತಲಾಗಿರುವ ನಾನು ದನಗಾಹಿಗಳ, ದಾರಿಹೋಕರ ದಾಳಿಗೆ ಗುರಿಯಾಗಿದ್ದೇನೆ.

ಸೂಕ್ಷ್ಮವಾದ ಕೆತ್ತನೆಗಳನ್ನು ಒಳಗೊಳ್ಳದಿದ್ದರೂ, ಒಂದು ಕಾಲಕ್ಕೆ ಸುಂದರವಾಗಿದ್ದ ನನ್ನ ವಿಗ್ರಹ ಇಂದು ಎಮ್ಮೆ, ದನಗಳು ಮೈ ಉಜ್ಜಿಕೊಂಡ ಪರಿಣಾಮ ವಿರೂಪವಾಗಿದೆ. ತಾಲ್ಲೂಕು ಕೇಂದ್ರದಿಂದ 25 ಕಿ.ಮೀ ದೂರದಲ್ಲಿದ್ದು, ಉತ್ತಮ ರಸ್ತೆ, ಕ್ಷೇತ್ರದ ಬಗ್ಗೆ ಸೂಕ್ತ ಮಾಹಿತಿ ಇದ್ದರೂ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ನಾನಿನ್ನೂ ಅಜ್ಞಾತವಾಗಿಯೇ ಉಳಿದುಬಿಟ್ಟಿದ್ದೇನೆ.

ಹೊಯ್ಸಳರ ಸೇನಾನಿ ಪುಣಿಸಮಯ್ಯ ನನ್ನ ಪ್ರತಿಷ್ಠಾಪನೆ ಮಾಡಿಸಿದ್ದ. ಈ ಉದಾರಿ ಶ್ರಾವಕ, ಚಾಮರಾಜನಗರ ಸೇರಿದಂತೆ ನಾಡಿನ ವಿವಿಧೆಡೆ ಬಸದಿಗಳನ್ನೂ ನಿರ್ಮಿಸಿದ್ದಾನೆ. ಮೈಸೂರು ತಾಲ್ಲೂಕಿನ ವರಕೋಡು ಎಂಬಲ್ಲಿನ ಬಸದಿಯಲ್ಲಿ ದೊರೆತ ಶಾಸನ ಈ ಬಗ್ಗೆ ತಿಳಿಸುತ್ತದೆ.

ಬಸ್ತಿಯ ಬಸದಿಯ ಮುಂದಿನ ಮಾನಸ್ತಂಭದಲ್ಲಿದ್ದ ಕ್ರಿ.ಶ. 1147ರ ಶಾಸನ ಹೊಯ್ಸಳರ ಮಹಾ ಪ್ರಧಾನ ಹೆಗ್ಗಡೆ ಶಿವರಾಜ ಸೋಮಯ್ಯ ಮಾಣಿಕ್ಯದೊಳಲ ಜಿನಾಲಯಕ್ಕೆ ದತ್ತಿ ನೀಡಿದ ಬಗ್ಗೆ ಹೇಳುತ್ತದೆ. ಇವುಗಳ ಆಧಾರದಿಂದ ನನ್ನ ಪ್ರತಿಷ್ಠಾಪನೆಗೂ ಪುಣಿಸಮಯ್ಯನೇ ಕಾರಣ ಎಂದು ಇತಿಹಾಸ ಸಂಶೋಧಕ ಎಚ್.ಹನುಮಂತರಾವ್ ಆಧಾರ ಸಹಿತವಾಗಿ ಉಲ್ಲೇಖಿಸಿದ್ದಾರೆ. ಹಿರಿಯ ಸಂಶೋಧಕ ಡಾ.ಸೂರ್ಯನಾಥ ಕಾಮತ್ ಸಹ ಇದನ್ನು ಪುಷ್ಟೀಕರಿಸಿದ್ದಾರೆ.

ಬದಲಾದ ಚಿತ್ರಣ

ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣವಾಗುವ ಮುನ್ನ ಇಲ್ಲಿ ಜನವಸತಿ ಪ್ರದೇಶವಿತ್ತು. ಕನ್ನಂಬಾಡಿ ಕಟ್ಟೆ ನಿರ್ಮಾಣವಾಗಿ ಅದರ ಹಿನ್ನೀರಿನಲ್ಲಿ ಈ ಭೂಪ್ರದೇಶ ಮುಳುಗಡೆಯಾದಾಗ ಇಲ್ಲಿನ ನಿವಾಸಿಗಳು ಬೇರೆಡೆಗೆ ಸ್ಥಳಾಂತರಗೊಂಡರು. ಜೈನರು ನನ್ನನ್ನು ಆಗ ಪೂಜಿಸುತ್ತಿದ್ದರು. ಕಾಲ ಕ್ರಮೇಣ ಯಾವುದೇ ಪೂಜೆ, ಪುನಸ್ಕಾರ ಇಲ್ಲದೆ ನಿಂತುಬಿಟ್ಟೆ.

ಹಿನ್ನೀರು ಕಡಿಮೆಯಾದಾಗ ಇಲ್ಲಿಗೆ ಬರುವ ಈ ಭಾಗದ ಹಳ್ಳಿ ಜನರು ಈ `ಶ್ರವಣಪ್ಪ' ಎಂದು ಬಾಯ್ತುಂಬ ಹೊಗಳಿ ಒಮ್ಮಮ್ಮೆ ಪೂಜೆ ಮಾಡಿದ್ದೂ ಉಂಟು. ವರ್ಷದ ಹೆಚ್ಚಿನ ಸಮಯ ಈ ಪ್ರದೇಶ ಹಿನ್ನೀರಿನಿಂದ ಆವರಿಸಿರುವ ಮತ್ತು ಇರುವ ಸಾಧಾರಣ ರಸ್ತೆಯ ಇಕ್ಕೆಲಗಳಲ್ಲೂ ಜನರು ಬೇಸಾಯ ಮಾಡುವಾಗ ರಸ್ತೆ ಕಿರಿದಾಗುವ ಕಾರಣ ನಿಯಮಿತ ಸಾರಿಗೆ ವ್ಯವಸ್ಥೆಯೂ ಇಲ್ಲದಂತಾಗಿದೆ.

ಸುತ್ತಮುತ್ತಲಿನಲ್ಲಿ ಹೊಯ್ಸಳರ ಕಾಲದ್ದಲ್ಲದೆ, ಗಂಗರ ಕಾಲದ್ದಿರಬಹುದಾದ ಸುಂದರವಾದ ಕಲ್ಲಿನ ಮಂಟಪಗಳು, ವಿವಿಧ ಭಂಗಿಗಳಲ್ಲಿ ಕುಳಿತಿರುವ, ನಿಂತಿರುವ ತೀರ್ಥಂಕರರ ಹಾಳಾದ ಮೂರ್ತಿಗಳು ನಿಮಗೆ ನೋಡಸಿಗುತ್ತವೆ. ಒಂದು ಕಾಲಕ್ಕೆ ಈ ಸ್ಥಳ ಜೈನ ಧರ್ಮೀಯರ ಪುಣ್ಯಕ್ಷೇತ್ರ ಆಗಿತ್ತು ಎಂಬುದಕ್ಕೆ ಇವೆಲ್ಲವೂ ಸಾಕ್ಷಿ ಒದಗಿಸುತ್ತದೆ. ಆದರೆ ಸೂಕ್ತ ರಕ್ಷಣೆಯಿಲ್ಲದೆ, ಸಿಕ್ಕಸಿಕ್ಕವರ ಕಾಲ ಕಸವಾಗಿರುವ ಇವುಗಳಲ್ಲಿ ಕೆಲವು, ಮನೆ ಮುಂದಿನ ಕಲ್ಲುಹಾಸಾಗಿವೆ !  

ಇತ್ತೀಚಿನ ದಿನಗಳಲ್ಲಿ ನನ್ನ ಕ್ಷೇತ್ರದ ಹಳೆಯ ವೈಭವ ಮರುಕಳಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ನೆರೆಯ ಕೃಷ್ಣರಾಜನಗರ ತಾಲ್ಲೂಕಿನ ಸಾಲಿಗ್ರಾಮದ `ಯೂತ್ ಜೈನ್ ಮಿಲನ್ ಸಂಸ್ಥೆ'ಯವರು ಕಳೆದ ವರ್ಷ ಮಸ್ತಕಾಭಿಷೇಕ ಮಾಡುವ

ಮೂಲಕ ನನಗೆ ಹಿಂದಿನ ವಿಜೃಂಭಣೆಯ ಪೂಜಾ ವಿಧಿವಿಧಾನಗಳ, ಆಚರಣೆಗಳ ನೆನಪು ಬರುವಂತೆ ಮಾಡಲು ಯತ್ನಿಸಿದ್ದಾರೆ.

ಪ್ರತಿ ಐದು ವರ್ಷಗಳಿಗೊಮ್ಮೆ ಇಂತಹ ಕೈಂಕರ್ಯವನ್ನು ನಡೆಸುವ ಉದ್ದೇಶವನ್ನೂ ಇವರು ಹೊಂದಿದ್ದಾರೆ. ಬೆಂಗಳೂರಿನ ಕೆಲವು ಭಕ್ತ ಮಹಾಶಯರು ನನ್ನ ಸುತ್ತಲೂ ಕಬ್ಬಿಣದ ಆವರಣವನ್ನು ಒದಗಿಸಿ, ಸ್ವಲ್ಪ ರಕ್ಷಣೆ ದೊರೆಯುವಂತೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಾದರೂ ಈ `ಗೊಮ್ಮಟ'ನಿಗೆ ಹಾಗೂ ಈ ಕ್ಷೇತ್ರಕ್ಕೆ ಕಾಯಕಲ್ಪ ದೊರೆತು, ಜಗತ್ತಿಗೆ ನನ್ನ ಪರಿಚಯವಾಗಲಿ. ಮುಂದಿನ ಪೀಳಿಗೆಯ ಮಕ್ಕಳಿಗೆ ಇತಿಹಾಸದ ಪುಟಗಳು ನನ್ನ ಮಾಹಿತಿ ನೀಡಲಿ ಎಂಬುದು ಎಲ್ಲರ ಆಶಯವಾಗಿದೆ. ಆಸಕ್ತರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದಡಿಯಿಡಲಿ ಎಂದು ನನ್ನದೊಂದು ವಿನಮ್ರ ಕೋರಿಕೆ'.
ನಿಮ್ಮ ಪ್ರೀತಿಯ
ಹೊಸಕೋಟೆ `ಗೊಮ್ಮಟ'
-ಶ್ಯಾಮೇಶ್ ಅತ್ತಿಗುಪ್ಪೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT