ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವ ಸಂಸ್ಕೃತಿಗೆ ಒತ್ತು ನೀಡಿದ ಕವಿ

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಧಾರವಾಡ:
ಗೆಳೆಯ ಬರತೇನಿ ಮನದಾಗ ಹಿಡಿ ನೆನಪ...
ನಾನು ನೀನು ಯಾರೋ ಏನೋ ಬಂತು...
ಅಂತು ಕೂಡಿಸಿತು ಪ್ರೇಮದ ತಂತು...

ಈ ಕವನದ ಸಾಲುಗಳು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ 1962ರಲ್ಲಿ ಕೇಳಿಬಂದಿದ್ದವು. ಇವು ಇನ್ನೂ ಜೀವಂತ. ಈ ಸಾಲುಗಳನ್ನು ಬರೆದು ಹಾಡಿದವರು ಬೇರಾರೂ ಅಲ್ಲ, ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗುವ ಮೂಲಕ, ಕನ್ನಡ ಸಾಹಿತ್ಯ ಶಿಖರಕ್ಕೆ ಮತ್ತೊಂದು ಗರಿ ಮೂಡಿಸಿರುವ ದೇಸಿ ಕವಿ ಡಾ. ಚಂದ್ರಶೇಖರ ಕಂಬಾರ.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ 1960ರಿಂದ 1962ರವರೆಗೆ ಕಂಬಾರರು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರು. ಅಂತಿಮ ವರ್ಷದ ಬೀಳ್ಕೊಡುಗೆ ಸಮಾರಂಭದಲ್ಲಿ ತಾವು ರಚಿಸಿದ ಕವನದ ಈ ಸಾಲುಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು; ಅನೇಕರ ಮೇಲೆ ಪ್ರಭಾವ ಬೀರಿದ್ದರು. ಹೀಗೆ ಪ್ರಭಾವಕ್ಕೊಳಗಾದವರಲ್ಲಿ ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ಅವರೂ ಒಬ್ಬರು. ಕಲಬುರ್ಗಿ ಕಂಬಾರರ ಸಹಪಾಠಿಯಾಗಿದ್ದರು.

ತಮ್ಮ ಸ್ನೇಹಿತರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಕಲಬುರ್ಗಿ, ಕಂಬಾರರ ಜೊತೆಗಿನ ತಮ್ಮ ಒಡನಾಟ, ಸಂಬಂಧ ಕುರಿತು `ಪ್ರಜಾವಾಣಿ~ ಜೊತೆಗೆ ಹಂಚಿಕೊಂಡ ನೆನಪು ಇಲ್ಲಿದೆ.
`ಜ್ಞಾನಪೀಠ ಪ್ರಶಸ್ತಿ ಈ ಬಾರಿ ಕನ್ನಡಕ್ಕೆ, ಅದರಲ್ಲೂ ನನ್ನ ಸ್ನೇಹಿತರಿಗೆ ಸಿಕ್ಕಿದ್ದರಿಂದ ಸಂತೋಷವಾಗಿದೆ. ಕಂಬಾರರು ನಮ್ಮ ತಲೆಮಾರಿನ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ದೇಸಿ ಸಂವೇದನೆಯನ್ನು ಬೇಂದ್ರೆಯವರ ತರುವಾಯ ಸಮರ್ಥವಾಗಿ ಕಟ್ಟಿಕೊಟ್ಟವರು. ಈ ದಿನಗಳಲ್ಲಿ ಮತ್ತೊಬ್ಬ ಕಂಬಾರರು ಸಿಗುವುದು ಕಠಿಣ.

`ಕಂಬಾರರು ಬೆಳಗಾವಿ ಲಿಂಗರಾಜ ಕಾಲೇಜಿನಿಂದ, ನಾನು ವಿಜಾಪುರದ ವಿಜಯಾ ಕಾಲೇಜಿನಿಂದ 1960ರಲ್ಲಿ ಸ್ನಾತಕೋತ್ತರ ಪದವಿಗಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠಕ್ಕೆ ಪ್ರವೇಶ ಪಡೆದೆವು. ನನ್ನದು ಅಧ್ಯಯನಶೀಲ ಪ್ರವೃತ್ತಿ.

ಸರಿಯಾಗಿ ತರಗತಿಗಳಿಗೆ ಹಾಜರಾಗುವುದು, ನಿರಂತರ ಅಭ್ಯಾಸ ಮಾಡುವುದು ನನ್ನ ಸ್ವಭಾವವಾಗಿತ್ತು. ಆದರೆ ಕಂಬಾರರು ಸೃಜನಶೀಲ ಸಾಹಿತಿಯಾಗಿದ್ದರು. ಇಂಥವರು ಯಾವುದೇ ಚೌಕಟ್ಟಿಗೆ, ಶಿಸ್ತಿಗೆ ಒಳಗಾಗುವುದಿಲ್ಲ. ಸರಿಯಾಗಿ ತರಗತಿಗೆ ಬರುತ್ತಿರಲಿಲ್ಲ. ಆದರೆ ಇಬ್ಬರೂ ಉನ್ನತ ಶ್ರೇಣಿಯೆಲ್ಲಿಯೇ ಪಾಸಾಗಿದ್ದೆವು.

`1960-62ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸಾರಸ್ವತ ಲೋಕದ ಮೇಲೆ ಅತ್ಯಂತ ಪ್ರಭಾವ ಬೀರುವ ಮಟ್ಟದಲ್ಲಿ ಕೆಲಸ ಮಾಡಿರುವ ಡಾ. ಕಂಬಾರ, ಡಾ. ಚಂದ್ರಶೇಖರ ಪಾಟೀಲ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹಾಗೂ ಡಾ. ಗಿರಡ್ಡಿ ಗೋವಿಂದರಾಜ ನನ್ನ ಜೊತೆಗಿದ್ದರು. ನಾನು ಮತ್ತು ಕಂಬಾರರು ಕನ್ನಡ ವಿಭಾಗದ ಸಹಪಾಠಿಗಳು. ಚಂಪಾ, ಗಿರಡ್ಡಿ ಹಾಗೂ ಪಟ್ಟಣಶೆಟ್ಟಿ ನಮಗಿಂತ ಒಂದು ವರ್ಷ ಚಿಕ್ಕವರು. ಇಂಥ ಬ್ಯಾಚ್ ಕವಿವಿ ಇತಿಹಾಸದಲ್ಲಿ ಯಾವ ವರ್ಷವೂ ಬರಲಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಎಲ್ಲರೂ ಸಾಧನೆ ಮಾಡಿದವರೇ ಆಗಿದ್ದೇವೆ.

`ನಾನು ಸಂಶೋಧನಾ ಕ್ಷೇತ್ರದಲ್ಲಿದ್ದರೆ, ಕಂಬಾರರು ನಾಟಕ, ಪಟ್ಟಣಶೆಟ್ಟಿ ಕಾವ್ಯ, ಗಿರಡ್ಡಿ ವಿಮರ್ಶೆ ಹಾಗೂ ಚಂಪಾ ಚಳವಳಿ ಮೂಲಕ ಗುರುತಿಸಿಕೊಂಡವರು. ನಾನು ಹಾಗೂ ಕಂಬಾರರು ಒಂದೇ ಕ್ಲಾಸ್‌ನಲ್ಲಿದ್ದರೂ ನಾವಿಬ್ಬರೂ ಅಷ್ಟಕ್ಕಷ್ಟೇ ಎಂಬಂತೆ ಇದ್ದೆವು. `ಮುಗುಳು~ ಎಂಬ ಕವನ ಸಂಕಲನ ಪ್ರಕಟ ಮಾಡಿದ್ದ ಅವರು, ಪದ್ಯ ಬರೆಯುವುದು, ಹಾಡುವುದರಿಂದ ಕ್ಲಾಸ್‌ನಲ್ಲಿ ಪಾಪ್ಯುಲರ್ ಆಗಿದ್ದರು.

`ಸ್ನಾತಕೋತ್ತರ ಕೋರ್ಸ್‌ನ ಕೊನೆಯ ವರ್ಷದ ಬೀಳ್ಕೊಡುಗೆ ಸಮಾರಂಭದಲ್ಲಿ ಕಂಬಾರರು ತಾವೇ ರಚಿಸಿ ಹಾಡಿದ ಹಾಡು ನನ್ನ ಮೇಲೆ ಪ್ರಭಾವ ಬೀರಿತು. ಇದರಿಂದ ಕಂಬಾರರ ಜೊತೆಗಿನ ನಂಟು ಹೆಚ್ಚಾಯಿತು.

`ಕಂಬಾರರು ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಉಪನ್ಯಾಸಕರಾಗಿ ಸೇರಿದರೆ, ನಾನು ಕರ್ನಾಟಕ ಕಾಲೇಜಿಗೆ ಸೇರಿದೆ. ನಂತರ ಕಂಬಾರರು ಉಡುಪಿ, ಸಾಗರದಲ್ಲಿ ಸೇವೆ ಸಲ್ಲಿಸಿ, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಹೋದರು. ಬೆಂಗಳೂರಿಗೆ ಹೋದ ನಂತರ ಅವರಿಗೆ ಶುಕ್ರದೆಸೆ ಬಂತು.

`ಕಂಬಾರರು ಉತ್ತರ ಕರ್ನಾಟಕದ ಸಂಸ್ಕೃತಿ, ಗ್ರಾಮೀಣ ಮೂಲ ಸಂಸ್ಕೃತಿ, ಭಾಷೆ ಬಳಸಿಕೊಂಡು ಭಿನ್ನವಾಗಿ ಬರೆದರು. ಹೀಗಾಗಿ ಅವರ ಬರವಣಿಗೆ ಭಿನ್ನವಾಗಿ ಕಂಡಿತು. ಕಂಬಾರರು ಇಲ್ಲಿಯೇ ಇದ್ದರೆ ಅಷ್ಟೊಂದು ಪ್ರಭಾವ ಬೀರುತ್ತಿರಲಿಲ್ಲ. ಮೂಲತಃ ಅವರೊಬ್ಬ ಕವಿ ಎಂದು ತಿಳಿದುಕೊಂಡಿದ್ದೆ.

ನಂತರ ಗೊತ್ತಾಯಿತು, ಅವರು ಬಹುಮುಖಿ ವ್ಯಕ್ತಿತ್ವ ಹೊಂದಿದವರು ಎಂದು. ಬೆಂಗಳೂರಿನಲ್ಲಿ ಅವರಿಗೆ ದೊಡ್ಡ ವೇದಿಕೆ ಸಿಕ್ಕಿತು. ಪ್ರಚಾರಕ್ಕಾಗಿ ಸಹಾಯ ದೊರೆಯಿತು. ಇವೆಲ್ಲಕ್ಕಿಂತ ಮಿಗಿಲಾಗಿದ್ದುದು ಅವರಲ್ಲಿದ್ದ ದೊಡ್ಡ ಶಕ್ತಿ. ಹೀಗಾಗಿ ಅವರು ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಯಿತು.

`ಗೋಪಾಲಕೃಷ್ಣ ಅಡಿಗ, ಕೀರ್ತಿನಾಥ ಕುರ್ತಕೋಟಿ ಅವರಂಥವರ ಸಂಪರ್ಕದಿಂದ ಕಂಬಾರರಿಗೆ ಹೆಚ್ಚಿನ ಅವಕಾಶ ಸಿಕ್ಕಿತು. ನೆಲಮೂಲ ಪ್ರತಿಭೆಯ ವ್ಯಕ್ತಿ ಕಂಬಾರರು, ಬೆಳಗಾವಿ ಜಿಲ್ಲೆಯ ಸಣ್ಣಾಟ, ಲಾವಣಿಯ ಪ್ರಭಾವಕ್ಕೆ ಒಳಗಾದವರು.

ನಾಟಕ ಬರೆಯಿರಿ ಅಂದರೆ ಸಣ್ಣಾಟ, ಕಾವ್ಯ ಬರೆಯಿರಿ ಅಂದರೆ ಲಾವಣಿ ಬರೆಯುತ್ತಾರೆ.  ಓದು ಸಂಸ್ಕೃತಿಯಿಂದ ಭಿನ್ನವಾಗಿದ್ದನ್ನು, ನಾಟಕ ಹಾಗೂ ಕಾವ್ಯದ ಕೇಳುವ ಸಂಸ್ಕೃತಿಯನ್ನಿಟ್ಟುಕೊಂಡು ಬರೆಯುತ್ತಾರೆ, ಇದು ಕಂಬಾರರ ವೈಶಿಷ್ಟ್ಯ.

`ಕಂಬಾರರ ಸಾಹಿತ್ಯದಲ್ಲಿ ದ್ವಂದ್ವದ ಮುಖಾಮುಖಿ ಇದೆ. ಅವರ ಸಾಹಿತ್ಯದ ಮುಖ್ಯ ಲಕ್ಷಣ ಇದು. ಕಾಮಕೇಂದ್ರಿತವಾದ ವಿಚಾರಗಳನ್ನು ಅವರ ಕವನಗಳಲ್ಲಿ, ನಾಟಕಗಳಲ್ಲಿ ಕಾಣಬಹುದು. ಇತ್ತೀಚೆಗೆ ಅವರು ಬರೆದಂಥ `ಶಿವರಾತ್ರಿ~ ನಾಟಕ ಅದ್ಭುತವಾಗಿ ಮೂಡಿಬಂದಿದೆ. ಗಿರೀಶ ಕಾರ್ನಾಡರ `ತಲೆದಂಡ~ ನಾಟಕಕ್ಕಿಂತ `ಶಿವರಾತ್ರಿ~ ನಾಟಕ ಶ್ರೇಷ್ಠವಾಗಿದೆ. ನಾಟಕದಲ್ಲಿ ಬಸವಣ್ಣನ ಆಂತರ್ಯವನ್ನು ಕಂಬಾರರು ಕಟ್ಟಿಕೊಟ್ಟಿದ್ದಾರೆ.

`ಎರಡು ಅವಧಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಂಬಾರರು ಮಹತ್ವದ ಕೆಲಸ ಮಾಡಿದ್ದಾರೆ. ಎಲ್ಲ ವಿಶ್ವವಿದ್ಯಾಲಯಗಳಿಗಿಂತ ಕನ್ನಡ ವಿ.ವಿ ಆವರಣವನ್ನು ಭಿನ್ನವಾಗಿ, ದೇಸಿ ರೀತಿಯಲ್ಲಿ ರೂಪಿಸಿದ್ದಾರೆ.

`ಹಂಪಿ ವಿ.ವಿ ಕುಲಪತಿಯಾಗಿ ನಾನು ನೇಮಕವಾಗುವ ಸಂದರ್ಭದಲ್ಲಿ ಕಂಬಾರರು ಹಾಗೂ ನನ್ನ ನಡುವೆ ವೈಮನಸ್ಸು ಇದೆ ಎಂಬ ಊಹಾಪೋಹ ಎದ್ದಿತ್ತು. ಆದರೆ ಇಂಥ ಊಹಾಪೋಹಕ್ಕೆ ನಾನು ಮತ್ತು ಕಂಬಾರರು  ತಲೆಕೆಡಿಸಿಕೊಳ್ಳಲಿಲ್ಲ~ ಎಂದು ಕಲಬುರ್ಗಿ ಅವರು ಕಂಬಾರರ ಜತೆಗಿನ ತಮ್ಮ ಸಂಬಂಧವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT