ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವವರ‌್ಯಾರು ಮುಳ್ಳೂರು ಶಾಲೆ ನೋವು?

Last Updated 29 ಜೂನ್ 2012, 6:00 IST
ಅಕ್ಷರ ಗಾತ್ರ

ಸರಗೂರು: ಸಮೀಪದ ಮುಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನೊಮ್ಮೆ ನೋಡಬೇಕು. ಇಲ್ಲಿ ಅಗತ್ಯ ಶಿಕ್ಷಕರಿಲ್ಲ, ಆಟದ ಮೈದಾನವಿಲ್ಲ, ಕ್ರೀಡಾ ಸಾಮಗ್ರಿಗಳಿಲ್ಲ, ಕಾಂಪೌಂಡ್ ಇಲ್ಲ, ಅಗತ್ಯ ಕೊಠಡಿಗಳಿಲ್ಲ, ನೀರಿನ ವ್ಯವಸ್ಥೆ ಇಲ್ಲ, ಮಳೆ ನೀರು ಹರಿದುಹೋಗಲು ಚರಂಡಿ ಇಲ್ಲ... ಒಟ್ಟಾರೆ ಹೇಳುವುದಾದರೆ ಇದು `ಇಲ್ಲ~ಗಳ ಶಾಲೆ.

ಈಗಾಗಲೇ ಅರ್ಧ ಶತಮಾನ (1959) ಕಂಡ ಹೆಗ್ಗಳಿಕೆ ಈ ಶಾಲೆಗೆ ಇದೆ. ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು (372) ವಿದ್ಯಾರ್ಥಿಗಳನ್ನು ಹೊಂದಿದ ಹಿರಿಮೆಯೂ ಇದೇ ಶಾಲೆಯದು. ಈಗ 1 ರಿಂದನ 8ನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿರುವ ಐತಿಹಾಸಿಕ ಮಹತ್ವ ಪಡೆದ ಈ ಶಾಲೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ತಾಂಡವಾಡುತ್ತಿದೆ. ಮೈದಾನವಿಲ್ಲದ್ದರಿಂದ ಮಕ್ಕಳ ಕ್ರೀಡಾ ಚಟುವಟಿಕೆಗಳು ಕುಂಠಿತಗೊಳ್ಳುತ್ತಿವೆ. 50 ವರ್ಷ ಗತಿಸಿದರೂ ಈ ಭಾಗದ ಜನಪ್ರನಿಧಿಗಳು ಶಾಲೆಗೆ ಕಾಂಪೌಂಡ್ ಕಟ್ಟಿಸುವ ಕನಿಷ್ಠ ಸೌಜನ್ಯ ತೋರಿಲ್ಲ. ಇದರಿಂದಾಗಿ ಪುಟ್ಟ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಹಾಗೂ ಶಿಕ್ಷಕರಲ್ಲಿ ದಿನವೂ ಆತಂಕ ತಪ್ಪಿದ್ದಲ್ಲ.

ಮಧ್ಯಾಹ್ನದ ಬಿಸಿಯೂಟಕ್ಕೆ ನೀರಿನ ವ್ಯವಸ್ಥೆ ಇಲ್ಲ. ಎಲ್ಲಿಂದಲೋ ನೀರು ತಂದು ಅಡುಗೆ ಮಾಡಿ ಹಾಕುತ್ತಿದ್ದಾರೆ. ಆದರೆ, ಊಟದ ನಂತರ ಮಕ್ಕಳಿಗೆ ಕುಡಿಯಲು ಶುದ್ಧ ನೀರಿಲ್ಲ. ಹೀಗಾಗಿ ಸಮೀಪದ ಬೋರ್‌ವೆಲ್ ಬಳಿ ಹೋಗಿ ತಟ್ಟೆ ತೊಳೆದುಕೊಂಡು ಅದೇ ನೀರು ಕುಡಿಯುವುದು ಅನಿವಾರ್ಯವಾಗಿದೆ.
372 ಮಕ್ಕಳಿರುವ ಈ ಶಾಲೆಗೆ ಕನಿಷ್ಠ 11 ಶಿಕ್ಷಕರು ಬೇಕು. ಈಗ ಮುಖ್ಯ ಶಿಕ್ಷಕರು ಸೇರಿ ಕೇವಲ 6 ಮಂದಿ ಇದ್ದಾರೆ. ಇವರಲ್ಲಿ ಸಹಶಿಕ್ಷಕ ಮಹೇಶ್ ಒಂದು ವರ್ಷದಿಂದ ಶಾಲೆಗೆ ಬಂದಿಲ್ಲ. ಎಚ್.ಕೆ.ಗೀತಾ ಹೆರಿಗೆ ರಜೆಯಲ್ಲಿದ್ದಾರೆ. ಶಾಲೆಗೆ ಕಂಪ್ಯೂಟರ್ ಮಂಜೂರಾಗಿದೆ. ಕಂಪ್ಯೂಟರ್ ಬಗ್ಗೆ ತಿಳಿಸುವ ಶಿಕ್ಷಕರಿಲ್ಲ. ಪ್ರಸಕ್ತ ಸಾಲಿನಿಂದ ಎಂಟನೇ ತರಗತಿ ಪ್ರಾರಂಭಿಸಲಾಗಿದೆ. ಆದರೆ, ಇದಕ್ಕೂ ಶಿಕ್ಷಕರನ್ನು ನೀಡಿಲ್ಲ. ಒಬ್ಬೊಬ್ಬ ಶಿಕ್ಷಕರು ಎರಡು ಅಥವಾ ಮೂರು ತರಗತಿಗಳನ್ನು ತೆಗೆದುಕೊಳ್ಳುವಂತಾಗಿದೆ. ಇದು ಮಕ್ಕಳ ಕಲಿಕೆ ಮೇಲೂ ತೀವ್ರ ಪೆಟ್ಟು ನೀಡುತ್ತಿದೆ.

ಕೆರೆಯಾಗುವ ಆವರಣ: ಶಾಲೆ ಆವರಣ ತಗ್ಗಿನಿಂದ ಕೂಡಿದ್ದು ಮಳೆ ಬಂತೆಂದರೆ ಇಡೀ ಆವರಣ ಕೆರೆಯಾಗಿ ಮಾರ್ಪಡುತ್ತದೆ. ಇಲ್ಲಿಂದ ಮಳೆ ನೀರು ಹೊರಹೋಗಲು ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ಮಕ್ಕಳು ಕೆಸರಿನಲ್ಲೇ ಆಟ, ಪಾಠ, ಊಟ ಮಾಡಬೇಕು. ಈಗ ಮಳೆ ಆರಂಭವಾಗಿದ್ದರಿಂದ ಮೂರ‌್ನಾಲ್ಕು ತಿಂಗಳು ಶಾಲೆ ಆವರಣದಲ್ಲಿ ನೀರು ನಿಂತುಕೊಂಡೇ ಇರುತ್ತದೆ. ಶಿಕ್ಷಕರು ಹಾಗೂ ಮಕ್ಕಳಿಗೆ ಇದರಿಂದಾಗುವ ಕಿರಿಕಿರಿ ಅಷ್ಟಿಷ್ಟಲ್ಲ.

ಆವರಣದಲ್ಲಿ ಮಣ್ಣು ಹಾಕಿಸಿ, ನೀರು ನಿಲ್ಲದಂತೆ ಮಾಡಲು ಸಾಧ್ಯವಿದೆ. ಆದರೆ, ಈ ಪ್ರದೇಶ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಇಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲಾಗುತ್ತಿಲ್ಲ. ಇಷ್ಟೆಲ್ಲ ಅಧ್ವಾನಗಳು ಇದ್ದರೂ ಶಾಸಕ ಚಿಕ್ಕಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ, ಗ್ರಾಮ ಪಂಚಾಯಿತಿಯವರಾಗಲಿ ಶಾಲೆಯತ್ತ ಮುಖ ಮಾಡಿಲ್ಲ.
ಎಸ್.ಆರ್.ನಾಗರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT