ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶ ರಕ್ಷಣೆ ಹೀಗುಂಟು ದಾರಿಗಳು...

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಸುಂದರಿಯರೆಲ್ಲಾ ನೀಳವೇಣಿಯರಲ್ಲ; ನೀಳವೇಣಿಯರೆಲ್ಲಾ ಸುಂದರಿಯರು ಎಂಬ ಮಾತಿದೆ. ಸಮೃದ್ಧ ಕೂದಲು ಚೆಲುವಿನ ಸಂಕೇತ. ಪುರುಷರು, ಮಹಿಳೆಯರು ಅಂದವಾಗಿ ಕಾಣುವುದರಲ್ಲಿ ಕೂದಲಿನ ಕೊಡುಗೆ ದೊಡ್ಡದು. ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ದಟ್ಟ ಕೂದಲು ಪಡೆಯಲು ನಿತ್ಯ ಪರದಾಡುತ್ತಾರೆ. ಸಾವಿರಾರು ರೂಪಾಯಿ ಹಣ ವ್ಯಯಿಸುತ್ತಾರೆ. ಆದರೆ, `ನಿಮ್ಮ ವಯಸ್ಸಿಗೆ ಅನುಗುಣವಾಗಿ ಕೂದಲ ರಕ್ಷಣೆ ಮಾಡಿ ಕೇಶದ ಆರೋಗ್ಯ ಕಾಪಾಡಿಕೊಳ್ಳಿ' ಎನ್ನುತ್ತಾರೆ ಹೇರ್‌ಸ್ಟ್ರೈಲಿಂಗ್ ತಜ್ಞರು.

ಅಸಮರ್ಪಕ ಕೂದಲಿನ ವಿನ್ಯಾಸ, ಮಾಲಿನ್ಯ, ಒತ್ತಡ ಇವೆಲ್ಲವೂ ನಿಮ್ಮನ್ನು ತುಂಬಾ ವಯಸ್ಸಾದವರಂತೆ ಬಿಂಬಿಸುತ್ತವೆ. ಹಾಗಾಗಿ ಕೂದಲ ಸಂರಕ್ಷಣೆ ಬಗ್ಗೆ ತಾತ್ಸಾರ ಮಾಡದೆ ಅವುಗಳ ಬಗ್ಗೆ ಕಾಳಜಿ ತೋರಿ. `ಪ್ರತಿಯೊಬ್ಬರೂ ತಮ್ಮ ಜೀವನದ ವಿವಿಧ ಹಂತಗಳಲ್ಲಿ ಕೂದಲಿನ ಬಗ್ಗೆ ಕಾಳಜಿ ತೋರಬೇಕು' ಎನ್ನುತ್ತಾರೆ ಒಗಾರಿಯೊ ಲಂಡನ್ ಸಲೂನ್‌ನ ನಿರ್ದೇಶಕಿ ಮತ್ತು ಸಂಸ್ಥಾಪಕಿ ನೋರಿಸ್ ಒಗಾರಿಯೊ.

`ನಾವು ಕೂದಲಿನ ಮಹತ್ವದ ಬಗ್ಗೆ ಅರ್ಥಮಾಡಿಕೊಳ್ಳುವುದಿಲ್ಲ ಅಥವಾ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ಕೆಲವು ವರ್ಷಗಳಲ್ಲೇ ನಮ್ಮ ಮುಂಗುರುಳು ಮಾಯವಾಗಿ ಕೂದಲೆಲ್ಲಾ ಹಗ್ಗದಂತೆ ಬಿಗಿಗೊಳ್ಳುತ್ತದೆ. ಕೂದಲಿನ ಬಗ್ಗೆ ಕಾಳಜಿ ವಹಿಸದ ಯಾವುದೇ ವಯಸ್ಸಿನವರ ಕೂದಲು ಈ ಸ್ಥಿತಿಗೆ ಬರಬಹುದು' ಎಂದು ಅವರು ಎಚ್ಚರಿಕೆ ನೀಡುತ್ತಾರೆ.

`ಬಣ್ಣಗಳು, ದೇಹದ ಅತಿಯಾದ ಉಷ್ಣತೆ, ಒತ್ತಡ, ಮಾಲಿನ್ಯ ಹಾಗೂ ಅಪೌಷ್ಟಿಕ ಆಹಾರ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಇವುಗಳ ಬಗ್ಗೆ ಜಾಗ್ರತಿ ಇರದಿದ್ದರೆ ಕೂದಲನ್ನು ಕಳೆದುಕೊಳ್ಳಬೇಕಾಗುತ್ತದೆ' ಎಂದು ಮಾತು ಸೇರಿಸುತ್ತಾರೆ ಅವರು.
ವಿವಿಧ ವಯೋಮಾನದವರು ಕೂದಲು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಗಾರಿಯೊ ಕೆಲವು ಟಿಪ್ಸ್ ನೀಡಿದ್ದಾರೆ...

ಥರ್ಟಿ ಪ್ಲಸ್...
ಮೂವತ್ತಕ್ಕೆ ಕಾಲಿಟ್ಟ ಬಹುತೇಕ ಮಹಿಳೆಯರು ಸಾಮಾನ್ಯವಾಗಿ ಕೆಲಸ ಮತ್ತು ಕುಟುಂಬ ನಿರ್ವಹಣೆಯಲ್ಲಿ ಬ್ಯುಸಿಯಾಗಿರುತ್ತಾರೆ. ಮೇಲ್ಮಧ್ಯಮ ವರ್ಗದವರಿಗಾದರೆ ಈ ಚಿಂತೆ ಹೆಚ್ಚು ಇರುವುದಿಲ್ಲ. ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಶೈಲಿಯ ಕೇಶವಿನ್ಯಾಸ ಮಾಡಿಸಿಕೊಳ್ಳಬಹುದು. ಆದರೆ, ಇವರು ಹೇರ್‌ವಾಶ್ ಮಾಡಿಸುವ ಮುನ್ನ ಹೇರ್‌ಡ್ರೆಸ್ಸರ್ ಬಳಿ ಸಮಾಲೋಚನೆ ನಡೆಸಿದರೆ ಒಳ್ಳೆಯದು.

`ನಾನು ಯಾವುದೇ ಗ್ರಾಹಕರೊಂದಿಗೆ ಮಾತನಾಡುವಾಗ, ಅವರ ಕೇಶವಿನ್ಯಾಸವನ್ನು ಗಮನಿಸಿಯೇ ಅವರ ನಡವಳಿಕೆ, ವ್ಯಕ್ತಿತ್ವ ಎಂಥದ್ದು ಎಂದು ಹೇಳಿಬಿಡಬಲ್ಲೆ. ಅವರ ಕೇಶ ಒದ್ದೆಯಾಗಿದ್ದಾಗ ಇದು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ಗ್ರಾಹಕರ ಅಭಿರುಚಿಯನ್ನು ಮೊದಲು ತಿಳಿದುಕೊಳ್ಳುತ್ತೇವೆ. ನಂತರವೇ ಅವರ ವ್ಯಕ್ತಿತ್ವಕ್ಕೆ ಯಾವ ಬಗೆಯ ಹೇರ್‌ಸ್ಟೈಲ್ ಹೊಂದುತ್ತದೆ ಎಂದು ನಿರ್ಧರಿಸುತ್ತೇವೆ' ಎನ್ನುತ್ತಾರೆ ಒಗಾರಿಯೊ. 

ಫಾರ್ಟಿ ಪ್ಲಸ್...
ನಲವತ್ತಕ್ಕೆ ಕಾಲಿಟ್ಟ ಮಹಿಳೆಯರು ತಮ್ಮ ಕೇಶದಲ್ಲಿ ಇಣುಕುವ ಬಿಳಿಕೂದಲು ಮುಚ್ಚಲು ಬಳಸುವ ಬಣ್ಣಗಳ ಬಗ್ಗೆ ಚಿಂತಿಸಬೇಕು. ವಯಸ್ಸಿಗೆ ಹೊಂದುವ ಬಣ್ಣಗಳ ಸೂಕ್ತ ಆಯ್ಕೆ ಮಾಡಿಕೊಳ್ಳಬೇಕು.

`ಮೊದಲ ಬಾರಿಗೆ ಕೇಶಕ್ಕೆ ಬಣ್ಣ ಹಚ್ಚುವ ಸಾಹಸಕ್ಕೆ ಕೈ ಹಾಕಿದವರು ಬಣ್ಣದ ಆಯ್ಕೆಯ ವಿಷಯದಲ್ಲಿ ಪೇಚಿಗೆ ಸಿಲುಕಿದಂತೆ ವರ್ತಿಸುತ್ತಾರೆ. ಬಹುತೇಕರು ಗ್ರೇ ಕಲರ್ ಆಯ್ಕೆ ಮಾಡಿಕೊಳ್ಳುತ್ತಾರೆ.

ನನ್ನನ್ನು ಕೇಳಿದರೆ, ಅವರಿಗೆ ಹಸಿರು ಬಣ್ಣ (ವೆಜಿಟೆಬಲ್ ಟಿಂಟ್) ಶಿಫಾರಸು ಮಾಡುತ್ತೇನೆ. ಈ ಬಣ್ಣ ಈ ವಯೋಮಾನದವರಿಗೆ ಉತ್ತಮ ಫಲಿತಾಂಶವನ್ನು ನೀಡುವುದರ ಜತೆಗೆ ಕೇಶಕ್ಕೆ ಒಳ್ಳೆ ಲುಕ್ ತಂದುಕೊಡುತ್ತದೆ'. ಆದರೆ ಭಾರತದಲ್ಲಿ ಕೂದಲಿಗೆ ಹಸಿರು ಬಣ್ಣ ಹಚ್ಚಿ ನಲವತ್ತು ದಾಟಿದವರು ಓಡಾಡುವುದು ತಮಾಷೆಯಾದೀತು.

`ಕೂದಲ ಉತ್ಪತ್ತಿಯನ್ನು ಹೆಚ್ಚಿಸುವ ಹಾಗೂ ಕೇಶ ಬೆಳವಣಿಗೆಗೆ ಪೂರಕವಾಗುವ ಮಾಸ್ಕ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾಡಿದರೆ ಕೂದಲಿನ ಆರೈಕೆ ಚೆನ್ನಾಗಿರುತ್ತದೆ' ಎಂದು ವಿವರಿಸುತ್ತಾರೆ ಅವರು.

ಫಿಫ್ಟಿ ಪ್ಲಸ್...
ಬೂದು ಬಣ್ಣದ ಕೂದಲು ಹೊಂದಿರುವ ಐವತ್ತು ವರ್ಷ ದಾಟಿದ ಮಹಿಳೆಯರು ಸಾಮಾನ್ಯವಾಗಿ ತಮ್ಮ ಕೇಶ ತೆಳುವಾಗುವ ಸಮಸ್ಯೆ ಎದುರಿಸಲು ಪ್ರಾರಂಭಿಸುತ್ತಾರೆ. ಅತಿ ಉದ್ದ ಕೇಶವಿರುವ ಈ ವಯಸ್ಸಿನ ಮಹಿಳೆಯರು ಆಗಾಗ್ಗೆ ಟ್ರಿಮ್ ಮಾಡಿಸಿಕೊಂಡರೆ ಒಳ್ಳೆಯದು.

ಉದ್ದ ಕೂದಲು ಮಹಿಳೆಯರಿಗೆ ಸೊಗಸಾಗಿ ಕಾಣಿಸುತ್ತದೆ. ಆದಾಗ್ಯೂ ವಯಸ್ಸು ಐವತ್ತು ದಾಟಿದ ನಂತರ ಕೂದಲು ಉದುರಲು ಶುರುವಾಗುವುದರಿಂದ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ಆಗಾಗ್ಗೆ ಟ್ರಿಮ್ ಮಾಡಿಸುತ್ತಿದ್ದರೆ ಒಳ್ಳೆಯದು.

ಕೂದಲನ್ನು ತುಂಡಾಗಿ ಕತ್ತರಿಸಿಕೊಳ್ಳುವುದಿಂದ ಈ ವಯಸ್ಸಿನವರ ಕೂದಲ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾಗಿ, ಈ ವಯಸ್ಸಿನವರು ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಅತ್ಯುತ್ತಮ ವಿನ್ಯಾಸದ ಆಯ್ಕೆಯನ್ನು ಜಾಗ್ರತವಾಗಿ ಆಯ್ದುಕೊಳ್ಳಬೇಕು' ಎನ್ನುತ್ತಾರೆ ಒಗಾರಿಯೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT