ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶ್ವಾಪುರ: ಅನಧಿಕೃತ ಅಂಗಡಿಗಳ ತೆರವು

Last Updated 20 ಜುಲೈ 2012, 6:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕೇಶ್ವಾಪುರ ಸರ್ವೋದಯ ವೃತ್ತದಿಂದ ಗೋಪನಕೊಪ್ಪ ರಸ್ತೆಯಲ್ಲಿ `ರಾಯಲ್ ಫಂಕ್ಷನ್ ಹಾಲ್~ ಮುಂಭಾಗದಲ್ಲಿದ್ದ ಏಳು ಅಂಗಡಿಗಳನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಗುರುವಾರ ಬೆಳಿಗ್ಗೆ ತೆರವುಗೊಳಿಸಿತು.

ಗಜಾನನ ಮಹಾಮಂಡಳದ ಡಿ. ಗೋವಿಂದ ರಾವ್ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೆ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ.

ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ.ಪಾಟೀಲ, ವಲಯ 6ರ ಸಹಾಯಕ ಆಯುಕ್ತ ಗಣಾಚಾರಿ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಆರು ಗಂಟೆಯಿಂದ ಒಂಬತ್ತು ಗಂಟೆವರೆಗೆ ತೆರವು ಕಾರ್ಯ ನಡೆಸಲಾಯಿತು. ಕಾರ್ಯಾಚರಣೆಗೆ ಎರಡು ಜೆಸಿಬಿ ಮತ್ತು ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಎಸಿಪಿ ಎ.ಆರ್.ಬಡಿಗೇರ ನೇತೃತ್ವದಲ್ಲಿ ಇಬ್ಬರು ಪಿಎಸ್‌ಐ, ನಾಲ್ವರು ಎಎಸ್‌ಐ ಮತ್ತು 20 ಮಂದಿ ಪೊಲೀಸ್ ಸಿಬ್ಬಂದಿಯ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು. ಆದರೆ ಅಂಗಡಿ ಹೊಂದಿದರ‌್ಯಾರೂ ಪ್ರತಿರೋಧ ವ್ತಕ್ಯಪಡಿಸದೇ ಇದ್ದುರಿಂದ ಅಂಗಡಿಗಳ ನೆಲಸಮ ಕಾರ್ಯ ಸುಗಮವಾಗಿ ನಡೆಯಿತು.

ನಗದು ಕಳವು: ಮನೆಕೆಲಸದವಳು ಆರೋಪಿ
ಹುಬ್ಬಳ್ಳಿ: ಶಾಂತಿ ಕಾಲೊನಿಯಲ್ಲಿ ವೈದ್ಯರೊಬ್ಬರ ಮನೆಯೊಂದರಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿ ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯನ್ನು ಅಶೋಕ ನಗರ ಪೊಲೀಸರು ಗುರುವಾರ ಬಂಧಿಸಿದರು.

ಮಾಧವ ನಗರದ ಜರೀನಾ ಸೌದಾಗರ  ಬಂಧಿತ ಮಹಿಳೆ. ಶಾಂತಿ ಕಾಲೊನಿಯಲ್ಲಿ ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್‌ನಲ್ಲಿರುವ ಡಾ.ವಿರೂಪಾಕ್ಷ  ದೇಶಪಾಂಡೆ ಎಂಬವರ ಮನೆಯ ಕಪಾಟಿನಲ್ಲಿ ಇರಿಸಿದ್ದ ರೂ 50,000 ನಗದು ಕೆಲವು ದಿನಗಳ ಹಿಂದೆ ಕಳವು ಆಗಿತ್ತು. ಈ ಕುರಿತು ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ವೈದ್ಯರ ಮನೆಗೆ ಜರೀನಾ ನಿತ್ಯ ಕೆಲಸಕ್ಕೆ ಬರುತ್ತಿದ್ದಳು. ಆದರೆ ಆಕೆಯೇ ಈ ಕಳವು ನಡೆಸಿರಬಹುದೆಂಬ ಬಗ್ಗೆ ಮನೆಯವರಿಗೆ ಯಾವುದೇ ಸಂದೇಹ ಇರಲಿಲ್ಲ ಎನ್ನಲಾಗಿದೆ. ಆದರೆ ಪೊಲೀಸರು ಜರೀನಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆ ಹಣ ದೋಚಿದ ವಿಷಯ ಬೆಳಕಿಗೆ ಬಂದಿದೆ.

ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ: ಸಿಐಡಿಯಿಂದ ದಾಖಲೆ ಪರಿಶೀಲನೆ
ಹುಬ್ಬಳ್ಳಿ: ವಿಮಾನ ನಿಲ್ದಾಣ ವಿಸ್ತರಣೆಗಾಗಿ ಕೆಐಎಡಿಬಿ ಭೂ ಸ್ವಾಧೀನ ವೇಳೆ ರೈತರಿಗೆ ಸಮರ್ಪಕವಾಗಿ ಪರಿಹಾರಧನ ನೀಡದೆ ವಂಚಿಸಲಾಗಿದೆ ಎಂದು ಲೋಕಾಯುಕ್ತಕ್ಕೆ ನೀಡಲಾದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಐಡಿ ಪೊಲೀಸರ ತಂಡ ಶುಕ್ರವಾರ ಮತ್ತು ಶನಿವಾರ ಮಹತ್ವದ ದಾಖಲೆಗಳನ್ನು ಸಂಗ್ರಹಿಸಲಿದೆ.

ಭೂ ಸ್ವಾಧೀನದ ಬಳಿಕ ಪರಿಹಾರಧನ ಹಂಚಿಕೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಆರೋಪಿಸಿ ರೈತರ ಪರವಾಗಿ ಮುತ್ತಣ್ಣ ಶಿವಳ್ಳಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣದ ಕುರಿತು ವಿಚಾರಣೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 27ರಿಂದ ಐದು ದಿನಗಳವರೆಗೆ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬೀಡುಬಿಟ್ಟಿದ್ದ ಸಿಐಡಿ ಡಿವೈಎಸ್‌ಪಿ ಮೋಹನ್ ರಾವ್ ನೇತೃತ್ವದ ತಂಡ ವಂಚನೆಗೊಳಗಾದ ರೈತರನ್ನು ಮತ್ತು ಭೂ ಸ್ವಾಧೀನದ ವೇಳೆ ಇದ್ದ ಕೆಐಎಡಿಬಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.

`ಪ್ರಕರಣದ ವಿಚಾರಣೆಯ ಮುಂದುವರಿದ ಭಾಗವಾಗಿ ಶುಕ್ರವಾರ ಮತ್ತು ಶನಿವಾರ ಹುಬ್ಬಳ್ಳಿ ತಾಲ್ಲೂಕು ಕಚೇರಿ ಮತ್ತು ನೋಂದಣಿ ಕಚೇರಿಯಿಂದ ಕೆಲವು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಲಾಗುವುದು~ ಎಂದು ಸಿಐಡಿ ಇನ್ಸ್‌ಪೆಕ್ಟರ್ ಶ್ರೀನಿವಾಸ ರಾಜು ಅವರು `ಪ್ರಜಾವಾಣಿ~ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT