ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಕೊಟ್ಟ ವರುಣ: ನೆಲ ಕಚ್ಚಿದ ಬೆಳೆ..

Last Updated 9 ಅಕ್ಟೋಬರ್ 2011, 5:05 IST
ಅಕ್ಷರ ಗಾತ್ರ

ಅರಕಲಗೂಡು :  ಹಿಂಗಾರು ಮಳೆ ಕೈ ಕೊಟ್ಟ ಪರಿಣಾಮ ತಾಲ್ಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ಬೆಳೆ ನೆಲ ಕಚ್ಚಿದೆ.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಬಿದ್ದ ಕಾರಣ ರೈತರು ಉತ್ಸಾಹದಲ್ಲೇ ಕೃಷಿ ಚಟುವಟಿಕೆ ಆರಂಭಿಸಿದರು. ಜೋಳ, ಆಲೂಗೆಡ್ಡೆ, ಶುಂಠಿ ಮುಂತಾದ ವಾಣಿಜ್ಯ ಬೆಳೆಗಳ ಬಿತ್ತನೆ ಕಾರ್ಯ ಚುರುಕಾಗಿ ನಡೆಯಿತು. ಇದೇ ವೇಳೆ ಹೇಮಾವತಿ ಜಲಾಶಯ ತುಂಬಿ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ನಾಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಭತ್ತದ ಬಿತ್ತನೆ ಕಾರ್ಯ ಪೂರ್ಣಗೊಳಿಸಲಾಯಿತು.

ಸೆಪ್ಟೆಂಬರ್ ಮೊದಲ ವಾರದವರೆಗೂ ಬಿದ್ದ  ತುಂತುರು ಮಳೆ ಬೆಳೆಯ ಆಸೆ ಮೂಡಿಸಿತ್ತು. ಸೆಪ್ಟೆಂಬರ್ ಮಧ್ಯ ಭಾಗದಿಂದ ಮಳೆ ಕೈಕೊಟ್ಟಿದ್ದರಿಂದ ಜೋಳ, ರಾಗಿ, ಶುಂಠಿ ಬೆಳೆಗಳು ಅಪಾಯಕ್ಕೆ ಸಿಲುಕಿದವು. ಆಲೂಗೆಡ್ಡೆ ಬೆಳೆ ಅಂಗಮಾರಿ ರೋಗಕ್ಕೆ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುಪಾಲು ರೈತರು ಮುಸುಕಿನ ಜೋಳ ಬೆಳೆಯಲು ಹೆಚ್ಚಿನ ಒಲವು ತೋರಿದ್ದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ. ಜೋಳದ ತೆನೆ ಹೊರಟು ಬೀಜಗಳಲ್ಲಿ ಹಾಲು ತುಂಬಿ ಬಲಿಯುವ ಹಂತದಲ್ಲಿ ಮಳೆ ಕೈಕೊಟ್ಟಿದ್ದರಿಂದ ಅರೆಬರೆ ಬಂದ ಬೆಳೆ ರೈತರನ್ನು ಚಿಂತಾಕ್ರಾಂತರನ್ನಾಗಿಸಿದೆ. ಶುಂಠಿಯ ಪಾಡು ಇದೇ ರೀತಿ ಆಗಿದೆ. ತೆನೆಯಲ್ಲಿ ಹಾಲು ಕಟ್ಟುತ್ತಿದ್ದ ರಾಗಿ ಬೆಳೆ ತೇವಾಂಶದ ಕೊರತೆಯಿಂದ ಒಣಗಿ ಕರಕಲಾಗುತ್ತಿದೆ.

ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಭತ್ತದ ಬೆಳೆ ಮೇಲು ಮಳೆ ಇಲ್ಲದ ಕಾರಣ ಕೀಟ ಹಾಗೂ ರೋಗ ಬಾಧೆಗೆ ಸಿಲುಕಿದೆ. ಭತ್ತದ ಬೆಳೆಗೆ ಬೆಂಕಿ ರೋಗ ವ್ಯಾಪಕವಾಗಿ ಹಬ್ಬುತ್ತಿದೆ. ಬೆಳೆ ಇನ್ನೇನು ಕೈಗೆ ಬಂತು ಎನ್ನುವ ಹಂತದಲ್ಲಿ ಉಂಟಾದ ಬರದ ಪರಿಸ್ಥಿತಿಯಿಂದ ತಾಲ್ಲೂಕಿನ ರೈತರು  ಕಂಗೆಟ್ಟು ತಲೆಯ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಸಾಲ ಮಾಡಿ, ಮನೆಯಲ್ಲಿದ್ದ ಚೂರು ಪಾರು ಚಿನ್ನ ಅಡವಿಟ್ಟು ತಂದ ಹಣದಲ್ಲಿ ಕೃಷಿ ಕಾರ್ಯ ನಡೆಸಿದ್ದು ಇತ್ತ ಬೆಳೆಯೂ ಇಲ್ಲ ಅತ್ತ ಸಾಲದಿಂದಲೂ ಮುಕ್ತಿ ಇಲ್ಲ. ಇಂತಹ ತ್ರಿಶಂಕು ಸ್ಥಿತಿ ನಮ್ಮದಾಗಿದೆ ಎಂದು ರೈತರು ಅವಲತ್ತುಕೊಳ್ಳುತ್ತಿದ್ದಾರೆ.

ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಇಲ್ಲಿನ ರೈತರು ಅತಿ ಹೆಚ್ಚಿನ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಬಹಳಷ್ಟು ಕಡೆ ಮಳೆಯ ಕೊರತೆಯಿಂದ ಕೃಷಿ ಕಾರ್ಯ ನಡೆಸಿಲ್ಲ. ಆದರೆ ಇಲ್ಲಿನ ರೈತರು ಕೃಷಿ ಕಾರ್ಯವನ್ನು ಸಂಪೂರ್ಣವಾಗಿ ಪೂರೈಸಿದ್ದಾರೆ. ಸಾಲ ಮಾಡಿ ಹಣವನ್ನು ಭೂಮಿಗೆ ಹಾಕಿರುವ ಕಾರಣ ಇಲ್ಲಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾಗಿದೆ. ಹೀಗಾಗಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದರಷ್ಟೆ ಸಾಲದು ರೈತರಿಗೆ ಬೆಳೆ ನಷ್ಟದ ಪರಿಹಾರ ನೀಡುವ ಅಗತ್ಯ ತುರ್ತಾಗಿ ಆಗಬೇಕಿದೆ. ಇಲ್ಲದಿದ್ದಲ್ಲಿ ರೈತರು ಪಾಡು ಅತ್ಯಂತ ಹೀನಾಯವಾಗಲಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
                    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT