ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ತೋಟದ ರಾಣಿ ಸೇವಂತಿಗೆ

Last Updated 26 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಅದು ಮನೆಯ ಅಂಗಳದ ಪುಟ್ಟ ಕೈ ತೋಟ. ಅಲ್ಲಿ ಹಲವಾರು ಬಗೆಯ ಹೂಗಳು ಕಣ್ಣರಳಿಸಿ ನಗುತ್ತಿವೆ. ತರಕಾರಿ ಗಿಡಗಳೂ ಇವೆ. ಆ ಮನೆಯ ಒಂದು ಪಾರ್ಶ್ವದಲ್ಲಿ ಸೇವಂತಿಗೆ ಹೂಗಳು ಕಂಗೊಳಿಸುತ್ತಿವೆ!ಸೇವಂತಿಗೆಗಳನ್ನು ಮಾರಾಟಕ್ಕೆ ಬೆಳೆದಿಲ್ಲ. ಸ್ವಸಂತೋಷಕ್ಕೆ ಬೆಳೆಸಿದ ಹೂಗಳವು. ಕೈತೋಟದಲ್ಲಿ ಸೇವಂತಿಗೆಗೆ ಅಗ್ರಸ್ಥಾನ. ಮನೆಯಂಗಳದಲ್ಲಿರುವ ಸೇವಂತಿಗೆ ಹೂಗಳ ಸೊಬಗು ದಾರಿಹೋಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಅದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಲೇಮಳಗಿ ಗ್ರಾಮದ ಗೃಹಿಣಿ ಪ್ರಭಾವತಿ ಹೆಗಡೆ ಅವರ ಮನೆಯ ಅಂಗಳದ ತೋಟ. ಅಲ್ಲೆಗ ನಾನಾ ಬಗೆಯ ಸೇವಂತಿಗೆ ಹೂಗಳ ಸಣ್ಣ ಜಾತ್ರೆ ನಡೆಯುತ್ತಿದೆಯೇನೋ ಅನ್ನಿಸುತ್ತದೆ. ಅಂಗಳದಲ್ಲಿ ಅರಳಿರುವ ಹೂಗಳು ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸಲು ಸಜ್ಜಾಗಿ ನಿಂತಂತೆ ಕಾಣುತ್ತಿವೆ.

ಪ್ರಭಾವತಿ ಅವರಿಗೆ ಹೂವಿನ ಗಿಡಗಳೆಂದರೆ ಅಪಾರ ಪ್ರೀತಿ. ಸೇವಂತಿಗೆ ಹೂವುಗಳನ್ನು ಬೆಳೆಯುವುದು ಅವರ ಆದ್ಯತೆ. ಬಗೆ ಬಗೆಯ ಸೇವಂತಿಗೆ ಹೂ ಗಿಡಗಳನ್ನು ತಂದು ಬೆಳೆಸಿದ್ದಾರೆ. ಅಂಗಳದ ತೋಟದಲ್ಲಿ ಸೇವಂತಿಗೆ ಹೂಗಳಲ್ಲಿ ವೈವಿಧ್ಯವಿದೆ. ಪ್ರಭಾವತಿಯವರ ಪಾಲನೆಯಲ್ಲಿ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಈಗ ಸೇವಂತಿಗೆ ಹೂಗಳ ಕಾಲ. ದೀಪಾವಳಿ ಮುಗಿಯುವವರೆಗೆ ಗಿಡಗಳಲ್ಲಿ ಹೂ ಹಬ್ಬ.

ಪ್ರಭಾವತಿ ಅವರ ಅಂಗಳದ ತೋಟದಲ್ಲಿ ನೂರಕ್ಕೂ ಹೆಚ್ಚು ಜಾತಿಯ, ಬಣ್ಣ ಬಣ್ಣಗಳ ಸೇವಂತಿಗೆ ಹೂಗಳಿವೆ. ಹೂಗಳು ಒಂದಕ್ಕಿಂತ ಒಂದು ಸುಂದರವಾಗಿವೆ. ಅಷ್ಟು ಬಗೆಯ ಹೂಗಳನ್ನು ಒಂದೆಡೆ ಕಾಣುವುದು ಅಪರೂಪ.  ಪ್ರಭಾವತಿ ಅವರು ಇಳಿ ವಯಸ್ಸಿನಲ್ಲೂ ಸೇವಂತಿಗೆ ಗಿಡಗಳ ಪಾಲನೆ ಪೋಷಣೆಗೆ ಹೆಚ್ಚಿನ ಗಮನ ಕೊಡುತ್ತಾರೆ. ಅವರ ತೋಟದಲ್ಲಿ ಇಲ್ಲದ ಸೇವಂತಿಗೆ ತಳಿಗಳು ಅವರ ಗಮನಕ್ಕೆ ಬಂದರೆ ಅದರ ಗಿಡವೊಂದನ್ನು ತಂದು ಬೆಳೆಸುವ ಕಾಳಜಿ ಅವರದ್ದು. ಹೀಗಾಗಿ ಅವರಿಗೆ ಸೇವಂತಿಗೆಯ ಬಹುತೇಕ ತಳಿಗಳ ಪರಿಚಯವಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT