ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕೈ' ನಿದ್ದೆ ಕೆಡಿಸಿರುವ `ಕಾಯಿ'

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚಾಮರಾಜನಗರ:  ಜಿಲ್ಲೆಯ 4 ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು `ಗುಪ್ತಗಾಮಿನಿ'ಯಾಗಿದ್ದು, ಕಾಂಗ್ರೆಸ್ ಹಾಗೂ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ನಡುವೆ ಗೆಲುವಿಗಾಗಿ ಹಗ್ಗಜಗ್ಗಾಟ ನಡೆಯುತ್ತಿದೆ.

ಬಿಜೆಪಿ, ಜೆಡಿಎಸ್‌ಗೆ ಅಸ್ತಿತ್ವ ಉಳಿಸಿಕೊಳ್ಳುವ ಸತ್ವಪರೀಕ್ಷೆ ಎದುರಾಗಿದೆ. ಕಾಂಗ್ರೆಸ್-ಕೆಜೆಪಿಯ ಗೆಲುವಿಗೆ ಅಡ್ಡಗಾಲು ಹಾಕಲು ಬಹುಜನ ಸಮಾಜ ಪಕ್ಷದ ಆನೆ ಘೀಳಿಡುತ್ತಿದೆ. ಆದರೆ, ಮತದಾರರು ಗುಟ್ಟು ಬಿಟ್ಟುಕೊಟ್ಟಿಲ್ಲ. `ನಾನೇ ಗೆಲ್ಲುತ್ತೇನೆ' ಎಂದು ಹೇಳುವ ಧೈರ್ಯ ಯಾವೊಬ್ಬ ಅಭ್ಯರ್ಥಿಗೂ ಇಲ್ಲ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಆದರೆ, ಈ ಚುನಾವಣೆಯಲ್ಲಿ ಜಾತಿಯೇ ಪ್ರಧಾನ ಅಂಶವಾಗಿದೆ. ಜಿಲ್ಲೆಯಲ್ಲಿ 6 ದಶಕದ ರಾಜಕೀಯ ಅಧಿಕಾರ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿಯ `ಬಲಗೈ' ಸಮುದಾಯದ ನಡುವೆಯೇ ಹಂಚಿಕೆಯಾಗಿದೆ.

ಹಿಂದಿನ ಚುನಾವಣೆಯಲ್ಲಿ ಮಾತ್ರ ಚಾಮರಾಜನಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಉಪ್ಪಾರರಿಗೆ ಅಧಿಕಾರ ದಕ್ಕಿತ್ತು. ಎಲ್ಲ ಪಕ್ಷಗಳು ಬಲಾಢ್ಯ ಜಾತಿಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ಆದರೆ, ಈ ಲೆಕ್ಕಾಚಾರ ತಲೆಕೆಳಗೆ ಮಾಡುವ ಶಕ್ತಿ ಪರಿಶಿಷ್ಟ ಜಾತಿ, ನಾಯಕ, ಉಪ್ಪಾರರು, ಅಲ್ಪಸಂಖ್ಯಾತ ಮತದಾರರ ಕೈಯಲ್ಲಿದೆ.

ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ. 2008ರ ಚುನಾವಣೆಯಲ್ಲಿ 4 ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವಿನ ನಗೆಬೀರಿತ್ತು. ಕಾಂಗ್ರೆಸ್-ಶೇ 38.92, ಬಿಜೆಪಿ-ಶೇ 25.17, ಬಿಎಸ್‌ಪಿ-ಶೇ 14.95, ಜೆಡಿಎಸ್-ಶೇ 9.25ರಷ್ಟು ಮತ ಪಡೆದಿದ್ದವು. ಸಂಸದರಾಗಿ ಆರ್. ಧ್ರುವನಾರಾಯಣ ಆಯ್ಕೆಯಾದ ಪರಿಣಾಮ ಕೊಳ್ಳೇಗಾಲ ಕ್ಷೇತ್ರ ಉಪಚುನಾವಣೆ ಕಂಡಿತು. ಈ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಿತು.

ಹಿಂದಿನ ಚುನಾವಣೆಯಲ್ಲಿದ್ದ ಚಿತ್ರಣ ಈಗಿಲ್ಲ. ಹೀಗಾಗಿ, ಮತಬ್ಯಾಂಕ್ ಉಳಿಸಿಕೊಳ್ಳಲು ಬಿಜೆಪಿಗೆ ಅಕ್ಷರಶಃ ಸವಾಲು ಎದುರಾಗಿದೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಿಜೆಪಿಯಿಂದ ಪ್ರಬಲ ಪೈಪೋಟಿ ನೀಡಿದ್ದ ಸಿ.ಎಸ್. ನಿರಂಜನ್‌ಕುಮಾರ್ ಈಗ ಕೆಜೆಪಿ ಅಭ್ಯರ್ಥಿ. ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿದ್ದ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಕೆಜೆಪಿಯಿಂದ ಚಾಮರಾಜನಗರ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಈ ನಾಯಕರ ಪಕ್ಷಾಂತರ ಕಮಲದ ಪಾಲಿಗೆ ಮುಳುವಾಗಿರುವುದು ಸ್ಪಷ್ಟ.

ಹನೂರು ಹೊರತುಪಡಿಸಿದರೆ ಉಳಿದ 3 ಕ್ಷೇತ್ರದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳೆಲ್ಲ ಹೊಸಬರು. ಕೆಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪರಿಮಳಾ ನಾಗಪ್ಪ ಕೊನೆಯ ಹಂತದಲ್ಲಿ ತೆನೆಹೊತ್ತುಕೊಂಡರು. ಅವರೊಬ್ಬರೇ ಹಳಬರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಜೆಪಿ ಅತಿ ಹೆಚ್ಚು ಸ್ಥಾನ ಪಡೆದ ಎರಡನೇ ಪಕ್ಷವಾಗಿದೆ. ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್‌ನಿಂದ ಎಸ್. ಬಾಲರಾಜ್, ಪೊನ್ನಾಚಿ ಮಹದೇವಸ್ವಾಮಿ ಕೆಜೆಪಿಗೆ ಸೇರಿದ್ದಾರೆ. ಈ ನಾಯಕರ ಸೇರ್ಪಡೆಯೇ ಕೆಜೆಪಿ ಪಾಲಿಗೆ ಆಶಾದಾಯಕ ಅಂಶ.

ಭದ್ರಕೋಟೆ ಉಳಿಸಿಕೊಳ್ಳಲು ಕಾಂಗ್ರೆಸ್ ಹಿಂದೆ ಬಿದ್ದಿಲ್ಲ. ಸಮರ್ಪಕ ವಿದ್ಯುತ್ ನೀಡದ ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು, ಜನಸಮುದಾಯದ ಆಕ್ರೋಶವಿದೆ. ಆಡಳಿತಾರೂಢರ ಬಗ್ಗೆ ಸಹಜ ಅಸಮಾಧಾನವಿರುತ್ತದೆ. ಇದು ನಮಗೆ ವರದಾನವಾಗಲಿದೆ ಎನ್ನುವುದು `ಕೈ'ಪಾಳಯದ ವರಿಷ್ಠರ ಲೆಕ್ಕಾಚಾರ. ಇದರ ನಡುವೆಯೂ ಹನೂರು ಕ್ಷೇತ್ರದಲ್ಲಿ `ಕೈ'ಗೆ ಬಂಡಾಯದ ಬಿಸಿತಟ್ಟಿದೆ. ಡಾ.ಎಸ್. ದತ್ತೇಶ್‌ಕುಮಾರ್ ಪಕ್ಷೇತರರಾಗಿ ಅಖಾಡದಲ್ಲಿದ್ದಾರೆ.

ಜತೆಗೆ, 4 ಕ್ಷೇತ್ರದಲ್ಲಿ ಕಣಕ್ಕೆ ಇಳಿದಿರುವ ಎದುರಾಳಿ ಕೆಜೆಪಿ ಅಭ್ಯರ್ಥಿಗಳು ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಜಿದ್ದಾಜಿದ್ದಿನ ಪೈಪೋಟಿ ನೀಡಿರುವುದು ಗುಟ್ಟೇನಲ್ಲ. ಈ ಹಿನ್ನೆಲೆಯಲ್ಲಿ ಮತಬ್ಯಾಂಕ್ ಭದ್ರಪಡಿಸಿಕೊಂಡು ಸ್ಥಾನ ಉಳಿಸಿಕೊಳ್ಳಲು `ಕೈ'ಪಾಳಯ ಬೆವರು ಸುರಿಸಬೇಕಿದೆ.

ನೇರ ಹಣಾಹಣಿ
ಚಾಮರಾಜನಗರ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿರುವ ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್) ಹಾಗೂ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ (ಕೆಜೆಪಿ) ನಡುವೆ ನೇರ ಹಣಾಹಣಿ ಇದೆ.

ಕ್ಷೇತ್ರದಲ್ಲಿ ಪರಿಶಿಷ್ಟ ಮತದಾರರು ಹೆಚ್ಚಿದ್ದಾರೆ. ಉಪ್ಪಾರ, ನಾಯಕ ಹಾಗೂ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಉಪ್ಪಾರ ಜನಾಂಗದ ಪುಟ್ಟರಂಗಶೆಟ್ಟಿ ಪರಿಶಿಷ್ಟರು, ಅಲ್ಪಸಂಖ್ಯಾತರು, ತನ್ನ ಜನಾಂಗದ ಮತದಾರರನ್ನು ನೆಚ್ಚಿಕೊಂಡಿದ್ದಾರೆ. ಮಲ್ಲಿಕಾರ್ಜುನಪ್ಪಗೆ ಲಿಂಗಾಯತ ಮತದಾರರ ಮೇಲೆ ಹೆಚ್ಚಿನ ವಿಶ್ವಾಸವಿದೆ.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಮತ್ತೆ ಸ್ಪರ್ಧಿಸಿದ್ದಾರೆ. ಮತದಾರರ ಅನುಕಂಪ ಗಿಟ್ಟಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದಾರೆ.

ಪೈಪೋಟಿ
ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪುನರಾಯ್ಕೆ ಬಯಸಿರುವ ಎಚ್.ಎಸ್. ಮಹದೇವಪ್ರಸಾದ್(ಕಾಂಗ್ರೆಸ್) ಹಾಗೂ ಸಿ.ಎಸ್. ನಿರಂಜನ್‌ಕುಮಾರ್(ಕೆಜೆಪಿ) ನಡುವೆ ಪ್ರಬಲ ಪೈಪೋಟಿ ಇದೆ.

ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿದ್ದಾರೆ. ಸತತ ನಾಲ್ಕು ಬಾರಿ ಗೆಲುವು ಕಂಡಿರುವ ಮಹದೇವಪ್ರಸಾದ್‌ಗೆ ಕ್ಷೇತ್ರದ ಮೇಲೆ ಹಿಡಿತವಿದೆ. ಆದರೆ, ಹಿಂದಿನ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ನಿರಂಜನ್‌ಕುಮಾರ್ ವಿರುದ್ಧ ಅವರು ಗೆಲುವು ಸಾಧಿಸಿದ್ದರು. ಆ ಅಳುಕು ಅವರ ಪಕ್ಷದವರನ್ನು ಕಾಡುತ್ತಿದೆ. ಕ್ಷೇತ್ರದಲ್ಲಿ ಪರಿಶಿಷ್ಟ ಮತದಾರರು ಎರಡನೇ ಸ್ಥಾನದಲ್ಲಿದ್ದಾರೆ. ಉಪ್ಪಾರ, ನಾಯಕ, ಕುರುಬ, ಅಲ್ಪಸಂಖ್ಯಾತರು ನಿರ್ಣಾಯಕರಾಗಿದ್ದಾರೆ.

ಚತುಷ್ಕೋನ ಸ್ಪರ್ಧೆ
ಕೊಳ್ಳೇಗಾಲ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಜಿಲ್ಲೆಯ ಏಕೈಕ ಕ್ಷೇತ್ರ. ಜಿ.ಎನ್. ನಂಜುಂಡಸ್ವಾಮಿ (ಬಿಜೆಪಿ) ಪುನರಾಯ್ಕೆ ಬಯಸಿದ್ದಾರೆ. ಎಸ್. ಜಯಣ್ಣ (ಕಾಂಗ್ರೆಸ್), ಎಸ್. ಬಾಲರಾಜ್ (ಕೆಜೆಪಿ), ಎನ್. ಮಹೇಶ್(ಬಿಎಸ್‌ಪಿ) ಕಣದಲ್ಲಿದ್ದಾರೆ.
ಕ್ಷೇತ್ರದಲ್ಲಿ ಪರಿಶಿಷ್ಟ ಮತದಾರರ ಸಂಖ್ಯೆ ಹೆಚ್ಚಿದೆ. ಉಪ್ಪಾರ, ನಾಯಕ, ಲಿಂಗಾಯತ, ಅಲ್ಪಸಂಖ್ಯಾತರು ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ.

ಬಂಡಾಯದ ಕಹಳೆ: ಹನೂರು ಕ್ಷೇತ್ರದಲ್ಲಿ ಆರ್. ನರೇಂದ್ರ (ಕಾಂಗ್ರೆಸ್) ಪುನರಾಯ್ಕೆ ಬಯಸಿದ್ದಾರೆ. ಪರಿಮಳಾ ನಾಗಪ್ಪ (ಜೆಡಿಎಸ್), ಪೊನ್ನಾಚಿ ಮಹದೇವಸ್ವಾಮಿ (ಕೆಜೆಪಿ) ಹಾಗೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಡಾ.ಎಸ್. ದತ್ತೇಶ್‌ಕುಮಾರ್ (ಪಕ್ಷೇತರ) ಅಖಾಡದಲ್ಲಿದ್ದಾರೆ.

ಕ್ಷೇತ್ರದಲ್ಲಿ ಪರಿಶಿಷ್ಟರು, ಲಿಂಗಾಯತ ಮತದಾರರ ಸಂಖ್ಯೆ ಹೆಚ್ಚಿದೆ. ನಾಲ್ವರು ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿಯಿದೆ. ಕುರುಬ, ನಾಯಕ, ಅಲ್ಪಸಂಖ್ಯಾತ, ತಮಿಳು ಪಡಿಯಚ್ಚು ಗೌಂಡರ್ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೆ.

5ನೇ ಗೆಲುವಿಗೆ ಶತಪ್ರಯತ್ನ
ಚಾಮರಾಜನಗರ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎಚ್.ಎಸ್. ಮಹದೇವಪ್ರಸಾದ್ (ಕಾಂಗ್ರೆಸ್) ಸತತ ನಾಲ್ಕು ಬಾರಿ ಜಯ ಗಳಿಸಿದ್ದವರು. 5ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಎಂ.ಎ ಪದವೀಧರ. ವಯಸ್ಸು 55. ಲಿಂಗಾಯತ ಸಮುದಾಯದಿಂದ ಬಂದವರು. 74 ಕೋಟಿ ಮೌಲ್ಯದ ಆಸ್ತಿಯ ಒಡೆಯ.
ಹಿಂದಿನ ಚುನಾವಣೆಯಲ್ಲಿ ಮಹದೇವಪ್ರಸಾದ್ ವಿರುದ್ಧ 2,203 ಮತಗಳಿಂದ ಸೋಲುಂಡ ಸಿ.ಎಸ್. ನಿರಂಜನ್‌ಕುಮಾರ್ (ಕೆಜೆಪಿ) ಮತ್ತೆ ಸ್ಪರ್ಧಿಸಿದ್ದಾರೆ. 41 ವರ್ಷದ ಕುಮಾರ್ ಬಿ.ಕಾಂ. ಪದವೀಧರ.  8.22 ಕೋಟಿ ಆಸ್ತಿಯ ಒಡೆಯ.

ಕೊಳ್ಳೇಗಾಲ ಕ್ಷೇತ್ರದ ಜಿ.ಎನ್. ನಂಜುಂಡಸ್ವಾಮಿ(ಬಿಜೆಪಿ) ಎಂ.ಎ, ಎಲ್‌ಎಲ್‌ಬಿ ಪದವೀಧರ. 2 ಬಾರಿ ಜಯ ಗಳಿಸಿದ್ದಾರೆ.  ಪರಿಶಿಷ್ಟ ಜಾತಿಯ `ಬಲಗೈ' ಸಮುದಾಯಕ್ಕೆ ಸೇರಿದ್ದು, ರೂ 3.18 ಕೋಟಿ ಆಸ್ತಿ ಹೊಂದಿದ್ದಾರೆ.

ಚಾಮರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ವಾಟಾಳ್ ನಾಗರಾಜ್‌ಗೆ ಈಗ 64 ವರ್ಷ. 3 ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಓದಿರುವ ಅವರಿಗೆ ರೂ 2.09 ಕೋಟಿ ಆಸ್ತಿಯಿದೆ. ಲಿಂಗಾಯತ ಸಮುದಾಯದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT