ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಹಿಡಿದ ಇತಿಹಾಸ

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

“ಸುಪ್ತ ಮನಸ್ಸಿಗೆ ಮುಕ್ತ ಅವಕಾಶ ನೀಡಿದಲ್ಲಿ ಮಾತ್ರ ಕಲ್ಪನೆಗಳು ಹೊರಹೊಮ್ಮಲು ಸಾಧ್ಯ”- ಹಾಗೆ ಹೊಮ್ಮಿದ ಕಲ್ಪನೆಗಳು ಮಣ್ಣಾದ ಬದುಕುಗಳಿಗೆ ಮರು ಜನ್ಮ ನೀಡಬಲ್ಲವು. ಇತಿಹಾಸದ ಪುಟಗಳಲ್ಲಿ ಸರಿದು ಹೋಗಿ ಜನ ಮಾನಸದಿಂದ ಕಣ್ಮರೆಯಾದ ಜೀವಗಳು ಮತ್ತೆ ನೆನಪುಗಳಲ್ಲಿ ನೆಲೆ ಕಾಣಬೇಕು.
 
ಮನಸ್ಸಿನಲ್ಲಿ ಕಾಡಬೇಕು. ಇಂಥ ಪುನರ್ ಸೃಷ್ಟಿಯ ಪ್ರಕ್ರಿಯೆಗೆ  ವಿಭಿನ್ನ ಮನಸ್ಥಿತಿ ಬೇಕು. ರಕ್ತಸಿಕ್ತ ಚರಿತ್ರೆಯ ಪಾತ್ರಗಳಲ್ಲಿ ಬರಹಗಾರ ತನ್ನನ್ನು ಪೂರ್ಣ ಕಳೆದುಕೊಂಡು ಮುಚ್ಚಿ ಹೋದ ಸತ್ಯಗಳಿಗೆ ಜೀವ ನೆಲೆ ಒದಗಿಸಿದಾಗ ಅಲ್ಲೊಂದು ಅದ್ಭುತ ಕೃತಿ ನಿರ್ಮಾಣ ಸಾಧ್ಯ...

ಇಂಥ ಸಾಧ್ಯತೆಯನ್ನು ತಮ್ಮ ಕಾದಂಬರಿಗಳಲ್ಲಿ ರೋಚಕವಾಗಿ ತೋರಿಸಿಕೊಟ್ಟವರು ಬ್ರಿಟನ್ನಿನ ಹಿಲರಿ ಮೇರಿ ಮಾಂಟೆಲ್. ಎರಡು ಬಾರಿ ತಮ್ಮ ಐತಿಹಾಸಿಕ ಕಾದಂಬರಿಗಳಿಗೆ ಬುಕರ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಖ್ಯಾತಿ ಅವರದು.

ಸಾಹಿತ್ಯ ಲೋಕದಲ್ಲಿ ಸಂಚಲನ ಸೃಷ್ಟಿಸಿದ 60 ವರ್ಷದ ಹಿಲರಿ ಮಾಂಟೆಲ್ ಭೂತಕಾಲದ ಭೂತ ಮೈ ಹೊಕ್ಕಂತೆ ಬರೆಯಬಲ್ಲರು. ರಕ್ತಪಾತದ ಮೂಲಕ ಓದುಗರನ್ನು ಯೋಚನೆಗೆ ಹಚ್ಚುವುದು ಅವರ ವಿಶೇಷತೆ. 

ಹಿಲರಿ ರಚಿಸಿದ ಮೊದಲ ಕೃತಿ ಫ್ರೆಂಚ್ ಕ್ರಾಂತಿಗೆ ಸಂಬಂಧಿಸಿದ್ದು. ಅದೂ ಆಕೆ ಕಾದಂಬರಿಯೆಂದು ಬರೆಯಲು ಕುಳಿತದ್ದಲ್ಲ. ಬ್ಯಾರಿಸ್ಟರ್ ತರಬೇತಿಗೆ ಹಣ ಒದಗಿಸಲು ಸಾಧ್ಯವಾಗದೆ ಕಾನೂನು ಪದವಿ ಪಡೆಯಬೇಕೆಂಬ ಬಯಕೆಗೆ ತಿಲಾಂಜಲಿ ಕೊಟ್ಟು ಯೂನಿವರ್ಸಿಟಿ ಆಫ್ ಶೆಫಿ ಲ್ಡ್‌ನಲ್ಲಿ ನ್ಯಾಯಶಾಸ್ತ್ರದ ಪದವಿ ಪಡೆದ ಮಾಂಟೆಲ್ ವಯಸ್ಕರ ಆಸ್ಪತ್ರೆಯಲ್ಲಿ ಕೆಲ ಕಾಲ ಕೆಲಸ ಮಾಡಿದರು.

ನಂತರ ಅಂಗಡಿಯೊಂದರಲ್ಲಿ ಉಡುಪು ಮಾರುವ ಸೇಲ್ಸ್ ಗರ್ಲ್ ಆಗಿದ್ದಾಗ ಲೈಬ್ರರಿಯ ಸಹವಾಸ ಬೆಳೆಯಿತು. ಫ್ರೆಂಚ್ ಕ್ರಾಂತಿಗೆ ಸಂಬಂಧಿಸಿದ ಪುಸ್ತಕಗಳನ್ನು ಎಡಬಿಡದೆ ಓದುತ್ತಾ ಆಕೆ ಮಾಡಿಕೊಂಡ ಟಿಪ್ಪಣಿ ಪುಸ್ತಕದ ರೂಪ ಪಡೆದುಕೊಂಡಾಗ ಆಕೆಯ ಬದುಕಿಗೊಂದು ಸ್ಪಷ್ಟ ಹಾದಿ ತೆರೆದುಕೊಂಡಿತ್ತು. ಆದರೆ ವೃತ್ತಿಪರ ತರಬೇತಿಯಿಲ್ಲದೆ ಇತಿಹಾಸಕಾರಳಾಗುವುದು ಸಾಧ್ಯವಿಲ್ಲ.
 
ಆದ್ದರಿಂದ ಇತಿಹಾಸದ ಪುಸ್ತಕ ಬರೆಯಲು ಕಾದಂಬರಿ ಪ್ರಕಾರ ತನಗೆ ಅನಿವಾರ‌್ಯ ಮಾರ್ಗ ಎಂಬ ಸತ್ಯ ಆಗಲೇ ಅವರಿಗೆ ಗೋಚರಿಸಿದ್ದು. ವಾಸ್ತವಾಂಶಗಳ ವಿಷಯದಲ್ಲಿ ಎಚ್ಚರಿಕೆ ವಹಿಸುತ್ತಾ ಕಾದಂಬರಿ ಬರವಣಿಗೆಯ ಪ್ರಯೋಗಕ್ಕೆ ಮನಸ್ಸು ಸಿದ್ಧವಾಗಿತ್ತು. ಅದಕ್ಕಾಗಿ ಆಕೆ ಓದಿ ಮುಗಿಸಿದ ನಾಟಕಗಳು, ಪ್ರಾಚ್ಯ ವಿಷಯಗಳ ಹಳೆಯ ದಾಖಲಾತಿಗಳು, ಸಂಗ್ರಹ ಪತ್ರಗಳು... ಲೆಕ್ಕವಿಲ್ಲದಷ್ಟು.

ಬರವಣಿಗೆಯ ಹಾದಿಯಾಗಲಿ, ಬದುಕಿನ ದಾರಿಯಾಗಲಿ ಹಿಲರಿ ಮಾಂಟೆಲ್ ಪಾಲಿಗೆ ಸರಳವಾಗಿರಲಿಲ್ಲ. ಆಕೆಯದು ಯಾತನೆಗಳ ಹೊರೆಯಿಂದ ತುಂಬಿದ ಹಾದಿ.
 ಹಿಲರಿ ಮೇರಿ ಥಾಮ್ಸನ್ ಹುಟ್ಟಿದ್ದು ಡರ್ಬಿಶೈರ್‌ನ ಗ್ಲಾಸಾತ್‌ನಲ್ಲಿ. ಬಾಲ್ಯದಿಂದಲೇ ಸಾಥಿಯಾದದ್ದು ಬಡತನ. ಜೊತೆಗೆ ಅಮ್ಮ- ಅಪ್ಪನ ಅರ್ಥವಾಗದ ಸಂಬಂಧ.

ಪತಿಯ ಜೊತೆಯಲ್ಲಿದ್ದೇ ತನ್ನ ಗೆಳೆಯನೊಟ್ಟಿಗೆ ಬಾಳ್ವೆ ನಡೆಸುತ್ತಿದ್ದ ಅಮ್ಮನ ನಡವಳಿಕೆ ಮೂರು ಮಕಳಲ್ಲಿ ಹಿರಿಯಳಾದ ಹಿಲರಿಗೆ ಅರ್ಥವಾಗುತ್ತಿತ್ತು. ಶಾಲೆಯಲ್ಲಿ ಸಹಪಾಠಿಗಳ ಚುಚ್ಚು ಮಾತು. ಮಕ್ಕಳನ್ನು ಕಟ್ಟಿಕೊಂಡು ಗಂಡನನ್ನು ಬಿಟ್ಟು ಗೆಳೆಯ ಜಾಕ್ ಮಾಂಟೆಲ್ ಜೊತೆ ಅಮ್ಮ ಪರ ಊರು ಚೆಶೈರ್‌ಸಗೆ ಬಂದು ನೆಲೆ ನಿಂತಳು.

ಪರಿಸ್ಥಿತಿ ಇಲ್ಲಿಯೂ ಸುಧಾರಿಸಲಿಲ್ಲ. ಇಬ್ಬರದೂ ಹೊಂದಾಣಿಕೆ ಕಾಣದ ಬದುಕು. ಈ ಅನಧಿಕೃತ ಅಪ್ಪನ ಹೆಸರು ಮಕ್ಕಳಿಗೆ ಅಂಟಿಕೊಂಡ ಪರಿಣಾಮ ಹಿಲರಿ ಥಾಮ್ಸನ್ ಹಿಲರಿ ಮಾಂಟೆಲ್ ಆದದ್ದು. ಓದಿದ ಶಾಲಾ ಪರಿಸರ ಕೂಡ ತೀರ ಕೆಳಮಟ್ಟದ್ದು. ಅಲ್ಲಿ ಉತ್ತಮ ಶಿಕ್ಷಣವನ್ನು ನಿರೀಕ್ಷಿಸುವಂತೆಯೇ ಇರಲಿಲ್ಲ.

ಹದಿನಾರರ ಹರಯದಲ್ಲೇ ಹಿಲರಿ ಮಾಂಟೆಲ್‌ರ ಜೊತೆಯಾದ ಗೆರಾಲ್ಡ್ ಮ್ಯಾಕೀವನ್ 20ನೇ ವಯಸ್ಸಿಗೆ ಪತಿಯಾದ. ಅಕೌಂಟೆಂಟ್ ಆಗಬೇಕೆಂಬ ಆತನ ಕನಸು ಬ್ಯಾರಿಸ್ಟರ್ ಆಗಬೇಕೆಂಬ ಈಕೆಯ ಹಂಬಲ ಎರಡೂ ಈಡೇರದೆ, ಆತ ಭೂವಿಜ್ಞಾನಿಯಾಗಿ ಬೋಧಕ ವೃತ್ತಿಗೆ ನಿಂತರೆ, ಮಾಂಟೆಲ್ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆದರು.

ಮನೆಯಲ್ಲಿ ಬಡತನದ ಬಿಸಿ. ಇದು ಸಾಲದೆಂಬಂತೆ ತೆಳ್ಳಗೆ, ಬಿಳಚಿಕೊಂಡಂತಿದ್ದ ಮಾಂಟೆಲ್‌ಗೆ ಆಗ ಗಂಟು ಬಿದ್ದದ್ದು ಎಂಡೋಮೆಟ್ರಿಯೋಸಿಸ್ ಎಂಬ ಯಾತನಾಮಯ ಕಾಯಿಲೆ. ಆರಂಭದಲ್ಲಿ ವೈದ್ಯರು ಇದನ್ನು ಮಾನಸಿಕ ಅಸ್ವಸ್ಥತೆಯೆಂದೇ ಭಾವಿಸಿ ಚಿಕಿತ್ಸೆ ನೀಡುತ್ತಿದ್ದರು.

ಮುಂದೆ ಹಿಲರಿ ತಾವೇ ಪುಸ್ತಕಗಳನ್ನು ಓದಿಕೊಂಡು ತಮ್ಮ ರೋಗ ಪತ್ತೆ ಹಚ್ಚಿಕೊಂಡಿದ್ದರು. ಮುಂದೆ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯ ಕಳೆದುಕೊಳ್ಳಬೇಕಾದ ಪರಿಸ್ಥಿತಿ. ತಾಯಿಯಾಗುವ ಅವಕಾಶದಿಂದ ವಂಚಿತರಾಗಿದ್ದರು ಹಿಲರಿ.

ನಂತರ ಗಂಡನಿಂದ ವಿಚ್ಛೇದನ. ಹಾರ್ಮೋನ್ ಹಾಗೂ ಸ್ಟೆರಾಯ್ಡಗಳ ಪರಿಣಾಮವಾಗಿ ಅಳತೆಗೂ ಮೀರಿ ಊದಿಕೊಂಡ ದೇಹ. ತಾನು ಬೇರಾವುದೋ ದೇಹದಲ್ಲಿರುವೆನೆಂಬ ಯಾತನೆ. ಅಂಥ ವಿದ್ರಾವಕ ಪರಿಸ್ಥಿತಿಯಲ್ಲೇ ಸಾಕಷ್ಟು ಆಸ್ಥೆ ವಹಿಸಿ ನಾಲ್ಕು ವರ್ಷ ಕಾಲ ಬರೆದ ಅವರ ಮೊದಲ ಕೃತಿ `ಎ್ಲಪೇಸ್ಲ್ ಆಫ್ ಗ್ರೇಟ್ ಸೇಫ್ಟಿ~ ಎಲ್ಲಿಯೂ ಪ್ರಕಟಣೆ ಕಾಣದೆ ವಾಪಸಾಗಿತ್ತು. ಅವು ಅವರ ಬದುಕಿನ ಅತ್ಯಂತ ನೋವಿನ ದಿನಗಳು.

ಎಲ್ಲದರಿಂದಲೂ ದೂರಾದ ಒಂಟಿತನ. ಹಿಲರಿ ಮಾಂಟೆಲ್ ಅಕ್ಷರಶಃ ಜರ್ಜರಿತರಾಗಿದ್ದರು. ಆದರೆ ನೋವುಗಳು ಅವರ ಧೈರ್ಯ ಕುಂದಿಸಲಿಲ್ಲ. ಸೋಲುಗಳು ಪ್ರಯತ್ನಗಳಿಂದ ದೂರ ಸರಿಸಲಿಲ್ಲ. ಎಲ್ಲವನ್ನೂ ಕಳೆದುಕೊಂಡಿದ್ದ ಮಾಂಟೆಲ್ ಅಷ್ಟೆ ಆತ್ಮವಿಶ್ವಾಸದಿಂದ ಎದ್ದು ನಿಂತರು.

ಆಗ ಮೂಡಿಬಂದದ್ದು `ಎವರಿ ಡೇ ಈಸ್ ಮದರ್ಸ್‌ ಡೇ~. ಸಂಪೂರ್ಣ ಭಿನ್ನ ಶೈಲಿಯ ಈ ಕಾದಂಬರಿಯ ಮುಂದಿನ ಭಾಗವಾಗಿ `ವೇಕೆಂಟ್ ಪೊಸೆಶನ್~ ಮರುವರ್ಷ ಪ್ರಕಟಗೊಂಡಿತು. ಆ ವೇಳೆಗಾಗಲೇ ಬಿಟ್ಟು ಹೋಗಿದ್ದ ಪತಿ ಬ್ರಿಯಾನ್ ಮತ್ತೆ ಮಾಂಟೆಲ್‌ರನ್ನು ಸೇರಿಕೊಂಡರು. ಛಿದ್ರವಾಗಿದ್ದ ಕನಸುಗಳನ್ನು ಒಂದೊಂದಾಗಿ ಕಟ್ಟಿಕೊಂಡರು.

ಅವರ ಕೆಲವು ಗಮನಾರ್ಹ ಕೃತಿಗಳು- ಏಯ್ಟ ಮಂಥ್ಸ್ ಇನ್ ಘಾಜಾ ಫ್ಲಾಡ್, ಎ ಚೇಂಜ್ ಆಫ್ ಕ್ಲೈಮೇಟ್, ಎಕ್ಸ್‌ಪೆರಿಮೆಂಟ್ ಇನ್ ಲವ್, ಬಿಯಾಂಡ್ ಬ್ಲಾಕ್, ಚಾರ್ಲ್ಸ್ ಓಬ್ರಿಯಾನ್‌ನ ನೈಜ ಕಥೆ ಆಧರಿಸಿ ಬರೆದದ್ದು ದಿ ಜಯಂಟ್, ಓ ಬ್ರಿಯಾನ್, ಕೆಲವು ಬದಲಾವಣೆಗಳೊಂದಿಗೆ 1992ರಲ್ಲಿ ಪ್ರಕಟಣೆಗೊಂಡ ಅವರ ಮೊದಲ ಕೃತಿ `ಎ ಪ್ಲೇಸ್ ಆಫ್ ಗ್ರೇಟರ್ ಸೇಫ್ಟಿ~ ಆ ವರ್ಷದ ಅತ್ಯುತ್ತಮ ಪುಸ್ತಕವೆಂದು ಹೆಸರು ಮಾಡಿತು. ಹಿಲರಿಯ ಒಂದೊಂದು ಕಾದಂಬರಿಯೂ ಮತ್ತೊಂದಕ್ಕಿಂತ ವಿಭಿನ್ನ. ಅದಕ್ಕೆ ಏನೋ “ನನಗೆ ನನ್ನದೆ ಆದ ಓದುಗರ ಬಳಗವೇ ಇಲ್ಲ” ಎನ್ನುತ್ತಾರೆ ಮಾಂಟೆಲ್.

ಇತಿಹಾಸ ಮೊದಲಿನಿಂದಲೂ ಅವರ ಮೆಚ್ಚಿನ ವಿಷಯ. ಇತಿಹಾಸದಲ್ಲಿ ಕ್ರಾಂತಿಕಾರರು ಆಕೆಯನ್ನು ಸೆಳೆದರೆ ಹೊರತು ರಾಜ ವೈಭವಗಳಾಗಲಿ, ಪ್ರಭುತ್ವಗಳಾಗಲಿ ಅಲ್ಲ. ಕ್ರಾಂತಿಕಾರರ ಬದುಕು, ಅವರ ಆಲೋಚನೆಗಳು, ಅಂದುಕೊಂಡದ್ದನ್ನು ಸಾಧಿಸಬಲ್ಲ ಹಟ, ಆ ಹಾದಿಯಲ್ಲಿನ ಸೋಲುಗಳು, ಸಂಕಟಗಳು, ಎದುರಿಸಿದ ಆಪತ್ತುಗಳು, ಶಿರಚ್ಛೇದನದಂತಹ ಸಂದರ್ಭಗಳು... ಆಕೆಯ ಮನಸ್ಸನ್ನು ವ್ಯಾಪಿಸಿಬಿಟ್ಟವು. 

 ದೊರೆ 8ನೇ ಹೆನ್ರಿಯ ಆಪ್ತ ಪ್ರಧಾನ ಸಚಿವನಾಗಿದ್ದ ಥಾಮಸ್ ಕ್ರಾಮ್‌ವೆಲ್ ಹಿಲರಿಯ ಬದುಕನ್ನು ಪ್ರವೇಶಿಸಿದ್ದು 70ರ ದಶಕದಲ್ಲಿ. ಆಗ ಆಕೆಗೆ 20 ವರ್ಷ. ಆದರೆ ಆತನನ್ನು ಬರವಣಿಗೆಯಲ್ಲಿ ಸಾಕಾರಗೊಳಿಸಲು ಆಕೆ ಮೂರು ದಶಕ ಕಾಯಬೇಕಾಯಿತು.

ಇಂಗ್ಲೆಂಡ್ ಕಂಡ ಪ್ರತಿಭಾನ್ವಿತ ರಾಜನೀತಿಜ್ಞನೆಂದೇ ಹೆಸರಾದ ಕ್ರಾಮ್‌ವೆಲ್ ವ್ಯಕ್ತಿತ್ವ ಅಗಾಧವಾದುದು. ಕುಡುಕ ಕಮ್ಮಾರನ ಮಗನಾದ ಆತ ರಾಜನ ಆಸ್ಥಾನದಲ್ಲಿ ಸ್ಥಾನ ಪಡೆದು ಆತನ ಪಕ್ಕಾ ನಂಬಿಗಸ್ಥ ಅಧಿಕಾರಿಯಾಗಿ ಬೆಳೆದ ಪರಿ ಕುತೂಹಲಕಾರಿ.

ರಾಜಕೀಯದ ಎಲ್ಲ ತಂತ್ರ- ಪ್ರತಿತಂತ್ರ ಹಾಗೂ ಕುಟಿಲತೆಗಳ ನಡುವೆಯೂ ಪಾದ್ರಿಯೂ ಆಗದೇ ಪೋಪನ ಅನುಯಾಯಿಯೂ ಆಗಿರದೇ ತಾರ್ಕಿಕ ಶಕ್ತಿಯನ್ನುಳಿಸಿಕೊಂಡ ಕ್ರಾಮ್‌ವೆಲ್ ತನ್ನ ಅಧಿಕಾರದ ಕೇವಲ ಒಂಬತ್ತು ವರ್ಷದ ಅವಧಿಯಲ್ಲಿ ಇಂಗ್ಲೆಂಡಿನ ಇತಿಹಾಸಕ್ಕೆ ಹೊಸ ದಿಕ್ಕು ತೋರಿದ.
 
ಕ್ರಾಮ್‌ವೆಲ್ ಇತರೆ ಅಧಿಕಾರಿಗಳ ಕುಟಿಲತೆಯಿಂದ ಎಷ್ಟು ವೇಗವಾಗಿ ಪ್ರವರ್ಧಮಾನಕ್ಕೆ ಏರಿದ್ದನೋ ಅಷ್ಟೇ ಕ್ಷಿಪ್ರ ಗತಿಯಲ್ಲಿ ರಾಜನ ಅವಕೃಪೆಗೆ ತುತ್ತಾಗಿ ಶಿರಚ್ಛೇದಕ್ಕೆ ಒಳಗಾದ. ಆಧುನಿಕ ಇಂಗ್ಲೆಂಡ್ ಇತಿಹಾಸದ ಬಗ್ಗೆ ಬರೆಯುತ್ತಿದ್ದ ಮಾಂಟೆಲ್ 15ನೇ ಶತಮಾನದ ಘಟನಾವಳಿಗೆ ಕೈ ಹಾಕುವ ಸಾಹಸ ತೋರಿದ್ದು ಕ್ಯಾವಿಂಡಿಷ್‌ನ ಕಾದಂಬರಿ ನಿರೂಪಣೆಯುಳ್ಳ `ಲೈಫ್ ಆಫ್ ಕಾರ್ಡಿನಲ್ ವೋಲ್ಸಿ~. ಇದು ಹಿಲರಿಯ ಬರವಣಿಗೆಗೊಂದು ಹೊಸ ಆಯಾಮ ಕೊಟ್ಟ ಕೃತಿ. 

 ಈ ಇಡೀ ಚರಿತ್ರೆಯ ತುಣಕನ್ನು ಮೂರು ಕಾದಂಬರಿಗಳ ಸರಣಿಯಲ್ಲಿ ಬರೆವ ಯೋಜನೆಯಂತೆ ಮೊದಲು ಬಂದ ಕೃತಿ `ವೂಲ್ಫ್ ಹಾಲ್~. ಇದು 2009ರಲ್ಲಿ ಬುಕರ್ ಪ್ರಶಸ್ತಿ ಪಡೆದಾಗ ಹಿಲರಿ ಮಾಂಟೆಲ್‌ಗೆ ತನ್ನ ಎರಡನೆಯ ಕಾದಂಬರಿಯನ್ನೂ ಇದೇ ಎತ್ತರಕ್ಕೆ ನಿಲ್ಲಿಸುವ ತವಕವಿತ್ತು.
 
`ಬ್ರಿಂಗ್ ಅಪ್ ದಿ ಬಾಡೀಸ್~- ಈಗ ಬುಕರ್ ಪ್ರಶಸ್ತಿಗೆ ಪಾತ್ರವಾದ ಎರಡನೇ ಕಾದಂಬರಿ. ಸರಣಿಯ ಕೊನೆಯ ಕೃತಿ `ದಿ ಮಿರರ್ ಅಂಡ್ ದಿ ಲೈಟ್~ ರಚನೆಯಲ್ಲಿ ತೊಡಗಿರುವ ಮಾಂಟೆಲ್ 2015ರಲ್ಲಿ ಮುಗಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT