ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕಟ್ಟಿ ಹಾಕಿ ನಟನೆ ಮಾಡಿ ಎಂದರೆ ಹೇಗೆ?

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

*ಗ್ರಂಥಾಲಯಗಳಿಗಾಗಿ ನಡೆಸುವ ಪುಸ್ತಕ ಖರೀದಿಯಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂಬ ಆರೋಪ ಇದೆ. ಇದನ್ನು ತಡೆಯಲು ಇಲಾಖೆ ಏನು ಮಾಡುತ್ತಿದೆ?
ಮಾರುಕಟ್ಟೆಗೆ ಕಳಪೆ ಪುಸ್ತಕಗಳನ್ನು ಸರಬರಾಜು ಮಾಡುವ ದುಷ್ಟ ಪ್ರವೃತ್ತಿ ಇರುವವರೆಗೆ ಅವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಈಗಿನ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಇಲಾಖೆಯಿಂದ ಕಟ್ಟುನಿಟ್ಟಿನ ನಿಯಂತ್ರಣ ಅಸಾಧ್ಯ.
 
ಕೈಗಳನ್ನು ಕಟ್ಟಿ ಹಾಕಿ ನಟನೆ ಮಾಡಿ ಎಂಬಂತಹ ಸ್ಥಿತಿ ನಮ್ಮದು. ಪುಸ್ತಕ ಕೊಳ್ಳುವ ಮನಸ್ಸುಗಳು ಉತ್ತಮ ಪುಸ್ತಕಗಳನ್ನು ಮಾತ್ರ ಖರೀದಿಸುತ್ತೇವೆ ಎಂದು ದೃಢಸಂಕಲ್ಪ ಮಾಡಬೇಕು.

*ಪುಸ್ತಕ ಮಾರಾಟಗಾರರು ನಕಲಿ ಲೆಟರ್‌ಹೆಡ್‌ಗಳನ್ನು ಸೃಷ್ಟಿಸಿ ಇಲಾಖೆಗೆ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಇದೆ. ಇದನ್ನು ನಿಯಂತ್ರಿಸುವುದು ಹೇಗೆ?

ಒಬ್ಬ ಪ್ರಕಾಶಕನಿಂದ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕ ಖರೀದಿ ಮಾಡಬೇಕು ಎಂಬ ನಿಯಮ ಇದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ನಾಯಿ ಕೊಡೆಗಳಂತೆ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿವೆ.

ಏಕಗವಾಕ್ಷಿ ಯೋಜನೆ ಬೇಕು ಎಂದು ಆಗ್ರಹಿಸಿದವರೇ ಈಗ ಈ ಯೋಜನೆಯನ್ನು ನಿಲ್ಲಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಪುಸ್ತಕ ಖರೀದಿ ಮೌಲ್ಯವನ್ನು ಐದು ಲಕ್ಷ ರೂಪಾಯಿಗೆ ಏರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈಗ ಏಕಗವಾಕ್ಷಿ ಯೋಜನೆಯಲ್ಲಿ ಪುಸ್ತಕಗಳ ಆಯ್ಕೆ, ಮಾರಾಟಕ್ಕೆ ಎಲ್ಲರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಏಕಗವಾಕ್ಷಿ ವ್ಯವಸ್ಥೆಯ ಲಾಭ ಲೇಖಕರು ಹಾಗೂ ಪ್ರಕಾಶಕರಿಗೆ ಮಾತ್ರ ಸಿಗುವಂತಾಗಬೇಕು.

*ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ಎಲ್ಲ ಪುಸ್ತಕಗಳನ್ನು ಪೂರ್ತಿ ಓದುವುದಿಲ್ಲ. ಇದರಿಂದಾಗಿ ಪುಸ್ತಕಗಳ ಗುಣಮಟ್ಟ ಕಡಿಮೆಯಾಗಿದೆ ಎಂಬ ಆರೋಪ ಇದೆ. ಇದಕ್ಕೆ ಪರಿಹಾರ ಏನು? 
ಬರಹಗಾರರು, ಸಾಹಿತ್ಯಿಕ ಹಿನ್ನೆಲೆ ಇರುವವರೇ ಆಯ್ಕೆ ಸಮಿತಿಯ ಸದಸ್ಯರಾಗಿ ಆಯ್ಕೆಯಾಗುತ್ತಿದ್ದಾರೆ. ಅವರಿಗೆ ಉತ್ತಮ ಲೇಖಕರು ಹಾಗೂ ಪ್ರಕಾಶಕರ ಮಾಹಿತಿ ಇದೆ. ಆಯ್ಕೆ ಸಮಿತಿಯ ಎದುರು ವರ್ಷಕ್ಕೆ ಏಳು ಸಾವಿರ ಪುಸ್ತಕಗಳು ಬರುತ್ತವೆ.
 
ಎಲ್ಲ ಪುಸ್ತಕಗಳನ್ನು ಸಮಿತಿ ಸದಸ್ಯರು ಓದುವುದು ಅಸಾಧ್ಯ. ಅವರು ಕೃತಿಗಳ ಪರಿಶೀಲನೆ ಮಾಡಿ ಗುಣಮಟ್ಟದ ಪುಸ್ತಕಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ತಮ್ಮ ಪ್ರಕಾಶನದ, ತಾವು ಬರೆದ ಕೃತಿಗಳು ಆಯ್ಕೆ ಸಮಿತಿಯ ಎದುರು ಬಂದಾಗ ಸದಸ್ಯರು ಸ್ವ ಇಚ್ಛೆಯಿಂದ ಸಮಿತಿಯಿಂದ ಹೊರಗುಳಿಯಬೇಕು.

ಸ್ವಂತ ಪ್ರಕಾಶನ ಸಂಸ್ಥೆ ಹೊಂದಿರುವ ಲೇಖಕಿಯೊಬ್ಬರು ಒಂದೇ ವರ್ಷದಲ್ಲಿ 21 ಪುಸ್ತಕಗಳನ್ನು ಬರೆದಿದ್ದರು. ಕಳಪೆ ಪುಸ್ತಕಗಳು ಎಂಬ ಕಾರಣ ನೀಡಿ ಎಲ್ಲ ಪುಸ್ತಕಗಳನ್ನು ತಿರಸ್ಕರಿಸಲಾಗಿದೆ.

* ಗ್ರಂಥಾಲಯ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವುದು ಹೇಗೆ?

ಕನ್ನಡದಲ್ಲಿ ಪುಸ್ತಕಗಳಿಗೆ ಕೊರತೆ ಇಲ್ಲ. ದಾನಿಗಳು, ಪುಸ್ತಕ ಪ್ರಾಧಿಕಾರ, ಅಕಾಡೆಮಿಗಳು ಹಾಗೂ ವಿವಿಧ ಯೋಜನೆಗಳ ಮೂಲಕ ಇಲಾಖೆಗೆ ಪ್ರತಿ ವರ್ಷ 15 ಲಕ್ಷ ಪುಸ್ತಕಗಳು ಬಂದು ಬೀಳುತ್ತವೆ.

ಅವುಗಳನ್ನು ಸಂಗ್ರಹಿಸಿಡಲು ಸರಿಯಾದ ಜಾಗವೇ ಇಲ್ಲ. ಕಟ್ಟಡ ನಿರ್ಮಾಣಕ್ಕೆ ಇಲಾಖೆಗೆ ಸರ್ಕಾರದಿಂದ ಬಿಡುಗಡೆಯಾಗುವ ವಾರ್ಷಿಕ ಅನುದಾನ ಎರಡು ಕೋಟಿ ರೂಪಾಯಿಗಳು ಮಾತ್ರ. ಈ ಅನುದಾನವನ್ನು 5,766 ಗ್ರಾ.ಪಂ. ಗ್ರಂಥಾಲಯಗಳು, 475 ಶಾಖಾ ಗ್ರಂಥಾಲಯಗಳಿಗೆ ಹಂಚುವುದು ಹೇಗೆ? ಮೂಲಸೌಕರ್ಯದ ಕೊರತೆಯಿಂದ ಸಾರ್ವಜನಿಕರಿಗೆ ಪುಸ್ತಕಗಳನ್ನು ತಲುಪಿಸುವಲ್ಲಿ ವಿಫಲರಾಗುತ್ತಿದ್ದೇವೆ.

ಕೃತಿಗಳನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಇಟ್ಟರೆ ಸಾರ್ವಜನಿಕರಿಗೆ ಸುಲಭದಲ್ಲಿ ಸಿಗುತ್ತದೆ. ಸರ್ಕಾರ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ನೀಡಬೇಕು.
 
*ಪ್ರಥಮ ಮುದ್ರಣದ ಪುಸ್ತಕಗಳನ್ನು ಮಾತ್ರ ಗ್ರಂಥಾಲಯಗಳಿಗೆ ಮಾರಾಟ ಮಾಡಬೇಕು ಎಂಬ ನಿಯಮ ಇದೆ. ಆದರೆ `ನಕಲಿ~ ಹೆಸರಿನಲ್ಲಿ ಆಗುತ್ತಿರುವ ಪುಸ್ತಕಗಳ ಮುದ್ರಣವನ್ನು ನಿಯಂತ್ರಿಸುವುದು ಹೇಗೆ?

ಇತ್ತೀಚೆಗೆ ಸಮಗ್ರ ಸಾಹಿತ್ಯ, ಸಮಗ್ರ ಗದ್ಯ ಸಾಹಿತ್ಯ, ಸಮಗ್ರ ಪದ್ಯ ಸಾಹಿತ್ಯ ಎಂಬ ಹೆಸರಿನಲ್ಲಿ ಕೃತಿಗಳು ಬಿಡುಗಡೆಯಾಗುತ್ತಿವೆ. ಇದರಿಂದ ಶಕ್ತಿ ಇದ್ದವರು, ದುಡ್ಡು ಇದ್ದವರು ಮಾತ್ರ ಯೋಜನೆ ಲಾಭ ಪಡೆಯುತ್ತಾರೆ. ಪ್ರಸಿದ್ಧ ಸಾಹಿತಿಯೊಬ್ಬರ ಎಲ್ಲ ಕೃತಿಗಳನ್ನು ಪುನರ್ ಮುದ್ರಣ ಮಾಡುವ ಬದಲು ಓದುಗರಿಂದ ಬೇಡಿಕೆ ಇದ್ದರೆ ಮಾತ್ರ ಪುನರ್ ಮುದ್ರಣ ಮಾಡಬೇಕು. ರಾಜ್ಯ ಸರ್ಕಾರ ಪುಸ್ತಕ ಖರೀದಿ ನೀತಿಯನ್ನು ಜಾರಿಗೊಳಿಸಬೇಕು.

* ಪುಸ್ತಕ ನೀತಿ~ಗೆ ಸಂಬಂಧಿಸಿದಂತೆ  ಗ್ರಂಥಾಲಯ ಇಲಾಖೆಯ ನಿರೀಕ್ಷೆ ಏನು?
ಕನ್ನಡ ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟ ನ್ಯಾಯಯುತವಾಗಿ ನಡೆಯಬೇಕು. ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭವಾಗಿ ಸಿಗಬೇಕು. ಪುಸ್ತಕ ನೀತಿ ಜಾರಿಗೊಳಿಸುವುದರ ಜೊತೆಗೆ ಸಾರ್ವಜನಿಕ ಗ್ರಂಥಾಲಯಗಳನ್ನು ಅಭಿವೃದ್ದಿಪಡಿಸಬೇಕು.
 
ಪುಸ್ತಕ ಪ್ರಕಾಶನಕ್ಕೆ ಉತ್ತೇಜನ ನೀಡುವ ಸರ್ಕಾರದ ಯೋಜನೆಗಳ ಲಾಭ ಲೇಖಕರಿಗೆ ಸಿಗಬೇಕು. ಸಬ್ಸಿಡಿಗಾಗಿ ಸಿನಿಮಾ ತಯಾರಿಸಿದ ಹಾಗೆ ಯೋಜನೆಗಳ ಆಸೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುವ ಪ್ರವೃತ್ತಿಗೆ ಪುಸ್ತಕ ನೀತಿಯ ಮೂಲಕ ನಿಯಂತ್ರಣ ಹೇರಬೇಕು. ಮೂಢನಂಬಿಕೆ ಬಿತ್ತುವಂತಹ, ಹಳ್ಳಿ ಶಕುನದ ಕೃತಿಗಳಿಗೆ ಕಡಿವಾಣ ಹಾಕಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT