ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಬ್ಯಾಟಿಂಗ್; ಕೈತಪ್ಪಿದ ಟ್ರೋಫಿ: ವೆಟೋರಿ ಬೇಸರದ ನುಡಿ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಬ್ಯಾಟಿಂಗ್ ಬಲದಿಂದಲೇ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಗಿಟ್ಟಿಸುವ ಕನಸು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಫೈನಲ್ ಪಂದ್ಯದಲ್ಲಿಯೇ ಕೈಸುಟ್ಟುಕೊಂಡಿತು.

ಭರ್ಜರಿ ಹೊಡೆತ ಕಷ್ಟ, ಮಂದಗತಿಯಲ್ಲಿ ಸಾಗಿಯೇ ಗೆಲುವು ಸಾಧಿಸಬೇಕು ಎನ್ನುವ ಸುಲಭದ ಲೆಕ್ಕಾಚಾರ ಬದಿಗಿಟ್ಟು ಭರ್ಜರಿ ಹೊಡೆತಕ್ಕೆ ಕೈಹಾಕಿ ಕೈಸುಟ್ಟುಕೊಂಡಿತು ಡೇನಿಯಲ್ ವೆಟೋರಿ ನಾಯಕತ್ವದ ಪಡೆ. ಗೆಲುವಿನ ಕಡೆಗೆ ನಿರಾಯಾಸವಾಗಿ ಹೆಜ್ಜೆ ಇಡುವುದಕ್ಕೆ ಖಂಡಿತ ಅವಕಾಶವಿತ್ತು. ಆದರೆ ಹಾಗೆ ಮಾಡಲಿಲ್ಲ. ಆತುರದಲ್ಲಿ ಬ್ಯಾಟ್ ಬೀಸಿದರು ಚಾಲೆಂಜರ್ಸ್ ಬ್ಯಾಟ್ಸ್‌ಮನ್‌ಗಳು. ಪರಿಣಾಮ ಸಾಲುಸಾಲಾಗಿ ಉರುಳಿದವು. ಇದೇ ಈ ತಂಡದ ನಾಯಕನ ಬೇಸರಕ್ಕೆ ಕಾರಣ.

ಲೀಗ್ ಹಾಗೂ ಸೆಮಿಫೈನಲ್ ಹಂತದಲ್ಲಿ ಇನ್ನೂರಕ್ಕೂ ಹೆಚ್ಚು ಮೊತ್ತದ ಗುರಿಯನ್ನು ಮುಟ್ಟಿದ್ದ ಚಾಲೆಂಜರ್ಸ್‌ಗೆ ಮುಂಬೈ ಇಂಡಿಯನ್ಸ್ ನೀಡಿದ್ದ 140 ರನ್‌ಗಳ ಸವಾಲು ದೊಡ್ಡದೇನು ಆಗಿರಲಿಲ್ಲ. ಓವರ್‌ಗೆ ಏಳರ ಆಸುಪಾಸಿನಲ್ಲಿ ರನ್ ಗಳಿಸುತ್ತಾ ಸಾಗುವಂಥ ಯೋಜಿತ ಬ್ಯಾಟಿಂಗ್ ಸಾಧ್ಯವಾಗಬೇಕಿತ್ತು. ಆದರೆ ವಿಕೆಟ್ ಕಾಯ್ದುಕೊಂಡು ಆಡದ ವೆಟೋರಿ ಬಳಗವು ಸಂಕಷ್ಟದಲ್ಲಿ ಸಿಲುಕಿತು. ಸವಾಲಾಗದ ಜಯದ ಹಾದಿಯೆಂದು ಉತ್ಸಾಹದಲ್ಲಿ ಬ್ಯಾಟಿಂಗ್ ಆರಂಭಿಸಿ 19.2 ಓವರುಗಳಲ್ಲಿಯೇ 108ರನ್‌ಗೆ ಮುಗ್ಗರಿಸಿದ್ದು ವಿಪರ‌್ಯಾಸ. ಆದ್ದರಿಂದಲೇ ವೆಟೋರಿ `ಕೈಕೊಟ್ಟಿತು ಬ್ಯಾಟಿಂಗ್; ಕೈತಪ್ಪಿತು ಟ್ರೋಫಿ~ ಎಂದು ಭಾನುವಾರ ರಾತ್ರಿ ಸುದ್ದಿಗಾರರ ಮುಂದೆ ತಮ್ಮ ಬೇಸರ ತೋಡಿಕೊಂಡರು.

`ಬ್ಯಾಟಿಂಗ್ ನಮ್ಮ ತಂಡದ ದೊಡ್ಡ ಬಲ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವನ್ನು 139 ರನ್‌ಗಳಿಗೆ ಆಲ್‌ಔಟ್ ಮಾಡಿದಾಗ, ಯಶಸ್ಸು ನಮ್ಮದು ಎನ್ನುವ ವಿಶ್ವಾಸವೂ ಮೂಡಿತ್ತು. ಆದರೆ ಎಲ್ಲವೂ ನಿರೀಕ್ಷೆಯಂತೆ ನಡೆಯಲಿಲ್ಲ~ ಎಂದು ಪಂದ್ಯದ ನಂತರ ಹೇಳಿದ ಅವರು `ಬೆಂಗಳೂರಿನಲ್ಲಿನ ಅಂಗಳಕ್ಕೆ ಹೋಲಿಸಿದಲ್ಲಿ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿನ ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ಸಹಕಾರಿಯಲ್ಲ. ಅದೇನೇ ಇರಲಿ ನೆಪ ಹೇಳಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಮುಂದಿದ್ದ ಗುರಿ ಸುಲಭದ್ದಾಗಿತ್ತು~ ಎಂದರು.

`ಮುಂಬೈ ತಂಡದವರಿಗೂ ರನ್ ಗಳಿಸುವುದು ಹಾಗೂ ವಿಕೆಟ್ ಕಾಯ್ದುಕೊಳ್ಳುವುದು ಕಷ್ಟವೆನಿಸಿತು. ನಮಗೂ ಅಂಥ ಅನುಭವವೇ ಆಯಿತು. ಆದರೆ ಎದುರಾಳಿಗಳಿಗೆ ಹೋಲಿಸಿದಲ್ಲಿ ನಮ್ಮದು ಕಳಪೆ ಆಟ~ ಎಂದು ಒಪ್ಪಿಕೊಂಡ ವೆಟೋರಿ `ಇಂಡಿಯನ್ಸ್ ತಂಡದ ಬೌಲರ್‌ಗಳು ಪ್ರಭಾವಿ ಎನಿಸಿದರು. ಅದರಲ್ಲಿಯೂ ಹರಭಜನ್ ಸಿಂಗ್ (20ಕ್ಕೆ3), ಲಸಿತ್ ಮಾಲಿಂಗ (23ಕ್ಕೆ2) ಹಾಗೂ ಅಬು ನೆಚಿಮ್ (26ಕ್ಕೆ2) ಹಾಗೂ ಯಜುವೇಂದ್ರ ಚಹಾಲ್ (9ಕ್ಕೆ2) ಅವರು ಒತ್ತಡ ಹೇರುವ ರೀತಿಯಲ್ಲಿ ದಾಳಿ ನಡೆಸಿದರು. `ಭಜ್ಜಿ~ ನಾಲ್ಕು ಓವರ್ ನಿರ್ಣಾಯಕ~ ಎಂದು ವಿವರಿಸಿದರು.

`ಆರಂಭದಲ್ಲಿ ವಿಕೆಟ್‌ಗಳು ಪತನವಾಗಿದ್ದರಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲಿನ ಜವಾಬ್ದಾರಿ ಹೆಚ್ಚಿತು. ಆ ಹಂತದಲ್ಲಿ ಒತ್ತಡವನ್ನು ಸರಿಯಾಗಿ ನಿಭಾಯಿಸಲಿಲ್ಲ. ಮಧ್ಯಮಕ ಕ್ರಮಾಂಕದವರು ಎಚ್ಚರಿಕೆಯಿಂದ ಆಡಿದ್ದರೆ ಫಲಿತಾಂಶವೇ ಬೇರೆ ಆಗಿರುತ್ತಿತ್ತು~ ಎಂದರು.

ಮೇಲಿನ ಕ್ರಮಾಂಕದ ತಿಲಕರತ್ನೆ ದಿಲ್ಶಾನ್, ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ ಅವರನ್ನೇ ನೆಚ್ಚಿಕೊಂಡು ಟೂರ್ನಿಯಲ್ಲಿ ಫೈನಲ್ ತಲುಪಿದ ತಂಡವು ಈ ಮೂವರು ಬ್ಯಾಟ್ಸ್‌ಮನ್‌ಗಳು ವಿಫಲರಾದಾಗ ಸೋಲಿನ ಆಘಾತ ಅನುಭವಿಸಿತು ಎನ್ನುವ ಅಭಿಪ್ರಾಯವನ್ನು ಒಪ್ಪದ ಅವರು `ನಮ್ಮದು ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿರುವ ತಂಡವಾಗಿದೆ. ಎಲ್ಲರೂ ಚೆನ್ನಾಗಿ ಆಡಬಲ್ಲರು. ಆದರೆ ಪ್ರಭಾವಿ ಬ್ಯಾಟ್ಸ್‌ಮನ್‌ಗಳು ಕೂಡ ಚೀಪಾಕ್ ಅಂಗಳದಲ್ಲಿ ಸುಲಭವಾಗಿ ಆಡಲು ಸಾಧ್ಯವಾಗದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT