ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ: ಕೃಷಿ ಚಟುವಟಿಕೆಗೆ ಹಿನ್ನಡೆ

Last Updated 14 ಜುಲೈ 2012, 5:05 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದ್ದು ರೈತರು ಮತ್ತೊಮ್ಮೆ ಬರಗಾಲದ ಆತಂಕದಲ್ಲಿದ್ದಾರೆ.

`ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ...~ ಎಂಬ ಪ್ರಾರ್ಥನೆಯೊಂದಿಗೆ ರೈತರು ಪ್ರತಿನಿತ್ಯ ಆಕಾಶವನ್ನು ದಿಟ್ಟಿಸಿ ನೋಡುತ್ತಿದ್ದಾರೆ.

ಕಳೆದ 15 ದಿನದಿಂದ ಪ್ರತಿದಿನ ಮಧ್ಯಾಹ್ನ ಆಗಸದಲ್ಲಿ ಮೋಡಗಳು ದಟ್ಟೈಸುತ್ತವೆ.          ಸಂಜೆಯಾಗುತ್ತಿದ್ದಂತೆ ನಿಧಾನವಾಗಿ ಚೆದುರಿ ಹೋಗುತ್ತವೆ.

`ಭರಣಿ ಮಳೆ ಸುರಿದರೆ ಧರಣಿ ಫಂಟ~ ಎನ್ನುವ ವಾಡಿಕೆ ಮಾತಿನಂತೆ ಆರಂಭದಲ್ಲಿ ತಾಲ್ಲೂಕಿನ ಬಹುತೇಕ ಕಡೆ ಭರಣಿ ಮಳೆ ಸುರಿದು ರೈತರಲ್ಲಿ ಸಂತಸ ಮೂಡಿತ್ತು. ಬಹು ವರ್ಷಗಳ ನಂತರ ಭರಣಿ ಮಳೆ ಬಿದ್ದಿರುವುದರಿಂದ ಈ ವರ್ಷ ಚೆನ್ನಾಗಿ ಮಳೆಯಾಗಬಹುದು ಎನ್ನುವ ಆಶಾಭಾವನೆ ಮೂಡಿಸಿತ್ತು. ಆದರೆ ಮಳೆಗಾಗಿ `ಇಂದು ನಾಳೆ~ ಎಂದು ಕಾಯುತ್ತಿದ್ದ ರೈತರ ನಿರೀಕ್ಷೆ ಹುಸಿಯಾಗಿದೆ.

ತಾಲ್ಲೂಕಿನ ಮುಂಗಾರು ಹಂಗಾಮಿನ ಜೂನ್‌ವರೆಗಿನ ವಾಡಿಕೆ ಮಳೆ 198.3 ಮಿಮೀ. ಆದರೆ ಈ ಬಾರಿ ಕೇವಲ 185.8 ಮಿಮೀ ಮಳೆಯಾಗಿದೆ. ಅದೂ ಬಹುತೇಕ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆಯೇ ಬೀಳದೆ ರೈತರು ತೀವ್ರ ಚಿಂತಾಕ್ರಾಂತರಾಗಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 6 ಹೋಬಳಿಗಳಿವೆ. ಕಸಬಾ ಹಾಗೂ ಮುಂಗಾನಹಳ್ಳಿ ಹೋಬಳಿಗಳಲ್ಲಿ ಮಾತ್ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಬಂದಿದೆ.

 ಕೈವಾರ, ಅಂಬಾಜಿದುರ್ಗ, ಮುರುಗಮಲ್ಲ, ಚಿಲಕಲನೇರ್ಪು ಹೋಬಳಿಗಳಲ್ಲಿ  ಮಳೆಯೇ ಬಂದಿಲ್ಲ. ಜನರಿಗೆ ಮತ್ತು ಜಾನುವಾರುಗಳಿಗೆ  ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮೇವಿನ ಸಮಸ್ಯೆಯಿಂದ ಹೈನುಗಾರಿಕೆ ಆಶ್ರಯಿಸಿರುವವರು ತತ್ತರಿಸಿದ್ದಾರೆ.
 
ತಾಲ್ಲೂಕಿನಲ್ಲಿ ಒಟ್ಟು 30 ಸಾವಿರ ಹೆಕ್ಟೇರ್ ಕೃಷಿ ಯೋಗ್ಯ ಜಮೀನು ಇದೆ. ಇಲ್ಲಿಯವರೆಗೆ ನೆಲಗಡಲೆ 1625,  ಭತ್ತ 410, ತೊಗರಿ 590, ರಾಗಿಯನ್ನು 36 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಲಾಗಿದೆ. ಒಟ್ಟು ಕೇವಲ 2661 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಮುಂಗಾನಹಳ್ಳಿ ಮತ್ತು ಚಿಲಕಲನೇರ್ಪು ಹೋಬಳಿಗಳಲ್ಲಿ ಹೆಚ್ಚಾಗಿ ನೆಲಗಡಲೆ ಮತ್ತು ತೊಗರಿ ಬೆಳೆಯುತ್ತಿದ್ದರು. ಬಿತ್ತನೆ ಅವಧಿ ಮುಗಿದಿರುವುದರಿಂದ ಆ ಭಾಗದ ರೈತರು ಈಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಕೈವಾರ, ಕಸಬಾ, ಅಂಬಾಜಿದುರ್ಗ ಮತ್ತು ಮುರುಗಮಲ್ಲ ಹೋಬಳಿಗಳಲ್ಲಿ ರಾಗಿ ಹೆಚ್ಚಾಗಿ ಬೆಳೆಯುವುದರಿಂದ ಆ ಭಾಗದ ರೈತರು ಇನ್ನೂ ಆಶಾವಾದಿಗಳಾಗಿದ್ದಾರೆ. ರಾಗಿ, ಅವರೆ, ಜೋಳದ ಬಿತ್ತನೆಗೆ ಇನ್ನೂ ಸಮಯವಿರುವುರದಿಂದ ಮಳೆರಾಯನ ಕೃಪೆಗಾಗಿ ಕಾದು ಕುಳಿತಿದ್ದಾರೆ.

`ರಾಗಿಯೇ ಚಿಂತಾಮಣಿ ತಾಲ್ಲೂಕಿನ ಪ್ರಮುಖ ಬೆಳೆಯಾಗಿರುವುದರಿಂದ ಜುಲೈ ಅಂತ್ಯದವರೆಗೂ ಬಿತ್ತನೆಗೆ ಅವಕಾಶವಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಸುರಿದರೂ ಕೃಷಿ ಚಟುವಟಿಕೆಗಳು ಎಂದಿನಂತೆ ಸಾಮಾನ್ಯವಾಗಿ ಮುಂದುವರೆಯುತ್ತವೆ. ಕೆಲವು ಹೋಬಳಿಗಳಲ್ಲಿ ರೈತರು ಪರ್ಯಾಯ ಬೆಳೆಗಳತ್ತ ಗಮನ ಹರಿಸಬಹುದು~ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೆಶಕ ಡಾ.ಕೆ.ನಯೀಂಪಾಷಾ.

ತಾಲ್ಲೂಕಿನಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಇದೆ. ರಿಯಾಯಿತಿ ದರದಲ್ಲಿ  ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಮಳೆ ಬಂದ ತಕ್ಷಣ ಸಹಾಯಕ ಕೃಷಿ ನಿರ್ದೆಶಕರ ಕಚೇರಿ ಮತ್ತು ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT