ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮುಂಗಾರು: ಆತಂಕದಲ್ಲಿ ರೈತರು

Last Updated 26 ಜೂನ್ 2011, 7:30 IST
ಅಕ್ಷರ ಗಾತ್ರ

ಚನ್ನಗಿರಿ: ಮೆಕ್ಕೆಜೋಳ ಕಣಜ ಎಂದು ಹೆಸರು ಪಡೆದುಕೊಂಡಿರುವ ತಾಲ್ಲೂಕಿನಲ್ಲಿ ಈ ಬಾರಿ ಅನಿಶ್ಚಿತೆಯ ಮಳೆಯ ಕಾರಣದಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.

ಕಳೆದ ಎರಡು ಮೂರು ದಿನಗಳಿಂದ ಆಗಾಗ ಸ್ವಲ್ಪ ಮಳೆ ಬೀಳುತ್ತಿದೆ. ಆದರೆ, ಈ ಬಾರಿ ಒಮ್ಮೆ ಮಾತ್ರ ಜೋರಾದ ಮಳೆ ಬಿದ್ದಿದೆ. ಈ ಕಾರಣದಿಂದ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದೆ. ಇದುವರೆಗೂ ಜೋರಾದ ಮಳೆ ಬಿದ್ದಿಲ್ಲ. ಕೆಲವೆಡೆ ಬಿತ್ತನೆ ಮಾಡುತ್ತಿದ್ದರೆ, ಇನ್ನು ಕೆಲವು ಕಡೆ ಬೆಳೆಗಳಿಗೆ ಎಡೆಕುಂಟೆ ಕಾರ್ಯವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಶೇ. 50ರಷ್ಟು ಮಾತ್ರ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ರೈತರು ಈಗ ಮಳೆಗಾಗಿ ದೇವರಲ್ಲಿ ಮೊರೆಯಿಡುವಂತಾಗಿದೆ.

ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಬೇಕಿತ್ತು. ಆದರೆ, ಕೇವಲ ಇದುವರೆಗೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ವರದಿ ಹೇಳುತ್ತದೆ.

ಮೆಕ್ಕೆಜೋಳ ಬಿಟ್ಟರೆ ರಾಗಿ, ಹತ್ತಿ, ಶೇಂಗಾ, ಅಲಸಂದೆ, ಹೆಸರು, ಹೈಬ್ರೀಡ್ ಜೋಳ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ. ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನು ಮುಂಗಾರು ಮಳೆ ಉತ್ತಮವಾಗಿ ಬೀಳದೇ ಇರುವುದರಿಂದ ತಾಲ್ಲೂಕಿನ ರೈತರ ಮೊಗದಲ್ಲಿ ಆಂತಕದ ಛಾಯೆ ಮೂಡಿದೆ.
ಆತಂಕದಲ್ಲಿ ರೈತರು

ಜಗಳೂರು ವರದಿ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ರೈತರು ಆತಂಕದಿಂದ ಮುಗಿಲು ನೋಡುವಂತಾಗಿದೆ.

ಅತ್ಯಂತ ಕಡಿಮೆ ನೀರಾವರಿ ಹೊಂದಿರುವ ತಾಲ್ಲೂಕಿನಲ್ಲಿ ಮಳೆಯಾಧಾರಿತ ಕೃಷಿಯನ್ನು ಬಹುತೇಕ ರೈತರು ಅವಲಂಬಿಸಿದ್ದಾರೆ. ಪ್ರಸಕ್ತ ಜೂನ್ ಮೊದಲ ವಾರದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದ್ದು, ಕಳೆದ 20 ದಿನಗಳಿಂದ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಒಟ್ಟು 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇದುವರೆಗೆ ಕೇವಲ ಶೇ. 10ರಷ್ಟು ಮಾತ್ರ ಬಿತ್ತನೆಯಾಗಿದ್ದು, ಅದೂ ಮೊಳಕೆಯ ಹಂತದಲ್ಲೇ ಒಣಗುತ್ತಿದೆ. ಇದುವರೆಗೆ ತಾಲ್ಲೂಕಿನಲ್ಲಿ 163 ಮಿ.ಮೀ ಮಳೆಯಾಗಿದ್ದು, ಇದು ವಾಡಿಕೆ ಮಳೆಗಿಂತ ಹೆಚ್ಚಾಗಿದೆ.

ಆದರೆ, ಮೇ ಜೂನ್ ತಿಂಗಳ ಮೊದಲ ವಾರದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ನಂತರದಲ್ಲಿ ಬರೀ ಮಳೆರಹಿತ ಶುಷ್ಕ ಗಾಳಿ ಬೀಸುತ್ತಿದೆ. ಕಳೆದ ವರ್ಷ ಈ ವೇಳೆಗೆ ಶೇ. 50ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಬಾರಿ ಕೇವಲ ಶೇ. 10ರಷ್ಟು ಬಿತ್ತನೆಯಾಗಿರುವುದು ರೈತರ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

`ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಅತ್ಯಂತ ಕಡಿಮೆ ಬಿತ್ತನೆಯಾಗಿದೆ. ಇದರಿಂದಾಗಿ ಹೆಸರು, ಉದ್ದು, ಎಳ್ಳು ಹಾಗೂ ಬಹುತೇಕ ಹತ್ತಿ ಬೆಳೆಗಳ ಬಿತ್ತನೆ ಅವಧಿ ಮುಗಿದಂತಾಗಿದೆ. ತಾಲ್ಲೂಕಿನ 8 ರೈತ ಸಂಪರ್ಕ ಕೇಂದ್ರಗಳ ಮೂಲಕ ಇದುವರೆಗೆ 3,100 ಕ್ವಿಂಟಲ್ ಬಿತ್ತನೆಬೀಜ ಹಾಗೂ 4,500 ಟನ್ ರಸಗೊಬ್ಬರವನ್ನು ರೈತರಿಗೆ ವಿತರಿಸಲಾಗಿದೆ.

ಬೀಜ, ಗೊಬ್ಬರ ಖರೀದಿಸಿರುವ ರೈತರು ಬಿತ್ತನೆ ಮಾಡಲು ಮಳೆಗಾಗಿ ಕಾಯುತ್ತಿದ್ದಾರೆ. ಕಳೆದ ವರ್ಷ ಈ ವೇಳೆಗೆ ಶೇ. 50ರಷ್ಟು ಬಿತ್ತನೆಯಾಗಿತ್ತು. ಪ್ರಸ್ತುತ ಶೇ. 10ರಷ್ಟು ಪ್ರದೇಶ ಮಾತ್ರ ಬಿತ್ತನೆಯಾಗಿದೆ~ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ಮಾರುತಿ `ಪ್ರಜಾವಾಣಿ~ಗೆ ತಿಳಿಸಿದರು.

ಮುಂಗಾರು ಬಿತ್ತನೆಗೆ  ಸಮಸ್ಯೆಯಾಗದಂತೆ ರೈತರು ಸಾಲಸೋಲ ಮಾಡಿ ಬೀಜ, ಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಮತ್ತೆಮತ್ತೆ ಭೂಮಿಯನ್ನು ಹದಗೊಳಿಸುತ್ತಿದ್ದಾರೆ. ಬಿತ್ತನೆ ಅವಧಿ ಮುಗಿದುಹೋಗುವ ಭಯದಿಂದ ಕಸಬಾ ಹೋಬಳಿಯ ಕೆಲವೆಡೆ ಒಣ ನೆಲೆದ್ಲ್ಲಲೇ ರೈತರು ಈರುಳ್ಳಿ ಬಿತ್ತನೆ ಮಾಡುತ್ತಿದ್ದಾರೆ.

ಮುಂಗಾರು ಮಳೆಯ ಕೊರತೆ ತಾಲ್ಲೂಕಿನ ರೈತರನ್ನು ಆತಂಕದ ಮಡುವಿಗೆ ತಳ್ಳಿದ್ದು, ನಿತ್ಯ ಮೋಡಗಳತ್ತ ಆಸೆ ಕಣ್ಣುಗಳಿಂದ ನೋಡುತ್ತಾ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT