ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮುಂಗಾರು: ಬರದ ಭೀತಿ

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಬ್ಬರಿಸುತ್ತಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಸತತ ನಾಲ್ಕನೇ ವರ್ಷವೂ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದು, ಬರದ ಛಾಯೆ ಆವರಿಸಿದೆ.

ನಿರಂತರ ಬರದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ಈ ವರ್ಷವಾದರೂ ಉತ್ತಮ ಮುಂಗಾರು ಆಗಬಹುದು ಎಂಬ ರೈತ ಸಮುದಾಯದ ನಿರೀಕ್ಷೆ ಹುಸಿಯಾಗಿದೆ. ಈಗಾಗಲೇ ಬಿತ್ತನೆಯಾಗಿರುವ ಬೆಳೆ ಒಣಗತೊಡಗಿದೆ. ಹತ್ತಾರು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಬೇಸಿಗೆಯನ್ನು ನೆನಪಿಸುವಂತೆ ವಾತಾವರಣ ನಿರ್ಮಾಣವಾಗಿದೆ.

ಮೇ ಕೊನೆಯ ಮತ್ತು ಜೂನ್ ಮೊದಲ ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಹದಮಳೆಯಾದ ಕಾರಣ ಬಿತ್ತನೆಗೆ ಅಣಿಯಾಗಿದ್ದ ರೈತ ಸಮುದಾಯ ಇದೀಗ ತಲೆ ಮೇಲೆ ಕೈಹೊತ್ತು ಆಗಸದಲ್ಲಿ ದಟ್ಟೈಸುತ್ತಿರುವ ಗೊಡ್ಡು ಮೋಡಗಳತ್ತ ಮುಖಮಾಡಿ `ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ...' ಎಂದು ಪ್ರಾರ್ಥಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 236 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇದುವರೆಗೆ ಕೇವಲ 141.9 ಮಿ.ಮೀ.ಮಳೆಯಾಗಿದೆ. ಏಪ್ರಿಲ್‌ನಲ್ಲಿ 36.7 ಮಿ.ಮೀ., ಮೇ ನಲ್ಲಿ 43.3 ಮಿ.ಮೀ, ಜೂನ್‌ನಲ್ಲಿ 56.9 ಮಿ.ಮೀ. ಹಾಗೂ ಜುಲೈನಲ್ಲಿ ಕೇವಲ 3.3 ಮಿ.ಮೀ ಮಾತ್ರ ಮಳೆಯಾಗಿದೆ.

ಮಳೆಯ ಕೊರತೆಯ ಪರಿಣಾಮ ಹೆಸರು ಮತ್ತು ಸೋಯಾ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ 94100 ಹೆಕ್ಟೇರ್ ಒಣಬೇಸಾಯ ಭೂಮಿಯಿದ್ದು, ಪ್ರಸಕ್ತ ಮುಂಗಾರು ಕೈಕೊಟ್ಟಿರುವುದರಿಂದ ಕೇವಲ ಶೇ 34ರಷ್ಟು ಒಣ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಹಾಗೂ ನೀರಾವರಿ ಪ್ರದೇಶದಲ್ಲಿ ಶೇ 69ರಷ್ಟು (ಕಬ್ಬು) ಬಿತ್ತನೆಆಗಿದೆ.

ಈಗಾಗಲೇ ಮಳೆ ನಂಬಿ ಬಿತ್ತನೆಯಾಗಿರುವ ಹೆಸರು, ಸೋಯಾ, ಗೋವಿನ ಜೋಳ, ಶೇಂಗಾ ಬೆಳೆ ಮೊಳಕೆ ಹಂತದಲ್ಲಿರುವಾಗಲೇ ಕಳೆದ ಎರಡು ವಾರದಿಂದ ಮಳೆಯಾಗದೇ ಇರುವುದರಿಂದ ಒಣಗುವ ಹಂತ ತಲುಪಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಕೊಳವೆಬಾವಿಗಳಲ್ಲೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಮಳೆಯಾಶ್ರಿತ ಬಾದಾಮಿ, ಹುನಗುಂದ ಮತ್ತು ಬಾಗಲಕೋಟೆ ತಾಲ್ಲೂಕಿನಲ್ಲಿ ಬರದ ಛಾಯೆ ದಟ್ಟವಾಗಿದ್ದು, ಇನ್ನೊಂದು ವಾರದೊಳಗೆ ಮಳೆಯಾಗದಿದ್ದರೆ ಬರ ತೀವ್ರತೆ ಪಡೆಯಲಿದೆ.

ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿ ತೀರದ ಮುಧೋಳ, ಬೀಳಗಿ ಮತ್ತು ಜಮಖಂಡಿ ತಾಲ್ಲೂಕಿನಲ್ಲಿ ಯಥೇಚ್ಛವಾಗಿ ಬೆಳೆಯಲಾಗಿರುವ ಕಬ್ಬಿಗೆ ಅನುಕೂಲವಾಗಿದೆ. ಈ ಭಾಗದಲ್ಲಿ ಮಳೆಯಾಗದಿದ್ದರೂ ನದಿ ನೀರಿನಿಂದಾಗಿ ಬರದ ಛಾಯೆ ಇಲ್ಲವಾಗಿದೆ.

ಟ್ಯಾಂಕರ್ ನೀರು
`ಬಾದಾಮಿ ತಾಲ್ಲೂಕಿನ ಗಿಡ್ಡನಾಯಕನಹಳ್ಳಿ, ಹುಲ್ಲಿಕೇರಿ ಎಸ್.ಬಿ., ಹಿರೇಬೂದಿಹಾಳ, ಕಟಗೇರಿ ಹಾಗೂ ಜಮಖಂಡಿ ತಾಲ್ಲೂಕಿನ ಮದರಖಂಡಿ, ಕಲ್ಲೊಳ್ಳಿ, ಕಲ್ಲಬೀಳಗಿ ಮತ್ತು ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಪರಿಹಾರವಾಗದ ಕಾರಣ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದೆ' ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

`ಗುಳೇದಗುಡ್ಡ ಪಟ್ಟಣದಲ್ಲೂ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಆಸಂಗಿ ಬ್ಯಾರೇಜ್‌ನಲ್ಲಿ ಇರುವ ನೀರು ರಾಡಿಯಾಗಿರುವುದರಿಂದ ಕುಡಿಯಲು ಬಳಸಲಾಗುತ್ತಿಲ್ಲ' ಎಂದು ಅವರು ಹೇಳಿದರು.

`ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ವಾರದೊಳಗೆ ಮಳೆಯಾದರೆ ಈಗಾಗಲೇ ಬಿತ್ತನೆಯಾಗಿರುವ ಬೆಳೆಗೆ ಅನುಕೂಲವಾಗಲಿದೆ. ಆಗಸ್ಟ್‌ವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಳೆ ಸಂಪೂರ್ಣ ನಷ್ಟವಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT