ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಪ್ರಗತಿಗೆ ಕುಠಾರಪ್ರಾಯ

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಉದ್ದಿಮೆ ಸಂಸ್ಥೆಗಳು ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಭೂಮಿ ಖರೀದಿಸಬೇಕು ಎನ್ನುವ  ನಿಬಂಧನೆ ಜಾರಿಗೆ ಬಂದರೆ, ಅದರಿಂದ ಖಂಡಿತವಾಗಿಯೂ ಕೈಗಾರಿಕಾ ರಂಗದ ಬೆಳವಣಿಗೆಗೆ ತೀವ್ರ ಹೊಡೆತ ಬೀಳಲಿದೆ ಎನ್ನುವುದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ (ಕಾಸಿಯಾ) ಅಧ್ಯಕ್ಷ ಪ್ರಕಾಶ್. ಎನ್. ರಾಯ್ಕರ್ ಅವರ ಖಚಿತ ಅಭಿಪ್ರಾಯ.

ಭೂಮಿ ಖರೀದಿಗೆ ಬೆಲೆ ನಿಗದಿಪಡಿಸಿರುವುದು ಸಂಪೂರ್ಣವಾಗಿ ಅಸಂಗತವಾಗಿದೆ. ಮಸೂದೆ ಮಂಡನೆ ಪೂರ್ವ, ಮಾರುಕಟ್ಟೆ ಬೆಲೆಯ ಆರು ಪಟ್ಟು ಬೆಲೆ ಪಾವತಿಸಬೇಕು ಎನ್ನುವ ಪ್ರಸ್ತಾವ ಇತ್ತು. ಸಂಸತ್‌ನಲ್ಲಿ ಮಂಡಿಸುವ ವೇಳೆಗೆ ಅದು ನಾಲ್ಕುಪಟ್ಟಿಗೆ ಇಳಿದಿದೆ. ಮಾರುಕಟ್ಟೆ ಬೆಲೆಗಿಂತ ಒಂದು ಅಥವಾ ಒಂದೂವರೆ ಪಟ್ಟಿನಷ್ಟು ಬೆಲೆ ನಿಗದಿ ಮಾಡಿದ್ದರೆ ನ್ಯಾಯೋಚಿತವಾಗಿರುತ್ತಿತ್ತು. ಅದನ್ನು ಬಹುಶಃ ಎಲ್ಲರೂ ಒಪ್ಪಿಕೊಳ್ಳಬಹುದಾಗಿತ್ತು.

ರೈತರ ಭೂಮಿಗೆ ಒಳ್ಳೆಯ ಬೆಲೆ ಕೊಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಬರಡು, ಪಾಳು ಭೂಮಿಗೂ ಇದೇ ಬೆಲೆ ಕೊಡಬೇಕು ಎನ್ನುವುದು ಕಾರ್ಯಸಾಧ್ಯ ವಿಚಾರವಲ್ಲ. ಇದನ್ನು ಪುನರ್ ಪರಿಶೀಲಿಸಲೇಬೇಕು.

ಮಸೂದೆಯು ಸಂಸತ್‌ನಲ್ಲಿ ಅಂಗೀಕಾರಗೊಂಡು  ಸದ್ಯದ ಸ್ವರೂಪದಲ್ಲಿಯೇ ಕಾಯ್ದೆಯಾಗಿ ಜಾರಿಗೆ ಬಂದರೆ ಅದಕ್ಕೆ ಕೈಗಾರಿಕಾ ಸಂಘಟನೆಗಳು ಖಂಡಿತವಾಗಿಯೂ ವಿರೋಧ ವ್ಯಕ್ತಪಡಿಸಲಿವೆ. ಅಷ್ಟಕ್ಕೂ ಸರ್ಕಾರ ತನ್ನ ಹಠಕ್ಕೆ ಅಂಟಿಕೊಂಡರೆ ಅದರಿಂದ ಕೈಗಾರಿಕಾ ಬೆಳವಣಿಗೆಯೇ ಕುಂಠಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.

ಮಸೂದೆ ಸಿದ್ಧಪಡಿಸುವಾಗ, ಅದರ ಕರಡು ಪ್ರತಿಯನ್ನು ರಾಜ್ಯ ಅಥವಾ ರಾಷ್ಟ್ರ ಮಟ್ಟದ ಕೈಗಾರಿಕಾ ಸಂಘಟನೆಗಳ ಗಮನಕ್ಕೆ ತಂದು ಅಭಿಪ್ರಾಯವನ್ನೇ ಪಡೆದುಕೊಂಡಿಲ್ಲ.

ಖಾಸಗಿ ಉದ್ದಿಮೆದಾರರು ಕೈಗಾರಿಕಾ ಉದ್ದೇಶಕ್ಕೆ ಭೂಮಿ ಖರೀದಿಸಿ ಅನ್ಯ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಳ್ಳುವುದು ಖಂಡನಾರ್ಹವಾದದ್ದು. ಭವಿಷ್ಯದ ವಿಸ್ತರಣೆ ದೃಷ್ಟಿಯಿಂದ ನ್ಯಾಯೋಚಿತವಾಗಿ ಹೆಚ್ಚು ಭೂಮಿ ಖರೀದಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ವಿಸ್ತರಣಾ ಉದ್ದೇಶಕ್ಕೆ ಭವಿಷ್ಯದಲ್ಲಿ 10 ಎಕರೆ  ಬೇಕಾಗಿದ್ದರೆ, 100 ಎಕರೆಗಳಷ್ಟು ಭೂಮಿ ಖರೀದಿಸಿದ್ದರೆ ಅಲ್ಲಿ ದುರುದ್ದೇಶವನ್ನು ಸ್ಪಷ್ಟವಾಗಿ ಕಾಣಬಹುದು  ಎಂದೂ ರಾಯ್ಕರ್ ಹೇಳುತ್ತಾರೆ.

ಕಾಣದ `ಸಮತೋಲನದ ದೃಷ್ಟಿಕೋನ~
ಈ ತಿದ್ದುಪಡಿ ಮಸೂದೆಯು `ಸಮತೋಲನದ ದೃಷ್ಟಿಕೋನ~ ತಳೆದಿಲ್ಲ ಎನ್ನುವುದು ಉದ್ಯಮಿ ಡಾ. ಫಿಲಿಪ್ ಲೂಯಿಸ್ ಅವರ ಸ್ಪಷ್ಟ ನುಡಿ. ರೈತರು, ಉದ್ಯಮಿದಾರರ ಒಟ್ಟಾರೆ ಹಿತಾಸಕ್ತಿ ಕಾಪಾಡುವ ಸಮತೋಲನದ ಧೋರಣೆ ಈ ಮಸೂದೆಯಲ್ಲಿ ಕಂಡು ಬರುತ್ತಿಲ್ಲ.

ಅವಸರದಲ್ಲಿಯೇ ಮಸೂದೆ ಸಿದ್ಧಪಡಿಸಿರುವಂತೆ ಕಾಣುತ್ತಿದೆ. ಮಸೂದೆ ಜಾರಿಗೆ ಬಂದರೆ, ಕೈಗಾರಿಕಾ ಉದ್ದೇಶಕ್ಕೆ ಖರೀದಿಸುವ ಭೂಮಿಯ ಬೆಲೆ ದುಬಾರಿಯಾಗಲಿದ್ದು, `ಕೈಗಾರಿಕಾ ವೆಚ್ಚ~ ಹೆಚ್ಚಳವಾಗಲಿದೆ.

ಖಾಸಗಿ ಉದ್ಯಮಿದಾರರು ಭೂ ಸ್ವಾಧೀನ, ಕೃಷಿಕರಿಗೆ ಪರಿಹಾರ ಪುನರ್ವಸತಿ ಮತ್ತಿತರ ಉದ್ದೇಶಗಳಿಗೆ ಮಾಡುವ ವೆಚ್ಚಗಳು (ಕಮಿಟ್‌ಮೆಂಟ್ ಚಾರ್ಜಸ್ಸ್) ದುಬಾರಿಗೊಳ್ಳಲಿವೆ.

ಕೈಗಾರಿಕೆಗಳಿಗೆ ರೈತರ ಭೂಮಿಯೇ ಬೇಕು ಎನ್ನುವ ಹಠವೇನೂ ಇರುವುದಿಲ್ಲ. ಬೇಕಿದ್ದರೆ ಸರ್ಕಾರ `ಅರಣ್ಯ ಭೂಮಿ~ ಮಾರಾಟ ಮಾಡಲಿ. ಈ `ಅರಣ್ಯ ಭೂಮಿ~ಯಲ್ಲಿ ಅರಣ್ಯವೇ ಕಾಣುತ್ತಿಲ್ಲ. ಇಂತಹ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವುದರಿಂದ ಅರಣ್ಯವಾಸಿಗಳಿಗೂ ಅವರ ವಾಸಸ್ಥಳದ ಹತ್ತಿರದಲ್ಲಿಯೇ ಬಿದಿರು, ನಾಗರಬೆತ್ತ ಮತ್ತಿತರ ಉದ್ಯಮಗಳನ್ನು ಸ್ಥಾಪಿಸಲು ಸಾಧ್ಯ. ಇದರಿಂದ ಅವರಿಗೂ ಉದ್ಯೋಗ ಅವಕಾಶಗಳು ದೊರೆಯಲಿವೆ.

ಭೂ ಸ್ವಾಧೀನ ವಿಷಯದಲ್ಲಿ ಸದ್ಯದ ಅಗತ್ಯಗಳನ್ನಷ್ಟೇ ಪರಿಗಣಿಸದೇ, ಭವಿಷ್ಯದ ಪೀಳಿಗೆಯ ಹಿತಾಸಕ್ತಿಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ ಎಂದೂ ಲೂಯಿಸ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT