ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ವಲಯಕ್ಕೆ ವಿದ್ಯುತ್ ರಜೆ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಇರುವ ಹಿನ್ನೆಲೆಯಲ್ಲಿ ನಗರದ ಏಳು ಕೈಗಾರಿಕಾ ವಲಯಗಳಿಗೆ ಸರದಿ ಪ್ರಕಾರ ವಾರಕ್ಕೊಮ್ಮೆ ವಿದ್ಯುತ್ ರಜೆ ಘೋಷಿಸಲು ಸರ್ಕಾರ ನಿರ್ಧರಿಸಿದ್ದು, ಕೈಗಾರಿಕಾ ಸಂಘಟನೆಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ.

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಇಲಾಖೆಯ ಹಿರಿಯ ಅಧಿಕಾರಿಗಳು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ, ಸಣ್ಣ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಒಂದೆರಡು ದಿನಗಳಲ್ಲಿ ಹೊಸ ಪದ್ಧತಿ ಜಾರಿಗೆ ಬರಲಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕರಂದ್ಲಾಜೆ, ಮಹಾರಾಷ್ಟ್ರ, ಗುಜರಾತ್‌ನಲ್ಲಿ ಜಾರಿಯಲ್ಲಿರುವ ಹಾಗೆ ಇಲ್ಲಿಯೂ ಕೈಗಾರಿಕೆಗಳಿಗೆ ಸರದಿಯಲ್ಲಿ ವಿದ್ಯುತ್ ರಜೆ ನೀಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ನಗರದಲ್ಲಿ ಮಾತ್ರ ಇದನ್ನು ಜಾರಿ ಮಾಡಲಾಗುತ್ತಿದ್ದು, ಇದರ ಸಾಧಕ-ಬಾಧಕಗಳನ್ನು ನೋಡಿಕೊಂಡು ಬರುವ ದಿನಗಳಲ್ಲಿ ರಾಜ್ಯದ ಇತರ ಕಡೆಯೂ ಜಾರಿ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ತಿಂಗಳ ಕಾಲ ಈ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಆ ನಂತರವೂ ಮುಂದುವರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾದರೆ ಮತ್ತೊಮ್ಮೆ ಸಭೆ ಕರೆದು ಚರ್ಚೆ ನಡೆಸಲಾಗುವುದು. ಪ್ರತಿ ದಿನ ಒಂದೊಂದು ಕೈಗಾರಿಕಾ ವಲಯದಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು. ಉಳಿದ ದಿನಗಳಲ್ಲಿ ದಿನವಿಡೀ ವಿದ್ಯುತ್ ಪೂರೈಸಲಾಗುವುದು. ಇದರಿಂದ ಏಳೂ ವಲಯಗಳಲ್ಲಿ ಸರದಿ ಪ್ರಕಾರ ಒಂದೊಂದು ದಿನ  ಒಂದೊಂದು ಕಡೆ ರಜೆ ಇರುತ್ತದೆ. ಆಯಾ ದಿನದಂದು ಅಲ್ಲಿ ಕೈಗಾರಿಕಾ ಘಟಕಗಳು ಸ್ಥಗಿತಗೊಳ್ಳಲಿವೆ ಎಂದು ಅವರು ಹೇಳಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಜೆ.ಆರ್.ಬಂಗೇರ ಮಾತನಾಡಿ, `ಸರ್ಕಾರದ ಈ ಕ್ರಮಕ್ಕೆ ನಮ್ಮ ಬೆಂಬಲವಿದೆ. ವಾರದಲ್ಲಿ ಒಂದು ದಿನ ವಿದ್ಯುತ್ ಕಡಿತ ಮಾಡಿದರೂ, ಉಳಿದ ದಿನಗಳಲ್ಲಿ ನಿರಂತರವಾಗಿ ಪೂರೈಕೆ ಮಾಡುವ ಭರವಸೆ ನೀಡಿರುವುದರಿಂದ ಅನುಕೂಲವಾಗಲಿದೆ~ ಎಂದರು.

 ವಿದ್ಯುತ್ ಕಡಿತದಿಂದ ಶೇ 60ರಿಂದ 70ರಷ್ಟು ನಷ್ಟವಾಗುತ್ತಿದೆ. ಸರದಿ ಪ್ರಕಾರ ವಾರಕ್ಕೆ ಒಮ್ಮೆ ರಜೆ ಘೋಷಿಸಿ, ಉಳಿದ ದಿನಗಳಲ್ಲಿ ವಿದ್ಯುತ್ ನೀಡುವುದರಿಂದ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ತಿಳಿಸಿದರು.
 
ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಇದನ್ನು ಜಾರಿ ಮಾಡಲಾಗುತ್ತಿದೆ. ಉಳಿದ ಕಡೆಯೂ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಮೀಮ್ ಬಾನು, ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT