ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ಹರಾಜಿಗೆ ಸವಾಲು

Last Updated 25 ಆಗಸ್ಟ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: `ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮರುಪಾವತಿಸದಿರುವ ರೈತರ ಆಸ್ತಿ-ಪಾಸ್ತಿಯನ್ನು ಹರಾಜು ಹಾಕಲು ಸಿದ್ಧವಿರುವಂತೆಯೇ ಬಂಡವಾಳಶಾಹಿಯ ಹಿಡಿತದಲ್ಲಿರುವ ಕೈಗಾರಿಕೆಗಳನ್ನು ಹರಾಜು ಹಾಕಲಿ~ ಎಂದು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ಸವಾಲು ಹಾಕಿದರು.

ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಸಂಘಗಳ ಒಕ್ಕೂಟವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹಕಾರಿಗಳಿಗೆ ನೇರ ತೆರಿಗೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಹಕಾರ ಸಂಸ್ಥೆಗಳು ಗಳಿಸುವ ಲಾಭಕ್ಕೂ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಸಂಸ್ಥೆಗಳ ಮೇಲೆ ಗದಾಪ್ರಹಾರ ಮಾಡುತ್ತಿದೆ. ಇದರೊಂದಿಗೆ ಸಂಗ್ರಹವಾದ ಠೇವಣಿಯ ಮೇಲೂ ಬಡ್ಡಿ ವಿಧಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ತನ್ನ ನಿಲುವನ್ನು ಬದಲಾಯಿಸಬೇಕು~ ಎಂದು ಆಗ್ರಹಿಸಿದರು.

ಇಡೀ ದೇಶದ ಅಭಿವೃದ್ಧಿ ಸಹಕಾರಿ ಕ್ಷೇತ್ರದ ಮೇಲೆ ನಿಂತಿದೆ ಎಂಬ ಗಾಂಧೀಜಿ ಅವರ ತತ್ವವನ್ನು ಕೇಂದ್ರ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯಿಸಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡುವ ಮನ್ನಣೆಯನ್ನು ಸಹಕಾರಿ ಸಂಘಗಳಿಗೆ ನೀಡುತ್ತಿಲ್ಲ~ ಎಂದು ಆರೋಪಿಸಿದರು.

`ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಸಹಕಾರಿ ಬ್ಯಾಂಕುಗಳು ಹೈನುಗಾರಿಕೆ, ವ್ಯವಸಾಯ ಕ್ಷೇತ್ರಗಳಿಗೆ ಹಣ ಒದಗಿಸದೇ ಪ್ರತಿಭಟನೆ ನಡೆಸಲಿವೆ. ಕೈಗಾರಿಕೋದ್ಯಮಿಗಳ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳ ಸದ್ದಿಲ್ಲದೇ ಮನ್ನಾ ಮಾಡುವಂತೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಅವಿರತ ಶ್ರಮಿಸುತ್ತಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು~ಎಂದು ಹೇಳಿದರು.

`ತೆರಿಗೆ ವಿಷಯದಲ್ಲಿ ಕೇಂದ್ರ ಸರ್ಕಾರ ತಳೆದಿರುವ ತಾರತಮ್ಯ ಧೋರಣೆಯನ್ನು ಖಂಡಿಸುವ ಸಲುವಾಗಿ ಸಹಕಾರಿ ಸಂಘದ ಸದಸ್ಯರು ಒಟ್ಟುಗೂಡಬೇಕು. ಈ ನಿಟ್ಟಿನಲ್ಲಿ ಮತ್ತೊಂದು ಚಳವಳಿ ನಡೆಯಬೇಕು~ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, `ಸಹಕಾರ ಕ್ಷೇತ್ರವೇ ಚಳವಳಿಯ ಆಧಾರ ಮೇಲೆ ರೂಪುಗೊಂಡಿದೆ. ಪ್ರಸ್ತುತ ಇದರ ಅಸ್ತಿತ್ವವನ್ನು ಉಳಿಸುವ ಸಲುವಾಗಿ ಮತ್ತೊಂದು ಚಳವಳಿ ನಡೆಯಬೇಕು. ಈ ನಿಟ್ಟಿನಲ್ಲಿ ಸಹಕಾರಿಗಳ ಸಹಕಾರ ಅಗತ್ಯ~ ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ರಾವ್ ಸಾಹೇಬ್ ಪಾಟೀಲ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉಪಾಧ್ಯಕ್ಷ ಗುರುನಾಥ ಜ್ಯಾಂತಿಕರ್, ವಾಸವಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ    ಆರ್.ಪಿ.ರವಿಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT