ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗೆ ಭೂಮಿ ಕೊಡೆವು

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಬಂಡವಾಳ ಹೂಡಿಕೆ ಸಮಾವೇಶಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರೈತರು ಕೈಗಾರಿಕೆಗಳ ನಿರ್ಮಾಣಕ್ಕೆ ತುಂಡು ಭೂಮಿಯನ್ನು ಕೊಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ನಡೆಸಿದ ಪ್ರತಿಭಟನಾ ಜಾಥಾದಲ್ಲಿ ಈ ವಿಷಯ ತಿಳಿಸಿದರು.

ನಗರ ರೈಲು ನಿಲ್ದಾಣದಿಂದ ಜಾಥಾ ಹೊರಟ ಪ್ರತಿಭಟನಾಕಾರರು ಆನಂದರಾವ್ ವೃತ್ತ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನ ತಲುಪಿ ಧರಣಿ ಕುಳಿತರು. 3 ಗಂಟೆಯಾದರೂ ಸಂಬಂಧಪಟ್ಟ ಸಚಿವರು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ರೈತರನ್ನು ಕೆ.ಆರ್.ವೃತ್ತದ ಬಳಿ ಪೊಲೀಸರು ಅಡ್ಡಗಟ್ಟಿದರು.

ಈ ವೇಳೆ ಸ್ಥಳಕ್ಕೆ ಬಂದ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ `ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಜೂ. 16ರಂದು ಮುಖ್ಯಮಂತ್ರಿಗಳೊಡನೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ~ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿ ಹಿಂಪಡೆದರು.

ಇದಕ್ಕೂ ಮೊದಲು ಮಾತನಾಡಿದ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, `2009ರಲ್ಲಿ ನೆರೆ ಹಾವಳಿಯಿಂದ ಅತಂತ್ರರಾಗಿದ್ದ ರೈತರು ಈಗ ಭೀಕರ ಬರಗಾಲಕ್ಕೆ ತುತ್ತಾಗಿದ್ದಾರೆ.

ರಸಗೊಬ್ಬರ, ಬಿತ್ತನೆ ಬೀಜ, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಹೇಗೆ ಸಾಧ್ಯ~ ಎಂದು ಪ್ರಶ್ನಿಸಿದರು.

`ಬರಪೀಡಿತ ಪ್ರದೇಶದ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಪ್ರಸಕ್ತ ಸಾಲಿನ ಬೆಳೆಗೆ ಬಡ್ಡಿರಹಿತ ಹೊಸ ಸಾಲವನ್ನು ನೀಡಬೇಕು. ಶೇ 50 ರಷ್ಟು ರಿಯಾಯಿತಿ ದರದಲ್ಲಿ ರಸಗೊಬ್ಬರ ಪೂರೈಕೆ ಮಾಡಬೇಕು~ ಎಂದು ಪಾಟೀಲ್ ಒತ್ತಾಯಿಸಿದರು.

`ಬರಪೀಡಿತ ಪ್ರದೇಶದ ಬವಣೆ ತೀರಿಸಲು ಹಲವಾರು ಒತ್ತಾಯಗಳನ್ನಿಟ್ಟು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ, ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಬಿತ್ತನೆ ಬೀಜ ಕೇಳಿದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿತು. ಈ ಕೃತ್ಯ ಎಸಗಿದ ಹಾವೇರಿ ಪೊಲೀಸರನ್ನು ಕೂಡಲೇ ಬಂಧಿಸಿ ರೈತರ ಹೋರಾಟಕ್ಕೆ ನ್ಯಾಯ ಒದಗಿಸಬೇಕು~ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ `ಕೆಆರ್‌ಎಸ್ ಬಳಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರಿಂದ ಅಣೆಕಟ್ಟಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಲವು ಬಾರಿ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ~ ಎಂದು ಆರೋಪಿಸಿದರು.

`ಕೋಲಾರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬರಗಾಲ, ನೀರಿನ ಬವಣೆ ಹಾಗೂ ಅಂತರ್ಜಲ ಕುಸಿತದಿಂದ ಗ್ರಾಮಸ್ಥರು ತತ್ತರಿಸಿ ಹೋಗಿದ್ದಾರೆ. ಕೂಡಲೇ ಡಾ. ಪರಮಶಿವಯ್ಯ ಅವರ ವರದಿಯನ್ವಯ ಹೊಸ ತಂತ್ರಜ್ಞಾನಗಳ ಮೂಲಕ ನೀರು ಪೂರೈಕೆ ಮಾಡುವ ಕೆಲಸ ಮಾಡಬೇಕು~ ಎಂದರು.

ಸಂಚಾರ ಸ್ಥಗಿತ: ರೈತರು ನಡೆಸಿದ ಜಾಥಾದಿಂದ ನಗರದ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡು ವಾಹನ ಸವಾರರು ಪರದಾಡಬೇಕಾಯಿತು. ಮೆಜೆಸ್ಟಿಕ್, ಕೆ.ಆರ್ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ನೃಪತುಂಗ ರಸ್ತೆ, ಶೇಷಾದ್ರಿ ರಸ್ತೆ, ಅರಮನೆ ರಸ್ತೆ, ಅಂಬೇಡ್ಕರ್ ವೀದಿ, ಆನಂದ್ ರಾವ್ ವೃತ್ತ, ನಗರ ರೈಲು ನಿಲ್ದಾಣದ ಸುತ್ತ ಮುತ್ತಲ ಪ್ರದೇಶಗಳಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT