ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆಟುಕುವ ದರದಲ್ಲಿ ಎಲ್ಲ ಕುಟುಂಬಗಳಿಗೂ ವಿದ್ಯುತ್ - ಪ್ರಧಾನಿ

Last Updated 9 ಅಕ್ಟೋಬರ್ 2012, 9:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂದಿನ ಐದು ವರ್ಷಗಳಲ್ಲಿ ದೇಶದ ಎಲ್ಲ ಕುಟುಂಬಗಳಿಗೂ ಕೈಗೆಟುಕುವ ದರದಲ್ಲಿ ವಿದ್ಯುತ್ ಪೂರೈಸುವ ಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಮಂಗಳವಾರ ಹೇಳಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮಂಗಳವಾರ ಆಯೋಜಿಸಿದ್ದ ಇಂಧನ ಮೂಲಗಳು ಎಂಬ ವಿಷಯ ಕುರಿತಾದ ಅಂತರರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಸಿಂಗ್ ಅವರು `ಮುಂದಿನ ಐದು ವರ್ಷಗಳಲ್ಲಿ ದೇಶದ ಪ್ರತಿಮನೆಗೂ ವಾರದ ಇಪತ್ತ್ನಾಲ್ಕು ಗಂಟೆ (24x7)  ಕೈಗೆಟುಕುವ ದರದಲ್ಲಿ ವಿದ್ಯುತ್ ಪೂರೈಸುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ~ ಎಂದು ಹೇಳಿದರು.

`ಸದ್ಯ ದೇಶದ 190 ದಶಲಕ್ಷ ಗ್ರಾಮೀಣ ಕುಟುಂಬಗಳ ಪೈಕಿ ಸುಮಾರು ಶೇ.12 ರಷ್ಟು ಗ್ರಾಮೀಣ ಕುಟುಂಬಗಳು ಮಾತ್ರ ಅಡುಗೆ ಅನಿಲ ಬಳಕೆ ಮಾಡುತ್ತಿದ್ದು, ಉಳಿದ ಎಲ್ಲ ಕುಟುಂಬಗಳ ಅಡುಗೆ ಅನಿಲ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ~ ಎಂದು ತಿಳಿಸಿದರು.
 
`ದೇಶದ ಎಲ್ಲ 240 ದಶಲಕ್ಷ ಕುಟುಂಬಗಳಿಗೆ ಪ್ರತಿ ವರ್ಷಕ್ಕೆ ಆರು ಅಡುಗೆ ಅನಿಲ ಸಿಲಿಂಡರ್‌ಗಳ ಮಿತಿ ಹಾಕಿ ಹಂಚಿಕೆ ಮಾಡಿದರೂ ಪ್ರತಿ ವರ್ಷಕ್ಕೆ ಸುಮಾರು 25 ದಶಲಕ್ಷ ಟನ್‌ಗಳಷ್ಟು ಅಡುಗೆ ಅನಿಲದ ಅಗತ್ಯವಿದೆ~ ಎಂದು ಹೇಳಿದರು.

`ದೇಶದ ಇಂಧನ ಅಗತ್ಯ ಪೂರೈಕೆ ನಿಟ್ಟಿನಲ್ಲಿ ಮಿತಿ ನಿರ್ವಹಣೆ ಮಾಡುವ ಅಗತ್ಯವಿದೆ. ಆದರೆ ಎಲ್ಲ ಗ್ರಾಮೀಣ ಕುಟುಂಬಗಳಿಗೂ ಅಡುಗೆ ಅನಿಲ ವಿತರಣಾ ಜಾಲವನ್ನು ವಿಸ್ತರಿಸಬೇಕಾದರೆ ಸಮಯ ತೆಗೆದುಕೊಳ್ಳಬಹುದು~ ಎಂದರು.

ಉದ್ದೇಶಿತ ವ್ಯಕ್ತಿಗಳಿಗೆ ರಿಯಾಯತಿ ಕೊಡುವ ಪ್ರಕ್ರಿಯೆ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿದ್ದು ಇದರಿಂದ ಅವರು ಕೈಗೆಟುಕುವ ದರದಲ್ಲಿ ವಿದ್ಯುತ್ ಹಾಗೂ ಅಡುಗೆ ಅನಿಲ ಪಡೆಯಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ರಿಯಾಯಿತಿ ಹಣವನ್ನು ರವಾನಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಿಂಗ್ ಹೇಳಿದರು.

`ರಿಯಾಯತಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುವ ಪ್ರಾಯೋಗಿಕ ಕಾರ್ಯಯೋಜನೆಯನ್ನು ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು,  ಮನೆಯಲ್ಲಿರುವ ಕುಟುಂಬ ಸದಸ್ಯರೊಬ್ಬರ ಬಯೋಮೆಟ್ರಿಕ್ ದೃಢೀಕರಣ ಪಡೆದುಕೊಂಡು ಸುಮಾರು 27,000 ಕುಟುಂಬಗಳಿಗೆ ರಿಯಾಯತಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಇದನ್ನು ಮುಂದಿನ ಹಂತದಲ್ಲಿ ದೇಶದಾದ್ಯಂತ ವಿಸ್ತರಿಸಲು ಯೋಜನೆ ತಯಾರಿಸಲಾಗಿದೆ~ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT