ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಚಳಕದ ಕಛೇರಿ; ನಾದ ಝರಿ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಎಸ್.ಎ. ಶಶಿಧರ್ ವೇಣುವಾದಕ, ವಾದಕ, ಬೋಧಕ ಹಾಗೂ ವ್ಯವಸ್ಥಾಪಕರಾಗಿ ಮಾನಿತರು. ಅವರ ಷಷ್ಟ್ಯಬ್ಧಿ ಸಂದರ್ಭದಲ್ಲಿ ಶಿಷ್ಯರು, ಅಭಿಮಾನಿಗಳು ಸೇರಿ ಅವರಿಗೆ ಒಂದು ಆತ್ಮೀಯ ಸನ್ಮಾನ ಸಮಾರಂಭವನ್ನು ಇತ್ತೀಚೆಗೆ ಏರ್ಪಡಿಸಿದ್ದರು. ಹಿರಿಯ ವಿದ್ವಾಂಸ ಡಾ. ಎನ್. ರಮಣಿ ಅವರು ಎಲ್ಲರ ಪರವಾಗಿ ಶಶಿಧರ್ ಹಾಗೂ ನಾಗರತ್ನ ಶಶಿಧರ್ ದಂಪತಿಯನ್ನು ಗೌರವಿಸಿದರು.

ನಂತರ ನಡೆದ ಸಂಗೀತ ಕಛೇರಿಯಲ್ಲಿ ಸಂಗೀತ ಕಳಾನಿಧಿ ಎನ್. ರಮಣಿ ಅವರ ವೇಣು ವಾದನಕ್ಕೆ ಮೈಸೂರು ನಾಗರಾಜ್, ಎಚ್.ಎಸ್. ಸುಧೀಂದ್ರ ಮತ್ತು ಜಿ.ಎಸ್. ರಾಮಾನುಜಂ ದಕ್ಷವಾಗಿ ಪಕ್ಕವಾದ್ಯ ನುಡಿಸಿದರು. ಸುಪರಿಚಿತ ಷಹನ ವರ್ಣವು ಕಾರ್ಯಕ್ರಮಕ್ಕೆ ದಿಕ್ಸೂಚಿಯಂತೆ ಮೂಡಿತು.

ಶ್ರೀಮಹಾಗಣಪತಿಂ ಕೃತಿಗೆ ಕಿರು ಸ್ವರಪ್ರಸ್ತಾರವನ್ನೂ ಮಾಡಿದರು. ಜನಪ್ರಿಯ `ಬ್ರೋಚೇವಾರೆವರುರಾ~ ಕೀರ್ತನೆ ಸಹಜವಾಗಿಯೇ ಸಭೆಗೆ ಪ್ರಿಯವಾಯಿತು. ಸರಳವಾದ ಹಿಂದೋಳ ರಾಗಕ್ಕೆ ಸ್ವಾದ ತುಂಬಿ ಆಲಾಪಿಸಿ, ಪರಿಚಿತ  `ಸಾಮಜವರಗಮನ~ವನ್ನು ಮಿತವಾಗಿ ವಿಸ್ತರಿಸಿದರು.
 
ಇಂದಿನ ರಾಗಗಳಲ್ಲಿ ರಂಜನಿ ರಾಗವು ಕಲಾವಿದರು-ಕೇಳುಗರು ಇಬ್ಬರಿಗೂ ಪ್ರಿಯವಾದುದು. ಪಂಚಮ ವರ್ಜ್ಯ ಔಡವ ರಾಗ. ರಂಜನಿಯನ್ನು ರಮಣಿಯವರು ಆಪ್ಯಾಯಮಾನವಾಗಿ ನುಡಿಸಿದ್ದು ಕೀರ್ತನೆಗೆ ಮುನ್ನುಡಿಯಾಯಿತು.
 
ಈ ರಾಗಕ್ಕೆ ಜನಪ್ರಿಯತೆಯನ್ನು ತಂದುಕೊಟ್ಟ ತ್ಯಾಗರಾಜರ ದುರ್ಮಾರ್ಗಚರ  ಕೃತಿಯನ್ನು ಆಯ್ದರು. ಈ ರಚನೆಯಲ್ಲಿ ತ್ಯಾಗರಾಜರು ತಾನು ದುಷ್ಟ ಜನರನ್ನು, ಸ್ವಾರ್ಥಿಗಳನ್ನು ಹೊಗಳುವುದಿಲ್ಲ. ಶ್ರೀರಾಮನೇ ತಮ್ಮ ಸಂಪದ ಸರ್ವಸ್ವ! ದುರ್ಮಾರ್ಗಿಗಳನ್ನು ನೀವೇ ನನ್ನ ಸ್ವಾಮಿ ಎನ್ನಲಾರೆ ಎಂಬ ಭಾವವನ್ನು ವ್ಯಕ್ತಗೊಳಿಸಿದ್ದಾರೆ.

ಈ ಕೃತಿಯ ಉದ್ದಕ್ಕೂ ರಮಣಿಯವರು ತುಂಬಿದ ರಾಗಭಾವ ಅನುಪಮವಾದುದು. ಘನವಾದ ಶಂಕರಾಭರಣ ರಾಗವನ್ನು ವಿಸ್ತರಿಸಿದರು. ತ್ಯಾಗರಾಜರ ಸ್ವರರಾಗ ಸುಧಾ ಹಿತಮಿತವಾಗಿ ವಿಸ್ತರಿಸಿದರು.  ವೆಂಕಟಾಚಲ ನಿಲಯಂ - ಸಹ ಜನಪ್ರಿಯವಾದುದೇ. ಮಾಧುರ್ಯದ ನಾದ, ಪ್ರೌಢ ನಿರೂಪಣೆ. ಪಕ್ಕವಾದ್ಯದವರು ತಮ್ಮ ಕೈಚಳಕದಿಂದ ಕಛೇರಿಯ ಯಶಸ್ಸಿನ ಭಾಗವಾದರು.

ಗುರುವಂದನೆ
ಗುರು ಕೆ.ಎನ್. ಕೃಷ್ಣಮೂರ್ತಿ ಅವರು ಹಿರಿಯ ಘಟ ವಾದಕರಾಗಿ ಮೂರು ತಲೆಮಾರಿನ ಕಲಾವಿದರಿಗೆ ಪಕ್ಕವಾದ್ಯ ನುಡಿಸಿದ್ದರು. ಶಿಕ್ಷಕರಾಗಿ ದೊಡ್ಡ ಪ್ರಮಾಣದಲ್ಲಿ ಪಾಠ ಮಾಡಿ, ಸಾಕಷ್ಟು ಜನರನ್ನು ಮೃದಂಗ, ಘಟ ವಾದ್ಯಗಳಲ್ಲಿ ತರಬೇತುಗೊಳಿಸಿದ್ದಾರೆ.

ಅವರ ಸ್ಮರಣೆಯಲ್ಲಿ ಗುರುವಂದನಾ ಸಮಿತಿ  ಪ್ರತಿ ತಿಂಗಳೂ ಒಂದು ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕೆ. ಎನ್. ಕೃಷ್ಣಮೂರ್ತಿ ಅವರ 86ನೇ ಜನ್ಮದಿನವನ್ನು ಮಲ್ಲೇಶ್ವರದ ಶ್ರೀ ಕನ್ನಿಕಾ ಪರಮೇಶ್ವರಿ ಸನ್ನಿಧಾನದಲ್ಲಿ ಬುಧವಾರ ಆಚರಿಸಲಾಯಿತು.

ತನಿ ಪಿಟೀಲು ವಾದನ ಮಾಡಿದ ನಳಿನಾ ಮೋಹನ್ ಅವರು ಬಹು ಬೇಡಿಕೆಯುಳ್ಳ ಪಕ್ಕವಾದ್ಯಗಾರರು. ಈ ಕಛೇರಿಯಲ್ಲಿ ನಳಿನಾ ಅಸಾವೇರಿ, ಕಾಶಿರಾಮಕ್ರಿಯ ಮುಂತಾದ ರಾಗಗಳಲ್ಲಿನ ಕೃತಿಗಳನ್ನು ಹಸನಾಗಿ ನುಡಿಸಿದರು. ರಾಮನಾಥಂ ಭಜೇಹಂನಲ್ಲಿ ರಾಗಭಾವ ಮುದ ಕೊಟ್ಟಿತು.
 
ತ್ಯಾಗರಾಜರ ಜನಪ್ರಿಯ ಪಂಚರತ್ನ ಕೃತಿ ಎಂದರೊ ಮಹಾನು ಭಾವುಲು - ಹಾಡಿದಂತೆ ನುಡಿಯುತ್ತಿದ್ದುದು ಕಲಾವಿದೆಯ ಅನುಭವ ಹಾಗೂ ಪ್ರೌಢತೆಯನ್ನು ತೋರಿಸಿತು. ಕ್ಷೀರ ಸಾಗರ ಕೃತಿಯಲ್ಲಿನ ಸಂಗತಿಗಳು ಭಾವಪೂರ್ಣ. ಪಾಲಿಂಚು ಕಾಮಾಕ್ಷೀ ಕೃತಿಯನ್ನು ಆಲಾಪನೆ, ನೆರವಲ್ ಹಾಗೂ ಸ್ವರ ಪ್ರಸ್ತಾರಗಳಿಂದ ಬೆಳಗಿಸಿದರು. ಆ ಮೊದಲು ನುಡಿಸಿದ  ಕಾಲಹರಣ ಸಹ ಒಂದು ಅತ್ಯುತ್ತಮ ಕೃತಿ.
 
ವಾದ್ಯದ ಮೇಲಿನ ಉತ್ತಮ ಹಿಡಿತ, ಸುನಾದ, ಸದಭಿರುಚಿಯ ನಿರೂಪಣೆಗಳಿಂದ ನಳಿನಾ ಅವರ ತನಿ ಪಿಟೀಲು ಸಭೆಯ ಗೌರವಕ್ಕೆ ಪಾತ್ರವಾಯಿತು. ಕೆ.ಕೆ. ಹರಿನಾರಾಯಣ್ ಮೇದಂಗದಲ್ಲಿ ಮತ್ತು ಕಾರ್ತಿಕ್ ಖಂಜರಿಯಲ್ಲಿ ನೆರವಾದರು.

ಮನ ತುಂಬಿದ ಯುಗಳ ಗಾಯನ
ಇತ್ತೀಚೆಗೆ ದೇವಗಿರಿ ಶ್ರೀನಿವಾಸ ದೇವಸ್ಥಾನದಲ್ಲಿ  ನಡೆದ ಯುಗಳ ಗಾಯನವು ಸಂಗೀತಾಭಿಮಾನಿಗಳನ್ನು ತನ್ಮಯಗೊಳಿಸಿತು. ಪ್ರಿಯಾ ಸಹೋದರಿಯರು (ಷಣ್ಮುಖಪ್ರಿಯ ಮತ್ತು ಹರಿಪ್ರಿಯ) ಭಕ್ತಿಭಾವ ತುಂಬಿದ ಕೃತಿಗಳನ್ನು ಹಾಡತೊಡಗಿದರು. ಜಯಮನೋಹರಿಯು ಔಡವ ಷಾಡವ ರಾಗ.

ತ್ಯಾಗರಾಜರಿಂದಲೇ ಈ ರಾಗ ಪ್ರಚುರವಾಯಿತು. ಅವರ  ಯಜ್ಞಾದುಲು ಮತ್ತು ನೀಭಕ್ತಿ ಭಾಗ್ಯಸುಧಾ ಎರಡೂ ಕೀರ್ತನೆಗಳಿಂದ ಜಯಮನೋಹರಿ ಕೇಳುಗರಿಗೆ ಪರಿಚಿತವಾಗಿದೆ. ಇವುಗಳಲ್ಲಿ ಪ್ರಿಯಾ ಸಹೋದರಿಯರು ಆಯ್ದ  ಯಜ್ಞಾದುಲು ಸುಖಮನುನಲ್ಲಿ ಕರ್ಮಠ ರಾಗದ ಭಗವದರ್ಪಣದಿಂದ ಸತ್ಕರ್ಮಗಳನ್ನು ಆಚರಿಸುವುದೇ ಮೇಲು! ಭಕ್ತಿ ದೂರವಾದ ಕರ್ಮವೆಲ್ಲವೂ ಅರ್ಥವಿಹೀನ - ಎಂದು ತ್ಯಾಗರಾಜರು ಭಗವಂತನಲ್ಲಿ ಭಕ್ತಿ ಪ್ರಾಮಾಣ್ಯವನ್ನು ನಿರೂಪಿಸಿದ್ದಾರೆ.

ಸಂಗೀತ-ಸಾಹಿತ್ಯಗಳೆರಡೂ ಬೆಳಗುವಂತೆ ಪ್ರಿಯಾ ಸಹೋದರಿಯರು ಹಾಡಿದರು. ಮುಂದಿನದು ಕೈವಾರ ನಾರಾಯಣಪ್ಪನವರ ಒಂದು ಅಪರೂಪ ರಚನೆ. ಕರ್ನಾಟಕ ಸಂಗೀತದ ಭವ್ಯ ಕೃತಿಗಳಲ್ಲಿ ಒಂದಾದ  ಶೇಷಾಚಲ ನಾಯಕಂ  ನಾದಪೂರ್ಣವಾಗಿ ಅರಳಿಸಿದರು. ಹಿತವಾದ ಕಂಠ, ಶಾಸ್ತ್ರೀಯ ಚೌಕಟ್ಟು, ಉತ್ತಮ ಆಯ್ಕೆಗಳಿಂದ ಯುಗಳ ಗಾಯನ ಕೇಳುಗರಿಗೆ ಖುಷಿ ಕೊಟ್ಟಿತು.

ಶ್ರೀರಾಮ ಲಲಿತಕಲಾ ಮಂದಿರದ ಆಶ್ರಯದಲ್ಲಿ ವಿದುಷಿ ಜಿ.ವಿ. ರಂಗನಾಯಕಿ ಅವರ ಸ್ಮರಣಾರ್ಥ ನಡೆದ ಗಾಯನಕ್ಕೆ ಪಿಟೀಲಿನಲ್ಲಿ ಎಂ.ಎ. ಕೃಷ್ಣಸ್ವಾಮಿ, ಮೃದಂಗದಲ್ಲಿ ಸ್ಕಂದ ಸುಬ್ರಹ್ಮಣ್ಯ ಹಾಗೂ ಖಂಜರಿಯಲ್ಲಿ ಬಿ.ಎಸ್. ಪುರುಷೋತ್ತಮ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT