ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈತೋಟ,ತಾರಸಿ ತೋಟ ಅಭಿವೃದ್ಧಿಗೆ ಯೋಜನೆ

Last Updated 2 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಹಾಗೂ ಪಟ್ಟಣ ಪ್ರದೇಶದ ನಾಗರಿಕರಿಗೆ ಕೈತೋಟ ಮತ್ತು ತಾರಸಿ ತೋಟದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಅಗತ್ಯ ತರಬೇತಿ, ಪರಿಕರ ಹಾಗೂ ಮೂಲ­ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಇಲಾ­ಖೆಯು ‘ಕೈತೋಟ ಹಾಗೂ ತಾರಸಿ ತೋಟಗಳ ಉತ್ತೇಜನ’ ಯೋಜನೆ­ಯನ್ನು ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಿದೆ.

ನಗ­ರ­­ಪ್ರದೇಶಗಳಲ್ಲಿ ಕೈತೋಟಗಳು ಕಣ್ಮರೆ­ಯಾಗುತ್ತಿವೆ. ಹಣ್ಣು ಹಾಗೂ ತರ­ಕಾರಿಗೆ ಮಾರುಕಟ್ಟೆಗಳನ್ನೇ ಅನುಸರಿ­ಸಬೇ­ಕಾದ ಸ್ಥಿತಿ ಇದೆ. ಇದನ್ನು ತಪ್ಪಿಸಿ, ಸಮತೋಲನ ಆಹಾರವನ್ನು ಅವರವರ ಮನೆಯಲ್ಲಿಯೇ ಪಡೆಯಲು ನೆರವಾ­ಗುವುದು ಯೋಜನೆಯ ಆಶಯ. ಇಲಾ­ಖೆ­ಯು ರಾಷ್ಟ್ರೀಯ ಕೃಷಿ ವಿಕಾಸ ಯೋಜ­ನೆಯಡಿ ಕಾರ್ಯಕ್ರಮ (ಆರ್‌ಕೆವಿವೈ) ಅನುಷ್ಠಾನ­ಗೊಳಿಸುತ್ತಿದೆ.

2018ರವರೆಗೆ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಲಾ­ಗಿದೆ. ಪ್ರಸಕ್ತ ಸಾಲಿನಲ್ಲಿ ಇದಕ್ಕಾಗಿ ₨ 7.50 ಕೋಟಿ ಅನುದಾನ ನೀಡಲಾ­ಗಿದೆ. ಒಂದು ಸಾವಿರ ಆಸಕ್ತ ಫಲಾನುಭ­ವಿಗಳ ಸಮೂಹ ರಚಿಸಿ, ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊ­ಳ್ಳಬೇಕು ಎಂದು ಸೂಚಿಸಲಾಗಿದೆ. ಪ್ರತಿ ಜಾಗೃತಿ ಕಾರ್ಯಕ್ರಮಕ್ಕೆ ₨ 25 ಸಾವಿರ ನಿಗದಿಪಡಿಸಲಾಗಿದೆ.

ಯೋಜನೆಯ ಉದ್ದೇಶಗಳು
ಕೈತೋಟ ಹಾಗೂ ತಾರಸಿ ತೋಟ­ದಲ್ಲಿ ತರಕಾರಿ ಬೆಳೆಗಳನ್ನು ಸ್ವತಃ ಸಾವಯವ ಪದ್ಧತಿಯಲ್ಲಿ ಬೆಳೆಯಲು ತಾಂತ್ರಿಕ ಮಾರ್ಗದರ್ಶನ ಹಾಗೂ ಉತ್ತೇಜಿ­ಸುವುದು. ಎರೆಹುಳು ಗೊಬ್ಬರ, ಕಾಂಪೋಸ್ಟ್‌ ಮೊದಲಾ­ದವುಗಳನ್ನು ತಯಾರಿಸಿಕೊಂಡು ಮರುಬಳಕೆ ಮಾಡುವುದು, ಮಳೆ ನೀರು ಸಂಗ್ರಹ ಮತ್ತು ಅಡುಗೆ ಮನೆಯಲ್ಲಿ ಬಳಕೆಯಾದ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ಕೊಡುವುದು.

ಕುಟುಂಬದ ಸದಸ್ಯರು ಅದರಲ್ಲಿಯೂ ಮಹಿಳೆ­ಯರು ಮತ್ತು ಮಕ್ಕಳಲ್ಲಿ ಕೈತೋಟ, ತಾರಸಿ ತೋಟಗಳಲ್ಲಿ ಆಸಕ್ತಿ ಮೂಡಿಸಿ, ದೈಹಿಕ, ಮಾನಸಿಕ ಆರೋಗ್ಯದ ಪ್ರಾಮುಖ್ಯತೆ, ಸಮತೋಲನ ಆಹಾರ, ಒತ್ತಡ ನಿರ್ವಹಣೆ ಹಾಗೂ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವುದು. ಮಳೆ ನೀರು ಸಂಗ್ರಹ, ಮಣ್ಣಿಲ್ಲದೇ ಪೋಷಕಾಂಶ­ವುಳ್ಳ ನೀರಿನಲ್ಲಿ ಗಿಡ ಬೆಳೆಸುವುದು, ಗಿಡಗಳನ್ನು ಗಾಳಿ ಮತ್ತು ತೇವಾಂಶ ವಾತಾ­ವರಣದಲ್ಲಿ ಮಣ್ಣಿಲ್ಲದೇ ಬೆಳೆ­ಯವ ಪದ್ಧತಿ ಮತ್ತಿತರ ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.

ಬೆಂಗಳೂರು ನಗರ ಜಿಲ್ಲೆಯ ಕೆಂಗೇರಿ ತೋಟಗಾರಿಕೆ ಕಚೇರಿ, ಲಾಲ್‌ಬಾಗ್‌ ತರಬೇತಿ ಕೇಂದ್ರ, ಜೈವಿಕ ಕೇಂದ್ರ, ಹುಳಿಮಾವು, ಕಬ್ಬನ್‌­ಪಾರ್ಕ್‌ನಲ್ಲಿರುವ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಮಂಗಲ ತೋಟಗಾರಿಕೆ ಕ್ಷೇತ್ರದಲ್ಲಿ ಮತ್ತು ಉಳಿದ ಜಿಲ್ಲೆಗಳಲ್ಲಿ ಇಲಾಖೆಯ ನರ್ಸರಿ ಹಾಗೂ ಕ್ಷೇತ್ರಗಳಲ್ಲಿ ಪ್ರಾತ್ಯಕ್ಷಿಕೆ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಇದಲ್ಲದೇ, ಸರ್ಕಾರಿ ಕಟ್ಟಡ, ಸರ್ಕಾರಿ ಶಾಲೆಗಳಲ್ಲಿ ಸಂಬಂಧಿಸಿದವರಿಂದ ಒಪ್ಪಿಗೆ ಪಡೆದು ಪ್ರಾತ್ಯಕ್ಷಿಕೆ ಕೈಗೊಳ್ಳ­ಬಹುದು. ಸರ್ಕಾರಿ ಸ್ಥಳಗಳಲ್ಲಿ ಪ್ರತಿ ಪ್ರಾತ್ಯಕ್ಷಿಕೆಗೆ ₨ 50 ಸಾವಿರ, ಫಲಾನು­ಭವಿ­ಗಳ ಸ್ಥಳದಲ್ಲಿಪ್ರತಿ ಖಾಸಗಿ ಪ್ರಾತ್ಯಕ್ಷಿ­ಕೆಗೆ ಒಟ್ಟು ವೆಚ್ಚದ ಶೇ 40ರಷ್ಟು ಅಂದರೆ ಗರಿಷ್ಠ ₨ 20 ಸಾವಿರ ಸಹಾಯ­ಧನ ನೀಡಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕೈತೋಟ, ತಾರಸಿ ತೋಟಗಳಲ್ಲಿ ಕುಂಡ/ಟ್ರೇಗಳಲ್ಲಿ ತರಕಾರಿ ಗಿಡಗಳನ್ನು ಬೆಳಸುವ ಬಗ್ಗೆ ಮಾಹಿತಿ ಒದಗಿಸಲಾ­ಗುವುದು. ಬಿತ್ತನೆಬೀಜ ಮಾಡುವುದು, ಸಸಿಗಳನ್ನು ನಾಟಿ ಮಾಡುವುದು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ, ಕೀಟ, ರೋಗಗಳ ನಿವಾರಣೆ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾ­ಗುವುದು. ಸಂಪನ್ಮೂಲ ಸಂಸ್ಥೆಯ ತರ­ಬೇ­­ತು­ದಾರರು ತರಬೇತಿ ನೀಡುತ್ತಾರೆ. ಪ್ರತಿ ಫಲಾನುಭವಿಗೆ ಬಯೋಮಿಕ್ಸ್‌ (ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ ಹಾಗೂ ಜೈವಿಕ ನಿಯಂತ್ರಕ), ತರಕಾರಿ ಸಸಿಗಳು/ ಬೀಜಗಳು, ಸಲಕರಣೆಗಳು ಹಾಗೂ ಪಾಟಿಂಗ್‌ ಮಿಶ್ರಣ ಒಳ­ಗೊಂಡ ಕಿರುಚೀಲ (ಮಿನಿ ಕಿಟ್‌)ವನ್ನು ಶೇ 50ರಷ್ಟು ಸಹಾಯಧನದಲ್ಲಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT