ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳ ಚಿತ್ತಾಪಹಾರಿ ಕಲಾಕೃತಿಗಳು

Last Updated 21 ನವೆಂಬರ್ 2011, 7:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವರು ಬ್ರಶ್ ಹಿಡಿದವರಲ್ಲ, ಬಣ್ಣ ಬಳಿದವರಲ್ಲ, ಚಿತ್ರಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದವರಲ್ಲ. ಆದರೆ ಚಿತ್ತಾಪಹಾರಿ ಚಿತ್ರಗಳನ್ನು ಅವರು ಬಿಡಿಸಿದ್ದಾರೆ. ಅವರೆಲ್ಲ ಧಾರವಾಡ, ಬೆಂಗಳೂರು, ಹಾಗೂ ಮೈಸೂರಿನ ಕೈದಿಗಳು. ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಡೆಯುತ್ತಿರುವ `ಜೈಲಿನಿಂದ ಜೈಲಿಗೆ ರಂಗಯಾತ್ರೆ~ಯಲ್ಲಿ ಅನೇಕ ಕೈದಿಗಳು ಬಿಡಿಸಿದ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ.

ಧಾರವಾಡದ ಜೈಲಿನ ಕೈದಿ ರಾಧಾಕೃಷ್ಣ ಗಣಿ ಕುರಿತು ಚಿತ್ರ ಬಿಡಿಸಿದ್ದಾರೆ. `ಗಣಿ ಲೂಟಿಯಿಂದಾಗಿ ಕಾಡು ನಾಶವಾಯಿತು. ಇದರಿಂದ ಪರಿಸರಕ್ಕೆ ಹಾನಿಯಾಯಿತು. ಇದು ನನ್ನನ್ನು ಕಾಡುತ್ತಿತ್ತು. ಹೀಗಾಗಿ ಗಣಿ ಕುರಿತು ಚಿತ್ರ ಬಿಡಿಸಿದೆ~ ಎನ್ನುತ್ತಾರೆ. ಪರಶುರಾಮ ಮೊರಬ, `ಬುದ್ಧನ ಚಿತ್ರ ಬಿಡಿಸಿರುವೆ. ಶಾಂತಿಪ್ರಿಯನಾದ ಬುದ್ಧ ಕಾಡುತ್ತಿದ್ದ.

ಹೀಗಾಗಿ ಆತನ ಚಿತ್ರ ಬಿಡಿಸಿದೆ~ ಎಂದರು. ನಿಸರ್ಗ ಕುರಿತು ಚಿತ್ರ ಬಿಡಿಸಿದ ಬಸವರಾಜ ಒಡೆಯರಹಳ್ಳಿ, ಕವನಗಳನ್ನು ಬರೆಯುವ ಹವ್ಯಾಸವಿದೆ. ನಿಸರ್ಗದ ರಮಣೀಯತೆಯನ್ನು ಚಿತ್ರದಲ್ಲಿ ಬಿಂಬಿಸಿದೆ. ರಾತ್ರಿ 10 ಗಂಟೆಯಿಂದ ನಸುಕಿನವರೆಗೆ ಕಲ್ಪನೆಗಳನ್ನು ಬಣ್ಣಗಳ ಮೂಲಕ ಚಿತ್ರವಾಗಿಸಿದೆ. ಬಣ್ಣಗಳ ಜೊತೆಗೆ ಆಟವಾಡಿದ್ದು ಅದ್ಭುತ ಅನುಭವ~ ಎಂದು ಖುಷಿಯಾಗಿ ಹೇಳಿದರು.

ಎರಡು ಚಿತ್ರಗಳನ್ನು ಬಿಡಿಸಿರುವ ಮೈಸೂರಿನ ಕೈದಿ ಅನ್ಬು, ಮೊದಲ ಬಾರಿ ಬ್ರಶ್ ಹಿಡಿದೆ. ಕ್ಯಾನ್ವಾಸ್ ಎಂದರೆ ಗೊತ್ತಿರಲಿಲ್ಲ. ಬಣ್ಣಗಳನ್ನು ಹೇಗೆ ತುಂಬಬೇಕೆಂದು ಅರಿವಿರಲಿಲ್ಲ. ಕಳೆದ 16 ವರ್ಷಗಳಿಂದ ಜೈಲಲ್ಲಿರುವೆ. ಹೀಗಾಗಿ ಸೂರ್ಯೋದಯ ನೋಡಿಯೇ ಇಲ್ಲ. ಅದು ಹೇಗಿರಬಹುದು ಎಂದು ಕಾಡುತ್ತಿತ್ತು. ಹೀಗಾಗಿ ಅದನ್ನು ಬಿಡಿಸಿದೆ~ ಎಂದರು.

ಮೈಸೂರಿನ ಇನ್ನೊಬ್ಬ ಕೈದಿ ಮಹೇಶ ಬಾಗಳಿ, `ಮೊದಲು ಪೆನ್ಸಿಲ್‌ನಲ್ಲಿ ಬರೆದೆ. ಆಮೇಲೆ ವಾಟರ್ ಕಲರ್‌ನಲ್ಲಿ ಬಿಡಿಸಿದೆ. ನಂತರ ಸ್ಕೆಚ್ ಪೆನ್ ಮೂಲಕ ಚಿತ್ರವಾಗಿಸಿದೆ. ಕೊನೆಗೆ ಕ್ಯಾನ್ವಾಸ್ ಮೇಲೆ ಅಂತಿಮವಾಗಿ ಬಿಡಿಸಿದೆ.
 
ಚಿತ್ರ ಬಿಡಿಸುವಾಗ ಊಟ, ತಿಂಡಿ, ನಿದ್ದೆ ಮರೆತೆ~ ಎಂದು ಸಂಭ್ರಮಿಸಿದರು. ಅವರೊಂದಿಗೆ ಇರುವ ನಂಜುಂಡಸ್ವಾಮಿ, `ಚಿತ್ರ ಬರೆಯುವಾಗ ಮನೆ ಕಡೆ ಲಕ್ಷ್ಯ ಇರಲಿಲ್ಲ. ಬೇರೆ ಕಡೆ ಮನಸ್ಸು ಹೋಗುತ್ತಿರಲಿಲ್ಲ.

ನಾಟಕದ ಪಾತ್ರ ಹಾಗೂ ಪೇಟಿಂಗ್ ಮಾತ್ರ ಕಾಡಿದವು~ ಎಂದರು. ಇವರೆಲ್ಲ ಚೆಂದಾಗಿ ಚಿತ್ರ ಬಿಡಿಸಲು ನೆರವಾದವರು ಗದುಗಿನ ಕಲಾವಿದ ಬಿ.ಎಸ್. ಚಳಗೇರಿ, `ಕೈದಿಗಳೊಳಗೆ ಚಿತ್ರಕಲಾವಿದನಿದ್ದಾನೆ ಎಂಬುದು ಸಾಬೀತಾಯಿತು. ಅವರೊಂದಿಗಿನ ಅನುಭವ ಅದ್ಭುತ~ ಎಂದರು.

ಈ ಕಲಾಕೃತಿಗಳನ್ನು ವೀಕ್ಷಿಸಿದ ಹಿರಿಯ ಲೇಖಕ, ಕಲಾವಿದ ಆರ್ಯ, ಸಾಂಪ್ರದಾಯಿಕ ಹಾಗೂ ಆಧುನಿಕ ಸಂವೇದನೆಗಳನ್ನು ಒಳಗೊಂಡ ಚಿತ್ರಗಳು ಗಮನ ಸೆಳೆಯುತ್ತವೆ. ಬಣ್ಣಗಳನ್ನು ಬಳಸಿದ ಆಯಾಮಗಳಲ್ಲಿ ಹತೋಟಿಯಿದೆ. ಮುಖ್ಯವಾಗಿ ಸೃಜನಶೀಲತೆ ಮೆರೆದಿದ್ದಾರೆ~ ಎಂದು ಹೆಮ್ಮೆಯಿಂದ ಹೇಳಿದರು.

ಚಿತ್ರಕಲಾವಿದ ಮಧು ದೇಸಾಯಿ, ಅದ್ಭುತವಾದ ಕಲಾಕೃತಿಗಳು ಇವು. ಅತ್ಯಂತ ಪ್ರೌಢಿಮೆಯಿಂದ ರಚಿತವಾಗಿವೆ. ಅವರಿಗೆ ಸ್ವಲ್ಪ ತರಬೇತಿ ಸಿಕ್ಕರೂ ಛಲೋ ಬಿಡಿಸಿದ್ದಾರೆ. ವರ್ಣ ಬಳಕೆಯಲ್ಲಿ ಹಿಡಿತವಿದೆ. ಪರಿಸರ, ಗಣಿ ನಾಶ, ಬುದ್ಧನ ಕುರಿತ ಕಲಾಕೃತಿಗಳು ಗಮನ ಸೆಳೆಯುತ್ತವೆ~ ಎಂದು ಸಂಭ್ರಮದಿಂದ ಹೇಳಿದರು.

ಈ ಕಲಾಕೃತಿಗಳ ಪ್ರದರ್ಶನ ಇದೇ 21ಕ್ಕೆ ಕೊನೆಯಾಗುತ್ತದೆ. ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT