ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರ ತಾತಯ್ಯಗೆ ಸಂಗೀತ ಸಮರ್ಪಣೆ

Last Updated 25 ಜೂನ್ 2012, 19:30 IST
ಅಕ್ಷರ ಗಾತ್ರ

ಸಂಗೀತ ಸರ್ವವ್ಯಾಪಿ, ಸಂಗೀತವೆಂದರೆ ಸಂತಸ, ಸಂಭ್ರಮ, ಶಾಂತಿ ಎಂದೆಲ್ಲ ಹೇಳುವುದುಂಟು. ಎಲ್ಲರನ್ನೂ ತಲುಪಲು ಸಂಗೀತ ಸಾಧನವಾಗಿ ಬಳಕೆ ಯಾಗುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ.

ಲೌಕಿಕ- ಅಲೌಕಿಕ ನಡುವಿನ ಅಂತರವನ್ನು ತಗ್ಗಿಸುವಲ್ಲಿ ಅದರ ಪಾತ್ರ ಹಿರಿದು. ಮಾನಸಿಕ ನೆಮ್ಮದಿ, ಸಂತೋಷದ ಜತೆಗೆ ಸಮಾಜದ ಒಳಿತಿಗಾಗಿ ಸಂಗೀತವನ್ನು ಬಳಸಿದ ಸಂತರು, ತತ್ವಪದಕಾರರು ನಮ್ಮಲ್ಲಿದ್ದರು. ಅಂತಹವರಲ್ಲೊಬ್ಬರು ಕೈವಾರದ ನಾರೇಯಣರು.

ತಾತಯ್ಯ ಎಂದೇ ಮನೆಮಾತಾಗಿರುವ ಕೈವಾರ ನಾರೇಯಣರು ತಮ್ಮ ನಡೆನುಡಿಗಳಿಂದಲೇ ಜನರ ಮೇಲೆ ಪ್ರಭಾವ ಬೀರಿ, ಜೀವನ ಹಸನುಗೊಳಿಸುವ ಬೋಧನೆಗಳನ್ನು ನೀಡಿದವರು. ತತ್ವಪದ, ಕೀರ್ತನೆ, ಶತಕ, ವಚನ ಮುಂತಾದ ಪ್ರಕಾರಗಳಲ್ಲಿ ಆಧ್ಯಾತ್ಮ ಸಾರವನ್ನು ನೀಡಿ ಭಜನೆ, ಕೀರ್ತನೆಗಳ ಮೂಲಕ ಜನಮಾನಸದಲ್ಲಿ ಸೇರಿಹೋದವರು.

ಎರಡು ಶತಮಾನಗಳ ಹಿಂದೆ ಬದುಕಿದ್ದು ಈಗಲೂ ಅಸಂಖ್ಯ ಭಕ್ತರ, ವಿಶೇಷವಾಗಿ ಗ್ರಾಮೀಣರ ಬದುಕಿನ ದಾರಿ ದೀಪವಾಗಿರುವ ನಾರೇಯಣರ ಬೋಧನೆಗಳನ್ನು ಸಂಗೀತದ ಮುಖೇನ ನಿರಂತರವಾಗಿ ಜನರಿಗೆ ತಲುಪಿಸುವಲ್ಲಿ ನಿರತವಾಗಿದೆ ಕೈವಾರದ ಯೋಗಿ ನಾರೇಯಣ ಮಠ. ಪ್ರತಿ ವರ್ಷ ಗುರುಪೌರ್ಣಿಮೆಯ ಸಂದರ್ಭದಲ್ಲಿ ಸಂಗೀತೋತ್ಸವ ವ್ಯವಸ್ಥೆ ಮಾಡುತ್ತ ಬಂದಿದೆ.

ಬೆಟ್ಟದ ತಪ್ಪಲಲ್ಲಿರುವ ಕೈವಾರ (ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು) ಹಲವು ದೇವಾಲಯಗಳ ತಾಣ. ಈಗ ಅದೊಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರ. ಪ್ರತಿ ದಿನವೂ ಒಂದಲ್ಲ ಒಂದು ಬಗೆಯ ಸಾಂಸ್ಕೃತಿಕ ವೈವಿಧ್ಯವೇ ಕೈವಾರದ ವಿಶೇಷ. ತಾತನವರ ಮಠದ ಆವರಣದಲ್ಲಿ ನಿತ್ಯ ಹಾಡು, ಕುಣಿತ, ಫಂಡರಿ ಭಜನೆ, ಭಜನೆ, ತತ್ವಪದ ಗಾಯನ ಎಲ್ಲವೂ ಸರ್ವೇ ಸಾಮಾನ್ಯ.

ಈ ಬಾರಿಯ ಗುರುಪೂಜಾ ಸಂಗೀತ ಮಹೋತ್ಸವ ಜುಲೈ 1 ರಿಂದ 3ರ ವರೆಗೆ. ಇದರಲ್ಲಿ ರಾಜ್ಯ ಹಾಗೂ ರಾಷ್ಟ್ರ ಖ್ಯಾತಿಯ ಸಂಗೀತಗಾರರು ಪಾಲ್ಗೊಳ್ಳಲಿದ್ದಾರೆ.
ಖ್ಯಾತ ಸಾಕ್ಸೋಫೋನ್ ವಾದಕ ಡಾ. ಕದ್ರಿ ಗೋಪಾಲನಾಥ್, ಸಂಗೀತಗಾರರಾದ ಟಿ.ಎಂ.ಕೃಷ್ಣ, ಮಲ್ಲಾಡಿ ಸಹೋದರರು, ಅರುಣಾ ಸಾಯಿರಾಂ, ಆರ್.ಎಸ್. ರಮಾಕಾಂತ್, ಸರಳಾಯ ಸಹೋದರಿಯರು, ಶ್ರೀಧರ್ ಸಾಗರ್, ನೈವೇಲಿ ಸಂತಾನ ಗೋಪಾಲನ್, ರಮಾಪ್ರಭ, ಡಾ. ವೆಂಪಟಿ ಚಿನ್ನಸತ್ಯಂ, ಶ್ರೀಲಂಕಾ ಪಂಚಮೂರ್ತಿ, ತಂಜಾವೂರು ಗೋವಿಂದರಾಜನ್, ಕನ್ಯಾಕುಮಾರಿ, ಎಸ್.ವಿ. ಗಿರಿಧರ್, ಬಿ.ಕೆ.ಚಂದ್ರಮೌಳಿ, ಎಂ.ಎಸ್.ವಿದ್ಯಾ, ತಿರುಪತಿ ರಘುನಾಥ್, ವಿದ್ಯಾಭೂಷಣ ಸೇರಿ ನೂರಕ್ಕೂ ಹೆಚ್ಚು ವಿದ್ವಾಂಸರು, ಕಲಾವಿದರು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಭಜನಾ ತಂಡದವರು ಭಾಗವಹಿಸಲಿದ್ದಾರೆ ಎನ್ನುತ್ತಾರೆ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಂ.

ಇದೊಂದು ಸಂಗೀತ ಆಧಾರಿತ ಉತ್ಸವ. ಇಲ್ಲಿ ಗಾಯನ, ಗೋಷ್ಠಿಗಾಯನ, ವಾದ್ಯವಾದನ, ಹರಿಕಥೆ, ಬುರ‌್ರಕಥೆ, ಸಂಗೀತ ನೃತ್ಯ, ಜಾನಪದ ವಾದ್ಯ ವಿಶೇಷಗಳು ಮೂರು ದಿನ ನಿರಂತರವಾಗಿ ಇರುತ್ತವೆ ಎನ್ನುತ್ತಾರೆ ಉತ್ಸವದ ಸಂಯೋಜಕ ವಾನರಾಶಿ ಬಾಲಕೃಷ್ಣ ಭಾಗವತರ್.

ಕನ್ನಡ ನಾಡಿನ ಗ್ರಾಮೀಣ ಭಾಗದಲ್ಲಿ ಇಂಥದ್ದೊಂದು ಸಾಂಸ್ಕೃತಿಕ ಉತ್ಸವ ಅಪೂರ್ವ ಎನ್ನಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT