ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರದ ಜೀವಜ್ಯೋತಿ

Last Updated 4 ಜೂನ್ 2011, 19:30 IST
ಅಕ್ಷರ ಗಾತ್ರ

ಸಮಾಜದ ಅಂಕುಡೊಂಕುಗಳಿಗೆ ಭಕ್ತಿಯ ಖಚಿತ ತಳಹದಿಯ ಮೇಲೆ ಪರಿಣಾಮಕಾರಿ ಪರಿಹಾರಗಳನ್ನು ಕಾಣಿಸಿದವರು, ಆ ಮೂಲಕ ಜನಮಾನಸದಲ್ಲಿ ಉಳಿದವರು ಕೈವಾರ ನಾರೇಯಣರು.

ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದಲ್ಲಿ ಹುಟ್ಟಿ ಕೈವಾರದಲ್ಲಿಯೇ ಜೀವಸಮಾಧಿಯಾದ (1730-1840) ನಾರೇಯಣರು ಬಳೆ ಮಾರಾಟದ ವೃತ್ತಿಯವರು. ಮಲ್ಲಾರ ಹೊತ್ತು ಹಳ್ಳಿ ಹಳ್ಳಿ ಸುತ್ತಿ ಮುತ್ತೈದೆಯರಿಗೆ ಬಳೆ ತೊಡಿಸುವುದು ಅವರ ಕಾಯಕ.

ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಎದುರಾದ ಅನೇಕ ಘಟನೆಗಳ ನಂತರ ಅಧ್ಯಾತ್ಮದತ್ತ ಹೊರಳಿದ ನಾರೇಯಣರು ನಾನಾವಿಧಗಳಲ್ಲಿ ಭಕ್ತಿ ಪ್ರಕಟ ಮಾಡಿಕೊಂಡು ತಮ್ಮ ಹಾದಿಯನ್ನು ಪಕ್ವಗೊಳಿಸಿಕೊಂಡು, ತಾವು ಬದುಕುವ ಸಮಾಜಕ್ಕೂ ಒಂದು ಮಾರ್ಗವನ್ನು ಅಣಿಗೊಳಿಸಿಕೊಟ್ಟ ಮಾನವತಾವಾದಿ.
 
ಈ ನೆಲದ ಸಾಮಾಜಿಕ ತಾರತಮ್ಯ, ಲೋಪದೋಷಗಳನ್ನು ಅವರು ತಮ್ಮ ರಚನೆಗಳಲ್ಲಿ ಬಿಂಬಿಸುತ್ತಾರೆ. ಎಲ್ಲಾ ಮತಗಳ ಡಂಭಾಚಾರಗಳನ್ನು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ವಿಡಂಬಿಸುತ್ತಾರೆ. ಆ ಮತ ಈ ಮತ ಎಂದು ಕಿತ್ತಾಡುವ ಸಮಾಜದಲ್ಲಿ, ನಾರೇಯಣರು ಯಾವುದೇ ಪರಂಪರೆಗಳಿಗೂ ಕಟ್ಟುಬಿದ್ದವರಲ್ಲ.

`ಜಾತಿಯಲ್ಲಿ ಕೀಳಾದ ಜನರ‌್ಯಾರೂ ಇಲ್ಲ/ ಜಾತಿ ವಿಜಾತಿ ಭೇದ ತರವಲ್ಲ/ ಎಲ್ಲರೊಂದೇ ಜಾತಿ ಮತ್ತೆ ಇಲ್ಲವಯ್ಯ/ ನಾದ ಬ್ರಹ್ಮಾನಂದ ನಾರೇಯಣ~ ಎನ್ನುವುದು ಜಾತಿ ಕುರಿತು ನಾರೇಯಣರ ಖಚಿತ ನಿಲುವು.

ಆಚಾರ ವಿಚಾರಗಳ ಬಗ್ಗೆ ತಮ್ಮ ರಚನೆಗಳಲ್ಲಿ ವಿವರಗಳನ್ನು ನೀಡುವ ಅವರು ಅವುಗಳಿಂದಾಗುವ ತಪ್ಪುಒಪ್ಪುಗಳನ್ನು ಹೇಳಲು ಜನಸಾಮಾನ್ಯರ ದೈನಂದಿನ ಮಾತುಗಳನ್ನೇ ಬಳಸುತ್ತಾರೆ. ಆದರೆ ಆಡುನುಡಿಯಲ್ಲೂ ಸೂಕ್ಷ್ಮ ಒಳನೋಟಗಳಿರುವುದು ನಾರೇಯಣರ ರಚನೆಗಳ ವೈಶಿಷ್ಟ್ಯ.

ತಮ್ಮೆಲ್ಲರ ನೋವುಗಳಿಗೆ ಸಾಂತ್ವನ ಹೇಳುವ, ಬದುಕಿಗೆ ಧೈರ್ಯ ತುಂಬುವ ನಾರೇಯಣರು ಅಸಹಾಯಕ - ಗ್ರಾಮೀಣ ಜನರ ಪಾಲಿಗೆ ಪ್ರೀತಿಯರಿಗೆ ತಾತಯ್ಯ.

ದೀನದಲಿತರ ಕೊರಳಾಗಿದ್ದ ತಾತಯ್ಯನವರು- ಜಾತಿ, ಪುರೋಹಿತವರ್ಗ, ರಾಜಕಾರಣ, ಅಧಿಕಾರಶಾಹಿ, ರಾಜ್ಯಾಡಳಿತ ಹುಳುಕುಗಳು, ರೈತಾಪಿ ಜನರ ಬವಣೆ ಸೇರಿದಂತೆ ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು  ತಮ್ಮ ರಚನೆಗಳಲ್ಲಿ ಮಾಡಿದರು. ಪ್ರತಿಯೊಂದು ವಿಚಾರಕ್ಕೆ ತಮ್ಮ ಪರಿಹಾರವನ್ನೂ ಸೂಚಿಸಿದರು.

ಅಧ್ಯಾತ್ಮದ ಜೊತೆಗೇ ಆತ್ಮವಿಮರ್ಶೆಯೂ ಬೇಕು ಎನ್ನುವುದು ಅವರ ನಿಲುವು.ಅವರು ತಮ್ಮ ಚಿಂತನೆಗಳನ್ನು ಪ್ರಕಟಿಸಲು ಕೀರ್ತನೆ, ವಚನ, ತತ್ವಪದ ಶತಕ, ಕೋಲಾಟಪದ, ಯಾಲಾಪ- ಹೀಗೆ, ಅನೇಕ ಪ್ರಕಾರಗಳನ್ನು ಬಳಸಿಕೊಂಡರು.

ತೆಲುಗು ಭಾಷೆ ಪರಿಸರದಲ್ಲಿದ್ದು ತೆಲುಗು, ಕನ್ನಡ ಹಾಗೂ ತೆಲುಗನ್ನಡಗಳಲ್ಲಿ ಬರೆದ ಅವರು, ತಾವು ಬರೆದಿದ್ದನ್ನು ಜನರಿಗೆ ಅರ್ಥ ಮಾಡಿಸಬೇಕೆನ್ನುವ ಹೊತ್ತಿನಲ್ಲಿ ಯಾವುದೇ ಭಾಷೆಯ ಮಡಿ ಮೈಲಿಗೆಯನ್ನು ಪಾಲಿಸಲಿಲ್ಲ.

ಜಾತಿ ಪದ್ಧತಿಯನ್ನು ಖಂಡಿಸುವಾಗ ಅವರು ಹೇಳುತ್ತಾರೆ:
`ಉಚ್ಚೆಯ ದ್ವಾರದೊಳು ತೂರಿ ಬಂದವೇ ಈ ನರರು/ ಉತ್ತಮ ಕುಲದವರು ಯಾರಿಲ್ಲವಿಲ್ಲಿ/ ಉತ್ತಮ ಕುಲವೆಂಬುದು ಬರಿ ಸುಳ್ಳು/ ನಾದ ಬ್ರಹ್ಮಾನಂದ ನಾರೇಯಣ ಕವಿ~.

ಎರಡೂ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಮೆರೆದ ನಾರೇಯಣರು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯುವಾಗಲೂ ಸಾಹಿತ್ಯಕ ಮೌಲ್ಯಗಳನ್ನು ಕಾಪಾಡಿಕೊಂಡು ಬಂದರು. ಆವರೆಗಿನ ಕೆಲವು ಕಟ್ಟುಪಾಡುಗಳನ್ನು ಕಿತ್ತೆಸೆದರು. ಎಂದೂ ಮಾಸದ ಮೌಲಿಕ ಅಂಶಗಳನ್ನು ತಮ್ಮ ರಚನೆಗಳಲ್ಲಿ ಅಳವಡಿಸಿಕೊಂಡರು. ಅವರ ಅನೇಕ ವಿಚಾರಗಳು ಇಂದಿಗೂ ಪ್ರಸ್ತುತ.

ಈಗಿನ ಕೃಷಿಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಾರೇಯಣರು `ಬೆಳೆ ಬೆಳೆದರೂ ಬರ/ ಬೆಳೆ ಒಣಗಿದರು ಬರ~ ಎನ್ನುವ ಮೂಲಕ ಗ್ರಹಿಸಿದ್ದರು. ಮುಂದೆ ಜನತೆ ಅನುಭವಿಸಬೇಕಾದ ಆತಂಕ, ಸಂಕಷ್ಟ, ಅದನ್ನು ಮೀರಿ ನಿಲ್ಲುವ ಬಗೆಯನ್ನು `ಕಾಲಜ್ಞಾನ~ದಲ್ಲಿ ವಿವರಿಸಿದ ತಾತಯ್ಯನವರು ಜನರೆದೆಯಲ್ಲಿ ಜೀವಂತವಾಗಿರುವುದು ಸಹಜ ಎನಿಸುತ್ತದೆ.

ಯೋಗಿ ಹಾಗೂ ಸಮಾಜ ಪರಿವರ್ತಕ - ಈ ಎರಡೂ ವ್ಯಕ್ತಿತ್ವ ಹೊಂದಿದ್ದ ನಾರೇಯಣರು ಸದಾ ಜೀವಪರವಾದ ಧೋರಣೆ ಇಟ್ಟುಕೊಂಡಿದ್ದು, ಯಾವುದೇ ವಿಚಾರಗಳ ಬಗ್ಗೆ ದ್ವಂದ್ವ ನಿಲುವು ತಾಳದೆ ಹೇಳಬೇಕಾದ್ದನ್ನು ನೇರವಾಗಿ ತೀಕ್ಷ್ಣವಾಗಿ ಹೇಳಿದರು.

ಒಂದೊಂದು ಸಲ ಓದಿದಾಗಲೂ ಭಿನ್ನ ಒಳನೋಟಗಳನ್ನು ಹೊರಹೊಮ್ಮಿಸುವ ತಾತಯ್ಯನವರ ರಚನೆಗಳು ಅನನ್ಯವಾದರೂ ಅವುಗಳಿಗೆ ಸಾಹಿತ್ಯಕವಾಗಿ ಸಹಜವಾಗಿ ಸಿಗಬೇಕಿದ್ದ ನ್ಯಾಯ ಇನ್ನೂ ಸಿಕ್ಕಿಲ್ಲ.

ಇದು ನಾರೇಯಣರು ನಿರೂಪಿಸಿರುವ ಧಾರ್ಮಿಕ ಸಮನ್ವಯತೆಯ ಪರಂಪರೆಗೂ ಅನ್ವಯಿಸುತ್ತದೆ. ಸಮಾನತೆ, ಸಮನ್ವಯತೆ ಹಾದಿಯನ್ನು ಸಿದ್ಧಮಾಡಿಕೊಟ್ಟ ತಾತಯ್ಯನವರ ರಚನೆಗಳ ಬಗೆಗೆ ಇನ್ನೂ ಹೆಚ್ಚಿನ ಬೆಳಕು ಚೆಲ್ಲಬೇಕಾದ ಅನಿವಾರ್ಯ ಅಗತ್ಯ ಸನ್ನಿವೇಶ ಈಗಿದೆ ಎನ್ನಿಸುತ್ತಿದೆ.

(ನಾರೇಯಣರ ಸ್ಮರಣಾರ್ಥ ಜೂನ್ 6ರಂದು ಕೈವಾರದಲ್ಲಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ನಡೆಯಲಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT