ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈವಾರದಲ್ಲಿ ರಥೋತ್ಸವ

Last Updated 21 ಮಾರ್ಚ್ 2011, 6:35 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳ ಕೈವಾರದಲ್ಲಿ ಭಾನುವಾರ ಯೋಗಿನಾರೇಯಣ ಯತೀಂದ್ರರ ರಥೋತ್ಸವ  ಸಡಗರ ಸಂಭ್ರಮದಿಂದ ಸಹಸ್ರಾರು ಜನರ ಸಮ್ಮುಖದಲ್ಲಿ ನಡೆಯಿತು.ಇತಿಹಾಸ ಪ್ರಸಿದ್ಧವಾದ ಧಾರ್ಮಿಕ ಕ್ಷೇತ್ರ ಕೈವಾರದಲ್ಲಿ ಪಾಲ್ಗುಣ ಮಾಸದ ಹುಣ್ಣಿಮೆಯ ನಂತರ ದಿನದಂದು ನಡೆಯುವ ರಥೋತ್ಸವ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಟ್ಟಿತು. ರಥೋತ್ಸವದ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಆಲಂಕಾರ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಜರುಗಿದವು.

 ಯತೀಂದ್ರರ ಮಠದಲ್ಲಿಯೂ ಸಹ ವಿಶೇಷ ಪೂಜೆ , ಅಲಂಕಾರ ಮಾಡಲಾಗಿತ್ತು. ಯತೀಂದ್ರರರಿಗೆ ವಿಶೇಷ ಅಭಿಷೇಕ ಅಷ್ಠಾವದಾನ ಸೇವೆಯ ನಂತರ ಉತ್ಸವ ಮೂರ್ತಿಗೆ ಅಲಂಕಾರ ಮಾಡಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ, ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಕುಳ್ಳರಿಸಲಾಯಿತು.ರಥದಲ್ಲಿ ನಾರೇಯಣ ಯತೀಂದ್ರರಿಗೆ ಪೂಜೆ ಸಲ್ಲಿಸಿದ ನಂತರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಪೂಜೆ ಸಲ್ಲಿಸುವುದರ ಮೂಲಕ ರಥೋತ್ಸಕ್ಕೆ ಚಾಲನೆ ನೀಡಿದರು.  ಸಾವಿರಾರು ಜನರು ರಥ  ಎಳೆದು ಪುನೀತರಾದರು. ಬಾಳೆಹಣ್ಣು ಮತ್ತು ದವನವನ್ನು ರಥಕ್ಕೆ ಎಸೆದು ನಮಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿತ್ತು.

ಯತೀಂದ್ರರ ಮಠದಿಂದ ರಥ ಎಳೆದು ಹೋಗಿ ಅಮರನಾರೇಯಣಸ್ವಾಮಿ ದೇವಸ್ಥಾನದ ಎದುರು ಪೂಜೆ ಸಲ್ಲಿಸಿ ನಿಲ್ಲಿಸಲಾಯಿತು. ರಥೋತ್ಸವದಲ್ಲಿ ಕೋಲಾಟ, ಗಾರುಡಿ ಬೊಂಬೆಗಳ ಕುಣಿತ, ಭಜನಾ ತಂಡ ಭಾಗವಹಿಸಿದ್ದವು. ಗ್ರಾಮೀಣ ಭಾಗದ ಸಂಸ್ಕೃತಿ ಪ್ರತಿಬಿಂಬಿಸುವ ನೀರಿನ ಗಾಡಿಯಿಂದ ಬಿಸಿಲಲ್ಲಿ ಬಸವಳಿದವರಿಗೆ ಮಜ್ಜಿಗೆ, ಪಾನಕ, ನೀರು, ಕೋಸುಂಬರಿ ವಿತರಿಸಲಾಯಿತು.
ಕೊಂಗನಳ್ಳಿ, ಗುಟ್ಟಹಳ್ಳಿ, ಮಸ್ತೇನಹಳ್ಳಿ ಮತ್ತಿತರ ಗ್ರಾಮಗಳಿಂದ ಎತ್ತಿನ ಗಾಡಿ,  ಟ್ರ್ಯಾಕ್ಟರ್‌ಗಳಲ್ಲಿ ಬಂದು ಮಜ್ಜಿಗೆ ಪಾನಕ ವಿತರಿಸಿದರು. ಭಾನುವಾರವೂ ಸಹ ಮಠದಲ್ಲಿ, ವಾಸವಿ ಛತ್ರದಲ್ಲಿ ಹಾಗೂ ನರಸಿಂಹಸ್ವಾಮಿ ಗುಹೆಯ ಬಳಿ ಉಚಿತ ದಾಸೋಹ ನಡೆಯಿತು. ಬರಗು-ಬತ್ತಾಸು, ಮಕ್ಕಳ ಅಟಿಕೆಗಳು ಮತ್ತಿತರರ ವಸ್ತುಗಳ ವ್ಯಾಪಾರ ಬಿರುಸಾಗಿತ್ತು.

ಗ್ರಾಮದಲ್ಲಿ ಇಡೀ ದಿನ ವಿಶೇಷ ವಾದ್ಯಗೋಷ್ಠಿ, ಭಜನೆ,  ಸಂಕೀರ್ತನೆ, ಹರಿಕಥೆ, ಬುರ್ರಕಥೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.  ರಾತ್ರಿ ಆಂಧ್ರಪ್ರದೇಶದ ಕದಿರಿಯ ದಸ್ತುಗಿರಿಸಾಬ್ ಅವರಿಂದ ಹರಿಕಥೆ  ಭಕ್ತಾದಿಗಳ ನಿದ್ದೆಯನ್ನು ದೂರಮಾಡಿದವು. ಮುತ್ತಿನ ಪಲ್ಲಕ್ಕಿ ವಿಶೇಷ ಆಕರ್ಷಣೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT