ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಗನ ಹೊಸೂರು: ವಿಚಿತ್ರ ಜ್ವರಕ್ಕೆ ಜನ ತತ್ತರ

ಗ್ರಾಮಸ್ಥರಲ್ಲಿ ಆತಂಕ; ಭೇಟಿ ನೀಡದ ಅಧಿಕಾರಿಗಳು
Last Updated 5 ಡಿಸೆಂಬರ್ 2013, 6:18 IST
ಅಕ್ಷರ ಗಾತ್ರ

ಹರಪನಹಳ್ಳಿ: ತಾಲ್ಲೂಕಿನ ನಂದಿಬೇವೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಂಗನಹೊಸೂರು ಗ್ರಾಮದಲ್ಲಿ ನಾಲ್ಕಾರು ದಿನಗಳಿಂದ ಶಂಕಿತ ಚಿಕೂನ್‌ ಗುನ್ಯಾ ರೀತಿಯ ಕಾಯಿಲೆ ಕಾಣಿಸಿಕೊಂಡಿದೆ.

20ಕ್ಕೂ ಅಧಿಕ ಮಂದಿ ತೀವ್ರ ತರಹದ ಕೀಲು– ಮೂಳೆ ಸಂಬಂಧಿ ನೋವಿನಿಂದ ಬಳಲುತ್ತಿದ್ದಾರೆ. ಆರಂಭದಲ್ಲಿ ವಿಪರೀತ ಜ್ವರ ಕಾಣಿಸಿಕೊಂಡು, ಬಳಿಕ ಕೈ– ಕಾಲುಗಳ ಮೂಳೆಯ ಕೀಲುಗಳಲ್ಲಿ ವಿಪರೀತ ನೋವು ಆವರಿಸಿಕೊಳ್ಳುತ್ತದೆ. 

ಜ್ವರದಿಂದ ನರಳುತ್ತಿರುವವರು ಸಮೀಪದ ನಂದಿಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಹರಪನಹಳ್ಳಿಯ ಕೆಲ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ, ಜ್ವರ ಮಾತ್ರ ಕಡಿಮೆಯಾಗಿದ್ದು, ಕೀಲುಗಳ ನೋವು ಜನರನ್ನು ನಿಶ್ಶಕ್ತರನ್ನಾಗಿಸಿದೆ.

‘ಮೊದ್ಲಿಗೆ ಬೆಂಕಿಯಂತಹ ಜ್ವರ ಬಂದು, ಮರುದಿನ ಮೊಣಕಾಕಾಲು– ಮೊಳಕೈ ಚಿಪ್ಪು ಸೇರಿದಂತೆ ಕೀಲುಗಳಲ್ಲಿ ವಿಪರೀತ ನೋವು ಹಿಂಡುತೈತಿ. ಹಗ್ಗಾ ಕಟ್ಟಿ ಜಗ್ಗಿದಂಗಾಗೈತ್ರಿ. ಕುಂತ್ರ ಎದ್ದೋಳಾಕಾಗಲ್ಲ, ಎದ್ರೆ ಕುಂದ್ರಕಾಗಲ್ಲ’ ಎಂದು ನೋವು ತೋಡಿಕೊಂಡವರು ಕಲ್ಲಹಳ್ಳಿ ಮಹೇಶಪ್ಪ.

ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ ಮಾರ್ಗದಲ್ಲಿ ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಚರಂಡಿಗಳಲ್ಲೂ ಸಾಕಷ್ಟು ಹೂಳು ತುಂಬಿಕೊಂಡಿದೆ. ಎಲ್ಲೆಂದರಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಶುಚಿತ್ವ ಕಾಪಾಡಿಕೊಳ್ಳದ ಪರಿಣಾಮ ಚರಂಡಿ ಗಳಲ್ಲಿ ದುರ್ನಾತ ಸೂಸುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರವಾಗಿ ಪರಿಣಮಿಸಿವೆ. ಹೀಗಾಗಿ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಗ್ರಾಮದ ಯುವಕ ಸುರೇಶ್.

ಗ್ರಾಮದಲ್ಲಿ ಬಹುತೇಕ ಚರಂಡಿಗಳು ಹೂಳಿನಿಂದ ತುಂಬಿದ್ದರೂ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಅಧಿಕಾರಿ ವರ್ಗ ಕ್ರಮಕ್ಕೆ ಮುಂದಾಗಿಲ್ಲ. ಕಾಯಿಲೆಯಿಂದಾಗಿ ಜನ ಆಸ್ಪತ್ರೆ ಎಡತಾಕುತ್ತಿದ್ದರೂ, ಆರೋಗ್ಯ ಇಲಾಖೆ ಅಧಿಕಾರಿಗಳಾಗಲೀ, ಪಂಚಾಯ್ತಿ ಅಧಿಕಾರಿಗಳಾಗಲೀ ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT