ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಗಳಿ ನೀರು ಚುಳಕಿನಾಲಾ ಜಲಾಶಯಕ್ಕೆ ಶೀಘ್ರ

ಬಸವಕಲ್ಯಾಣದಲ್ಲಿ ಬೇಕೆಂದಾಗ ನೀರು ಸಿಗಲಿದೆ
Last Updated 25 ಡಿಸೆಂಬರ್ 2012, 6:13 IST
ಅಕ್ಷರ ಗಾತ್ರ

ಬಸವಕಲ್ಯಾಣ: ಹುಲಸೂರ ಸಮೀಪದ ಕೊಂಗಳಿ ಬ್ಯಾರೇಜ್‌ನಿಂದ ಚುಳಕಿನಾಲಾ ಜಲಾಶಯಕ್ಕೆ ನೀರು ಭರ್ತಿ ಮಾಡುವ ಯೋಜನೆಗೆ ಕೆಲಕಾಲ ವಿಳಂಬವಾದರೂ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕೆಲಸ ಮುಗಿದರೆ ನಗರ ನಿವಾಸಿಗಳಿಗೆ ಬೇಕೆಂದಾಗ ನಲ್ಲಿ ತಿರುಗಿಸಿದರೆ ನೀರು ಸಿಗಲಿದೆ.

ನಗರದ ಜನಸಂಖ್ಯೆ ಭರದಿಂದ ಬೆಳೆಯುತ್ತಿರುವ ಕಾರಣ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಬೇಸಿಗೆಯಲ್ಲಂತು ಐದಾರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಸುಡುವ ಬಿಸಿಲಲ್ಲಿ ನಲ್ಲಿಯ ಎದುರು ಕೊಡಗಳನ್ನು ಸಾಲಿನಲ್ಲಿ ಇಟ್ಟು ಕಾಯುತ್ತ ಕೂಡಬೇಕಾದ ಪರಿಸ್ಥಿತಿ ಇರುತ್ತದೆ.

ಇಂಥ ಪರದಾಟ ತಪ್ಪಿಸುವುದಕ್ಕಾಗಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಸಮೀಪದ ಚುಳಕಿನಾಲಾ ಜಲಾಶಯದಿಂದ ನೀರು ಸರಬರಾಜು ಮಾಡುವ ಯೋಜನೆ ಕಾರ್ಯಗತ ಮಾಡಲಾಗಿದೆ. ಆದರೂ ಮಳೆಯ ಕೊರತೆಯಿಂದಾಗಿ ಜಲಾಶಯ ತುಂಬುತ್ತಿಲ್ಲ ಆದ್ದರಿಂದ ಮಳೆಗಾಲದಲ್ಲಿ ನೀರಿನ ಕೊರತೆ ಆಗದಿದ್ದರೂ ಬೇರೆ ಸಮಯದಲ್ಲಿ ಸಮಸ್ಯೆ ಮೊದಲಿನಂತೆಯೇ ಇರುತ್ತಿದೆ.

ಇದನ್ನು ತಪ್ಪಿಸುವುದಕ್ಕಾಗಿ ಈಚೆಗೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದಿಂದ ಏಶಿಯನ್ ಅಭಿವೃದ್ಧಿ ಬ್ಯಾಂಕ್ ಸಾಲದ ನೆರವಿನಿಂದ 24 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಂಗಳಿ ನೀರು ಇಲ್ಲಿಗೆ ತರುವ ಯೋಜನೆ ಕೈಗೊಳ್ಳಲಾಗಿದೆ.

ಕೊಂಗಳಿ ಬ್ಯಾರೇಜ್‌ನಿಂದ ಏತ ನೀರಾವರಿ ಮಾದರಿಯಲ್ಲಿ ನೀರೆತ್ತಿ ದೊಡ್ಡ ಕೊಳವೆಗಳ ಮೂಲಕ ಚುಳಕಿನಾಲಾ ಜಲಾಶಯಕ್ಕೆ ಸಾಗಿಸಲಾಗುತ್ತದೆ. ಈ ಕಾರ್ಯ ಮಳೆಗಾಲದಲ್ಲಿ ಮಾತ್ರ ನಡೆಯುತ್ತದೆ. ಆದರೂ, ಚುಳಕಿನಾಲಾ ಜಲಾಶಯ ಒಮ್ಮೆ ಪೂರ್ಣವಾಗಿ ತುಂಬಿದರೆ ಬೇಸಿಗೆಯಲ್ಲಿ ನೀರಿನ ಕೊರತೆ ಆಗುವುದಿಲ್ಲ. ಈ ಕಾಮಗಾರಿ ಬರುವ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶನಿವಾರ ಇಲ್ಲಿಗೆ ಆಗಮಿಸಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತಾ ಹೇಳಿದ್ದಾರೆ.

ಜಲಾಶಯದಿಂದ ನಗರಕ್ಕೆ ಸರಬರಾಜು ಮಾಡಲಾದ ನೀರು ಎಲ್ಲರಿಗೂ ದೊರಕುವಂತಾಗಲು ಅಂದಾಜು 9 ಕೋಟಿ ರೂಪಾಯಿ ವೆಚ್ಚದಲ್ಲಿ ಪೈಪಲೈನ್ ಅಳವಡಿಸುವ ಕೆಲಸ ಸಹ ಕೈಗೆತ್ತಿಕೊಳ್ಳಲಾಗುತ್ತದೆ. ಆ ಕೆಲಸವೂ ಶೀಘ್ರ ಮುಗಿಯಲಿದ್ದು ನಾಗರಿಕರಿಗೆ ದಿನದ 24 ಗಂಟೆಯೂ ನೀರು ಸಿಗಲಿದೆ ಎಂದು ತಿಳಿಸಿದ್ದಾರೆ.

ಚುಳಕಿನಾಲಾ ಜಲಾಶಯದಲ್ಲಿ ಹೂಳು ಸಂಗ್ರಹವಾಗಿದೆ ಆದ್ದರಿಂದ ಕಡಿಮೆ ನೀರು ನಿಲ್ಲುತ್ತಿದೆ. ಹೂಳು ತೆಗೆದರೆ ಇನ್ನು ಹೆಚ್ಚಿನ ನೀರು ಸಂಗ್ರಹ ಮಾಡಬಹುದು. ಕೊಂಗಳಿ ಜಲಾಶಯದಿಂದ ಎಷ್ಟೇ ನೀರು ಇಲ್ಲಿಗೆ ಸಾಗಿಸಿದರೂ ಸಂಗ್ರಹ ಸಾಮರ್ಥ್ಯ ಕಡಿಮೆ ಇದ್ದರೆ ಉಪಯೋಗ ಆಗುವುದಿಲ್ಲ. ಆದ್ದರಿಂದ ಜಲಾಶಯದ ಸುಧಾರಣೆ ಕೆಲಸ ಸಹ ಕೈಗೊಳ್ಳಬೇಕು. ನಗರದಲ್ಲಿ ಪೈಪಲೈನ್ ಒಡೆದು ನೀರು ಪೋಲಾಗುತ್ತಿದೆ. ಅಂಥ ಸ್ಥಳದಲ್ಲಿ ದುರುಸ್ತಿ ಕಾರ್ಯ ನಡೆಸಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT