ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂದುಕೊಳ್ಳುವ ಮುನ್ನ...

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

`ನಿದ್ದೆ ಗುಳಿಗೆಗಳನ್ನು ಸೇವಿಸಿ ಪ್ರಾಣ ಬಿಡುವುದು ಸಿನಿಮಾಗಳಲ್ಲಿ ತೋರಿಸುವಷ್ಟು ಸುಲಭವಲ್ಲ. ನಾನು ಈ ಮಾತನ್ನು ನನ್ನ ಅನುಭವದಿಂದ ಹೇಳುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ ನಾನು ಸುಮಾರು ಹತ್ತು ಗುಳಿಗೆಗಳನ್ನು ಬಾಯಿಗೆ ಹಾಕಿಕೊಂಡಿದ್ದೆ. ನಂತರ ನೀರು ಕುಡಿದು ಅಷ್ಟನ್ನೂ ಒಮ್ಮೆಗೇ ಒಳ ತಳ್ಳಿದ್ದೆ. ಒಂದೊಂದೇ ಗುಳಿಗೆಯನ್ನು ನುಂಗುತ್ತಾ ಇದ್ದರೆ, ನೀರು ಕುಡಿದೇ ಹೊಟ್ಟೆ ತುಂಬುತ್ತದಲ್ಲ. ಅಂತಹ ಅನುಭವ ಆ ಮೊದಲೇ ಒಮ್ಮೆ ನನಗಾಗಿತ್ತು. ಮೊದಲನೆಯ ಸಲ ನುಂಗುವುದು ಸುಲಭ, ಎರಡನೆಯ ಬಾರಿ ನುಂಗುವುದೂ ಕಷ್ಟವಲ್ಲ. ಆದರೆ ನಂತರವೂ ಒಂದೊಂದಾಗಿ ಮಾತ್ರೆಗಳನ್ನು ನುಂಗತೊಡಗಿದಾಗ ವಾಂತಿ ಬಂದಂತೆ ಆಗುತ್ತದೆ. ಗಂಟಲೊಳಗೆ ನೀರೇ ಇಳಿಯಲೊಲ್ಲದು. ನುಂಗುವುದು ಕಷ್ಟವಾಗುತ್ತದೆ. ನೀರು ಕುಡಿದೂ, ಕುಡಿದೂ ಹೊಟ್ಟೆ ಉಬ್ಬರಿಸಿಕೊಂಡ ಅನುಭವ ಆಗುತ್ತದೆ'.

ಆತ್ಮಹತ್ಯೆಯ ಪ್ರಯತ್ನ ಮಾಡಿ ಬದುಕುಳಿದ ಮಹಿಳೆಯೊಬ್ಬರ ಅನುಭವ ಕಥನ ಇದು. ತಾವು ಅನುಭವಿಸುತ್ತಿದ್ದ ಮಾನಸಿಕ ರೋಗವನ್ನು  ಗೆದ್ದ `ಸ್ನೇಹಾ' ಎಂಬ ಮಹಿಳೆ ಬರೆದಿರುವ `ಮನೋರೋಗ ಗೆಲ್ಲಬಹುದೇ? ಮನೋರೋಗಿಯ ಆತ್ಮಹತ್ಯೆ ಯತ್ನ' ಎಂಬ ಪುಸ್ತಕದ ಸಾಲುಗಳು ಇವು.

`ಇಪ್ಪತ್ತು ಗುಳಿಗೆಗಳಿಗೆ ನನ್ನನ್ನು ಕೊಲ್ಲುವುದು ಅಸಾಧ್ಯ. ಆದ್ದರಿಂದ ಉಳಿದ ಗುಳಿಗೆಗಳನ್ನೂ ಪ್ರಯಾಸಪಟ್ಟು ನುಂಗತೊಡಗಿದೆ. ಹೊಟ್ಟೆ ತೊಳಸಿದಂತಾಗಿ, ಮಾಡಿದ್ದ ಊಟವೆಲ್ಲ ಆಚೆ ಬರುವಂತಾಗಿ ಸಂಕಟ ಆಗತೊಡಗಿತು. ಅದೊಂದು ಹಿಂಸಾತ್ಮಕ ಅನುಭವ. ಜಠರವನ್ನು ಸೇರಿದ ಗುಳಿಗೆಗಳಿಂದ ರಾಸಾಯನಿಕ ಆವಿಯಾಗಿ ಬಾಯಿಗೆ ಹಿಂತಿರುಗಿ ನುಗ್ಗಿ ಬಂದಂತಹ ಅನುಭವವಾಯಿತು. ಎಲ್ಲವನ್ನೂ ಕಕ್ಕಿಬಿಡೋಣ ಎನಿಸಿತು. ನೆನೆಸಿಕೊಂಡರೆ ಈಗಲೂ ಹೊಟ್ಟೆಯೆಲ್ಲ ತೊಳಸಿದಂತೆ ಆಗುತ್ತದೆ' ಎಂದು ಅವರು ತಮ್ಮ ಕಹಿ ಅನುಭವವನ್ನು ಅಕ್ಷರ ರೂಪದಲ್ಲಿ ಹೊರಹಾಕಿದ್ದಾರೆ.

ಆತ್ಮಹತ್ಯೆಗೆ ಈಡಾದವರ ಸಾವು ಸುದ್ದಿಯಾದಂತೆ, ಹೀಗೆ ಆತ್ಮಹತ್ಯೆಗೆ ಪ್ರಯತ್ನಿಸಿ ಉಳಿದುಕೊಂಡವರ ಅನುಭವಗಳು ಸುದ್ದಿ ಆಗುವುದಿಲ್ಲ. ಆತ್ಮಹತ್ಯೆಗೆ ಯತ್ನಿಸಿದವರು ಎಂಬ ಕಳಂಕದ ಹಣೆಪಟ್ಟಿ ಅಂಟಬಹುದೆಂಬ ಭೀತಿಯಿಂದ ಈ `ಪ್ರಯತ್ನ'ಗಳು ಅಲಕ್ಷ್ಯಕ್ಕೆ ಒಳಗಾಗುತ್ತವೆ. ವೈದ್ಯರಿಂದ, ಪೊಲೀಸರಿಂದ `ಹೊಟ್ಟೆನೋವು ತಡೆಯದೆ ಮಾತ್ರೆ ನುಂಗಿದರು', `ಆಕಸ್ಮಿಕ' ಎಂದು ದಾಖಲಾಗಿ `ಎಂ.ಎಲ್.ಸಿ' ಕೇಸಿನಿಂದ ಬಚಾವಾಗುತ್ತವೆ! 

ಆದರೆ, ಆತ್ಮಹತ್ಯೆ ಪ್ರಯತ್ನಗಳಲ್ಲಿ ಅರ್ಧದಷ್ಟು ಜನ ವಿವಿಧ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದರೆ, ಇನ್ನರ್ಧ ಮಂದಿ ವ್ಯಕ್ತಿತ್ವದ ದೋಷಗಳಿಂದ ಬಳಲುತ್ತಾರೆ. ಈ ಎರಡಕ್ಕೂ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಆತ್ಮಹತ್ಯೆ ಒಂದು ಸಂಕೀರ್ಣ ಸಮಸ್ಯೆ. ಯುವಜನರಲ್ಲಿ ಇದು ದಿನೇ ದಿನೇ ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳು ಪ್ರತಿ ವರ್ಷ 10 ಲಕ್ಷ ಜನ ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ ಎನ್ನುತ್ತವೆ. ಅಂದರೆ ಪ್ರತಿ 40 ಸೆಕೆಂಡುಗಳಿಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ. ಯುದ್ಧ- ಕೊಲೆ ಎರಡನ್ನೂ ಮೀರಿ ಆತ್ಮಹತ್ಯೆಗಳ ಸಂಖ್ಯೆ ಏರುತ್ತಿದೆ.

ಆತ್ಮಹತ್ಯೆಗಳ ಬಗ್ಗೆ ಮಾಧ್ಯಮಗಳು ಹರಡದ, ಗಮನಿಸದ ಮುಖ್ಯ ಸಂಗತಿಗಳು ಎರಡು. ಒಂದು, ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿ ಸಾವಿಗೆ ಸಮೀಪದಲ್ಲಿ ಇದ್ದರೂ ವೈದ್ಯಕೀಯ ನೆರವು ದೊರೆತರೆ ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನೊಂದು ಸಂಗತಿ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬದುಕುಳಿದ ಮೇಲೂ ಚಿಕಿತ್ಸೆಯ ಅಗತ್ಯ ಇರುತ್ತದೆ. ಈ ಚಿಕಿತ್ಸೆ ಆತ್ಮಹತ್ಯೆಯ ಉದ್ದೇಶ ಮುಂದೆಂದೂ ಪೂರ್ಣವಾಗದಂತೆ ತಡೆಯುತ್ತದೆ.

ಆತ್ಮಹತ್ಯೆಗೆ ಪ್ರಯತ್ನಿಸಿದವರು ಚಿಕಿತ್ಸೆ ಪಡೆಯದೇ ಇರಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು ಅಜ್ಞಾನ. ಜೊತೆಗೆ ಮಾನಸಿಕ ಕಾಯಿಲೆಗಳು, ಅವುಗಳ ಲಕ್ಷಣ- ಚಿಕಿತ್ಸಾ ಕ್ರಮಗಳಲ್ಲಿ ವರ್ಗ- ಲಿಂಗ- ವೃತ್ತಿ- ವಿದ್ಯಾಭ್ಯಾಸದ ಭೇದವಿಲ್ಲದೇ ಹರಡಿರುವ ತಪ್ಪು ನಂಬಿಕೆಗಳು ಮತ್ತು ಕಳಂಕದ ಭೀತಿ ಸೇರಿರುತ್ತದೆ. ಇನ್ನು ಹೆಣ್ಣು ಮಕ್ಕಳಲ್ಲಿ ಈ ಕಳಂಕ ಅವರ ನಡವಳಿಕೆಯ ಬಗ್ಗೆ ಅನುಮಾನಗಳಿಗೂ, ಕೆಟ್ಟ ಹೆಸರಿನ ಹಣೆಪಟ್ಟಿಗೂ ದಾರಿಯಾಗಬಹುದು. ಇಂತಹ ಕಾರಣಗಳಿಂದ `ಆತ್ಮಹತ್ಯಾ ಸಹಾಯವಾಣಿ' ಹಲವು ಆಸ್ಪತ್ರೆಗಳಲ್ಲಿ 24 ಗಂಟೆಗಳ ಕಾಲ ಲಭ್ಯವಿದ್ದರೂ ಯಾರೂ ಅದನ್ನು ಬಳಸುವುದೇ ಇಲ್ಲ.

ಸಮಾಜಕ್ಕೆ ಅಂಟಿರುವ ಇಂತಹ ಕಳಂಕ ದೂರ ಆಗಬೇಕಾದರೆ ಆತ್ಮಹತ್ಯೆಗಳ ಸಂಖ್ಯೆ ಗಣನೀಯವಾಗಿ ಇಳಿಯಬೇಕು. ಆತ್ಮಹತ್ಯೆ ಯತ್ನ ಹಾಗೂ ಅದು ನಡೆದ ವಿಧಾನದ ಬಗ್ಗೆ ಮಾಧ್ಯಮಗಳು ರಂಜನೀಯವಾಗಿ ಸುದ್ದಿ ಮಾಡದೆ, ಅದರಿಂದ ಬದುಕಿ ಉಳಿದವರು ಎದುರಿಸಿದ ಕಷ್ಟಗಳು, ಅವರ ಕುಟುಂಬದವರ ಸಂಕಷ್ಟವನ್ನು ವಸ್ತುನಿಷ್ಠವಾಗಿ ವರದಿ ಮಾಡಬೇಕು. ಆತ್ಮಹತ್ಯೆಯ ಬಗ್ಗೆ ಯಾವುದೇ ವ್ಯಕ್ತಿ ತನ್ನ ಭಾವನೆಯನ್ನು ವ್ಯಕ್ತಪಡಿಸಿದಾಗ ಅಥವಾ ಅದಕ್ಕೆ ಪ್ರಯತ್ನಿಸಿದಾಗ ಸುತ್ತಮುತ್ತಲಿನವರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲ ನಾಗರಿಕರಿಗೂ ಪ್ರಾಥಮಿಕ ಮಾಹಿತಿ ಇರಬೇಕು.

ಯಾವುದೇ ಸಂದರ್ಭದಲ್ಲೂ ಆತ್ಮಹತ್ಯೆಗೆ ಪ್ರಯತ್ನಿಸದಿರುವ, ಹಾಗೆ ಪ್ರಯತ್ನಿಸುವವರನ್ನು ರಕ್ಷಿಸುವ, ಅವರಿಗೆ ಯಾವುದೇ ಹಣೆಪಟ್ಟಿ ಅಂಟಿಸದೇ ಚಿಕಿತ್ಸೆಗೆ ಮುಂದಾಗುವಂತೆ ನೆರವು ನೀಡುವ ಹೊಣೆ ಪ್ರತಿ ನಾಗರಿಕರದೂ ಆಗಿರುತ್ತದೆ. ಇಂತಹ ಎಚ್ಚರಿಕೆಯ ಹೆಜ್ಜೆಯೊಂದಿಗೆ ಈ ದಿನವನ್ನು ಆಚರಿಸಲು ಮುಂದಾಗೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT