ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಕ್ಕೊ: ಸೋಲೊಪ್ಪದ ಯೋಗೇಶ

Last Updated 17 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಕೋಲಾರದ ಅಂಬೇಡ್ಕರ್ ನಗರ ಸಮೀಪದ ಕನಕನ ಪಾಳ್ಯದ 21ರ ಹರೆಯದ ಯೋಗೇಶ್ ಅವರನ್ನು ಮೊದಲ ಬಾರಿಗೆ ನೋಡಿದವರು ಸಾಮಾನ್ಯ ಸಣಕಲ ಯುವಕ ಎಂದೇ ಭಾವಿಸುತ್ತಾರೆ. ಆದರೆ ಯೋಗೇಶ್ ಆತ ಕೊಕ್ಕೋ ಅಂಕಣಕ್ಕೆ ಕಾಲಿಟ್ಟರೆಂದರೆ ಸ್ಪರ್ಧಿಗಳಿಗೆ ಅವರನ್ನು ಮುಟ್ಟುವುದು ಸಾಹಸವೇ ಸರಿ.

ಎಷ್ಟೇ ಬೆನ್ನಟ್ಟಿದರೂ ಅವರು ಚಾಣಾಕ್ಷತನದಿಂದ ಎದುರಾಳಿಗಳನ್ನು ಸುಸ್ತು ಮಾಡುತ್ತಾರೆ. ತಾನು ಮಾತ್ರ ಕಾಲಿಗೆ ಬುದ್ಧಿ ಹೇಳುತ್ತಲೇ ಇರುತ್ತಾರೆ. ಇಡೀ ತಂಡದಲ್ಲಿ ಅವರು ಸೋಲೊಪ್ಪದ ಆಟಗಾರ. ಹೀಗಾಗಿ ಅವರಿರುವ ಪ್ರತಿ ಆಟವೂ ವೀಕ್ಷಕರಿಗೆ ಒಂದು ರೋಮಾಂಚಕ ಪ್ರದರ್ಶನ.

ಗೋಕುಲ್ ಕಾಲೇಜಿನಿಂದ ಈಗಷ್ಟೆ ಬಿಎಸ್‌ಸಿ ಪದವಿ ಪಡೆದಿರುವ ಯೋಗೇಶ್ 8ನೇ ಕ್ಲಾಸ್‌ನಿಂದಲೇ ಕೊಕ್ಕೊ ಕಡೆಗೆ ಆಕರ್ಷಿತರಾಗಿ ಅಂಕಣ ಪ್ರವೇಶಿಸಿದವರು. ಅವರಿಗೆ ಬೆನ್ನೆಲುಬಿನಂತೆ ಕೋಲಾರ ಕೊಕ್ಕೊ ಕ್ಲಬ್ ನಿಂತಿದೆ. ಅಲ್ಲಿನ ಕೋಚ್‌ಗಳಾದ ಮಧು, ಸುರೇಶಗೌಡ ಮತ್ತು ಆರ್.ಶ್ರೀಧರ್ ಪ್ರೋತ್ಸಾಹ ನೀಡುತ್ತಿದ್ದಾರೆ. 

 8ನೇ ಕ್ಲಾಸ್‌ನಲ್ಲಿರುವಾಗಲೇ ಮೊದಲ ಬಾರಿಗೆ ಪ್ರೌಢಶಾಲಾ ಹಂತದ ರಾಜ್ಯಮಟ್ಟದ ಸ್ಪರ್ಧೆಗೆ ತಯಾರಾಗುತ್ತಿದ್ದ ಕೋಲಾರ ತಂಡಕ್ಕೆ ಯೋಗೇಶ್ ಆಯ್ಕೆಯಾದರು. ಒಂದು ಪಂದ್ಯ ಗೆದ್ದಾಗ `ಇನ್ನೂ ಉತ್ತಮವಾಗಿ ಆಡಬೇಕು~ ಎಂದು ತೀವ್ರವಾಗಿ ಅನಿಸಿತ್ತು. ಹುಮ್ಮಸ್ಸು ಇಮ್ಮಡಿಸಿತ್ತು. ಅಲ್ಲಿಂದ ಶುರುವಾಯಿತು ಸತತ ಪರಿಶ್ರಮ, ಅಭ್ಯಾಸ. ಈಗ ಸಾಧನೆಗಳ ಸರಮಾಲೆ.

2011ರ ಫೆಬ್ರುವರಿಯಲ್ಲಿ ಜಾರ್ಖಂಡ್‌ನಲ್ಲಿ ನಡೆದ 34ನೇ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಕೊಕ್ಕೊ ತಂಡದಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಯೋಗೇಶ್‌ದು. 2012ರ ಆಗಸ್ಟ್‌ನಲ್ಲಿ ಕೊಕ್ಕೊ ಫೆಡರೇಶನ್ ಆಫ್ ಇಂಡಿಯಾ ಜಾರ್ಖಂಡ್‌ನಲ್ಲಿ ನಡೆಸಿದ ಸೀನಿಯರ್ ನ್ಯಾಷನಲ್ ಕೊಕ್ಕೊ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದ ಗಿರೀಶ್ ಕೊರಳಿಗೆ ಸೇರಿದ್ದು ಬೆಳ್ಳಿ ಪದಕ.
 
2010-11ನೇ  ಸಾಲಿನಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕೊಕ್ಕೊ ತಂಡದಲ್ಲಿದ್ದ ಮೂವರ ಪೈಕಿ ಯೋಗೇಶ್ ಕೂಡ ಒಬ್ಬರು.  2011-12ರಲ್ಲಿ ಕೊಯಮತ್ತೂರಿನಲ್ಲಿ ನಡೆದ  ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕೊಕ್ಕೋ ತಂಡದಲ್ಲೂ ಯೋಗೇಶ್ ಸ್ಥಾನ ಗಳಿಸಿದ್ದರು.

2009-10ರಲ್ಲಿ ವಾರಂಗಲ್‌ನಲ್ಲಿ ಕಾಕತೀಯ ವಿಶ್ವವಿದ್ಯಾಲಯ ನಡೆಸಿದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದ ಕೊಕ್ಕೋ ತಂಡದಲ್ಲೂ ಆಡಿದ್ದರು.
ಕೊಕ್ಕೊ ಫೆಡರೇಶನ್ ಆಫ್ ಇಂಡಿಯಾ 2010ರ ಜನವರಿಯಲ್ಲಿ ಗೋವಾದಲ್ಲಿ ನಡೆಸಿದ 29ನೇ ಜೂನಿಯರ್ ನ್ಯಾಷನಲ್ ಕೊಕ್ಕೊ ಚಾಂಪಿಯನ್‌ಪ್‌ನಲ್ಲಿ ಮೂರನೇ ಸ್ಥಾನ ಪಡೆದ ತಂಡದ ಪ್ರಮುಖ ಆಟಗಾರ.

ಇದೇ ತಂಡದಲ್ಲಿ ಯೋಗೇಶ್ ತಮ್ಮ ಕೆ.ಸುನೀಲ್ ಕೂಡ ಆಡಿದ್ದರು ಎಂಬುದು ವಿಶೇಷ. ಬೆಂಗಳೂರು ವಿಶ್ವವಿದ್ಯಾಲಯವು ಏರ್ಪಡಿಸಿದ್ದ ಅಂತರಕಾಲೇಜು ಕೊಕ್ಕೋ ಸ್ಪರ್ಧೆಯಲ್ಲೂ ಯೋಗೇಶ್ ತಂಡ ಪ್ರಥಮ ಸ್ಥಾನ ಗಳಿಸಿತ್ತು.ಕೊಕ್ಕೊದಲ್ಲಿ ಗಂಭೀರವಾಗಿ ತೊಡಗುವ ಮುನ್ನ ಯೋಗೇಶ್ ಅಥ್ಲೆಟಿಕ್ಸ್‌ನಲ್ಲಿ ಹೆಚ್ಚು ಆಸಕ್ತರಾಗಿದ್ದರು.

400, 1500 ಮೀಟರ್ ಓಟದ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳುತ್ತಿದ್ದರು. 2006-07ರಲ್ಲಿ ನಡೆದ ತಾಲ್ಲೂಕು ಮಟ್ಟದ ನಗರ ಪ್ರೌಢಶಾಲೆಗಳ ಕ್ರೀಡಾಕೂಟದ 100, 400 ಮೀ ಪ್ರಥಮ, ಕೊಕ್ಕೊದಲ್ಲಿ ಪ್ರಥಮ, 2006,-07, 2008-09 ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಕೊಕ್ಕೋದಲ್ಲೂ ಪ್ರಥಮ, 2005-06ರಲ್ಲಿ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಕೊಕ್ಕೊ ವಿಭಾಗದಲ್ಲಿ ಪ್ರಥಮ, 2009-10ರಲ್ಲಿ ನಡೆದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಕೊಕ್ಕೊದಲ್ಲೂ ಪ್ರಥಮ ಸ್ಥಾನ ಗಳಿಸಿದ್ದಾರೆ.

ಮಾಮೂಲಿ ಆಹಾರ:
ಕೊಕ್ಕೋ ಬಹಳ ಕಸರತ್ತು ಮತ್ತು ಸಾಮರ್ಥ್ಯ ಬಯಸುವ ತ್ರಾಸದಾಯಕ ಕ್ರೀಡೆ. ದೈಹಿಕ ಸಾಮರ್ಥ್ಯ ಅತ್ಯಗತ್ಯ. ಅದಕ್ಕೆ ವಿಶೇಷ ಪೌಷ್ಟಿಕ ಆಹಾರ ಸೇವನೆಯೂ ಅಗತ್ಯ. ಆದರೆ ಯೋಗೇಶ್ ಸೇವಿಸುವುದು ಮಾಮೂಲಿ ಆಹಾರ. ಮುದ್ದೆ, ಚಪಾತಿ.

ಸಂಜೆ 4ರಿಂದ 7ರವರೆಗೆ ಅಭ್ಯಾಸ ನಡೆಸುವ ಆತ ರಜಾದಿನಗಳಲ್ಲಿ ಬೆಳಿಗ್ಗೆ ವೇಳೆಯೂ ಅಭ್ಯಾಸ ನಡೆಸುತ್ತಾರೆ. ಬೆಳಿಗ್ಗೆ ವೇಳೆ ಅಂತರಗಂಗೆಗೆ ಜಾಗಿಂಗ್ ಹೋಗುವುದಲ್ಲದೆ ಬಾಡಿಫಿಟ್‌ನೆಸ್ ಅಭ್ಯಾಸವನ್ನೂ ಮಾಡುತ್ತಿದ್ದವರು.

ತಮ್ಮ ಸಾಧನೆಯ ಹಿಂದೆ ಕೋಲಾರ ಕೊಕ್ಕೊ ಕ್ಲಬ್‌ನ ಕೋಚ್‌ಗಳಷ್ಟೇ ಅಲ್ಲದೆ ಹಿರಿಯ ಆಟಗಾರರಾದ ಸಂದೀಪ್, ಬಾಬು ಅವರ ಮಾರ್ಗದಶನವೂ ಮುಖ್ಯ ಪಾತ್ರ ವಹಿಸಿದೆ ಎನ್ನುವ ಅವರು ತಮ್ಮ ಆಸಕ್ತಿಗೆ ನೀರೆರೆಯುತ್ತಿರುವ, ಬಿಎಸ್‌ಎನ್‌ಎಲ್‌ನಲ್ಲಿ ಟೆಲಿಕಾಂ ಮೆಕ್ಯಾನಿಕ್ ಆಗಿರುವ ತಂದೆ ಸಿ.ಕೃಷ್ಣಮೂರ್ತಿ ಮತ್ತು ತಾಯಿ ವಿನೋದಮ್ಮ ಅವರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಏಕಲವ್ಯ ಪ್ರಶಸ್ತಿ ಗಳಿಸಿ ಜಿಲ್ಲೆಗೆ ಕೀರ್ತಿ ತರುವುದು ಅವರ ಗುರಿ. ಜೊತೆಗೆ, ಕೊಕ್ಕೋ ಬಗ್ಗೆ ಎಳೆಯರಲ್ಲಿ, ಹೊಸಬರಲ್ಲಿ ಆಸಕ್ತಿ ಮೂಡಿಸಬೇಕು. ಅವರೂ ಪಾಲ್ಗೊಳ್ಳುವಂಥ ಸನ್ನಿವೇಶ ನಿರ್ಮಾಣವಾಗಬೇಕು ಎಂಬುದು ಕನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT