ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚೆ ಗುಂಡಿಯಾದ ಬಿ. ನಾರಾಯಣಪುರ ಕೆರೆ

Last Updated 20 ಜೂನ್ 2011, 19:10 IST
ಅಕ್ಷರ ಗಾತ್ರ

ಕೃಷ್ಣರಾಜಪುರ: ಕೃಷ್ಣರಾಜಪುರ ವ್ಯಾಪ್ತಿಯಲ್ಲಿ ಅಂದಾಜು 50ಕ್ಕೂ ಹೆಚ್ಚು ಕೆರೆ-ಕುಂಟೆಗಳಿವೆ. ಆದರೆ, ಅವುಗಳಲ್ಲಿ ಬಹುತೇಕ ಕೆರೆಗಳು ಇದೀಗ ಕೆರೆಗಳಾಗಿ ಉಳಿದಿಲ್ಲ. ಅಲ್ಲಲ್ಲಿ ಜಾಗ ಒತ್ತುವರಿಯಾಗಿದ್ದು, ಪಟ್ಟಭದ್ರ ಹಿತಾಸಕ್ತಿಗಳಿಂದ ಕಟ್ಟಡ ನಿರ್ಮಾಣವೂ ಆಗಿದೆ.

ಇಂತಹ ಕೆರೆಗಳ ಸಾಲಿಗೆ ಸಮೀಪದ ಬಿ. ನಾರಾಯಣಪುರ ಕೆರೆ ಕೂಡ ಸೇರ್ಪಡೆಗೊಳ್ಳುತ್ತದೆ. ಸುಮಾರು ಆರು ಎಕರೆ ಪ್ರದೇಶದಲ್ಲಿ ಪಸರಿಸಿದ್ದ ಕೆರೆ ಈಗ ಕೇವಲ ಒಂದು ಅಥವಾ ಒಂದೂವರೆ ಎಕರೆಯಷ್ಟು ಉಳಿದಿದೆ. ಬಿ.ನಾರಾಯಣಪುರ ಹಾಗೂ ಮಾರತ್‌ಹಳ್ಳಿ ವರ್ತುಲ ರಸ್ತೆ ಮಗ್ಗುಲಲ್ಲಿರುವ ಈ ಕೆರೆ ಸೂಕ್ತ ನಿರ್ವಹಣೆಯಿಲ್ಲದೆ ಕೊಚ್ಚೆ ಗುಂಡಿಯಾಗಿ ಪರಿವರ್ತನೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಒತ್ತುವರಿಯಾಗಿರುವ ಕೆರೆಗಳ ಜಾಗ ತೆರವುಗೊಳಿಸುವುದು ಬಹಳ ವರ್ಷಗಳಿಂದ ಕೇವಲ ಚರ್ಚೆಯಾಗಿಯೇ ಉಳಿದಿದೆ. ಹೀಗಾಗಿ, ಕನಿಷ್ಠ ಉಳಿದಿರುವ ಕೆರೆಗಳನ್ನಾದರೂ ಅಭಿವೃದ್ಧಿಪಡಿಸಿ ರಕ್ಷಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಅವರು ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮಾರತ್‌ಹಳ್ಳಿ ವರ್ತುಲ ರಸ್ತೆಯ ಮಾರ್ಗ ಹಾಗೂ ಬಿ.ನಾರಾಯಣಪುರ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕೆರೆಯ ನೀರು ಕಲುಷಿತಗೊಂಡು ವಿಷ ಜಂತುಗಳ ತಾಣವಾಗಿರುವುದರಿಂದ ಮಾರ್ಗದಲ್ಲಿ ಓಡಾಡುವವರಿಗೆ ಭೀತಿ ಆವರಿಸಿದೆ. ಅಶುಚಿತ್ವದಿಂದ ಪರಿಸರ ಹಾಳಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಬಿಬಿಎಂಪಿ ಚುನಾವಣೆ ನಂತರ ಕೆರೆ ಅಭಿವೃದ್ಧಿಯಾಗಿ ವಿಹಾರ ಯೋಗ್ಯ ತಾಣವಾಗಬಹುದು ಎಂದು ನಂಬಿದ್ದ ನಿವಾಸಿಗಳಿಗೆ ಈಗ ಭ್ರಮನಿರಸನವಾಗಿದೆ ಎಂದು ಹಿರಿಯರಾದ ನಂಜಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು, ಪ್ಲಾಸ್ಟಿಕ್, ಕಸ, ತ್ಯಾಜ್ಯ ಕೂಡ ಕೆರೆ ಸೇರುತ್ತಿದೆ. ಇದರಿಂದ ಕೆರೆಯ ನೀರು ಮತ್ತಷ್ಟು ಕಲುಷಿತಗೊಂಡು ಕೆಟ್ಟ ವಾಸನೆ ಬೀರುತ್ತಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ರೋಗ ಹರಡುವ ಮುನ್ನ ಕೆರೆ ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಾಲಿಕೆ ಸದಸ್ಯೆ ಸ್ಪಷ್ಟನೆ: ಈ ಬಗ್ಗೆ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಸದಸ್ಯೆ ಆರ್. ಮಂಜುಳಾದೇವಿ, `ಕೆರೆಯನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುವ ಸಂಬಂಧ ಪಾಲಿಕೆ ಎಂಜಿನಿಯರ್ ಅವರೊಂದಿಗೆ ಚರ್ಚಿಸಲಾಗುವುದು. ಕೂಡಲೇ ಕೆರೆಯ ಸುತ್ತ ಬೇಲಿ ಹಾಕಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT