ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟ ಬೆಳಕು, ಬಿಟ್ಟ ಬೆಳಕು

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಲಿಯೋನಾರ್ಡೊ ಡಾವಿಂಚಿಯ `ಲೇಡಿ ವಿತ್ ಆ್ಯನ್ ಅರ್ಮಿನ್~ ಕಲಾಕೃತಿಯಲ್ಲಿ ಬೆಳಕಿನ ಸಂಯೋಜನೆ ವಿಶಿಷ್ಟವಾಗಿದೆ. ಸಾಮಾನ್ಯವಾಗಿ ಬಲಗೈನಲ್ಲಿ ಬ್ರಶ್ಶು ಹಿಡಿಯುವ ಕಲಾವಿದರು ಎಡಭಾಗದಿಂದ ಬೆಳಕು ಬಿದ್ದಂತೆ ಚಿತ್ರಗಳನ್ನು ಮೂಡಿಸುತ್ತಾರೆ. ಆ ಸಂಯೋಜನೆಗೆ ತಕ್ಕಂತೆ ಚಿತ್ರದಲ್ಲಿ ಬೆಳಕು-ನೆರಳಿನ ಸೃಷ್ಟಿಯಾಗುತ್ತದೆ. ಆದರೆ, ಈ ಕಲಾಕೃತಿಯಲ್ಲಿ ಡಾವಿಂಚಿ ಬಲಬದಿಯ ಮೇಲ್ಭಾಗದಿಂದ ಬೆಳಕು ಬಿದ್ದಿರುವಂತೆ ಚಿತ್ರವನ್ನು ಬಿಡಿಸಿದ್ದಾರೆ. ಆ ಬೆಳಕಿನಿಂದಾಗಿರುವ ಪರಿಣಾಮ ಸಹಜವಾಗಿಯೇನೂ ಇಲ್ಲ ಅರ್ಥಾತ್ ರಿಯಲಿಸ್ಟಿಕ್ ಆಗಿಲ್ಲ.

ಸಾಮಾನ್ಯವಾಗಿ ಮೇಲ್ಭಾಗದಿಂದ ಬೆಳಕು ಬಿದ್ದರೆ ಕುತ್ತಿಗೆಯ ಕೆಳಭಾಗದಲ್ಲಿ ನೆರಳು ಮೂಡಬೇಕು. ಈ ಚಿತ್ರದಲ್ಲಿ ಡಾವಿಂಚಿ ಪ್ರಜ್ಞಾಪೂರ್ವಕವಾಗಿ ಹಾಗೆ ಆಗಲು ಬಿಟ್ಟಿಲ್ಲ. ಯುವತಿಯ ಕೊರಳಲ್ಲಿ ಇರುವ ಹಾರದ ಮಣಿಗಳ ಹಿಂದೆ ಬೆಳಕಿನ ಬಿಂಬಗಳನ್ನು ಬೇಕೆಂದೇ ಉಳಿಸಿದ್ದಾನೆ. ಸಾಮಾನ್ಯವಾಗಿ ಸಹಜತೆಗೆ ಒತ್ತುಕೊಡುವವರು ಬೆಳಕನ್ನು ಚಿತ್ರದಲ್ಲಿ `ಮರ್ಜ್~ ಮಾಡುತ್ತಾರೆ ಅರ್ಥಾತ್ ಹದವಾಗಿ ಬೆಸೆಯುತ್ತಾರೆ. ಆದರೆ, ಡಾವಿಂಚಿ ಈ ಚಿತ್ರದಲ್ಲಿ ಹಾಗೆ ಮಾಡದೆ ಭಾವಕ್ಕೆ ಒತ್ತುನೀಡಿದ್ದಾನೆ. ಯುವತಿಯ ಬಲಮುಂಗೈ ಮೇಲೆ ಬಿದ್ದಿರುವ ಬೆಳಕು ಕೂಡ ಅಸಹಜವಾದದ್ದೇ ಆದರೂ ಅದರಲ್ಲಿ ಆಕೆಗೆ ಆಗಿರಬಹುದಾದ ಪುಳಕ ಗೋಚರವಾಗುತ್ತದೆ.

ಡಾವಿಂಚಿಯ ಮೋನಾಲಿಸ ಚಿತ್ರಕ್ಕೂ ಇದಕ್ಕೂ ದೊಡ್ಡ ಮಟ್ಟದ ವ್ಯತ್ಯಾಸವಿದೆ. ಅದರಲ್ಲಿ ನೋಡುಗರ ದೃಷ್ಟಿಯನ್ನು ಮೋನಾಲಿಸ ನಗೆಯೊಂದೇ ಹಿಡಿದಿಡುತ್ತದೆ. ಈ ಚಿತ್ರದಲ್ಲಿರುವ ಯುವತಿಯ ತುಟಿಯ ಆಕಾರ ಮೋನಾಲಿಸ ತರಹವೇ ಇದ್ದರೂ ಅದರ ಭಾವ ಬೇರೆ. ಅಳಿಲಿನ ಜಾತಿಗೆ ಸೇರಿದ `ಅರ್ಮಿನ್~ ಎಂಬ ಮುದ್ದುಪ್ರಾಣಿ ಅವಳ ಮಡಿಲಲ್ಲಿದೆ. ಕಣ್ಣಲ್ಲಿ ಪ್ರಕೃತಿ ಸೌಂದರ್ಯ ಕಂಡು ಖುಷಿಗೊಂಡ ಹೊಳಪು. ತುಟಿಯಲ್ಲಿನ ಸಣ್ಣ ನಗೆಗೆ ನಲ್ಲನ ಪ್ರೇಮದ ಇಶಾರೆ ಕಾರಣವಲ್ಲ; ಪ್ರಕೃತಿ ಸೌಂದರ್ಯವೇ ಕಾರಣ ಎನ್ನಿಸುತ್ತದೆ. ಯೌವನದ ಸೂಚನೆ, ಮುಗ್ಧತೆ ಎಲ್ಲವನ್ನೂ ಯುವತಿಯ ತುಟಿಯಲ್ಲಿ ಮೂಡಿರುವ ಸಣ್ಣ ನಗೆ, ಕಣ್ಣಲ್ಲಿನ ಹೊಳಪು ದಾಟಿಸುತ್ತದೆ. ಅವಳ ಈ ನಗುವಿಗೆ ಮನುಷ್ಯನ ಪ್ರೇಮ ಪಲ್ಲವಿಸಿರುವುದು ಕಾರಣವಲ್ಲ; ಅದು ಪ್ರಕೃತಿಯ ಸೊಬಗು ಕಂಡು ಮೂಡಿರಬಹುದಾದ ಪುಳಕಿತಭಾವ.

ಚಿತ್ರ ನೈಜವಾಗಿ ಇರಲೇಬೇಕೆಂದೇನೂ ಇಲ್ಲ. ಡಾವಿಂಚಿ ಬೆಳಕು-ನೆರಳಿನ ಸಂಯೋಜನೆಯಲ್ಲೂ ಹೇಗೆ ತನ್ನತನ ತೋರುತ್ತಿದ್ದ ಎಂಬುದು ಇದರಲ್ಲಿ ಗೊತ್ತಾಗುತ್ತದೆ. ವರ್ಮೀರನ ಚಿತ್ರಗಳಿಗೆ ಇದನ್ನು ಹೋಲಿಸಬಹುದು. ಸಾಮಾನ್ಯವಾಗಿ ವರ್ಮೀರ್ ಎಡಬದಿಯಿಂದ ಬೆಳಕು ಬಿದ್ದಂತೆಯೇ ಚಿತ್ರವನ್ನು ಬಿಡಿಸುತ್ತಾನೆ. ಡಾವಿಂಚಿ ಮಾರ್ಗ ಅದಕ್ಕಿಂತ ಸಂಪೂರ್ಣ ಭಿನ್ನವಾದದ್ದು.

ಇದು ಡಾವಿಂಚಿ ತನ್ನತನಕ್ಕೆ ಸಾಕ್ಷಿಯಾದ ಅಪರೂಪದ ಹಾಗೂ ಸೊಗಸಾದ ಚಿತ್ರವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT