ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರೇಶ್ವರ ಮಾಲಾಧಾರಿಗಳಿಂದ ವ್ರತಾಚರಣೆ

Last Updated 13 ಡಿಸೆಂಬರ್ 2013, 6:40 IST
ಅಕ್ಷರ ಗಾತ್ರ

ಹೂವಿನಹಡಗಲಿ: ಆರಾಧ್ಯ ದೈವ  ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ  ಮಾಲೆ ಧರಿಸುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಪಟ್ಟಣದೆಲ್ಲೆಡೆ  ರುದ್ರಾಕ್ಷಿ ಮಾಲೆ ಧರಿಸಿದ  ಶ್ವೇತ ವಸ್ತ್ರಧಾರಿ ಗುರು ವೃಂದವರೇ ಕಾಣಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ  ಕಳೆದ 16 ವರ್ಷಗಳಿಂದ ಕೊಟ್ಟೂರೇಶ್ವರ ಮಾಲಾಧಾರಣೆ ಕಾರ್ಯಕ್ರಮ ನಡೆಯುತ್ತಾ ಬಂದಿದ್ದು, ಈ ವರ್ಷ  ಹೆಚ್ಚಿನ  ಸಂಖ್ಯೆಯ ಭಕ್ತರು ಮಾಲೆಧರಿಸಿ ಕಠಿಣ ವ್ರತಾಚರಣೆಯಲ್ಲಿ ತೊಡಗಿದ್ದಾರೆ. ಒಂದು ತಿಂಗಳು ಪರ್ಯಂತ ವ್ರತಾಚರಣೆ  ನಡೆಯುತ್ತಿದ್ದು, ಕಳೆದ ತಿಂಗಳ 25, ಈ ತಿಂಗಳ 2 ಮತ್ತು 9 ನೇ ಸೋಮವಾರದಂದು  ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಸಮ್ಮುಖದಲ್ಲಿ  ಅಪಾರ ಸಂಖ್ಯೆಯ ಭಕ್ತರು ಮಾಲೆ ಧರಿಸಿದ್ದಾರೆ.

ಚಿಕ್ಕ ಬಾಲಕರಿಂದ ಹಿಡಿದು ವಯೋವೃದ್ಧರು ಕೂಡ  ರುದ್ರಾಕ್ಷಿ ಮಾಲೆ ಧರಿಸಿ,  ಪಟ್ಟಣದ ಗೋಣಿಬಸವೇಶ್ವರ ದೇವಸ್ಥಾನ ಆವರಣದಲ್ಲಿ  ನಿರ್ಮಿಸಿರುವ  ಕೊಟ್ಟೂರು ಸ್ವಾಮಿಯ ಸನ್ನಿಧಾನದಲ್ಲಿ  ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ. ಕೊರೆಯುವ ಚಳಿಯಲ್ಲೂ ನಿತ್ಯ ಬೆಳಗ್ಗೆ ಮತ್ತು ಸಂಜೆ  ತಣ್ಣೀರು ಸ್ನಾನ ಮಾಡುವ ಮಾಲಾಧಾರಿಗಳು ಸಾಮೂ­ಹಿಕ ಇಷ್ಟಲಿಂಗಪೂಜೆ ಕೈಗೊಂಡು, ಶ್ರೀ ಸ್ವಾಮಿಯ ನಾಮಾವಳಿ, ಮಂತ್ರಗಳನ್ನು ಪಠಿಸಿ ಗುರು ಕೊಟ್ಟೂರೇಶ್ವರನ  ಸ್ಮರಣೆಯಲ್ಲಿ ಭಕ್ತಿಯ ಪರಾಕಾಷ್ಠೆ ತಲುಪುತ್ತಾರೆ.

ವ್ರತಾಚರಣೆ ಸಂದರ್ಭದಲ್ಲಿ  ಬಿಳಿ ಲುಂಗಿ, ಬಿಳಿ ಅಂಗಿ, ಕೆಂಪು ವಸ್ತ್ರ  ಧರಿಸುವ ಗುರುವೃಂದದವರು  ಬೆಳಗ್ಗೆ ಮತ್ತು ಸಂಜೆ   ಪೂಜೆ ಮುಗಿಸಿದ ಬಳಿಕ  ಸಾತ್ವಿಕ ಆಹಾರ ಸೇವಿಸಿ ನಿರ್ಮಲ ಮನಸ್ಸಿನಿಂದ ದಿನ ಕಳೆ­ಯುತ್ತಾರೆ. ಬೇರೆಯವರೊಂದಿಗೆ ಮಾತಿಗಿಳಿ­ಯುವಾಗ  ‘ಗುರುವೇ’ಎಂದೇ ಸಂಬೋಧಿಸುತ್ತಾರೆ. ವ್ರತ ಮುಗಿಯುವವರೆಗೂ ಪಾದರಕ್ಷೆ ತ್ಯಜಿಸಿ, ಬರಿಗಾಲಲ್ಲಿ ನಡೆದು ದೇಹ ಮತ್ತು ಮನಸ್ಸು ದಂಡಿಸುತ್ತಾರೆ.

ಪಂಚಗಣಾಧೀಶ್ವರರಲ್ಲಿ ಒಬ್ಬರಾದ, ಸಮಾನತೆಯ ಹರಿಕಾರ  ಕೊಟ್ಟೂರು  ಗುರುಬಸವ ಸ್ವಾಮಿ ಮಾಲೆ ಧರಿಸಲು ಯಾವುದೇ ಜಾತಿಭೇದವಿಲ್ಲ ಎನ್ನುತ್ತಾರೆ ಗುರುವೃಂದದ  ಕಾರ್ಯದರ್ಶಿ ಎಚ್.ಎಂ. ವೀರಯ್ಯ ಮತ್ತು  ವ್ಯವಸ್ಥಾಪಕ ಸೋವೇನಹಳ್ಳಿ ರಾಚನಗೌಡ.
ಕಳೆದ 8 ವರ್ಷದಿಂದ ಸ್ವಾಮಿಯ ಮಾಲೆ ಧರಿಸುವ ನನಗೆ ವರ್ಷದಿಂದ ವರ್ಷಕ್ಕೆ ಒಳಿತಾಗುತ್ತಾ ಬಂದಿದೆ. ಮನೋ ಇಷ್ಟಾರ್ಥಗಳು ಸಿದ್ಧಿಸಿವೆ  ಎಂದು ಎಚ್. ಮಂಜುನಾಥ  ತನ್ನ ಅನುಭವ  ಹೇಳಿಕೊಳ್ಳುತ್ತಾನೆ.

ವೃತ್ತಿ ಬದುಕಿಗೆ ಗಂಡಾಂತರ ಎದುರಾಗಿದ್ದಾಗ  ಸ್ವಾಮಿಯ ಸ್ಮರಣೆ ಮಾಡಿ ಮಾಲೆ ಧರಿಸಿದೆ. ಕೊಟ್ರಯ್ಯ ಸ್ವಾಮಿ ನನ್ನೆಲ್ಲಾ ಕಷ್ಟಗಳನ್ನು ನಿವಾರಿಸಿದ್ದರಿಂದ  ಪ್ರತಿ ವರ್ಷ ಮಾಲೆ ಧರಿಸುತ್ತಿರುವುದಾಗಿ  ಎಂ.ಎಂ. ವಾಡದ ಬಸವರಾಜ ಬಿದರಳ್ಳಿ ಹೇಳಿದರು. ಇದೇ 16ರಂದು ಕೊಟ್ಟೂರಿನಲ್ಲಿ ನಡೆಯಲಿರುವ ಕಾರ್ತಿಕೋತ್ಸವದಲ್ಲಿ ಪಾಲ್ಗೊಳ್ಳಲು  ಗುರುಮಾಲಾ­ಧಾರಿಗಳು  ಪಾದಯಾತ್ರೆ ತೆರಳುತ್ತಿದ್ದು, ಅಂಗವಾಗಿ 14 ರಂದು ಪಟ್ಟಣದಲ್ಲಿ ಭವ್ಯ ಮೆರವಣಿಗೆ ಮೂಲಕ  ಪಾದಯಾತ್ರಿಗಳನ್ನು ಬೀಳ್ಕೊಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT