ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ `ಕನಸಿನ ಮನೆ'

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಆಧುನಿಕ ಸೌಲಭ್ಯಗಳು ಇಲ್ಲದ, ಆಧುನಿಕ ಜನಗಳೂ ಇಲ್ಲದ ಕೊಡಗಿನ ಹಳ್ಳಿಯೊಂದರಲ್ಲಿ `ನನ್ನ ಮನೆ' ಇದೆ. ಅಲ್ಲೊಂದು ಇಲ್ಲೊಂದು ಪುಟ್ಟ ಮನೆ ಇರುವ ಈ ಊರಿನಲ್ಲಿ ನಮ್ಮದೇ ದೊಡ್ಡ ಮನೆ. ನನ್ನ ಪಾಲಿನ ಅರಮನೆ. ಝಗಮಗಿಸುವ ಕಾಂಕ್ರೀಟ್ ಕಟ್ಟಡಗಳಿಗಿಂತ ಸರಳತೆಯಲ್ಲಿಯೇ ಭವ್ಯತೆ ಹೊಂದಿರುವ ಈ ಮನೆ ನನಗೆ ಹೆಚ್ಚು ಆಪ್ತ.

ಮನೆ ಸುತ್ತಲೂ ಕಾಫಿ, ಕಾಳುಮೆಣಸು, ರಬ್ಬರ್, ಅಡಿಕೆ, ತೆಂಗು, ಬಾಳೆ ತೋಟ... ಅದರಾಚೆಗೆ ದಟ್ಟ ಕಾಡು. ನಡುವೆ ಜುಳುಜುಳು ಹರಿವ ನದಿ, ಧುಮ್ಮಿಕ್ಕುವ ಜಲಪಾತ ಮನಸ್ಸಿಗೆ ಮುದ ನೀಡುತ್ತವೆ.ನನ್ನ `ಕನಸಿನ ಮನೆ' ಹೀಗೆಯೇ ಇರಬೇಕು ಎಂದು ನಾನು ಕನಸು ಕಾಣುವ ಮೊದಲೇ ಅಂದರೆ, ನನ್ನ 17ನೇ ವಯಸ್ಸಿನಲ್ಲಿಯೇ (1990) ಮದುವೆಯಾಗಿ ಈ ಮನೆಗೆ ಬಂದೆ. ಮನೆಗೆ ಬಂದವರೆಲ್ಲರೂ ಸಾಂಪ್ರದಾಯಿಕ ಶೈಲಿಯ ನಮ್ಮ ಮನೆಯ ಅಂದ ಚಂದ ಹೊಗಳುತ್ತಾರೆ. ಫೋಟೊ ತೆಗೆಯುತ್ತಾರೆ. `ಹೋಮ್ ಸ್ಟೆ' ಮಾಡಲು ಒತ್ತಾಯಿಸುತ್ತಾರೆ.

ವೆಚ್ಚ ರೂ. 75,000!
2,700 ಚದರಡಿ ವಿಸ್ತೀರ್ಣದ ಈ `ನಮ್ಮ ಮನೆ' 1975ರಲ್ಲಿ ನಿರ್ಮಾಣವಾಯಿತು. ಆಗ ತಗುಲಿದ ವೆಚ್ಚ ರೂ. 75,000!ಛಾವಣಿಗೆ ಮಂಗಳೂರು ಹೆಂಚು ಹೊದಿಸಲಾಗಿದೆ. ಅದರ ಕೆಳಕ್ಕೆ ಮರದ ಹಲಗೆಗಳ ಮುಚ್ಚಿಗೆ ಇದೆ. ಮನೆಯ ನಾಲ್ಕು ಸುತ್ತಲೂ ಜಗಲಿ, ಕಂಬಗಳ ಸಾಲು ಮನೆಯ ಆಕರ್ಷಣೆ ಹೆಚ್ಚಿಸಿವೆ.

ಮುಂಭಾಗದಲ್ಲಿ ಚಾವಡಿ, ಅದಕ್ಕೆ ಹೊಂದಿಕೊಂಡಂತೆಯೇ ಮಲಗುವ ಕೋಣೆ,  ಮಧ್ಯಭಾಗದಲ್ಲಿ ಕೈಸಾಲೆ, ಪಕ್ಕದಲ್ಲಿ ದೇವರ ಕೋಣೆ, ಹಿಂಭಾಗದಲ್ಲಿ ಊಟದ ಹಜಾರ, ಎರಡು ಅಡುಗೆ ಕೋಣೆ, ಪುಟ್ಟ ಸ್ಟೋರ್ ರೂಂ ಇವೆ.ಪುಸ್ತಕ ಪ್ರೇಮಿಯಾದ ನಾನು ಈಗ ಒಂದು ಅಡುಗೆ ಕೋಣೆಯನ್ನೇ ಗ್ರಂಥಾಲಯವಾಗಿಸಿದ್ದೆೀನೆ.ಈ ಸುವಿಶಾಲ ಮನೆ 19 ಬಾಗಿಲುಗಳು, 28 ಕಿಟಕಿಗಳನ್ನು ಹೊಂದಿದೆ. ಇವಕ್ಕೆ ಉಪಯೋಗಿಸಿದ ಸಾಗುವಾನಿ (ತೇಗದ) ಮರ ಇದೇ ಜಾಗದಲ್ಲಿ ಬೆಳೆದದ್ದಾಗಿದೆ!

ಮನೆಯ ಎಲ್ಲ 19 ಕೋಣೆಗಳ ಬಾಗಿಲಿಗೂ ಅಳವಡಿಸಿದ ಬೋಲ್ಟ್‌ಗಳಿಗೆ ಕಬ್ಬಿಣದ ವಾಷರ್ ಬದಲಾಗಿ ಹಳೆಕಾಲದ ನಾಣ್ಯವನ್ನು (ಒಟ್ಟೆ ಮುಕ್ಕಾಲು) ಬಳಸಿಕೊಳ್ಳಲಾಗಿದೆ!ಮನೆಗೊಂದು ಮಾಳಿಗೆಯೂ ಇದ್ದು, ಅದರ ಮೇಲೆ ಸಣ್ಣ `ಅಟ್ಟ' ಇದೆ. ಮಾಳಿಗೆಯಲ್ಲಿ ಅಡಿಕೆ ಸಂಗ್ರಹಿಸಿ ಇಡುವ ಪತ್ತಾಯ, ಉಪ್ಪಿನಕಾಯಿ, ತೆಂಗಿನೆಣ್ಣೆ, ಬೆಲ್ಲ ದಾಸ್ತಾನು ಇಡುವ ಹೊಗೆ ಅಟ್ಟ,  ಅಲ್ಲದೆ ಅತಿಥಿಗಳಿಗಾಗಿ ಕೋಣೆಯೂ ಇದೆ.

ವಿದ್ಯುತ್ ಸ್ವಾವಲಂಬನೆ
ಮನೆಯಲ್ಲಿ ಬೆಳಕಿಗಾಗಿ ಸೌರಶಕ್ತಿ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದಲ್ಲಿ ಮನೆಯ ಮಗ್ಗಲಲ್ಲಿ ರಭಸದಿಂದ ಹರಿಯುವ ಹಳ್ಳದ ನೀರಿಗೆ ಅಡ್ಡಲಾಗಿ ಜನರೇಟರ್ ಇಟ್ಟು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುತ್ತೇವೆ.ನಮ್ಮ ಮನೆಯ ವಿಶೇಷವೆಂದರೆ ಬೇಸಿಗೆಯಲ್ಲಿ ಹೊರಗೆ ಎಷ್ಟೇ ಬಿಸಿಲಿದ್ದರೂ ಮನೆಯೊಳಗೆ ಮಾತ್ರ ತಂಪು ಹವೆ ಇರುತ್ತದೆ. ಇನ್ನೊಂದು ಅಚ್ಚರಿ ಎಂದರೆ, ಮಳೆಗಾಲ ಮತ್ತು ಚಳಿಗಾಲದಲ್ಲಿ ಮನೆಯ ಒಳಭಾಗದಲ್ಲಿ ಸಾಕಷ್ಟು ಬೆಚ್ಚಗಿರುತ್ತದೆ.
ಟಿ.ವಿ ಇರದ, ಇಂಟರ್‌ನೆಟ್, ಮೊಬೈಲ್ ಸಂಪರ್ಕ ಸಾಧ್ಯವಾಗದ, ಪ್ರಶಾಂತ ಪರಿಸರದ `ನಮ್ಮ ಮನೆ' ಧ್ಯಾನಸ್ಥ ಮನಸ್ಸುಗಳಿಗೆ ಮೆಚ್ಚಿನ ತಾಣವಾಗುವುದರಲ್ಲಿ ಸಂಶಯವೇ ಇಲ್ಲ.
          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT