ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ರಸ್ತೆಗಳ ದುರವಸ್ಥೆ: ನಾಣಯ್ಯ ಆಕ್ರೋಶ

Last Updated 5 ಡಿಸೆಂಬರ್ 2012, 19:43 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ):  `ಕೊಡಗಿನ ರಸ್ತೆಗಳಲ್ಲಿ ಸಂಚರಿಸಿದರೆ ಲೇಬರ್ ವಾರ್ಡ್‌ನ ಸಹಾಯವಿಲ್ಲದೇ ಸುಗಮವಾಗಿ ಹೆರಿಗೆಯಾಗುತ್ತದೆ. ಆಸ್ಪತ್ರೆಯ ಖರ್ಚು ಉಳಿಯುತ್ತದೆ' ಎಂದು ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ ಇತ್ತೀಚೆಗೆ ಮಡಿಕೇರಿಯಲ್ಲಿ ನೀಡಿದ್ದ ಹೇಳಿಕೆಯೊಂದು ಬುಧವಾರ ವಿಧಾನಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿಯಾಯಿತು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಡಿಕೇರಿಗೆ ತೆರಳಿದ್ದ  ತಾರಾ ಅಲ್ಲಿನ ರಸ್ತೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಕೊಡಗು ಜಿಲ್ಲೆಯಲ್ಲಿ ರಸ್ತೆಗಳ ದುರವಸ್ಥೆಯನ್ನು ಪ್ರಸ್ತಾಪಿಸಿದ ಎಂ.ಸಿ.ನಾಣಯ್ಯ  ತಾರಾ ಹೇಳಿಕೆಯನ್ನು ಉಲ್ಲೇಖಿಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಕೊಡಗಿನ ಐದು ಪ್ರಮುಖ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ ಎಂದು ಸರ್ಕಾರದ ಗಮನ ಸೆಳೆದರು. ಅದಕ್ಕೆ ಸದನದಲ್ಲಿ ಹಾಜರಿದ್ದ ತಾರಾ ಅವರೂ ತಲೆಯಾಡಿಸಿದರು.

`ಕೊಡಗು ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವ ಕೋಟ್ಯಂತರ ರೂಪಾಯಿ ಹಣ ಯಾರ ಜೇಬು ಸೇರುತ್ತಿದೆ. ನಿಮ್ಮ ಬಗ್ಗೆಯೇ ಅನುಮಾನ ಬರುತ್ತಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಅವರನ್ನು ನಾಣಯ್ಯ ಕುಟುಕಿದರು.

`ರಸ್ತೆ ರಿಪೇರಿ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಬ್ಬರು ಜನಪ್ರತಿನಿಧಿಗಳು ಕೊಡಗಿನಲ್ಲಿ ಸರ್ವಾಧಿಕಾರ ನಡೆಸುತ್ತಿರುವುದು ಇದಕ್ಕೆ ಕಾರಣ' ಎಂದು ನಾಣಯ್ಯ ಆರೋಪಿಸಿದರು.

ಇದಕ್ಕೆ ಆಕ್ಷೇಪಿಸಿದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, `ನೀವು ಸುತ್ತಿಬಳಸಿ ಮಾತನಾಡಬೇಡಿ, ನೇರವಾಗಿ ಹೇಳಿ' ಎಂದರು. ಅದಕ್ಕೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದರು.

ಸದಸ್ಯರನ್ನು ಸಮಾಧಾನಪಡಿಸಿದ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ಉದಾಸಿ ಅವರಿಗೆ ಉತ್ತರಿಸಲು ಸೂಚಿಸಿದರು. ಇದೇ 20ರಿಂದ 25ರ ನಡುವೆ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ತಾವೇ ಖುದ್ದಾಗಿ ರಸ್ತೆಗಳ ವೀಕ್ಷಣೆ ಮಾಡುವುದಾಗಿ ಉದಾಸಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ `ಡಿ.9ರ ಹಾವೇರಿ ಸಮಾವೇಶದ ನಂತರ ನೀವು ಮಾಜಿ ಸಚಿವರಾಗುತ್ತೀರಿ. ಕೊಡಗಿಗೆ ಕೆಜೆಪಿ ಸಂಘಟನೆಗೆ ಬರುವಿರಾ' ಎಂದರು.

ಕೂಡಲೇ ಎದ್ದು ನಿಂತ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ, `ಹೊರಟ್ಟಿ ಹಾಗೂ ನಾಣಯ್ಯ ಇಬ್ಬರನ್ನೂ ಅಕ್ಕಪಕ್ಕದಲ್ಲಿ ಕೂರಿಸಬೇಡಿ. ಬರೀ ಕಾಲು ಎಳೆಯುವ ಕೆಲಸ ಮಾಡುತ್ತಾರೆ' ಎಂದು ಛೇಡಿಸಿದರು. ಇದಕ್ಕೆ ಸಭಾಪತಿ ನಗುತ್ತಲೇ ಮತ್ತಿಕಟ್ಟಿ ಅವರ ಬೇಡಿಕೆಯನ್ನು ಪರಿಗಣಿಸುವುದಾಗಿ ಹೇಳಿದರು.

`ನೀವು ಹಿಂದೆ ಜನತಾ ಪರಿವಾರದಲ್ಲಿದ್ದವರು. ಕೆಜೆಪಿ ಬದಲಿಗೆ ನಮ್ಮಲ್ಲಿಗೆ ಬನ್ನಿ' ಎಂದು ಉದಾಸಿಗೆ ನಾಣಯ್ಯ ಆಹ್ವಾನ ನೀಡಿದರು. `ಸೋಮಣ್ಣ ನೀನು ನಮ್ಮವನೇ ಕಾಣಪ್ಪಾ, ನಮ್ಮನ್ನ ಮರೀಬ್ಯಾಡ . ಎಲ್ಲರೂ ಸೇರಿ ಜನತಾ ಪರಿವಾರವನ್ನು ಬಲಪಡಿಸೋಣ' ಎಂದು ಹೊರಟ್ಟಿ ದನಿಗೂಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಉದಾಸಿ, `ಸಿದ್ದರಾಮಯ್ಯ ಅವರನ್ನೂ ಕರೆಯಿರಿ' ಎಂದು ಸಲಹೆ ನೀಡಿದರು.

`ಕಾಂಗ್ರೆಸ್‌ನವರು ಸಿದ್ರಾಮಣ್ಣನನ್ನು ಸಿಎಂ ಮಾಡಲು ಹೊರಟಿದ್ದಾರೆ... ಅದಕ್ಕೆ ಅವರನ್ನು ಕರೆಯುವುದಿಲ್ಲ' ಎಂದು ಹೊರಟ್ಟಿ ಹೇಳಿದಾಗ ಮತ್ತೆ ನಗು ಆವರಿಸಿತು.

`ಒಂದು ದಿನ ವಿಸ್ತರಣೆ'
ಸುವರ್ಣ ವಿಧಾನಸೌಧ: ಇಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಲು ಬುಧವಾರ ನಡೆದ ವಿಧಾನಸಭೆಯ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಈ ಹಿಂದಿನ ಯೋಜನೆಯ ಪ್ರಕಾರ ಡಿಸೆಂಬರ್ 12ಕ್ಕೆ ಅಧಿವೇಶನ ಅಂತ್ಯಗೊಳ್ಳಬೇಕಿತ್ತು. ಆದರೆ, ಡಿಸೆಂಬರ್ 13ರವರೆಗೂ ಕಲಾಪ ನಡೆಸಲು ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.


ಪ್ರಶ್ನೋತ್ತರ ವೇಳೆ
ಶೀಘ್ರದಲ್ಲಿ `ಧನ್ವಂತರಿ' ಸೇವೆ
ಆರೋಗ್ಯ ಕವಚ (108) ಮಾದರಿಯಲ್ಲಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಒದಗಿಸುವ `ಧನ್ವಂತರಿ' ಆಂಬುಲೆನ್ಸ್ ಸೇವೆಯನ್ನು ರಾಜ್ಯದ ಐದು ಕಡೆಗಳಲ್ಲಿ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಬುಧವಾರ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಮಾನಪ್ಪ ವಜ್ಜಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, `ಪಶು ವೈದ್ಯ ಪದವೀಧರರ ಕೊರತೆಯಿಂದಾಗಿ ಹೊಸ ಪಶುವೈದ್ಯ ಆಸ್ಪತ್ರೆಗಳನ್ನು ಆರಂಭಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಧನ್ವಂತರಿ ಸೇವೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಲಿಂಗಸುಗೂರು ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗುವುದು' ಎಂದರು.

17.77 ಲಕ್ಷ ರೈತರಿಗೆ ಸಾಲ
2011ರ ಜುಲೈ 1ರಿಂದ 2012ರ ಜೂನ್ 30ರವರೆಗೆ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ 17,77,003 ರೈತರಿಗೆ 7,279.56 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮಂಜೂರು ಮಾಡಲಾಗಿದೆ ಎಂದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಕಾಂಗ್ರೆಸ್ ಸದಸ್ಯ ದಿನೇಶ್ ಗುಂಡೂರಾವ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಈ ಅವಧಿಯಲ್ಲಿ ಮಂಜೂರಾದ ಮೊತ್ತದಲ್ಲಿ ರೂ 6,416.72 ಕೋಟಿ ಸಾಲ ವಿತರಿಸಲಾಗಿದೆ. ಈ ಪೈಕಿ 7,83,747 ರೈತರು ರೂ 2,809.22 ಕೋಟಿ ಮೊತ್ತದ ಸಾಲವನ್ನು ಮರುಪಾವತಿ ಮಾಡಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್‌ನ ಆರ್.ನರೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2012ರ ಜೂನ್ 30ರಿಂದ ಜುಲೈ 25ರ ಅವಧಿಯಲ್ಲಿ ಸಹಕಾರ ಸಂಘಗಳ ಮೂಲಕ 1,24,468 ರೈತರಿಗೆ 360.72 ಕೋಟಿ ರೂಪಾಯಿ ಬೆಳೆ ಸಾಲ ವಿತರಿಸಲಾಗಿದೆ. ಈ ಬಾರಿ 3,284.44 ಕೋಟಿ ರೂಪಾಯಿ ಅಸಲು ಮತ್ತು ರೂ 345.95 ಕೋಟಿ ಬಡ್ಡಿ ಸೇರಿದಂತೆ ರೂ 3,630.39 ಕೋಟಿ ಮೊತ್ತದ ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

15,830 ಹುದ್ದೆ ಖಾಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 64,053 ಮಂಜೂರಾದ ಹುದ್ದೆಗಳಿದ್ದು, ಈ ಪೈಕಿ 15,830 ಹುದ್ದೆಗಳು ಖಾಲಿ ಇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ವಿಧಾನಸಭೆಗೆ ತಿಳಿಸಿದರು.

ಬಿಜೆಪಿಯ ಎಲ್.ಎ.ರವಿಸುಬ್ರಹ್ಮಣ್ಯ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, `ಎ' ವೃಂದದ 6,309 ಹುದ್ದೆಗಳ ಮಂಜೂರಾತಿ ಇದ್ದು, 4,752 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 1,557 ಹುದ್ದೆಗಳು ಖಾಲಿ ಇವೆ. `ಬಿ' ವೃಂದದ 754 ಹುದ್ದೆಗಳ ಮಂಜೂರಾತಿ ಇದೆ. 501 ಭರ್ತಿ ಇದ್ದು, 253 ಖಾಲಿ ಇವೆ ಎಂದು ವಿವರಿಸಿದರು.

`ಸಿ' ವೃಂದದ 43,025 ಹುದ್ದೆಗಳ ಮಂಜೂರಾತಿ ಇದ್ದು, 33,046 ಹುದ್ದೆಗಳನ್ನು ತುಂಬಲಾಗಿದೆ. 9,979 ಹುದ್ದೆಗಳು ಖಾಲಿ ಇವೆ. `ಡಿ' ವೃಂದದ 13,965 ಹುದ್ದೆಗಳಲ್ಲಿ 9,924 ಮಾತ್ರ ಭರ್ತಿ ಇವೆ. 4,041 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ಕ್ರಮಕ್ಕೆ ಸೂಚನೆ

ರಾಜ್ಯದಲ್ಲಿನ ಅಂಗನವಾಡಿಗಳ ಒಟ್ಟು ಸಂಖ್ಯೆ ಮತ್ತು ಸ್ವಂತ ಕಟ್ಟಡಗಳನ್ನು ಹೊಂದಿರುವ ಅಂಗನವಾಡಿಗಳ ಸಂಖ್ಯೆ ಕುರಿತು ಜೆಡಿಎಸ್‌ನ ರಮೇಶ್ ಬಂಡಿಸಿದ್ದೇಗೌಡ ಅವರ ಪ್ರಶ್ನೆಗೆ ಉತ್ತರ ನೀಡಲು ಅನವಶ್ಯಕವಾಗಿ ಕಾಲಾವಕಾಶ ಕೋರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಸೂಚನೆ ನೀಡಿದರು.

ಪ್ರಶ್ನೋತ್ತರ ಅವಧಿಯ ಮೊದಲ ಪ್ರಶ್ನೆಯೇ ರಮೇಶ್ ಅವರದ್ದಾಗಿತ್ತು. ಈ ಪ್ರಶ್ನೆಗೆ ಉತ್ತರಿಸಲು 15 ದಿನ ಕಾಲಾವಕಾಶ ನೀಡುವಂತೆ ಅಧಿಕಾರಿಗಳು ಸ್ಪೀಕರ್ ಅವರಿಗೆ ಮನವಿ ಮಾಡಿದ್ದರು. ಇದನ್ನು ಕಂಡು ಕೆಂಡಾಮಂಡಲರಾದ ಸ್ಪೀಕರ್, `ಇಂತಹ ಪ್ರಶ್ನೆಗೆ ಉತ್ತರ ನೀಡಲು ಅಷ್ಟೊಂದು ಕಾಲಾವಕಾಶ ಅಗತ್ಯವಿಲ್ಲ. ಅಧಿಕಾರಿಗಳು ಅನವಶ್ಯಕವಾಗಿ ಕಾಲಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸದನಕ್ಕೆ ಉತ್ತರ ನೀಡಲು ನಿರ್ಲಕ್ಷ್ಯ ತೋರುತ್ತಿರುವವರ ವಿರುದ್ಧ ಕ್ರಮ ಜರುಗಿಸಿ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಅವರಿಗೆ ಸೂಚನೆ ನೀಡಿದರು.

`ಮಿತವ್ಯಯದಿಂದ ಹೊರಗಿಡಿ'
ಶಿಕ್ಷಣ ಇಲಾಖೆಯನ್ನೂ ಆರ್ಥಿಕ ಮಿತವ್ಯಯದ ವ್ಯಾಪ್ತಿಗೆ ತಂದಿರುವ ವಿಷಯದ ಕುರಿತು ಬುಧವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಗಂಭೀರ ಚರ್ಚೆ ನಡೆಯಿತು. ತಕ್ಷಣವೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂಬ ಆಗ್ರಹ ಕೇಳಿಬಂತು.

ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ 3,404 ಹುದ್ದೆಗಳನ್ನು ತುಂಬಲು ಆರ್ಥಿಕ ಮಿತವ್ಯಯದ ಆದೇಶ ಅಡ್ಡಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರು ಕಾಂಗ್ರೆಸ್‌ನ ರಾಜಶೇಖರ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದರು. ಆಗ, ಇಂತಹ ನಿರ್ಧಾರವನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್‌ನ ಡಾ.ಜಿ.ಪರಮೇಶ್ವರ ಆಗ್ರಹಿಸಿದರು. ಸರ್ಕಾರವನ್ನು ಕೆಣಕಲೂ ಯತ್ನಿಸಿದರು.

ತಕ್ಷಣ ತಿರುಗೇಟು ನೀಡಿದ ಸಚಿವರು, `ನೀವೇ ಸಚಿವರಾಗಿದ್ದಾಗ 2001ರಲ್ಲಿ ಶಿಕ್ಷಣ ಇಲಾಖೆಯನ್ನು ಆರ್ಥಿಕ ಮಿತವ್ಯಯದ ಅಡಿಯಲ್ಲಿ ತಂದವರು' ಎಂದು ಛೇಡಿಸಿದರು. `ಶಿಕ್ಷಣ ಇಲಾಖೆ ಅಗತ್ಯ ಸೇವೆಗಳಲ್ಲಿ ಒಂದು. ನಾನು ಹಣಕಾಸು ಸಚಿವನಾಗಿದ್ದ ಅವಧಿಯಲ್ಲಿ ಇಂತಹ ನಿರ್ಧಾರ ಕೈಗೊಂಡಿರಲಿಲ್ಲ. ಈಗಲಾದರೂ ಸರ್ಕಾರ ಅದನ್ನು ಆರ್ಥಿಕ ಮಿತವ್ಯಯದ ವ್ಯಾಪ್ತಿಯಿಂದ ಹೊರಕ್ಕೆ ಇಡಬೇಕು' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳವುದಾಗಿ ರವಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT