ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ರೈತರಿಗೆ ಅಪಾರ ನಷ್ಟ

ಬೆಂಬಲ ಬೆಲೆಯಡಿ ಬತ್ತ ಖರೀದಿ ವಿಳಂಬ
Last Updated 18 ಫೆಬ್ರುವರಿ 2013, 6:59 IST
ಅಕ್ಷರ ಗಾತ್ರ

ಮಡಿಕೇರಿ: ಬೆಂಬಲ ಬೆಲೆಯಡಿ ಬತ್ತವನ್ನು ಖರೀದಿಸಲು ಸರ್ಕಾರ ತೋರಿದ ವಿಳಂಬ ನೀತಿಯಿಂದಾಗಿ ಕೊಡಗಿನ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.

ಸಾಮಾನ್ಯವಾಗಿ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ ಬತ್ತವನ್ನು ಕಟಾವು ಮಾಡಿಟ್ಟುಕೊಳ್ಳಲಾ ಗುತ್ತದೆ. ಆದರೆ, ಇದನ್ನು ಬೆಂಬಲ ಬೆಲೆಯಡಿ ಖರೀದಿಸಲು ಫೆ.1ರಂದು ಸರ್ಕಾರವು ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಆದೇಶ ಹೊರಡಿಸಿದೆ.  

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಬಹಳಷ್ಟು ರೈತರು ಫೆಬ್ರುವರಿವರೆಗೆ ತಾಳಲಾಗದೆ ತಾವು ಬೆಳೆದಂತಹ ಬತ್ತವನ್ನು ಕ್ವಿಂಟಾಲ್‌ಗೆ ರೂ 1 ಸಾವಿರದಿಂದ ರೂ. 1,200 ದರದಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಿಬಿಟ್ಟಿದ್ದಾರೆ.

ಆದರೆ, ಈಗ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ರೂ 1,530 (`ಎ' ಗ್ರೇಡ್) ಹಾಗೂ ರೂ 1,500 ಘೋಷಣೆ ಮಾಡಿದೆ. (ಇದರಲ್ಲಿ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ರೂ. 250 ಹೊರತುಪಡಿಸಿದರೆ ಬಾಕಿ ಹಣವು ಕೇಂದ್ರ ಸರ್ಕಾರದ್ದು). ಇದರಿಂದ ಬತ್ತದ ಉತ್ತಮ ಇಳುವರಿ ಪಡೆದೂ ಲಾಭ ದಕ್ಕಲಿಲ್ಲ ಎನ್ನುವಂತಹ ಸ್ಥಿತಿ ರೈತರಿಗೆ ಎದುರಾಗಿದೆ.

ವ್ಯಾಪಾರಿಗಳಿಗೆ ಮಾರಾಟ
ಜಿಲ್ಲೆಯ ಸುಮಾರು ಶೇ 60ಕ್ಕಿಂತಲೂ ಹೆಚ್ಚು ರೈತರು ಈಗಾಗಲೇ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಬತ್ತವನ್ನು ಮಾರಿಬಿಟ್ಟಿದ್ದಾರೆ. ಕಳೆದ ವರ್ಷ ಬೆಂಬಲ ಬೆಲೆಯಡಿ ಖರೀದಿಸಿದ್ದ ಬತ್ತವನ್ನು ಸಂಗ್ರಹಿಸಿಟ್ಟು ಕೊಳ್ಳಲು ಗೋದಾಮುಗಳು ಸಾಕಾಗದೇ ಸರ್ಕಾರವು ಪರದಾಡಿತ್ತು. ಆಗ ಕ್ವಿಂಟಾಲ್‌ಗೆ ರೂ 1360 (`ಎ'ಗ್ರೇಡ್) ಹಾಗೂ ರೂ 1,330 (ಸಾಮಾನ್ಯ) ಬೆಂಬಲ ಬೆಲೆ ನೀಡಲಾಗಿತ್ತು. ಈ ವರ್ಷ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಲಾಗಿದ್ದರೂ ಅದರ ಲಾಭ ರೈತರಿಗೆ ದಕ್ಕದಂತಾಗಿದೆ.

ಒಂದು ಮೂಲದ ಪ್ರಕಾರ ಜಿಲ್ಲೆಯ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬಿತ್ತನೆ ಮಾಡಲಾಗಿದ್ದು, ಕನಿಷ್ಠ 1.20 ಲಕ್ಷ ಟನ್‌ನಷ್ಟು ಬತ್ತ ಉತ್ಪಾದನೆಯಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಶೇ 60ಕ್ಕಿಂತಲೂ ಹೆಚ್ಚು ಬತ್ತವನ್ನು ರೈತರು ವ್ಯಾಪಾರಸ್ಥರಿಗೆ ಮಾರಿಬಿಟ್ಟಿದ್ದಾರೆ.

`ಕೊಡಗಿನಲ್ಲಿ ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬತ್ತ ಕಟಾವು ಆರಂಭವಾಗುವುದರಿಂದ ಡಿಸೆಂಬರ್ ತಿಂಗಳಿನಲ್ಲಿಯೇ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಫೆಬ್ರುವರಿಯಲ್ಲಿ ಘೋಷಣೆ ಮಾಡಿದರೆ ಯಾರಿಗೆ ಪ್ರಯೋಜನ ?' ಎಂದು ಬತ್ತದ ಬೆಳೆಗಾರ ರೋಜಿ ಚಿಣ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯ ಮಡಿಕೇರಿ, ಗೋಣಿಕೊಪ್ಪ ಹಾಗೂ ಕುಶಾಲನಗರದಲ್ಲಿ ಕಳೆದ 15 ದಿನಗಳ ಹಿಂದೆ ಬತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇದುವರೆಗೆ 1,000 ಕ್ವಿಂಟಾಲ್‌ಗಿಂತಲೂ ಕಡಿಮೆ ಬತ್ತ ಖರೀದಿಯಾಗಿದೆ. ಮಾರ್ಚ್ 31ರವರೆಗೆ ಖರೀದಿಗೆ ಕಾಲಾವಕಾಶ ನೀಡಲಾಗಿದೆ.

ನೀರಾವರಿ ಬತ್ತಕ್ಕೆ ಬೇಡಿಕೆ
ಮಂಡ್ಯ, ಮೈಸೂರು, ಕೊಪ್ಪಳ, ಗಂಗಾವತಿ ಸೇರಿದಂತೆ ಇತರೆಡೆ ಬತ್ತವನ್ನು ನೀರಾವರಿಯಲ್ಲಿ ಬೆಳೆಯಲಾಗುತ್ತದೆ. ನೀರಾವರಿ ಇರುವುದರಿಂದ ಕಾಳು ಕಟ್ಟುವ ಸಂದರ್ಭದಲ್ಲಿ ಸಮೃದ್ಧ ನೀರು ದೊರೆತು ಹೆಚ್ಚಿನ ಪ್ರಮಾಣದಲ್ಲಿ ಇಳುವರಿ (ಅಕ್ಕಿ) ದೊರೆಯುತ್ತದೆ. ಹೀಗಾಗಿ ಈ ಬತ್ತಕ್ಕೆ ಮಾರುಕಟ್ಟೆಯಲ್ಲಿ ಒಳ್ಳೆಯ ದರವಿದೆ. ಕ್ವಿಂಟಾಲ್‌ಗೆ ರೂ 1,600ರಿಂದ ರೂ 2,000 ವರೆಗೆ ಇದೆ.

ಆದರೆ, ಕೊಡಗಿನಲ್ಲಿ ಮಳೆಯಾಧಾರಿತವಾಗಿ ಬತ್ತವನ್ನು ಬೆಳೆಯಲಾಗುತ್ತದೆ. ಕಾಳು ಕಟ್ಟುವ ಸಂದರ್ಭದಲ್ಲಿ ಮಳೆ ಕಡಿಮೆಯಾದರೆ ಬತ್ತದ ಇಳುವರಿ (ಅಕ್ಕಿ) ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಕೊಡಗಿನ ಬತ್ತಕ್ಕೆ ಹೊರಜಿಲ್ಲೆಗಳಲ್ಲಿ ಅಷ್ಟೊಂದು ದರ ಲಭಿಸುವುದಿಲ್ಲ.

ಹೀಗಾಗಿ ಅನಿವಾರ್ಯವಾಗಿ ರೈತರು ಜಿಲ್ಲೆಯಲ್ಲಿಯೇ ಮಾರಾಟ ಮಾಡಬೇಕಾಗಿದೆ. ಇದನ್ನು ಅರಿತ ವ್ಯಾಪಾರಸ್ಥರು ಚೌಕಾಸಿ ಮಾಡಿ, ಆದಷ್ಟು ಕಡಿಮೆ ಬೆಲೆಗೆ ಬತ್ತವನ್ನು ಪಡೆದುಕೊಳ್ಳುತ್ತಾರೆ.

ಇಂತಹ ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕಾಗಿದ್ದ ಸರ್ಕಾರ ವಿಳಂಬ ಮಾಡಿದ್ದರಿಂದ ರೈತರು ಬೇರೆ ದಾರಿಯಿಲ್ಲದೇ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಬತ್ತ ಮಾರಾಟ ಮಾಡಿ ಕೈತೊಳೆದುಕೊಂಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT