ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಬೆಳೆದುಬಂದ ಕನ್ನಡದ ದಾರಿ...

ಮಡಿಕೇರಿಯಲ್ಲಿ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 6 ಜನವರಿ 2014, 6:19 IST
ಅಕ್ಷರ ಗಾತ್ರ

ಮಡಿಕೇರಿ: 1932ರಲ್ಲಿ 18ನೇ ಸಾಹಿತ್ಯ ಸಮ್ಮೇಳನವು ಡಿ.ವಿ. ಗುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಗೂ 1982ರಲ್ಲಿ 54ನೇ ಸಾಹಿತ್ಯ ಸಮ್ಮೇಳನವು ಡಾ.ಶಂಬಾ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದವು. 32 ವರ್ಷಗಳ ನಂತರ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮಡಿಕೇರಿ ಸಾಕ್ಷಿಯಾಗಲಿದೆ.
ವಿಶಿಷ್ಟ ಭೌಗೋಳಿಕ ಪ್ರದೇಶ ಹೊಂದಿರುವ ಹಾಗೂ ನಿಸರ್ಗ ಮಾತೆಯ ಮಡಿಲಲ್ಲಿರುವ ಕೊಡಗು ಜಿಲ್ಲೆಯು ವೈವಿಧ್ಯಮಯ ಭಾಷೆ, ಸಂಸ್ಕೃತಿಯನ್ನು ಹೊಂದಿದೆ. ಕೊಡವ, ಅರೆಭಾಷೆ ಗೌಡ, ಮಲಯಾಳ ಭಾಷೆಗಳ ನಡುವೆ ಕನ್ನಡ ತನ್ನತನವನ್ನು ಉಳಿಸಿಕೊಂಡು ಬಂದಿದೆ.

ಕನ್ನಡದ ಹಾದಿ...
ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಕೊಡಗಿನ ಇತಿಹಾಸದ ಪುಟಗಳನ್ನು ಕೆಣಕಿ ನೋಡಿದಾಗ, ಕನ್ನಡದ ಬೆಳವಣಿಗೆಯು ನಿರಂತರವಾಗಿ ನಡೆದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ.

ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಆಳಿದ ಹಲವು ರಾಜವಂಶಸ್ಥರಿಂದ ಹಿಡಿದು ಇಲ್ಲಿಯವರೆಗೂ ಹಲವು ಮಹಾನ್‌ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ಕನ್ನಡದ ಬೆಳವಣಿಗೆಗೆ ಕಾಣಿಕೆ ನೀಡಿದ್ದಾರೆ. ಈ ಕಾರಣದಿಂದಲೋ ಏನೋ, ಹಲವು ಪ್ರಾಂತೀಯ ಭಾಷೆಗಳ ನಡುವೆಯೂ ಕನ್ನಡ ತನ್ನತನವನ್ನು ಉಳಿಸಿಕೊಂಡು ಬಂದಿದೆ.

ಕೊಡಗಿನಲ್ಲಿ 9ನೇ ಶತಮಾನದಲ್ಲಿ ರಾಜ್ಯಭಾರ ಮಾಡಿದ್ದ ಗಂಗ– ಕೊಂಗ್ವಾಳ– ಹೊಯ್ಸಳ ಹಾಗೂ ಹಾಲೇರಿ ರಾಜವಂಶಸ್ಥರು ಹಳಗನ್ನಡದಲ್ಲಿ ಶಾಸನಗಳನ್ನು ರಚಿಸುವ ಮೂಲಕ ಕನ್ನಡದ ಬೆಳವಣಿಗೆಗೆ ನಾಂದಿ ಹಾಡಿದರೆನ್ನಬಹುದು. ಹತ್ತನೇ ಶತಮಾನದಲ್ಲಿ ನಾಗವರ್ಮ ಎಂಬಾತ ‘ಛಂದೋಂಬುಧಿ’ ಗ್ರಂಥ ರಚಿಸಿದ್ದ. ಅಲ್ಲದೇ ‘ಪುಣ್ಯಾಶ್ರವ’ ಎಂಬ ಕಾವ್ಯವನ್ನು ರಚಿಸಿದ್ದ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಕೊಡಗು ಸಾಹಿತ್ಯ– ಸಂಸ್ಕೃತಿ ದರ್ಶನ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಚೆಂಗಾಳ್ವ ಅರಸರ ಕಾಲದಲ್ಲಿ ಮೂರನೆಯ ಮಂಗರಸ (ಕ್ರಿ.ಶ. 1508) ‘ಜಯನೃಪ ಕಾವ್ಯ’, ‘ಸಂಯುಕ್ತ ಕೌಮುದಿ’ ಮೊದಲಾದ ಗ್ರಂಥಗಳನ್ನು ರಚಿಸಿದ್ದ. ಈತನ ಸಹೋದರ ಸಂಬಂಧಿ ಎನ್ನಲಾದ ನಂಜುಂಡನು ‘ಕುಮಾರರಾಮನ ಕಥೆ’ಯನ್ನು ಬರೆದಿದ್ದ. ಕೊಡಗಿನ ಪ್ರಪ್ರಥಮ ಉಪಲಬ್ಧ ಮಹಾಕಾವ್ಯವೆಂದು ಕರೆಯುವ ‘ರಾಮವಿಜಯ ಕಾವ್ಯ’ವನ್ನು ದೇವಪ್ಪನೆಂಬ ಜೈನ ಕವಿಯು 1540ರಲ್ಲಿ ರಚಿಸಿದ್ದಾಗಿ ದಾಖಲೆಗಳಿವೆ. 

1789ರಿಂದ 1809ರವರೆಗೆ ರಾಜ್ಯಭಾರ ಮಾಡಿದ ದೊಡ್ಡ ವೀರರಾಜೇಂದ್ರ ಒಡೆಯರು ‘ರಾಜೇಂದ್ರನಾಮೆ’ ಎಂಬ ದಾಖಲೆಯನ್ನು ಕನ್ನಡದಲ್ಲಿ ಬರೆಸಿದ್ದರು. 1810–1820ರವರೆಗೆ ಅರಸರಾಗಿದ್ದ ಎರಡನೇ ಲಿಂಗರಾಜೇಂದ್ರ ಒಡೆಯನು ಕೊಡಗಿನ ಭೂಮಿಗೆ ಸಂಬಂಧಿಸಿದಂತೆ ‘ಲಿಂಗರಾಜನ ಶಿಸ್ತು’ ಎಂಬ ಪುಸ್ತಕವನ್ನು ಬರೆದಿರುವನು.

19ನೇ ಶತಮಾನ

19ನೇ ಶತಮಾನದಲ್ಲಿ ಕೊಡಗಿನಲ್ಲಿ ಸಾಹಿತಿ ಕೃಷಿ ಮಾಡಿದವರಲ್ಲಿ ಪಂಜೆ ಮಂಗೇಶರಾಯರದ್ದು ದೊಡ್ಡ ಹೆಸರು. ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಮಂಗೇಶರಾಯರು ಶಿಕ್ಷಕರಾಗಿ ಕೊಡಗಿನಲ್ಲಿ (1920ರ ದಶಕದಲ್ಲಿ) ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಇಲ್ಲಿನ ಸಂಸ್ಕೃತಿಯ ಒಂದು ಭಾಗವಾಗಿರುವ ಹುತ್ತಿರಿ ಹಬ್ಬದ ನಿಮಿತ್ತ ಹಾಡುಗಳನ್ನು ರಚಿಸಿದರು. ಪ್ರಕೃತಿ ಸೌಂದರ್ಯ ಹಾಗೂ ಇಲ್ಲಿನವರ ಶೌರ್ಯಕ್ಕೆ ಮನಸೋತ ಅವರು, ‘ಎಲ್ಲಿ ಭೂರಮೆ ದೇವ ಸನ್ನಿಧಿಯಲಿ ಬಯಸಿ ಭಿಮ್ಮನೆ ಬಂದಳೋ... ಅಲ್ಲಿ ನೋಡಲಾ.. ಅದು ಕೊಡವರ ನಾಡಲಾ.. ಅದುವೇ ಕೊಡವರ ಬೀಡಲಾ...’ ಎಂದು ಕವನ ರಚಿಸಿದರು. ಇವರು 1934ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕೊಡಗಿನ ಆದಿಕವಿ ಎಂದು ಪ್ರಖ್ಯಾತರಾಗಿರುವ ಹರದಾಸ ಅಪ್ಪಚ್ಚ ಕವಿ ಅವರು ಕೊಡವ ಭಾಷೆಯಲ್ಲಿ ರಚಿಸಿದ್ದ ‘ಸಾವಿತ್ರಿ’, ‘ಯಯಾತಿ’, ‘ಕಾವೇರಿ’, ‘ಸುಬ್ರಮಣ್ಯ’ ಎಂಬ ನಾಟಕಗಳನ್ನು ರಚಿಸಿದ್ದರು. ಇವುಗಳನ್ನು ಕೊಡಗಿನವರೇ ಆದ ಡಾ.ಐ.ಮಾ. ಮುತ್ತಣ್ಣ ಅವರು ಕನ್ನಡಕ್ಕೆ ಭಾಷಾಂತರಿಸಿದ್ದರು.

ಕೊಡಗಿನ ಗೌರಮ್ಮ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಕಥೆಗಾರ್ತಿ ಎನ್ನುವ ಖ್ಯಾತಿಗೆ ಒಳಗಾಗಿರುವ ಗೌರಮ್ಮ ಕೊಡಗಿನವರು. ಇವರನ್ನು ‘ಕೊಡಗಿನ ಗೌರಮ್ಮ’ ಎಂದೇ ಕರೆಯಲಾಗುತ್ತದೆ.

1912ರಲ್ಲಿ ಮಡಿಕೇರಿಯಲ್ಲಿ ಜನಿಸಿದ ಗೌರಮ್ಮ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರೈಸಿದರು. 1928ರಲ್ಲಿ ಬಿ.ಟಿ. ಗೋಪಾಲಕೃಷ್ಣ ಅವರನ್ನು ವಿವಾಹವಾದರು. 1931ರಿಂದ ಮಿಸೆಸ್‌ ಜಿ.ಟಿ.ಜಿ. ಕೃಷ್ಣ ಎನ್ನುವ ಹೆಸರಿನಲ್ಲಿ ಲೇಖನಗಳನ್ನು, ಕಥೆಗಳನ್ನು ಬರೆದರು. ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನೇ ಮುಖ್ಯ ಕಥಾವಸ್ತುವನ್ನಾಗಿಟ್ಟು ಕೊಂಡು ಕೃತಿಗಳನ್ನು ರಚಿಸಿದರು. 1940ರಲ್ಲಿ ಕೇವಲ 28 ವರ್ಷದ ಸಣ್ಣ ಪ್ರಾಯದಲ್ಲಿಯೇ ಅವರು ಅಕಾಲಿಕ ಮರಣ ಹೊಂದಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕೊಡಗಿಗೆ ಬಂದಿದ್ದ ಗಾಂಧೀಜಿಯವರನ್ನು ತಮ್ಮ ಮನೆಗೆ ಕರೆಸಿಕೊಂಡ ಗೌರಮ್ಮ ಅವರು, ಹೋರಾಟಕ್ಕೆ ಆರ್ಥಿಕ ಸಹಾಯ ಮಾಡಲೆಂದು ಆಭರಣಗಳನ್ನು ಕೊಟ್ಟು ಕಳುಹಿಸಿದ್ದರು.

ಭಾರತೀಸುತ

ಶಿಕ್ಷಕರಾಗಿದ್ದ ಎಸ್‌.ಆರ್‌. ನಾರಾಯಣರಾವ್‌ ಅವರು ‘ಭಾರತೀಸುತ’ ಕಾವ್ಯನಾಮದಿಂದ ಚಿರಪರಿಚಿತರು. ಕೊಡಗಿನ ಅರಸ ಸಿರಿಬಾಯಿ ದೊಡ್ಡವೀರಪ್ಪ ಅವರ ಜೀವನಗಾಥೆಯನ್ನು ಆಧರಿಸಿ ಭಾರತೀಸುತ ಅವರು ‘ಹುಲಿಯ ಹಾಲಿನ ಮೇವು’ ಕೃತಿ ರಚಿಸಿದ್ದರು. ನಂತರ ಇದು ಬೆಳ್ಳಿತೆರೆಯ ಮೇಲೂ ರಾರಾಜಿಸಿತು. ಅವರ ಗಿರಿಕನ್ಯೆ, ಎಡಕಲ್ಲು ಗುಡ್ಡದ ಮೇಲೆ, ಬಯಲುದಾರಿ ಮುಂತಾದ ಕಾದಂಬರಿಗಳು ಸಿನಿಮಾಗಳಾಗಿವೆ. ‘ಸೊಳ್ಳೆ ಹರಡುವ ರೋಗಗಳು’ ಕೃತಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ, ‘ಗಿಳಿಯು ಪಂಜರದೊಳಿಲ್ಲ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.



ಕಿಟೆಲ್‌ ಹೆಜ್ಜೆ ಗುರುತು

ಕನ್ನಡ– ಇಂಗ್ಲಿಷ್‌ ನಿಘಂಟು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದ ರೆವರೆಂಡ್‌ ಫಾದರ್‌ ಫರ್ಡಿನೆಂಡ್‌ ಕಿಟ್ಟೆಲ್‌ ಅವರ ಹೆಜ್ಜೆಗುರುತುಗಳು ಕೊಡಗಿನಲ್ಲೂ ಮೂಡಿವೆ.

ಜರ್ಮನಿಯ ಬಾಸೆಲ್‌ ಮಿಷನ್‌ ಇವಾಂಜಲಿಕ್‌ ಸೊಸೈಟಿಯು ಧರ್ಮಪ್ರಚಾರಕ್ಕಾಗಿ ಕಿಟೆಲ್‌ ಅವರನ್ನು ಕೊಡಗು ಜಿಲ್ಲೆಗೆ ಕಳುಹಿಸಿತ್ತು. 1871ರಿಂದ 1876ರವರೆಗೆ ಮಡಿಕೇರಿಯ ಚರ್ಚ್‌ನಲ್ಲಿ (ಇಂದಿನ ಶಾಂತಿ ಚರ್ಚ್‌) ಮೊದಲ ಧರ್ಮಗುರುವಾಗಿ ಅವರು ಕಾರ್ಯ ಆರಂಭಿಸಿದ್ದರು. ಜಿಲ್ಲೆ ಎಲ್ಲೆಡೆ ಸುತ್ತಾಡಿದ ಅವರು, ಕನ್ನಡ ಕಲಿಯಲು ಆರಂಭಿಸಿದ್ದರು. ಕಿಟೆಲ್‌ ಅವರಿಗೆ ಕನ್ನಡದ ಆಸಕ್ತಿ ಬೆಳೆದಿದ್ದು ಇಲ್ಲಿಂದಲೇ ಎನ್ನುತ್ತಾರೆ ಚರ್ಚ್‌ನ ಧರ್ಮಗುರುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT