ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆ ಪ್ರವೇಶಿಸಿದ ಮುಂಗಾರು

Last Updated 6 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೈರುತ್ಯ ಮುಂಗಾರು ಮಾರುತ ಬುಧವಾರ ಕೊಡಗು ಜಿಲ್ಲೆ  ಪ್ರವೇಶಿಸಿದ್ದು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಹಲವೆಡೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸಾಧಾರಣ ಮಳೆ ಆಗಿದೆ.

ಮಡಿಕೇರಿ ವರದಿ: ಜಿಲ್ಲೆಗೆ ಮುಂಗಾರು ಕಾಲಿಟ್ಟಿದ್ದು ಕಾವೇರಿ ಕಣಿವೆಯ ಜನರಲ್ಲಿ ಸಂತಸ ತಂದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.

ಮಡಿಕೇರಿ, ಪೊನ್ನಂಪೇಟೆ, ಸುಂಟಿಕೊಪ್ಪ, ಭಾಗಮಂಡಲ, ವಿರಾಜಪೇಟೆ, ಅಮ್ಮತ್ತಿ, ಸೋಮವಾರ ಪೇಟೆ, ಶ್ರೀಮಂಗಲ, ಬಾಳೆಲೆ, ನಾಪೋಕ್ಲು, ಶಾಂತಳ್ಳಿ, ಶನಿವಾರ ಸಂತೆ, ಕುಶಾಲನಗರ, ಸಂಪಾಜೆ ಸೇರಿದಂತೆ ವಿವಿಧೆಡೆ ಬೆಳಿಗ್ಗೆಯಿಂದಲೇ ಮಳೆ ಸುರಿದಿದೆ. ಸರಾಸರಿ 13.61 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಪ್ರಮುಖ ನೀರಿನ ಮೂಲಗಳು, ನದಿ, ಕೆರೆ, ಹೊಂಡಗಳಿಗೆ ನೀರು ಹರಿದು ಬಂದಿದೆ.

ಹಾರಂಗಿಗೆ ನೀರು: ಕಾವೇರಿ ಕಣಿವೆಯಲ್ಲಿ ಮಳೆ ಸುರಿಯುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ 15 ಕ್ಯೂಸೆಕ್ ನೀರು ಹರಿದುಬಂದಿದೆ. ಜಲಾಶಯದ 2805.81 ಅಡಿಗೆ ನೀರು ತಲುಪಿದೆ (ಗರಿಷ್ಠ ಮಟ್ಟ 2,859 ಅಡಿ).

ಮಂಗಳೂರು ವರದಿ: ಕರಾವಳಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಆರಂಭವಾದ ಮಳೆ ಮತ್ತಷ್ಟು ಚುರುಕುಗೊಂಡಿದೆ. ಬುಧವಾರ ಕರಾವಳಿಯಾದ್ಯಂತ ದಿನವಿಡೀ ಉತ್ತಮ ಮಳೆ ಆಗಿದೆ. ಹಲವೆಡೆ ಸಣ್ಣಪುಟ್ಟ ಹಾನಿ ಉಂಟಾದ ಬಗ್ಗೆಯೂ ವರದಿಯಾಗಿದೆ.

ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ಗಾಳಿಯಿಂದ ಕೂಡಿದ ಮಳೆ ಸುರಿದಿದೆ. ಬೆಳಿಗ್ಗೆ ಕೆಲವು ತಾಸು ಮಳೆ ನಿಂತಿತ್ತು.

ಮಧ್ಯಾಹ್ನ ಮತ್ತೆ ಆರಂಭವಾದ ಮಳೆ ಸತತ ಎರಡು ತಾಸು ಸುರಿದಿದೆ. ಸಂಜೆ ವೇಳೆಗೆ ಮಳೆಯ ಆರ್ಭಟ ಕಡಿಮೆಯಾಗಿತ್ತು.

ಮಳೆಯಿಂದಾಗಿ ಬ್ರಹ್ಮಾವರ ಸಮೀಪದ ಕೋಡಿಕನ್ಯಾಣದ ಪ್ರಾಥಮಿಕ ಶಾಲಾ ಛಾವಣಿ ಕುಸಿದುಬಿದ್ದಿದೆ.
ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದು, ತೀರದ ಕೆಲವು ಪ್ರದೇಶಗಳಲ್ಲಿ ಕಡಲ್ಕೊರೆತ ಹಾವಳಿಯೂ ಕಾಣಿಸಿಕೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶದಲ್ಲೂ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ~ಶುಕ್ರ ಸಂಕ್ರಮ~ ವೀಕ್ಷಣೆಗೆ ಅಡ್ಡಿಯಾದರೂ ನಿರಾಸೆ ಆಗಲಿಲ್ಲ.

ಶಿವಮೊಗ್ಗ ವರದಿ: ಜ್ಲ್ಲಿಲೆಯಾದ್ಯಂತ ಬುಧವಾರ ಮುಂಗಾರು ಮಳೆ ಆರಂಭಗೊಂಡಿದ್ದು ತೀರ್ಥಹಳ್ಳಿ, ಹೊಸನಗರ, ಸಾಗರ, ಶಿವಮೊಗ್ಗ ನಗರಗಳಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಸೊರಬ, ಶಿಕಾರಿಪುರ, ಭದ್ರಾವತಿ ತಾಲ್ಲೂಕುಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿತ್ತು.

ತೀರ್ಥಹಳ್ಳಿಯ ಆಗುಂಬೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ 8.8 ಮಿ.ಮೀ. ದಾಖಲಾಗಿದೆ.

ದಾವಣಗೆರೆ ವರದಿ: ನಗರ ಸುತ್ತಮುತ್ತ  ತಾಲ್ಲೂಕಿನ ವಿವಿಧೆಡೆ ಸಂಜೆ ವೇಳೆ ಮಳೆ ಸುರಿದಿದೆ.
ಯಾವುದೇ ರೀತಿಯ ಹಾನಿಯಾದ ವರದಿಗಳಿಲ್ಲ.

ಹುಬ್ಬಳ್ಳಿ ವರದಿ: ಕರಾವಳಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆ ಬುಧವಾರ ಮುಂಗಾರಿನ ಅಬ್ಬರ ಅಷ್ಟಾಗಿ ಕಾಣಲಿಲ್ಲ. ಧಾರವಾಡ, ಕಾರವಾರ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಒಳನಾಡಿನತ್ತ ಮೋಡಗಳ ಮೆರವಣಿಗೆ ಮುಂದುವರಿದಿದೆ.

ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಬುಧವಾರ ಮಧ್ಯಾಹ್ನ ಸುಮಾರು 15 ನಿಮಿಷಗಳ ಕಾಲ ಮಳೆ ಸುರಿಯಿತು. ಗ್ರಾಮಾಂತರ ಭಾಗದಲ್ಲೂ ಮಳೆಯಾಗಿದ್ದು, ರೈತರಲ್ಲಿ ಉತ್ಸಾಹ ಮೂಡಿಸಿದೆ. ಕಾರವಾರ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ. ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಜೋರಾಗಿದ್ದ ಮುಂಗಾರಿನ ಅಬ್ಬರ ತುಸು ತಗ್ಗಿದೆ.

ಹುಬ್ಬಳ್ಳಿಯಲ್ಲಿ ಮಧ್ಯಾಹ್ನ ಸುರಿದ ಮಳೆಯಿಂದ ಆದರ್ಶನಗರ ಸಂತೆಗೆ ದೊಡ್ಡ ಅಡಚಣೆ ಉಂಟುಮಾಡಿತು. ಕಾಯಿಪಲ್ಲೆ ವ್ಯಾಪಾರಿಗಳು ಕೆಸರಿನಲ್ಲಿ ಕುಳಿತೇ ವಹಿವಾಟು ನಡೆಸಿದರು. ಧಾರವಾಡದ ಕೆಲವೆಡೆ ರಸ್ತೆ ಮೇಲೆ ನೀರು ಹರಿದಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT