ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಜಿಲ್ಲೆಯಲ್ಲಿ ಬತ್ತ ಖರೀದಿ ತಾತ್ಕಾಲಿಕ ಸ್ಥಗಿತ

Last Updated 20 ಜನವರಿ 2012, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬತ್ತವನ್ನು ಸಂಗ್ರಹಿಸಿಡಲು ಗೋದಾಮುಗಳ ಕೊರತೆ ಉಂಟಾಗಿರುವುದರಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಬೆಂಬಲ ಬೆಲೆಯಡಿ ಬತ್ತ ಖರೀದಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಇದಕ್ಕೆ ಪರ‌್ಯಾಯ ಮಾರ್ಗ ರೂಪಿಸದ ಜಿಲ್ಲಾಡಳಿತ ಕೈಚೆಲ್ಲಿ ಕುಳಿತಿದ್ದು, ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ಗೋಣಿಕೊಪ್ಪಲಿನಲ್ಲಿ ಬತ್ತ ಖರೀದಿ ಕೇಂದ್ರಗಳನ್ನು ತೆರೆದು ತಿಂಗಳು ಕಳೆಯುವಷ್ಟರಲ್ಲಿಯೇ ನಿಗಮದ ಎಲ್ಲ ಗೋದಾಮುಗಳು ಭರ್ತಿಯಾಗಿದ್ದು, ಈಗ ಹೊಸದಾಗಿ ಬತ್ತವನ್ನು ಖರೀದಿಸಲು ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. 

ಇದರಿಂದಾಗಿ ಬತ್ತ ಬೆಳೆದ ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಕೇಂದ್ರ ಸರ್ಕಾರವು ಪ್ರಕಟಿಸಿದ ಎ-ಗ್ರೇಡ್ ಬತ್ತಕ್ಕೆ ಕ್ವಿಂಟಾಲ್‌ಗೆ  1100 ರೂಪಾಯಿ ಹಾಗೂ ಸಾಮಾನ್ಯ ದರ್ಜೆ ಬತ್ತಕ್ಕೆ ಕ್ವಿಂಟಾಲ್‌ಗೆ 1080 ರೂಪಾಯಿ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರವು ನೀಡಿದ ರೂ 250 ಪ್ರೋತ್ಸಾಹ ಧನದ ಲಾಭ (ಒಟ್ಟು: ಎ-ಗ್ರೇಡ್ ಬತ್ತಕ್ಕೆ ರೂ 1360 ಹಾಗೂ ಬಿ-ಗ್ರೇಡ್ ಬತ್ತಕ್ಕೆ ರೂ 1330) ರೈತರಿಗೆ  ದಕ್ಕದಂತಾಗಿದೆ.

ಸರ್ಕಾರದ ಹಂಗು ಬೇಡವೆಂದು ರೈತರು ಮಾರುಕಟ್ಟೆಯೆಡೆ ಮುಖ ಮಾಡಿದರೆ ಇಲ್ಲಿ ಕೇವಲ ರೂ 750ರಿಂದ 850 ದರವಿದೆ. ಇಂತಹ ಸ್ಥಿತಿಯಲ್ಲಿ ರೈತರು ತೀವ್ರ ಸಂಕಷ್ಟಕ್ಕೆ        ಸಿಲುಕಿದ್ದಾರೆ.

1 ಲಕ್ಷ ಟನ್ ಬಾಕಿ: ರಾಜ್ಯದಲ್ಲಿ ಬತ್ತ ಬೆಳೆಯುವ ಪ್ರಮುಖ ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಈ ವರ್ಷ ಉತ್ತಮವಾಗಿ ಫಸಲು ಬಂದಿದೆ. ಕೃಷಿ ಇಲಾಖೆಯ ನಿರೀಕ್ಷೆಯಂತೆ 1.30 ಲಕ್ಷ ಟನ್ ಬತ್ತ ಉತ್ಪಾದನೆಯಾಗಿದ್ದು, ಬತ್ತವನ್ನು ಕಟಾವು ಮಾಡಿ ರೈತರು ಮನೆ ತುಂಬಿಸಿಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಬತ್ತದ ಬೆಲೆ ಕುಸಿದು ಹೋಗಿರುವ ಪರಿಣಾಮ ತಾವು ಬೆಳೆದ ಧಾನ್ಯವನ್ನು ಸರ್ಕಾರಕ್ಕೆ ನೀಡದೆ ರೈತರಿಗೆ ಬೇರೆ ದಾರಿಯಿಲ್ಲ. ಇದುವರೆಗೆ ನಿಗಮವು ಬೆಂಬಲ ಬೆಲೆಯಡಿ ಕೇವಲ 14,000 ಕ್ವಿಂಟಲ್ ಬತ್ತ ಮಾತ್ರ ಖರೀದಿಸಿದೆ. ಬಾಕಿ ಉಳಿದಿರುವ 1 ಲಕ್ಷ ಟನ್‌ಗಿಂತಲೂ ಹೆಚ್ಚಿನ ಪ್ರಮಾಣದ ಭತ್ತವು ರೈತರ ಮನೆಗಳಲ್ಲಿ ಕೊಳೆಯುತ್ತಿದೆ.

ಸ್ಥಳಾವಕಾಶದ ಅಭಾವ: ಜಿಲ್ಲೆಯಲ್ಲಿ ಎಲ್ಲಿಯೂ ನಿಗಮದ ಸ್ವಂತ ಗೋದಾಮುಗಳಿಲ್ಲ. ಎಪಿಎಂಸಿ ಗೋದಾಮುಗಳನ್ನೇ ಬಾಡಿಗೆಗೆ ಪಡೆದು ಭತ್ತವನ್ನು ಸಂಗ್ರಹಿಸಿಡಲಾಗಿದೆ. ಈಗಾಗಲೇ ಪಡೆದಿರುವ ಎಲ್ಲ ಗೋದಾಮುಗಳ ಭರ್ತಿಯಾಗಿರುವ ಪರಿಣಾಮ ಬತ್ತ ಸಂಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ನಿಗಮದ ಜಿಲ್ಲಾ ನಿರ್ವಾಹಕ ಜಯದೇವ ಅರಸು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಇದುವರೆಗೆ ಸಂಗ್ರಹಿಸಿಡಲಾದ ಬತ್ತವನ್ನು ಅಕ್ಕಿ ಮಿಲ್‌ಗಳಿಗೆ ರವಾನಿಸಿದ ನಂತರ ಸ್ಥಳಾವಕಾಶ ಲಭ್ಯವಾಗಲಿದ್ದು, ನಂತರವಷ್ಟೇ ಬತ್ತ ಖರೀದಿಸಲು ಸಾಧ್ಯವಾಗುವುದು. ಬತ್ತ ಪಡೆದು ಮಿಲ್ ಮಾಡಿ ಅಕ್ಕಿ ಪೂರೈಸಲು ಮಿಲ್‌ಗಳಿಂದ ಟೆಂಡರ್ ಕರೆಯಲಾಗಿದೆ. ಈಗಿರುವ ಬತ್ತವನ್ನು ಮಿಲ್‌ಗಳಿಗೆ ರವಾನಿಸಿದ ನಂತರ ಪುನಃ ಖರೀದಿಗೆ ಮುಂದಾಗುವುದಾಗಿ ಅವರು       ಹೇಳಿದರು.

ಇನ್ನೂ 15 ದಿನ ತಾಪತ್ರಯ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಕರೆದಿರುವ ಟೆಂಡರ್‌ನಲ್ಲಿ ಫೆಬ್ರುವರಿ 3ರವರೆಗೆ ಟೆಂಡರ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಫೆ.4ರಂದು ಟೆಂಡರ್ ತೆರೆಯಲಾಗುವುದು. ಅದಾದ ನಂತರ ಇತರೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು, ಗೋದಾಮುಗಳಿಂದ ಮಿಲ್‌ಗಳಿಗೆ ಬತ್ತ ರವಾನೆಯಾಗಬೇಕಾದರೆ ಇನ್ನೂ ಕೆಲ ದಿನಗಳು ಬೇಕಾಗಬಹುದು. ಜಿಲ್ಲಾಡಳಿತವು ತಕ್ಷಣ ಕ್ರಮಕೈಗೊಳ್ಳದಿದ್ದರೆ ಇನ್ನೂ 15-20 ದಿನಗಳವರೆಗೆ ಬತ್ತ ಖರೀದಿ ಅಸಾಧ್ಯ ಎಂದು ಹೇಳಲಾಗುತ್ತಿದೆ.

ಮಾರ್ಚ್ 31ರ ಗಡುವು: ಬೆಂಬಲ ಬೆಲೆಯಲ್ಲಿ ಬತ್ತ ಖರೀದಿಸಲು ಸರ್ಕಾರವು ಮಾರ್ಚ್ 31ರವರೆಗೆ ಗಡುವು ನಿಗದಿಪಡಿಸಿದೆ. ಫೆಬ್ರುವರಿ ಎರಡನೇ ವಾರದಿಂದ ಬತ್ತ ಖರೀದಿ ಪುನರಾರಂಭಗೊಂಡರೂ ಮಾರ್ಚ್ ಅಂತ್ಯದೊಳಗೆ ಇನ್ನುಳಿದ ಎಲ್ಲ ಬತ್ತವನ್ನು (30 ಸಾವಿರ ಕ್ವಿಂಟಾಲ್ ಭತ್ತವನ್ನು ಆಂತರಿಕ ಬಳಕೆಗೆ ಬಿಟ್ಟರೆ, ಇನ್ನುಳಿಯುವುದು ಅಂದಾಜು 70 ಸಾವಿರ ಕ್ವಿಂಟಾಲ್) ಖರೀದಿಸಲು ಸಾಧ್ಯವಾಗುವುದೇ ಎನ್ನುವುದು ರೈತರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT