ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ
Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಭಾಷೆ, ಸಾಹಿತ್ಯ, ಜನಪದ ಕಲೆ ಮತ್ತು ಸಂಸ್ಕೃತಿಗಾಗಿ ಅವಿರತ ಸೇವೆ ಸಲ್ಲಿಸಿದ ನಾಲ್ವರಿಗೆ ಪ್ರಸಕ್ತ ಸಾಲಿನ ಗೌರವ ಪ್ರಶಸ್ತಿ ಮತ್ತು ಪುರಸ್ಕಾರವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅವರು ಪ್ರಶಸ್ತಿಗೆ ಪಡೆದವರ ಹೆಸರು ಪ್ರಕಟಿಸಿದರು. ಕೊಡವ ಭಾಷೆಯಲ್ಲಿ ಹಲವು ಕಥೆ, ಕವನ ಹಾಗೂ ಜೀವನಗಾಥೆಗಳನ್ನು ರಚಿಸಿದ ಕುಶಾಲನಗರದ ಬಾಚರಣಿಯಂಡ ಅಪ್ಪಣ್ಣ, ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಕೂಪದೀರ ಶಾರದಾ ನಂಜಪ್ಪ ಹಾಗೂ ಕೊಡವ ಜನಪದ ಕಲಾವಿದ ನೆಲಜಿಯ ಮೇದರ ತಾಣಿ ಅವರಿಗೆ ಈಬಾರಿಯ ಗೌರವ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ರೂ 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ.

ದೂರದರ್ಶನದಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಭಾಷೆಯ 'ಐನ್‌ಮನೆ' ಧಾರಾವಾಹಿ ನಿರ್ದೇಶಿಸಿದ ಎ.ಟಿ. ರಘು, ಕೊಡವ ಪುಸ್ತಕಗಳನ್ನು ಕಳೆದ 20 ವರ್ಷಗಳಿಂದ ಪ್ರಕಟಿಸುತ್ತ ಬಂದಿರುವ ವಿರಾಜಪೇಟೆಯ ಕೊಡವ ತಕ್ಕ್ ಎಳ್ತ್‌ಕಾರಡ ಕೂಟ ಸಂಸ್ಥೆ ಹಾಗೂ ಕೊಡವ ಹಾಡು, ನೃತ್ಯ, ನಾಟಕಗಳನ್ನು ಕಲಿಸಿಕೊಡುವ ಬಿಟ್ಟಂಗಾಲದ ದೇವಯ್ಯ ಮೆಮೋರಿಯಲ್ ಸ್ಕೂಲ್‌ಗೆ ಈ ಗೌರವ ಪುರಸ್ಕಾರ ನೀಡಲಾಗಿದೆ. ಗೌರವ ಪುರಸ್ಕಾರವು ರೂ 5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ.

ಜನವರಿಯಲ್ಲಿ ಮಾದಾಪುರದಲ್ಲಿ ನಡೆಯಲಿರುವ `ಕೊಡವ ಸಾಹಿತ್ಯ ಸಾಂಸ್ಕೃತಿಕ ಮಾನಮ್ಮೆ'ಯಲ್ಲಿ ಈ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರು ವಿತರಿಸಲಿದ್ದಾರೆ. ಸಮಾರಂಭದ ದಿನಾಂಕವನ್ನು ಡಿ.13ರಂದು ಪ್ರಕಟಿಸಲಾಗುವುದು ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT