ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುಗೆಯ ಖುಷಿ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೊಡುವುದರಲ್ಲಿ ಸಿಗುವ ತೃಪ್ತಿ, ಸಂತೋಷ, ಸಮಾಧಾನಕ್ಕೆ ಎಣೆಯೇ ಇಲ್ಲ. ಅದರಲ್ಲೂ ನಾವು ಭಾರತೀಯರು `ದಾನವನ್ನು~ ಅತ್ಯಂತ ಪುಣ್ಯದ ಕೆಲಸ ಎಂದೇ ನಂಬಿಕೊಂಡು ಬಂದವರು.

ಈ ಉದಾತ್ತ ಆದರ್ಶದ ಬೆಳಕಿನಲ್ಲಿ ರೂಪುಗೊಂಡದ್ದೇ `ಕೊಡುವ ಖುಷಿಯ ಸಪ್ತಾಹ~ ಅಥವಾ ಜಾಯ್ ಆಫ್ ಗಿವಿಂಗ್.

ದಾನ ಕೊಡಲು ದುಡ್ಡೇ ಆಗಬೇಕೆಂದೇನಿಲ್ಲ. ಅದು ನಮ್ಮ ಶ್ರಮ, ಸಮಯ, ಕೌಶಲ್ಯ, ಜ್ಞಾನ ಇತ್ಯಾದಿ ಏನು ಬೇಕಾದರೂ ಆಗಬಹುದು. ಉಳ್ಳವರಷ್ಟೇ ಅಲ್ಲ; ಇಲ್ಲದವರೂ ತಮ್ಮ ಅಳಿಲ ಸೇವೆ ಸಲ್ಲಿಸಬಹುದು. ಈ ಮೂಲಕ ನಮ್ಮನ್ನು ಸಾಕಿ ಸಲಹಿದ ಸಮಾಜಕ್ಕೆ ಕಿಂಚಿತ್ತಾದರೂ ಮರಳಿಸೋಣ, ನತದೃಷ್ಟರ ಮುಖದಲ್ಲಿ ಕೊಂಚ ಖುಷಿ ತುಂಬೋಣ ಎಂಬುದೇ ಸಪ್ತಾಹದ ಹಿಂದಿರುವ ಆಶಯ.

ಈ ಸಪ್ತಾಹಕ್ಕೆ ಶ್ರೀಕಾರ ಹಾಕಿದವರು ಯಾರು, ಸಂಘಟಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಏಕೆಂದರೆ ಇದು ಎಲ್ಲರೂ ಎಲ್ಲರಿಗಾಗಿ ನಡೆಸುತ್ತಿರುವ ಸಾಮೂಹಿಕ ಉತ್ಸವ.
 
ಆದರೆ 2005ರಲ್ಲಿ ಇದಕ್ಕೊಂದು ಸ್ವರೂಪ ರೂಪ ಕೊಟ್ಟವರು ಐಕಾಂಗೊ ಮತ್ತು ಆ್ಯಕ್ಷನ್‌ಏಡ್ ಸಂಸ್ಥಾಪಕರಾದ ಜೆರೊನಿನೊ ಅಲ್ಮೇಡಾ. ದಸರಾ, ದೀಪಾವಳಿಯಂತೆ ಇದೂ ಒಂದು ವಾರ್ಷಿಕ ಹಬ್ಬವಾಗ ಬೆಳೆಯಲಿ ಎಂಬ ಸದುದ್ದೇಶದಿಂದ ಕೆಲ ಸ್ವಯಂ ಸೇವಾ ಸಂಸ್ಥೆಗಳು, ಕಾರ್ಯಕರ್ತರು ಇದರ ಸಮನ್ವಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೀದಿಯ ಭಿಕ್ಷುಕನಿಂದ ಹಿಡಿದು ಕಾರ್ಪೊರೇಟ್ ಕೋಟ್ಯಧಿಪತಿ ವರೆಗೆ ಎಲ್ಲರಿಗೂ ಇದರಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಶಾಲೆ ಕಾಲೇಜುಗಳು, ಸ್ವಯಂ ಸೇವಾ ಸಂಸ್ಥೆಗಳು, ವ್ಯಕ್ತಿಗಳು, ಸಾಮಾಜಿಕ ತಂಡಗಳು, ಕಾರ್ಪೊರೇಟ್ ಕಂಪೆನಿಗಳು ಹೀಗೆ ಕೊಡುವ ಸಹೃದಯಿ ಮನಸ್ಸುಗಳೆಲ್ಲ ಒಂದಲ್ಲ ಒಂದು ಚಟುವಟಿಕೆ ಹಮ್ಮಿಕೊಳ್ಳಬಹುದು. ಅದೇ ಇದರ ವಿಶೇಷ.

2009ರಲ್ಲಿ ಭಾರತದಲ್ಲಿ ಆರಂಭವಾದ ಈ ಆಂದೋಲನಕ್ಕೆ ಈಗ ಮೂರು ವರ್ಷ. ಈ ಸಲ ಗಾಂಧಿ ಜಯಂತಿ ದಿನವಾದ ಅ. 2ರಂದು ಶುರುವಾಗಿದ್ದು ಅ. 8ರ ವರೆಗೆ ನಡೆಯುತ್ತಿದೆ. ಇದರ ಅಂಗವಾಗಿ ಬೆಂಗಳೂರಲ್ಲೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಜ್ ಹೋಟೆಲ್ ಸಮೂಹ ಸೇರಿದಂತೆ ಅನೇಕ ಕಾರ್ಪೊರೇಟ್ ಸಂಸ್ಥೆಗಳು ಕೈ ಜೋಡಿಸಿವೆ.

ಆನ್‌ಲೈನ್ ಮಾರಾಟ ಸಂಸ್ಥೆ `ಇಬೆ~ (www.ebay.in), ಬಟ್ಟೆಗಳನ್ನು ಸಂಗ್ರಹಿಸಿ ಬಡವರಿಗೆ ವಿತರಿಸುವ `ವಸ್ತ್ರಸಮ್ಮಾನ~ ಮತ್ತು `ಸ್ಕೂಲ್ ಟು ಸ್ಕೂಲ್~ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ಗೂಂಜ್ (goonj.org) ಮುಂತಾದವುಗಳಿಗೆ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ.
 
ವಿವಿಧ ಕಾರ್ಯಕ್ರಮಗಳು ಮತ್ತು ಇನ್ನಷ್ಟು ಮಾಹಿತಿಯನ್ನು ww.joyofgivingweek.ning.com ವೆಬ್‌ಸೈಟ್‌ನಲ್ಲಿ ಪಡೆಯಬಹುದು. `ಗೂಂಜ್~ ಮಾಹಿತಿಗೆ 96637 98026.

ಹಾರ್ಟಿ ಏ ಫೇರ್
ಜಾಯ್ ಆಫ್ ಗಿವಿಂಗ್ ಸಪ್ತಾಹದ ಅಂಗವಾಗಿ ವೈಟ್‌ಫೀಲ್ಡ್ ಬಳಿಯ ಐಟಿಪಿಎಲ್‌ನಲ್ಲಿ ಅ. 4, 5 ಮತ್ತು 7ರಂದು `ಹಾರ್ಟಿ ಎ ಫೇರ್- ಫಸ್ಟ್ ಅಮೆರಿಕನ್~ ಮೇಳ ನಡೆಯಲಿದೆ. ಇಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ಸೌಲಭ್ಯವಂಚಿತ ಮಕ್ಕಳಿಗಾಗಿ ಮನರಂಜನಾ ಚಟುವಟಿಕೆ ಇರುತ್ತವೆ.
 
ಬೆಳಕು, ಚಂದೇರಿಯಾನ, ಅಪ್ಸಾ, ಬಾಳಜ್ಯೋತಿ, ದಿಯಾ, ಗ್ರಾಮಿ, ಮಾಯಾ ಆರ್ಗಾನಿಕ್, ಒನ್ ಬಿಲಿಯನ್ ಲಿಟರೇಟ್ಸ್, ಶ್ರೀ ಸಾಯಿಲೀಲಾ, ಸಹಜ ಸಮೃದ್ಧ, ಪ್ರಥಮ್ ಬುಕ್ಸ್, ಲವ್‌ಡೇಲ್, ಪಾಪ್‌ಕ್ಯಾಡ್,  ಸೇಫರ್ ವಿ ಎನ್‌ಜಿಒಗಳು ಪಾಲ್ಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT