ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಗೆದ್ದ ಸರ್ಕಾರ: ಮಣಿದ ಖಾಸಗಿ ಕಾಲೇಜು

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ವಾರ್ಷಿಕ 35,000 ರೂಪಾಯಿ ಶುಲ್ಕ ನಿಗದಿಪಡಿಸುವ ಸರ್ಕಾರದ ಪ್ರಸ್ತಾವವನ್ನು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಕೊನೆಗೂ ಒಪ್ಪಿಕೊಂಡಿದ್ದು, ಇದರೊಂದಿಗೆ ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕ ನಿಗದಿ ಬಿಕ್ಕಟ್ಟು ಬಗೆಹರಿದಂತಾಗಿದೆ.

ಇದುವರೆಗೆ ಖಾಸಗಿಯವರು ಸರ್ಕಾರದ ಮುಂದಿಟ್ಟಿದ್ದ 35 ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸುವ ಸೂತ್ರವನ್ನು ಒಕ್ಕೂಟ ಒಪ್ಪಿಕೊಂಡಿರಲಿಲ್ಲ. ನ್ಯಾಯಮೂರ್ತಿ ಪದ್ಮರಾಜ ಸಮಿತಿ ಶಿಫಾರಸಿನಂತೆ ಶುಲ್ಕ ನಿಗದಿಪಡಿಸಿ, ಇಲ್ಲವೇ ವಾರ್ಷಿಕ 50 ಸಾವಿರ ರೂಪಾಯಿ ಶುಲ್ಕ ನೀಡಿ ಎಂದು ಪಟ್ಟು ಹಿಡಿದಿದ್ದವು. ಅಲ್ಲದೆ ಈ ವಿಷಯ ಹೈಕೋರ್ಟ್ ಮೆಟ್ಟಲು ಏರಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರ ನಿಗದಿಪಡಿಸಿರುವ 35 ಸಾವಿರ ರೂಪಾಯಿ ಶುಲ್ಕವನ್ನು ಒಪ್ಪಿಕೊಳ್ಳದ ಕಾಲೇಜುಗಳಿಗೆ ನ್ಯಾಯಮೂರ್ತಿ ಬಿ.ಪದ್ಮರಾಜ ಸಮಿತಿಯ ಶಿಫಾರಸಿನಂತೆ ಶುಲ್ಕ ನಿಗದಿ ಮಾಡಿ ವಾರದೊಳಗೆ ಆದೇಶ ಹೊರಡಿಸುವಂತೆ ಬುಧವಾರ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ ಕೊನೆಗಳಿಗೆಯಲ್ಲಿ ಎಚ್ಚೆತ್ತುಕೊಂಡ ಖಾಸಗಿ ಕಾಲೇಜುಗಳು ಸರ್ಕಾರದ ಸೂತ್ರವನ್ನು ಒಪ್ಪಿಕೊಂಡಿರುವುದರಿಂದ ಈ ಬಾರಿಯೂ  ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥವಾಗಿದೆ.

ಈಗಾಗಲೇ ಸರ್ಕಾರ ಮತ್ತು ಆಡಳಿತ ಮಂಡಳಿಗಳ ನಡುವೆ ಕ್ರಮವಾಗಿ ಶೇ 45: 55ರ ಅನುಪಾತದಲ್ಲಿ ಸೀಟು ಹಂಚಿಕೆಯಾಗಿದೆ. ಈಗ 35 ಸಾವಿರ ರೂಪಾಯಿ ಶುಲ್ಕಕ್ಕೆ ಖಾಸಗಿಯವರು ಸಮ್ಮತಿ ವ್ಯಕ್ತಪಡಿಸಿರುವುದರಿಂದ ಸರ್ಕಾರ ಮತ್ತು ಒಕ್ಕೂಟದ ನಡುವೆ ಒಪ್ಪಂದ ಏರ್ಪಡಬೇಕಿದ್ದು, ನಂತರ ಈ ವಿಷಯವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕಾಗುತ್ತದೆ.

ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಕಳೆದ ಬಾರಿಯಂತೆ ಈ ವರ್ಷವೂ ಸಬ್ಸಿಡಿ ನೀಡುವುದನ್ನು ಮುಂದುವರಿಸಲಾಗಿದೆ. ಆದರೆ ಈ ವರ್ಷ ಹತ್ತು ಸಾವಿರ ಬದಲು, ಐದು ಸಾವಿರ ರೂಪಾಯಿ ಮಾತ್ರ ಸಬ್ಸಿಡಿ ನೀಡಲಾಗುತ್ತದೆ. ಸಿಇಟಿಯಲ್ಲಿ 25 ಸಾವಿರ ರ‌್ಯಾಂಕ್ ಒಳಗಿದ್ದು, ಪೋಷಕರ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬದ ವಿದ್ಯಾರ್ಥಿಗಳು ಮಾತ್ರ ಸಬ್ಸಿಡಿ ಸೌಲಭ್ಯ ದೊರೆಯಲಿದೆ.

ಸಭೆಯಲ್ಲಿ ಒಮ್ಮತ: ಗುರುವಾರ ಬೆಳಿಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಎಂಜಿನಿಯರಿಂಗ್ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಸರ್ಕಾರ ನಿಗದಿ ಮಾಡಿರುವಂತೆ 35 ಸಾವಿರ ರೂಪಾಯಿ ಶುಲ್ಕವನ್ನು ಒಪ್ಪಿಕೊಳ್ಳುವಂತೆ ಅವರು ಮತ್ತೆ ಮನವಿ ಮಾಡಿದ್ದರು.

ಸಚಿವರ ಜೊತೆಗಿನ ಮಾತುಕತೆಯಲ್ಲಿ ಭಾಗವಹಿಸಿದ್ದ ಪ್ರೊ.ಎಂ.ಕೆ.ಪಾಂಡುರಂಗ ಶೆಟ್ಟಿ, ಎಂ.ಆರ್.ಜಯರಾಂ ಮತ್ತು ಜವಾಹರ್ ಅವರು ಸಂಜೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆ ನಡೆಸಿದರು. ಸರ್ಕಾರ ಮುಂದಿಟ್ಟಿರುವ ಸೂತ್ರದ ಬಗ್ಗೆ ಅವರು ಎಲ್ಲ ಕಾಲೇಜುಗಳ ಪ್ರತಿನಿಧಿಗಳಿಗೂ ಮನವರಿಕೆ ಮಾಡಿದರು. ಬಳಿಕ ಸರ್ಕಾರದ ಸೂತ್ರವನ್ನು ಒಪ್ಪಿಕೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಈಗ ಒಪ್ಪಿಕೊಂಡಿರುವ ಸೂತ್ರದಂತೆ ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ 35,000 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆಡಳಿತ ಮಂಡಳಿಗಳ ಕೋಟಾ ಹಾಗೂ ಅನಿವಾಸಿ ಭಾರತೀಯ ಕೋಟಾದಡಿ ಲಭ್ಯವಾಗುವ ಸೀಟುಗಳಿಗೆ ರೂ 1.25 ಲಕ್ಷದವರೆಗೂ ಶುಲ್ಕ ವಿಧಿಸಬಹುದು. ಸರ್ಕಾರ ರೂಪಿಸಿದ್ದ ಶುಲ್ಕ ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಸಂಸದ ಆರ್.ಎಲ್.ಜಾಲಪ್ಪ ಅವರು ಸರ್ಕಾರದ ಜೊತೆಗಿನ ಮಾತುಕತೆ ಮತ್ತು ಸಂಜೆ ನಡೆದ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಸರ್ಕಾರದ ಸೂತ್ರವನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆದರೆ ಅವರು ಕೂಡ ಸರ್ಕಾರದ ಸೂತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದುಬಂದಿದೆ.

ಎರಡು ದಿನದಲ್ಲಿ ಒಪ್ಪಂದ?:
ಸರ್ಕಾರದ ಸೂತ್ರವನ್ನು ಒಪ್ಪಿಕೊಂಡಿರುವ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಪಿಇಎಸ್ ಶಿಕ್ಷಣ ಸಂಸ್ಥೆಗಳ ಸಮೂಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟದ ಸದಸ್ಯ ಡಿ.ಜವಾಹರ್, `ಸರ್ಕಾರದ ಸೂತ್ರವನ್ನು ಒಪ್ಪಿಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳಿಗೆ ರೂ 35,00 ಶುಲ್ಕದಲ್ಲಿ ಪ್ರವೇಶ ನೀಡಲು ಒಪ್ಪಿಕೊಂಡಿದ್ದೇವೆ~ ಎಂದರು.

ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸುವ ಮುನ್ನ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಖಾಸಗಿ ಕಾಲೇಜುಗಳ ನಡುವೆ ಒಪ್ಪಂದ ಆಗಬೇಕಾಗುತ್ತದೆ. ಈಗ ಸರ್ಕಾರದ ಸೂತ್ರವನ್ನು ಖಾಸಗಿ ಕಾಲೇಜುಗಳು ಒಪ್ಪಿಕೊಂಡಿರುವುದರಿಂದ ಒಂದೆರಡು ದಿನಗಳಲ್ಲಿ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT