ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ರಾಜಾ ಬಂಧನ

Last Updated 2 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ತನಿಖಾ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲು ಇನ್ನು ಕೇವಲ ಒಂದು ವಾರ ಬಾಕಿ ಉಳಿದಿರುವಂತೆಯೇ, ಪ್ರಕರಣದ ಪ್ರಮುಖ ಆರೋಪಿಯಾದ ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಮತ್ತು ಅವರಿಗೆ ಆಪ್ತರಾಗಿದ್ದ ಇಬ್ಬರು ಮಾಜಿ ಅಧಿಕಾರಿಗಳನ್ನು ಸಿಬಿಐ ಬುಧವಾರ ಬಂಧಿಸಿದೆ.

ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೇಹೂರ (ಉತ್ತರ ಪ್ರದೇಶ ಕೇಡರ್‌ನ 1973ರ ತಂಡದ ಐಎಎಸ್ ಅಧಿಕಾರಿ) ರಾಜಾ ಅವರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂದೋಲಿಯ (1984ನೇ ತಂಡದ ಭಾರತೀಯ ಆರ್ಥಿಕ ಸೇವೆ ಅಧಿಕಾರಿ) ಬಂಧಿತರು.

ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ನವದೆಹಲಿಗೆ ತೆರಳಿ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿ, ಉಭಯ ಪಕ್ಷಗಳ ಮೈತ್ರಿಯನ್ನು ಗಟ್ಟಿ ಮಾಡಿಕೊಂಡು ಬಂದ ಎರಡು ದಿನಗಳಲ್ಲೇ ಈ ಬೆಳವಣಿಗೆ ನಡೆದಿದೆ.

ರಾಜಾ ಅವರ ಬಂಧನ ತಮ್ಮ ರಾಜಕೀಯ ಬಾಂಧವ್ಯದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಎರಡೂ ಪಕ್ಷಗಳು ಸ್ಪಷ್ಟಪಡಿಸಿವೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಎರಡು  ತಿಂಗಳ ಬಳಿಕ  ರಾಜಾ ಅವರ ವಿರುದ್ಧ ಈ ಕ್ರಮ ಜರುಗಿಸಲಾಗಿದೆ.

ಸ್ಪೆಕ್ಟ್ರಂ ಹಂಚಿಕೆಯಲ್ಲಿ ಸ್ಥಾನಮಾನ ದುರ್ಬಳಕೆ ಮಾಡಿಕೊಂಡು ಕೆಲ ಟೆಲಿಕಾಂ ಕಂಪೆನಿಗಳಿಗೆ ಲಾಭ ಮಾಡಿಕೊಟ್ಟ ಹಾಗೂ ಪರವಾನಗಿ ಪ್ರಕ್ರಿಯೆಯನ್ನು ಗುತ್ತಿಗೆಗೆ ನೀಡದೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಎಂಬ ನೀತಿಯಡಿ ಸ್ವೇಚ್ಛಾನುಸಾರ ಮಂಜೂರು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

2007- 08ರ ಅವಧಿಯಲ್ಲಿ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಸ್ಪೆಕ್ಟ್ರಂ ಹಂಚಿಕೆ ಮಾಡಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲರ ವರದಿ ಬಹಿರಂಗಪಡಿಸಿತ್ತು. ಆ ಬಳಿಕ ರಾಜಾ ಅವರ ವಜಾಗೆ ಆಗ್ರಹಿಸಿ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಹುಯಿಲೆಬ್ಬಿಸಿದ್ದವು. ಸುಪ್ರೀಂಕೋರ್ಟ್ ಸಹ ತನಿಖೆಯಲ್ಲಿನ ಪ್ರಗತಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಉರಿಗಣ್ಣು ಬಿಟ್ಟಿತ್ತು. ಇಂತಹ ಅನಿವಾರ್ಯ ಸ್ಥಿತಿಯಲ್ಲಿ ರಾಜಾ ನವೆಂಬರ್ 14ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಮೊದಲಿಗೆ ಅನಾಮಿಕ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಇಲಾಖೆಯ ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ರಾಜೀನಾಮೆ ಸಲ್ಲಿಸಿದ ಬಳಿಕವಷ್ಟೇ ರಾಜಾ ಅವರ ಮೇಲೆ ಗಮನ ಕೇಂದ್ರೀಕರಿಸಿತ್ತು. ರಾಜಧಾನಿ ಹಾಗೂ ತಮಿಳುನಾಡಿನ ಪೆರಂಬಲೂರಿನಲ್ಲಿರುವ ಅವರ ನಿವಾಸಗಳು, ಅವರ ಸಂಬಂಧಿಕರು ಮತ್ತು ಸಹಚರರಿಗೆ ಸೇರಿದ ಹಲವಾರು ಮನೆಗಳ ಮೇಲೆ ದಾಳಿ ನಡೆದಿತ್ತು.

ಡಿಸೆಂಬರ್ 24, 25 ಮತ್ತು ಜನವರಿ 31ರಂದು ತನಿಖಾ ಸಂಸ್ಥೆ ಮಾಜಿ ಸಚಿವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿತ್ತು. ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಬುಧವಾರ ನಾಲ್ಕನೇ ಬಾರಿ ವಿಚಾರಣೆಗೆ ಒಳಪಡಿಸಿದ ನಂತರ ಅವರನ್ನು ಬಂಧಿಸಲಾಯಿತು. ರಾಜಾ ಅವರ ಕಚೇರಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಕಂಪ್ಯೂಟರ್ ದಾಖಲೆಗಳ ಬಗ್ಗೆ ಈ ವೇಳೆ ಅವರನ್ನು ಪ್ರಶ್ನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಹಗರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆ ದಿನವಾದ ಫೆ. 10ರ ಒಳಗೆ ತನಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕೇಂದ್ರ ಜಾಗೃತ ಆಯೋಗದ ತನಿಖೆಯನ್ನು ಆಧರಿಸಿ, ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿದಂತೆ ರೂ 22,000 ಕೋಟಿ ನಷ್ಟವಾಗಿದೆ ಎಂದು  ಸಿಬಿಐ ತನ್ನ ಎಫ್‌ಐಆರ್‌ಯಲ್ಲಿ ದಾಖಲಿಸಿದೆ.

ರಾಜಾ ಅವರು ದೂರಸಂಪರ್ಕದಂತಹ ಪ್ರಮುಖ ಖಾತೆ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾದ ಕಾರ್ಪೊರೇಟ್ ದಲ್ಲಾಳಿ ನೀರಾ ರಾಡಿಯಾ, ಟ್ರಾಯ್‌ನ ಮಾಜಿ ಮುಖ್ಯಸ್ಥ ಪ್ರದೀಪ್ ಬೈಜಾಲ್, ದೂರಸಂಪರ್ಕ ಮಾಜಿ ಕಾರ್ಯದರ್ಶಿ ಡಿ.ಎಸ್.ಮಾಥುರ್ ಅವರನ್ನು ಸಂಸ್ಥೆ ಈಗಾಗಲೇ ವಿಚಾರಣೆಗೆ ಗುರಿಪಡಿಸಿದೆ. 
 
ಯುಪಿಎ ಮೊದಲ ಅವಧಿಯಲ್ಲಿ    2007ರ ಮೇ 18ರಂದು ರಾಜಾ ದೂರಸಂಪರ್ಕ ಸಚಿವರಾಗಿ ನೇಮಕಗೊಂಡಿದ್ದರು. 15ನೇ ಲೋಕಸಭೆಗೆ ಪುನರಾಯ್ಕೆಯಾದ ಅವರು 2009ರ ಮೇ 31ರಂದು ಮತ್ತೆ ಈ ಖಾತೆಯನ್ನು ಹೊಂದಲು ಯಶಸ್ವಿಯಾಗಿದ್ದರು.

ಭಾರಿ ತಡವಾದ ಕ್ರಮ- ಬಿಜೆಪಿ: ರಾಜಾ ಅವರ ಬಂಧನ ಭಾರಿ ತಡವಾದ ಅತಿ ಸಣ್ಣ ಕ್ರಮ ಎಂದು ಬಿಜೆಪಿ ಬಣ್ಣಿಸಿದೆ. ಈ ಬೆಳವಣಿಗೆಯಿಂದ ಹಗರಣವನ್ನು ಜೆಪಿಸಿ ತನಿಖೆಗೆ ಒಳಪಡಿಸಬೇಕೆಂಬ ನಮ್ಮ ಬೇಡಿಕೆಗೆ ಬಲ ಬಂದಂತಾಗಿದೆ ಎಂದು ಹೇಳಿದೆ.

1.76 ಲಕ್ಷ ಕೋಟಿ ರೂಪಾಯಿಯನ್ನು ರಾಜಾ ಅವರೊಬ್ಬರೇ ನುಂಗಿ ಹಾಕಿದ್ದಾರೆ ಎಂದು ಭಾವಿಸುವುದು ಸರಿಯಲ್ಲ. ಇದರ ಹಿಂದಿರುವ ಇತರ ವ್ಯಕ್ತಿಗಳು ಯಾರು ಎಂಬುದು ಹೊರಬರಬೇಕು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.

ಈ ಭಾರಿ ಹಗರಣದ ತನಿಖೆಯನ್ನು ಬರೀ ತಪ್ಪಿತಸ್ಥರನ್ನು ಶಿಕ್ಷಿಸುವುದಕ್ಕಷ್ಟೇ ನಡೆಸಬಾರದು.  ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಂಚಿಸಲು ಅವಕಾಶ ಮಾಡಿಕೊಟ್ಟ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಯಲಿಗೆಳೆಯುವ ಸಲುವಾಗಿಯೂ ಸಂಪೂರ್ಣ ತನಿಖೆ ಅಗತ್ಯ ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ  ಆಗ್ರಹಿಸಿದ್ದಾರೆ. ಈ ನಿರೀಕ್ಷಿತ ಬಂಧನವು ಪ್ರಧಾನಿ ಕಚೇರಿ ಮತ್ತು ಹಿಂದಿನ ಟೆಲಿಕಾಂ ಸಚಿವರ ಪಾತ್ರದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತುತ್ತದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ   ಡಿ. ರಾಜಾ ಹೇಳಿದ್ದಾರೆ. ಜೆಪಿಸಿ ತನಿಖೆ ಬೇಡಿಕೆಯನ್ನು ಯೆಚೂರಿ ಮತ್ತು ರಾಜಾ ಪುನರುಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT