ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ವರ್ಗಾವಣೆಯಾದ ಪ್ರಾಂಶುಪಾಲರು!

Last Updated 4 ಸೆಪ್ಟೆಂಬರ್ 2013, 10:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ ವರ್ಗಾವಣೆಯಾಗಲು ಸಿದ್ಧರಿರದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವಿ.ಧನಮ್ಮ ಕೊನೆಗೂ ಬೆಂಗಳೂರಿನ ಕೃಷ್ಣರಾಜಪುರಂ ಕಾಲೇಜಿಗೆ ವರ್ಗಾವಣೆಯಾಗಿದ್ದಾರೆ.

ಬೆಂಗಳೂರಿನ ವರ್ತೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾಯಿಸಿ ಸರ್ಕಾರವು ಜುಲೈ 10ರಂದೇ ಆದೇಶ ಹೊರಡಿಸಿದ್ದರೂ ಅವರು ಹೋಗಲು ಸಿದ್ಧರಿರಲಿಲ್ಲ.

ಆದರೆ, ಸೋಮವಾರ ಸಂಜೆ ದಿಢೀರನೇ ಉಸ್ತುವಾರಿ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ಅಧಿಕಾರ ವಹಿಸಿದರು. ನಂತರ ಕೃಷ್ಣರಾಜಪುರಂ ಕಾಲೇಜಿಗೆ ಹೋದರು.

ವಿ.ಧನಮ್ಮ ಅವರು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಮಾನಸಿಕ ಕಿರುಕುಳ ನೀಡುವುದಲ್ಲದೇ ಬೇರೆ ಬೇರೆ ರೀತಿಯಲ್ಲೂ ಕಿರಿಕಿರಿ ನೀಡುತ್ತಾರೆ ಎಂದು ಕೆಲ ಪ್ರಾಧ್ಯಾಪಕರು ದೂರು ನೀಡಿದ್ದರು.

ಅಂಕಪಟ್ಟಿ, ವಿಷಯಗಳ ಆಯ್ಕೆ, ಶುಲ್ಕ ಪಾವತಿ ಮುಂತಾದವುಗಳಿಗೆ ಸಂಬಂಧಿಸಿದಂತೆ ಪ್ರಾಂಶುಪಾಲರಿಂದ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಲ್ಲದೇ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ಆಗಸ್ಟ್ 13ರಂದು ಪ್ರತಿಭಟನೆ ಕೂಡ ನಡೆಸಿದ್ದರು. ಪ್ರಾಂಶುಪಾಲರು ಇಲ್ಲಿಂದ ಬೇಗನೆ ವರ್ಗವಾಗಬೇಕೆಂದು ಒತ್ತಾಯ ಕೂಡ ಮಾಡಿದ್ದರು.

ಕಾಲೇಜಿಗೆ ಸಂಬಂಧಿಸಿದಂತೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡರ ನೇತೃತ್ವದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಪ್ರಾಂಶುಪಾಲರನ್ನು ಭೇಟಿಯಾಗಿದ್ದರು. ಕಾಲೇಜಿನಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದ್ದರು. ಆರೋಪ-ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಧ್ಯಾಪಕರ ಸಭೆ ಕರೆಯುವಂತೆ ಆಗಸ್ಟ್ 29ರಂದು ಲಿಖಿತ ರೂಪದಲ್ಲಿ ಮನವಿ ಮಾಡಿಕೊಂಡಿದ್ದರು. ಸತ್ಯಾಸತ್ಯತೆ ಬೆಳಕಿಗೆ ಬರಲು ಸಹಾಯಕವಾಗುವಂತೆ ಹೇಳಿದ್ದರು.

ಆದರೆ, ಅಷ್ಟರಲ್ಲಿ ವಿ.ಧನಮ್ಮ ಅವರೇ ಕೃಷ್ಣರಾಜಪುರಂ ಕಾಲೇಜಿಗೆ ವರ್ಗವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿ.ಧನಮ್ಮ ಅವರು ವರ್ಗವಾಗದಿರುವ ಬಗ್ಗೆ ಮತ್ತು ಕಾಲೇಜಿನ ಅವ್ಯವಸ್ಥೆ ಕುರಿತು `ಪ್ರಜಾವಾಣಿ'ಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT