ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಸಿಕ್ಕನು ಸೂರ್ಯ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಯ್ಯಾ ಅಯ್ಯಾ ಕೇಳಿರಣ್ಣಾ
ತಾಯಿ ತಂದೆ ಗೌಡ್ರೆ ಕೇಳಿರಣ್ಣಾ
ಈ ನೆಲ ನಮ್ಮದಣ್ಣಾ
ಈ ಜಲ ನಮ್ಮದಣ್ಣಾ
ಬಿತ್ತಿ ಬೆಳೆವ ನಮ್ಮ ಈ ಭೂಮಿ ಕಸಿದರಯ್ಯಾ...
ದಕ್ಕಲಿಗರು ಎನ್ನುವರಯ್ಯಾ
ನಾವು ಯಾರಿಗೂ ದಕ್ಕಿಲ್ಲ
ಯಾರಿಗೂ ದಕ್ಕಿಲ್ಲವಯ್ಯಾ
ಅಯ್ಯೋ ಮರೆತು ಹೋಗಿವೆ ನಮ್ಮಯ ಮನೆಗಳು...

ಹೀಗೆ ಆರ್ತತೆಯಿಂದ ತಮ್ಮ ಬದುಕನ್ನು ಪದವಾಗಿ ಕಟ್ಟಿ ಹಾಡುವವರು ದಕ್ಕಲಿಗರು. `ದಕ್ಲಪದ~ ಹಾಡುತ್ತಾ ಇಂದಿಗೂ ಯಾರಿಗೂ ದಕ್ಕದ ಅಲೆಮಾರಿ ನವಿಲುಗಳಂತೆಯೇ ಉಳಿದಿರುವವರು. ತಾವು ಕಳೆದುಕೊಂಡ ನೆಲ-ಜಲಗಳನ್ನು ದಕ್ಕಿಸಿಕೊಳ್ಳಬೇಕೆನ್ನುವ ಎಚ್ಚರದಲ್ಲಿ ಇದೀಗಷ್ಟೇ ಸಂಘಟನೆಗೆ ತಮ್ಮನ್ನೊಡ್ಡಿಕೊಳ್ಳುತ್ತಿರುವವರು ಈ ದಕ್ಕಲಿಗರು.

ತಾತ್ಕಾಲಿಕ ಡೇರೆ ಬಿಡಾರಗಳಲ್ಲಿದ್ದುಕೊಂಡು, ಊರೂರು ಅಲೆಯುವ ದಕ್ಕಲಿಗರದು `ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು~ ಎಂಬ ಕವಿವಾಣಿಗೆ ಅನ್ವರ್ಥಕವಾದ ಬದುಕು. ಇಂಥ ದಕ್ಕಲಿಗರು ನನ್ನ ಗಮನಕ್ಕೆ ಬಂದುದು ಎರಡು ವರ್ಷಗಳ ಹಿಂದೆ, ಗೆಳೆಯನೊಬ್ಬನ ಮೂಲಕ. 

`ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬಳಿಯಲ್ಲಿದ್ದ ದಕ್ಕಲಿಗರ ಗುಡಿಸಲುಗಳನ್ನು ಕಿತ್ತು ಹಾಕಲಾಗಿದೆ. ತಮಗೆ ಸೇರಿದ ಸ್ಮಶಾನದ ಬಯಲಿನಲ್ಲಿ ದಕ್ಕಲಿಗರು ವಾಸಿಸಬಾರದು ಎಂದು ಹಟ ಹಿಡಿದಿರುವ ಮಾದಿಗ ಸಮುದಾಯದವರು, ದಕ್ಕಲಿಗರನ್ನು ತಮ್ಮ ಕೇರಿಯೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ.
 
ಈ ಜಾತಿಭೇದದ ನಿವಾರಣೆಗೆ ಏನಾದರೂ ಮಾಡಬೇಕು~ ಎಂದು ಗೆಳೆಯ ಹೇಳಿದ. ಇದಾದ ಬಳಿಕ, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರೊಂದಿಗೆ ಹಾಗೂ ಆದಿಜಾಂಬವ ಗುರುಗಳಾದ ಮಾರ್ಕಂಡ ಮುನಿ ಸ್ವಾಮೀಜಿಯವರೊಂದಿಗೆ ಮಾತುಕತೆ ನಡೆಸಲಾಯಿತು.

ಮಾದಿಗರು ಮತ್ತು ದಕ್ಕಲಿಗರು ಪರಸ್ಪರ ಭೇದಗಳನ್ನು ತೊರೆಯುವ ಅನಿವಾರ್ಯತೆಯ ಬಗ್ಗೆ ಪ್ರಜ್ಞಾವಂತರ ಗಮನ ಸೆಳೆಯುವ ಪ್ರಯತ್ನಗಳು ನಡೆದವು. ಆದರೆ ಆ ಯಾವ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಲಿಲ್ಲ.

ಅರಿವಿನ ಕಿಡಿ
ಚಿಕ್ಕನಾಯಕನಹಳ್ಳಿ ಸಮೀಪದ ಚಿಕ್ಕೇನಹಳ್ಳಿ ಪಿಂಜಾರರ ಮಠದಲ್ಲಿ `ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ~ಯು 2009ರ ಜೂನ್ ತಿಂಗಳಲ್ಲಿ- `ಹಿಂದುಳಿದ ಜನವರ್ಗಗಳ ಸಾಂಸ್ಕೃತಿಕ ಚರಿತ್ರೆ; ಹೋರಾಟ ಮತ್ತು ಸವಾಲುಗಳು~ ಎಂಬ ವಿಷಯದ ಕುರಿತಾಗಿ ಅಧ್ಯಯನ ಶಿಬಿರ ನಡೆಸಿತು.
 
ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ.ಸಿ.ಎಸ್.ದ್ವಾರಕಾನಾಥ್, ಸ್ಥಳೀಯ ಪಶುವೈದ್ಯ ಡಾ.ರಘುಪತಿ ಹಾಗೂ `ಅಲೆಮಾರಿ ಬುಡಕಟ್ಟು ಮಹಾಸಭಾ~ದ ಬಾಲಗುರುಮೂರ್ತಿ ಮುಂತಾದ ಗೆಳೆಯರು ಆ ಶಿಬಿರದಲ್ಲಿ ಭಾಗವಹಿಸಿದ್ದರು.

ದಲಿತ ಚಳವಳಿ, ರೈತ ಚಳವಳಿ ಮತ್ತಿತರ ಪ್ರಗತಿಪರ ಚಳವಳಿಗಳು ಇಲ್ಲಿಯವರೆಗೆ ಮುಟ್ಟದಿದ್ದ ನಿರ್ಗತಿಕ ಅಲೆಮಾರಿಗಳ ಪುನರ್ವಸತಿ ಮತ್ತು ಸಬಲೀಕರಣದ ಪ್ರಶ್ನೆಯ ಬಿಂದುವಿನಿಂದಲೇ ತಮ್ಮ ಹೋರಾಟವನ್ನು ರೂಪಿಸಬೇಕಾದ ಅನಿವಾರ್ಯತೆ ಆ ಶಿಬಿರದಲ್ಲಿ ನಡೆದ ಚರ್ಚೆಗಳಿಂದ ವ್ಯಕ್ತವಾಯಿತು.
 
ಇದರ ಫಲವಾಗಿ ಡಿಸೆಂಬರ್ 5, 2009ರಂದು ಚಿಕ್ಕನಾಯಕನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ತುಮಕೂರು ಜಿಲ್ಲಾ ಅಲೆಮಾರಿ ಸಮುದಾಯಗಳ ಸಮಾವೇಶ ನಡೆಯಿತು. ಅಲೆಮಾರಿ ಸಮುದಾಯದ ಜಾನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ ಉದ್ಘಾಟಿಸಿದ ಆ ಸಮಾರಂಭ ದಕ್ಕಲಿಗರ ಮತ್ತು ಇತರೆ ಅಲೆಮಾರಿಗಳ ಜಾಗೃತಿ ಮತ್ತು ಸಂಘಟನೆಗೆ ವೇಗ ತಂದಿತು.

ಸ್ವಾತಂತ್ರ್ಯ ಬಂದು 63 ವರ್ಷಗಳಾದರೂ, ನಿಮ್ನವರ್ಗಗಳಿಗೆ ಸಂವಿಧಾನಾತ್ಮಕ ಹಕ್ಕುಬಾಧ್ಯತೆಗಳನ್ನು ನೀಡಿ 60 ವರ್ಷಗಳಾದರೂ ದಕ್ಕಲಿಗರನ್ನು `ಅಸ್ಪೃಶ್ಯರಿಂದಲೇ ಅಸ್ಪೃಶ್ಯರನ್ನಾಗಿ~ ನಡೆಸಿಕೊಳ್ಳುತ್ತಿರುವ ಅಮಾನವೀಯ ಆಚರಣೆಗಳು ಜಾರಿಯಲ್ಲಿವೆ.

ಇಂಥ ಸಂದರ್ಭದಲ್ಲಿ, ಡಾ.ಸಿ.ಎಸ್.ದ್ವಾರಕಾನಾಥ್ ಮತ್ತು ಡಾ.ರಘುಪತಿಯವರು, ಚಿಕ್ಕನಾಯಕನಹಳ್ಳಿಯ ಸ್ಮಶಾನದ ಬಯಲಿನಲ್ಲಿ ನೆಲೆಸಿದ್ದ ದಕ್ಕಲಿಗರ ಪಾಲಿಗೆ ಆಶಾಕಿರಣವಾಗಿ ಒದಗಿಬಂದರು.

ದಕ್ಕಲಿಗರಿಗೆ ಪುನರ್ವಸತಿ ಕಲ್ಪಿಸಲು ಮುಂದಾದ ಅವರು, ತುಮಕೂರು ಜಿಲ್ಲಾ ಆಡಳಿತ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಡಳಿತಯಂತ್ರದ ಮೇಲೆ ಒತ್ತಡ ತಂದು, ಸ್ಮಶಾನದಲ್ಲಿ ನೆಲೆಸಿರುವ ದಕ್ಕಲಿಗರಿಗೆ ನಿವೇಶನಗಳನ್ನು ಮಂಜೂರು ಮಾಡಿಸಲು ಶ್ರಮಿಸಿದರು. ಈ ಪ್ರಯತ್ನಗಳಿಗೆ ದಲಿತ ಸಮುದಾಯಗಳ ಕೆಲವರಿಂದಲೇ ತಕರಾರು ಎದುರಾಯಿತು.

ಆದರೂ, ಹತ್ತೊಂಬತ್ತು ದಕ್ಕಲಿಗ ಕುಟುಂಬಗಳಿಗೆ ನಿವೇಶನಗಳ ಹಕ್ಕುಪತ್ರಗಳು ಕೊನೆಗೂ ದೊರೆತವು. ಈ ಸಾಧನೆಯನ್ನು ಸಿ.ಎಸ್.ದ್ವಾರಕಾನಾಥ್ ಬಣ್ಣಿಸುವುದು ಹೀಗೆ- `ದಕ್ಷಿಣ ಕರ್ನಾಟಕದಲ್ಲಿಯೇ ಪ್ರಥಮವಾದ ಈ ಪ್ರಯತ್ನ ಕಮ್ಮಿ ಸಾಧನೆಯಂತೂ ಅಲ್ಲ. ತುಮಕೂರು ಜಿಲ್ಲೆಯು ಅಲೆಮಾರಿಗಳ ಸಬಲೀಕರಣ ಪ್ರಕ್ರಿಯೆಯ ಪ್ರಯೋಗಾಲಯವಿದ್ದಂತೆ~.

ಡಾ.ರಘುಪತಿ ಹೇಳುವ ಪ್ರಕಾರ, ದಕ್ಕಲಿಗರಿಗೆ ಭೂ ಹಸ್ತಾಂತರ ಮಾಡಿಕೊಟ್ಟ ನಿವೇಶನದ ಚಕ್ಕುಬಂದಿಯನ್ನು ಪುರಸಭೆಯ ಅಥವಾ ತಾಲ್ಲೂಕು ಕಚೇರಿಯ ದಾಖಲೆಗಳಲ್ಲಿ ಈಗಲೂ ಸ್ಪಷ್ಟವಾಗಿ ದಾಖಲಿಸಿರುವುದಿಲ್ಲ. ಆದರೂ ನೆಲರಹಿತ ದಕ್ಕಲಿಗರು ನೆಲದ ನೆಲೆ ಪಡೆದುಕೊಂಡದ್ದು ಸಣ್ಣ ಸಾಧನೆಯೇನೂ ಅಲ್ಲ.

ಮೊದಲ ಸ್ವಾತಂತ್ರ್ಯದ ಹಬ್ಬ!
ದಕ್ಕಲಿಗರಿಗೆ ಭೂ ಒಡೆತನದ ಹಕ್ಕುಪತ್ರಗಳು ದೊರೆತದ್ದು ಕಳೆದ ಜೂನ್‌ನಲ್ಲಿ. ಈ ಸಂಭ್ರಮ ಹೊರಹೊಮ್ಮಿದ್ದು ಕಳೆದ ಆಗಸ್ಟ್‌ನಲ್ಲಿ. ಕರ್ನಾಟಕದಾದ್ಯಂತ ಚದುರಿಹೋಗಿದ್ದ ಸಮುದಾಯದ ಬಾಂಧವರು, ಜುಲೈ 23ರಂದು ಒಂದೆಡೆ ಸಮಾವೇಶಗೊಂಡಿದ್ದರು.
 
ಆ ಸಮಾವೇಶದ ದಿನವೇ ದಕ್ಕಲಿಗರೆಲ್ಲಾ ಹೀಗೆ ಚಾರಿತ್ರಿಕವಾಗಿ ಒಂದೆಡೆ ಕಲೆತ ಸಂದರ್ಭವನ್ನು ಆಗಸ್ಟ್ 15ರಂದು ರಾಷ್ಟ್ರೀಯ ಬಾವುಟ ಹಾರಿಸುವ ಮೂಲಕ ಉತ್ಸವದ ರೂಪದಲ್ಲಿ ವ್ಯಕ್ತಪಡಿಸಬೇಕೆಂದು ತೀರ್ಮಾನಿಸಿದ್ದರು.

ಅದರ ಪ್ರಕಾರ, ಆ.15ರಂದು ರಾಜ್ಯದ 16 ಜಿಲ್ಲೆಗಳಲ್ಲಿ ನೆಲೆಸಿರುವ ದಕ್ಕಲಿಗ ಕುಟುಂಬಗಳ ಜನಸಂಖ್ಯಾ ಸಮೀಕ್ಷೆಯ ವರದಿಯನ್ನೂ ಮಂಡಿಸಲಾಯಿತು. ತಮ್ಮ ಜನಸಂಖ್ಯೆ ಎಷ್ಟಿದೆ ಎಂಬ ಸ್ಪಷ್ಟ ಅಂಕಿಅಂಶಗಳ ಚಿತ್ರಣ ಈಗ ಅವರಿಗೆ ದೊರಕಿದೆ. ಸುಮಾರು 1200 ಜನಸಂಖ್ಯೆಯ 400 ದಕ್ಕಲಿಗರ ಕುಟುಂಬಗಳು ರಾಜ್ಯದಲ್ಲಿವೆ.

ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್‌ರವರು ದೇಶವನ್ನುದ್ದೇಶಿಸಿ 65ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುತ್ತಿದ್ದರೆ, ಇತ್ತ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹೊರವಲಯದ ಸ್ಮಶಾನದ ಬಯಲಿನಲ್ಲಿ ದಕ್ಕಲಿಗರು ತ್ರಿವರ್ಣ ಬಾವುಟವನ್ನು ಹಾರಿಸಿದ್ದರು. ಅದವರ ಪಾಲಿಗೆ ಮೊಟ್ಟಮೊದಲ ಸ್ವಾತಂತ್ರ್ಯದ ಹಬ್ಬ!

ಬದಲಾವಣೆಯ ಗಾಳಿ
ಆಧುನಿಕ ಶಿಕ್ಷಣ ಮತ್ತು ನಾಗರಿಕತೆ ಗಾಢವಾಗಿ ಎಲ್ಲ ಸಾಮಾಜಿಕ ವಲಯಗಳನ್ನು ಪ್ರಭಾವಿಸುತ್ತಿರುವ ಇವತ್ತಿನ ದಿನಗಳಲ್ಲಿ ಅಲೆಮಾರಿಗಳಾದ ದಕ್ಕಲಿಗರು ಸಾಂಸ್ಕೃತಿಕ ಸ್ಥಿತ್ಯಂತರಗಳಿಗೆ ಹೊಂದಿಕೊಂಡು ತಮ್ಮ ಜಂಗಮರೂಪಿ ಜೀವನ ಕ್ರಮವನ್ನು ಸ್ಥಿರ ಜೀವನಕ್ರಮಕ್ಕೆ ಪರಿವರ್ತಿಸಿಕೊಳ್ಳುತ್ತಿದ್ದಾರೆ.
 
ಸುಡುಗಾಡು ಸಿದ್ಧರು, ಬುಡಗ ಜಂಗಾಲರು, ದೊಂಬರು, ದೊಂಬಿದಾಸರು ಮುಂತಾದವರಿಗಿಂತಲೂ ದಕ್ಕಲಿಗರಲ್ಲಿ ಈಗಲೂ ಅಲೆಮಾರಿತನದ ಮೂಲಗುಣ ಹೆಚ್ಚಾಗಿ ಉಳಿದುಕೊಂಡಿದೆ.

ಅಲೆಮಾರಿ ಸಮುದಾಯಗಳು ಒಂದೆಡೆ ಸ್ಥಿರವಾಗಿ ನೆಲೆಸಿ ಅಭಿವೃದ್ಧಿ ಹೊಂದಬೇಕಾದರೆ ಭೂ ಒಡೆತನ, ಜೀವನಮಾರ್ಗದ ನಿಶ್ಚಿತ ಆರ್ಥಿಕ ವ್ಯವಸ್ಥೆ, ಸಮಾನ ಸಾಮಾಜಿಕ ಭದ್ರತೆ, ಮುಖ್ಯವಾಹಿನಿಯ ಸಾಮಾಜಿಕ ವಲಯಗಳೊಂದಿಗೆ ಸಹಜೀವನ ವ್ಯವಸ್ಥೆಯನ್ನು ಕಲ್ಪಿಸುವುದು, ಶಿಕ್ಷಣ ನೀಡುವುದು, ರಾಜಕೀಯ ಪ್ರಾತಿನಿಧ್ಯ ಮುಂತಾದವುಗಳನ್ನು ಸರ್ಕಾರ ಒದಗಿಸಿಕೊಡಬೇಕಾಗುತ್ತದೆ.
 
ಇಂತಹ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವ ಪ್ರಾಥಮಿಕ ಅರಿವೂ ಇಲ್ಲದಿರುವ ಬಹುಪಾಲು ದಕ್ಕಲಿಗರು ಇನ್ನೂ ಪೌರತ್ವದ ಗುರುತುಪತ್ರಗಳನ್ನೇ ಪಡೆಯದೆ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದಾರೆ. ಆರ್ಥಿಕವಾಗಿ ಅತಂತ್ರರಾಗಿದ್ದರೂ ಸಾಂಸ್ಕೃತಿಕವಾಗಿ ದಕ್ಕಲಿಗರು ಅತ್ಯಂತ ಶ್ರಿಮಂತರು.
 
`ಗಾರುಡಿ ಗಂಗಭಾರತ~, `ಲೋಕಭಾರತ~, `ಜಲಜಾಂಬವ ಪುರಾಣ~ ಹಾಗೂ `ಆದಿಜಾಂಬವ ಪುರಾಣ~ಗಳ್ನ ಚಿತ್ರಪಟಗಳನ್ನು ಪ್ರದರ್ಶಿಸುವುದರೊಂದಿಗೆ ವಿವರಿಸುವ ಅವರು ಪೂರ್ವಕಾಲದ ತಾಮ್ರಪತ್ರಗಳು, ತಾಳೆಗರಿಯ ಹೊತ್ತಿಗೆಗಳು ಮುಂತಾದ ದಾಖಲೆಗಳನ್ನು ಇಂದಿಗೂ ಸಂರಕ್ಷಿಸಿಕೊಂಡಿದ್ದಾರೆ.

ಮೂಲ ಸಂಸ್ಕೃತಿಯ ನೆನಪುಗಳನ್ನು ತಮ್ಮಂದಿಗೆ ಹೊತ್ತು ಸಾಗುತ್ತಿದ್ದಾರೆ. ಇಂದಿನ ದಕ್ಕಲಿಗರು ಯಜಮಾನ ಸಂಸ್ಕೃತಿಯ ಭಾರವನ್ನು ಹೆಗಲೇರಿಸಿಕೊಂಡು ಮಾದಿಗರಿಗಿಂತ ಕೀಳು ಜಾತಿಯವರಾಗಿ ಪರಿಗಣಿತವಾಗಿದ್ದಾರೆ.

ಕಳೆದ ಜುಲೈ 23ರಂದು ಚಿಕ್ಕನಾಯಕನಹಳ್ಳಿಯಲ್ಲಿ `ದಕ್ಕಲಿಗರ ಸಮಾವೇಶ~ ನಡೆಯಿತು. ಅಲ್ಲಿ ಕೇಳಿಬಂದ ಮುಖ್ಯ ಅಹವಾಲು ಜಾತಿಪತ್ರಗಳಿಗೆ ಸಂಬಂಧಿಸಿದ್ದಾಗಿತ್ತು. ದಕ್ಕಲಿಗರನ್ನು ಉದ್ದೇಶಪೂರ್ವಕವಾಗಿಯೇ ಜಾತಿಪತ್ರಗಳಲ್ಲಿ `ಆದಿ ಕರ್ನಾಟಕ~ (ಒಂದು ಪ್ರತ್ಯೇಕ ಪರಿಶಿಷ್ಟ ಜಾತಿ) ಅಥವಾ `ಮಾದಿಗ~ ಎಂಬ ಹೆಸರಿನಲ್ಲಿ ನಮೂದಿಸಿ ಸರ್ಕಾರ ಜಾತಿಪತ್ರಗಳನ್ನು ನೀಡುತ್ತಿದೆ. ತಮಗೆ ದಕ್ಕಬೇಕಾಗಿರುವ ಸಂವಿಧಾನಾತ್ಮಕ ಹಕ್ಕುಗಳಿಂದ ಅವರನ್ನು ವಂಚಿಸಲಾಗುತ್ತಿದೆ ಎನ್ನುವ ಅಳಲು ಸಮಾವೇಶದಲ್ಲಿ ಕೇಳಿಬಂತು.

ಕರ್ನಾಟಕದಲ್ಲಿರುವ 101 ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ದಕ್ಕಲಿಗರನ್ನು ಸೇರಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಯ ಬಹುಪಾಲು ಅನುಕೂಲಗಳು ಪರಿಶಿಷ್ಟರಲ್ಲಿಯೇ ಅಧಿಕ ಸಂಖ್ಯೆಯಲ್ಲಿರುವವರ ಪಾಲಾಗುತ್ತಿವೆ. ನನಗೆ ತಿಳಿದಿರುವಂತೆ ದಕ್ಕಲಿಗರಲ್ಲಿ ಕೇವಲ ಇಬ್ಬರು ಯುವಕರು ಮಾತ್ರ ಬಿ.ಎ ಪದವೀಧರರಾಗಿದ್ದು, ಅವರಿಗೆ ಸರ್ಕಾರಿ ನೌಕರಿ ಸಿಕ್ಕಿಲ್ಲ.

ದೇಶದಾದ್ಯಂತ ಭಿಕ್ಷೆ ಬೇಡಿ ಬದುಕುತ್ತಿರುವ ದಕ್ಕಲಿಗರು ಇಲ್ಲಿಯವರೆಗೆ ತಮ್ಮಂತೆಯೇ ಶೋಷಿತ ವರ್ಗಕ್ಕೆ ಸೇರಿದ ಮಾದಿಗರ ಕೇರಿಯೊಳಕ್ಕಾಗಲೀ ಅಥವಾ ಮನೆಯೊಳಕ್ಕಾಗಲೀ ಪ್ರವೇಶ ಮಾಡಿಲ್ಲ. ತಾವು ಮಾದಿಗರಿಗಿಂತಲೂ ಕೀಳುಜಾತಿಯವರೆಂದು ಕೀಳರಿಮೆ ಭಾವಿಸುತ್ತಾ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಹೊಸ ಬೆಳಕಿನಲ್ಲಿ...
ಬಹುತೇಕ ಅಕ್ಷರಸ್ಥ ದಲಿತರು ನವಬ್ರಾಹ್ಮಣರಾಗುತ್ತ, `ಕೊಡಲಿ ಕಾವು ಕುಲಕ್ಕೆ ಮೂಲ~ ಎಂಬ ಗಾದೆ ಮಾತಿಗೆ ಅನ್ವರ್ಥಕವಾಗಿ ಬದುಕುತ್ತಿದ್ದಾರೆ. ಇಂಥವರ ನಡುವೆಯೇ ಯಾದಗಿರಿ ಜಿಲ್ಲೆಯ ದಕ್ಕಲಿಗರ ಮುಖಂಡ ಮಲಕಪ್ಪ, ಶಾಂತರಾಜು, ಮಾರುತಿ ಮುಂತಾದ ಯುವಕರು `ದಾರ ನಮ್ಮದು ಶಿವದಾರ ಉಡಿದಾರ ನಮ್ಮದು  ಜನಿವಾರ ಶಿವದಾರ ಬಿಚ್ಚಿಟ್ಟು  ದನದ ಕತ್ತು ಕೊಯ್ದು ಪಾಲು ಮಾಡುವಾಗ  ತಂಗಡಿ ಗಿಡಕ್ಕೆ ಹಾಕಿದ್ದೆವಯ್ಯ  ಕದ್ದು ನೀವು ಧರಿಸಿ ಬಿಟ್ಟಿರಯ್ಯ~ ಎಂದು ದಕ್ಲಪದದ ಮೂಲಕ ಇಡೀ ಮೇಲ್ಜಾತಿಗಳ ಶೋಷಕ ಮನಸ್ಸುಗಳನ್ನು ಸಾಮಾಜಿಕ ನ್ಯಾಯದ ಕಟಕಟೆಗೆ ನಿಲ್ಲಿಸುತ್ತಾರೆ.

ಚಿಕ್ಕನಾಯಕನಹಳ್ಳಿಯ ಸ್ಮಶಾನದಲ್ಲಿ ಈಗ ನೆಲೆಸಿರುವ ದಕ್ಕಲಿಗರ ಹತ್ತೊಂಬತ್ತು ನಿವೇಶನಗಳುಳ್ಳ ಪ್ರದೇಶಕ್ಕೆ ಗಾಂಧಿನಗರ ಎಂದು ಹೆಸರಿಡಲಾಗಿದೆ. ಈ ಗಾಂಧಿನಗರದಲ್ಲಿ ಆರಂಭವಾಗಿರುವ ದಕ್ಕಲಿಗರ ಹೊಸ ಬದುಕು, ನಾಡಿನ ಉಳಿದ ಭಾಗಗಳಲ್ಲಿ ದಕ್ಕಲಿಗರಿಗೂ ವಿಸ್ತರಿಸಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT